Thursday, December 9, 2010

ಉಣಲಾರದ ಉಳ್ಳವರು !(food for thought)




ನಾನು ಮದುವೆ ಮನೆಯೊಂದರಲ್ಲಿ ಊಟ ಮಾಡುತ್ತಿರುತ್ತೇನೆ. ನಾನು ನನ್ನ ಎಲೆಯ ಮೇಲಿದ್ದದ್ದನ್ನೆಲ್ಲ ಮುಗಿಸುತ್ತೇನೆ. ಪಕ್ಕದಲ್ಲಿ ಕುಳಿತವ ಅರ್ಧಂಬರ್ಧ ತಿಂದು ಹಾಗೇ ಉಳಿಸಿ ಮೇಲಕ್ಕೇಳಲು ಹವಣಿಸುತ್ತಿರುತ್ತಾನೆ. ಆಗ ನಾನೆಂದುಕೊಳ್ಳುತ್ತೇನೆ,”ಎಷ್ಟೋ ಮಂದಿಗೆ ತಿನ್ನಲೂ ಇಲ್ಲ. ಈತ ನೋಡು, ಆಹಾರ ಪೋಲು ಮಾಡುತಿದ್ದಾನೆ”. ಹೀಗೆ ಅಂದು ಕೊಂಡ ಮೇಲೆ ಮತ್ತೆ ನಾನೇ ಯೋಚಿಸಿದೆ.”ಸರಿ, ಈತ ಅದೆಲ್ಲವನ್ನೂ ತಿಂದ ಎಂದಿಟ್ಟುಕೊಳ್ಳಿ, ಹೊರಗೆ ತಿನ್ನಲು ಇಲ್ಲದವರ ಹೊಟ್ಟೆ ತುಂಬಿದಂತಾಗುತ್ತದೆಯೇ ?,


ಅಥವಾ ಆ ಅಹಾರವನ್ನು ತಿಂದಾಗ ಅವರು ಅನುಭವಿಸುವ ತೃಪ್ತಿ ಇವನು ಅನುಭವಿಸುತ್ತಾನೆಯೇ?.


ಎರಡೂ ಇಲ್ಲ. ಆದರೂ ನಾವು ಯಾವುದೊ ಅರ್ಥಹೀನ ಸಿದ್ದಾಂತವನ್ನು ಹಿಡಿದು ಕೊಂಡು ಎಳೆದಾಡುತಿದ್ದೇವೆ.ಅವನಿಗೆ ಇಲ್ಲ.ನೀನು ಚೆನ್ನಾಗಿ ಮುಕ್ಕು ಎಂದು ನಮ್ಮ ಓರಗೆಯವರಿಗೆ ಹೇಳುವ ಪ್ರಯತ್ನಮಾಡುತ್ತೇವೆ.ನಮ್ಮ ಪಕ್ಕದ ಮನೆಯಲ್ಲಿ ಒಂದು ಸಂಸಾರ ಇತ್ತು. ಆಯಮ್ಮನಿಗೆ ಮಗುವನ್ನು ಹೊರಗೆ ಕರೆದುಕೊಂಡು ಬಂದು ಊಟ ತಿನ್ನಿಸುತಿದ್ದಳು. ಆ ಪೀಡೆ ತಿನ್ನಲು ಬಹಳ ತಕರಾರು ಮಾಡುತ್ತಿತ್ತಂತೆ.ಅಲ್ಲಿ ಮುಂದುಗಡೆ ಒಂದು ಕಟ್ಟಡ ಕಾಮಗಾರಿ ನಡೆಯುತ್ತಿತ್ತು.ಕೆಲವು ಕೂಲಿಯಾಳುಗಳ ಬಿಡಾರ ಅಲ್ಲಿತು. ಆ ಬಡ ಮಕ್ಕಳ ಮುಂದೆ ಈವಮ್ಮ ತಟ್ಟೆ ಹಿಡಿದು ಕೊಂಡು ಮಗುವಿಗೆ ತಿನ್ನಿಸುವುದನ್ನು ನೋಡಿದರೆ ನನಗೊಂತರಾ ಸಿಟ್ಟು ಬರುತಿತ್ತು, ನಿಮಗೂ ಬರಬಹುದು.ಆದ್ರೆ ನಾನು ಮೇಲೆ ಹೇಳಿದ ಮನೋಬಾವವು ಆಕೆಯ ಮನೋಬಾವಕ್ಕಿಂತಾ ಹೇಗೆ ಬಿನ್ನವಾದದ್ದು?,ಅನ್ನವನ್ನು ಪೋಲು ಮಾಡುವ ಬಗ್ಗೆ ಹಿಂದೆ ಹಲವರು ರೋಷಾವೇಶದಿಂದ ಮಾತಾಡುವುದನ್ನು ನಾನು ನೋಡಿದ್ದೇನೆ. ಹಲವರು ಇದನ್ನು ಚರ್ಚಾಸ್ಪರ್ಧೆಯಲ್ಲಿ ಹೇಳಿದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿ ನಿಜವಾದ ಸಮಸ್ಯೆ ಏನು ಎಂಬ ಬಗ್ಗೆ ಯೋಚಿಸಿದ್ದೇವೆಯೇ?,ಅದಕ್ಕೆ ಉತ್ತರ ಹುಡುಕಲು ಯತ್ನಿಸಿದ್ದೆವೆಯೇ?. ನಾನು ನೋಡಿದ್ದಂತೆ ಅನ್ನ ಎಸೆಯುವ ಬಗ್ಗೆ ಮಾತಾಡುತಿದ್ದುದು ಸೊ ಕಾಲ್ಡ್ ರೈತರ ಮಕ್ಕಳು. ಆದರೆ ಬೆಲೆ ಒಂದಿಷ್ಟು ಕಡಿಮೆಯಾದ ಕೂಡಲೇ ಟನ್ನು ಗಟ್ಟಲೆ ಟೊಮೇಟೊ,ಈರುಳ್ಳಿ ಇತ್ಯಾದಿಗಳನ್ನು ರಸ್ತೆಯಲ್ಲಿ ಸುರಿದಿದ್ದೇನು?,ಘೋಷಣೆಗಳನ್ನು ಕೂಗಿದ್ದೇನು!, ಎಲ್ಲಿ ಹೋಯಿತು ಆ ಹಂಚಿ ತಿನ್ನುವ ಪ್ರವೃತ್ತಿ?, ಎಲ್ಲಿ ಹೋಯಿತು ಎಲ್ಲವನ್ನೂ ಬಳಸಿ ಜಗತ್ತಿನ ಹಸಿವನ್ನು ನೀಗಿಸುವ ಕೆಚ್ಚು?,ಎಲ್ಲಿ ಹೋಯಿತು ನಮ್ಮ ಕೂಡಿಬಾಳುವ ಕಲ್ಪನೆ?,ಇದೆಲ್ಲದರ ಮೂಲಕ್ಕೆ ಹೋಗದ ನಾವು ನಮ್ಮ ಜಾತ್ರೆಗಳನ್ನು, ಬೆಳದಿಂಗಳ ಊಟಗಳನ್ನು,ಅವಿಭಕ್ತ ಕುಟುಂಬಗಳನ್ನು ತೋರಿಸಿ ಇದೆ ಪ್ರಪಂಚದಲ್ಲಿ ಅತ್ಯಂತ ಶ್ರೇಷ್ಠವಾದ ಸಂಸ್ಕೃತಿಯೆಂದು ಬುರುಡೆ ಬಿಡುತ್ತೇವೆ. ನಾನು ನಮ್ಮ ಸಂಸ್ಕೃತಿಯಲ್ಲಿ ತೃಪ್ತಿ ಎಂಬುದಕ್ಕೆ ಯಾವುದೇ ರೀತಿಯ ಬೆಲೆ ಕೊಡದೇ ಬರಿಯ qualitative ಅಂಶಗಳಿಗೆ ಬೆಲೆ ಕೊಡುತ್ತಾ ಬಂದಿದ್ದೇವೆ. ಇಲ್ಲಿ ನಾವು ನಮ್ಮೊಳಗೇ ತಲೆತಲಾಂತರದಿಂದ ಬೆಳೆಸಿಕೊಂಡು ಬಂದಿರುವ ಅಮಾನವೀಯತೆಯ ಒಂದು ಜಲಕ್ ಕಾಣುತ್ತದೆ. ನಾವು ನಮ್ಮನ್ನೂ,ನಮ್ಮ ಸುತ್ತಲಿನ ಜನರನ್ನೂ ಅರ್ಥ ಮಾಡಿಕೊಂಡಿರುವ ಬಗೆ ಏನು?....ಥೂ...


ನನ್ನ ಮನಸ್ತಿತಿಯ ಮೇಲೆ ನನಗೇ ಮರುಕ ಹುಟ್ಟುತ್ತಿದೆ. ಇದು ಇನ್ನೆಷ್ಟು ದಿನ..ಇನ್ನೊಂದು ಸಾವಿರ ವರ್ಷ?

No comments: