Thursday, September 23, 2010

ವಿಶ್ವೇಶ್ವರಯ್ಯನವರು ಓದುತಿದ್ದಾಗ......

"ಏಯ್ ಕತ್ತೆ,.... ವಿಶ್ವೇಶ್ವರಯ್ಯನವರು ಬೀದಿ ದೀಪದ ಕೆಳಗೆ ಕುಳಿತುಕೊಂಡು ಓದುತಿದ್ದರಂತೆ, ಇಷ್ಟೆಲ್ಲಾ ಸೌಲಭ್ಯ ಇದ್ದರೂ ಓದಲು ನಿನಗೇನೋ ದಾಡಿ.." ಎಂದು ಆಗಾಗ ದಡ್ಡಮನುಷ್ಯರು ಮಕ್ಕಳಿಗೆ ಬಯ್ಯುವುದನ್ನು ನೀವು ಕೇಳಿರುತ್ತೀರಿ. 
"ವಿಶ್ವೇಶ್ವರಯ್ಯನವರು ಓದುತಿದ್ದಾಗ ಇನ್ನು ಬೀದಿ ದೀಪವೂ ಇರಲಿಲ್ಲ. ಕರೆಂಟೂ ಇರಲಿಲ್ಲ!!!! 

Tuesday, September 21, 2010

ಪುಟ್ಟರಾಜ ಗವಾಯಿಗಳ ಮಾದರಿ

ನಿನ್ನೆ ಗದಗದ ಪುಟ್ಟರಾಜ ಗವಾಯಿಗಳು ಸಾವನಪ್ಪಿದರು. "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು"ಎಂಬ ಏಸು ಕ್ರಿಸ್ತನ ವಾಣಿಯಂತೆ ಕಣ್ಣನ್ನು ಕಿತ್ತುಕೊಂಡು ಅನ್ಯಾಯ ಮಾಡಿದ್ದ ಭಗವಂತನನ್ನು ಕ್ಷಮಿಸಿ ಆ ಭಗವಂತನ ಹೆಸರಿನಲ್ಲಿ ಹಲವು ಜನಕ್ಕೆ ಒಳ್ಳೆದಾಗುವಂತಹ ಕೆಲಸವನ್ನು ಮಾಡಿದರು. ಹಲವು ಶಿಷ್ಯರಿಗೆ ಆಶ್ರಯನೀಡಿದರು.ಬದುಕನ್ನು ಸನ್ಯಾಸಿಯಾಗಿಯೇ ಕಳೆದರು.
 ದೇವರು ಅವರೊಂದಿಗೆ ಇರಲಿಲ್ಲ. ಒಂದುವೇಳೆ ಅವನು ಇದ್ದರೆ ಅವನು ಇರುವುದು ಬ್ರಷ್ಟ್ರರ ಕಡೆ ಮತ್ತು ಅಯೋಗ್ಯರ ಕಡೆ.ಅವನು/ಅವನ ಬೆಂಬಲಿಗರು ಕೆಡಿಸುವ ಸಮಾಜವನ್ನು ಸುದಾರಣೆ ಮಾಡುವಂತಹ ಜನರಿಗೂ ಅವನ ಹೆಸರು ಹೇಳಿಕೊಂಡು ಕೆಲಸ ಮಾಡುವ ಅನಿವಾರ್ಯತೆ ಇದೆ. ಇದು ಎಲ್ಲಾ ಕಾಲಕ್ಕೋ ಸತ್ಯ. ಸೂಫಿ ಸಂತರಿರ ಬಹುದು. ಭಕ್ತಿ ಸಂತರಿರಬಹುದು. ಅವರುಗಳು ಕೆಲವು ಒಳ್ಳೆಯ ಕೆಲಸ ಮಾಡಿದರು.ಅದನ್ನು ದೇವರಿಗೆ ಆರೋಪಿಸಿದರು. ಜನರ ಚಿಂತನೆಯ ದಿಕ್ಕನ್ನು ಬದಲಾಯಿಸಲು ನಂಬಿಕೆಯ ಊರುಗೋಲು ಅತಿ ಅವಶ್ಯಕ. ಏಕೆಂದರೆ ಜನರ ಮನಸ್ಸು ಮೌಡ್ಯದ ಕೆಸರಲ್ಲಿ ಹೂತು ಹೋಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಅನಿವಾರ್ಯತೆ ಎಲ್ಲಾ ಸಮಾಜ ಸುದಾರಕರಿಗಿತ್ತು. ಲಿಂಗ ತೋರಿಸಿದರೆ ಯಡಿಯೂರಿ ಕಾಸು ಬಿಚ್ಚುತ್ತಾನೆ. ಗಾಂಧಿ ಪ್ರತಿಮೆ ತೋರಿಸಿದರೆ ಬಿಚ್ಚುತ್ತಾನ? ಖಂಡಿತಾ ಇಲ್ಲ. ಅದಕ್ಕಾಗಿಯೇಇರಬೇಕು ಪವಾಡ ಪುರುಷನೆಂದು ಹೆಸರು ಗಳಿಸಿದ್ದ ಅಲ್ಲಮನನ್ನು ಕರೆದುಕೊಂಡು ಬಂದು ವಿಚಾರಮಂಟಪದ ಅಧ್ಯಕ್ಷನನ್ನಾಗಿಸಿದರು. ಕೊನೆಗೆ ಅಲ್ಲಿ ಆರ್ಥಿಕ ವಿಚಾರಕ್ಕಿಂತ ಪಾರಮಾರ್ಥಿಕ ವಿಚಾರಗಳಿಗೆ ಒತ್ತು ನೀಡಲಾಯಿತು. ಇದರಿಂದ ಬಸವಣ್ಣನ ಕ್ರಾಂತಿಗೆ ಯಾವುದೇ ಉಪಯೋಗವಾಗಲಿಲ್ಲ. ಕಲ್ಯಾಣದ ಕ್ರಾಂತಿಗೆ ಶಕ್ತಿಕೇಂದ್ರವಾಗಬಹುದಿದ್ದ ಈ ವಿಚಾರಮಂಟಪ ಸೋಮಾರಿಗಳ ಪಾರಮಾರ್ಥಿಕ ಕಾಡುಹರಟೆಯ ರಂಗಸ್ಥಳವಾಯಿತು. ಕ್ರಾಂತಿ ವಿಫಲವಾಯಿತು. ಬಸವಣ್ಣ ಸೋಲುಣ್ಣಬೇಕಾಯಿತು. ನಂತರ ಈ ವಿಚಾರ ಮಂಟಪಗಳು ಮಠ ಗಳಾದವು. "ಮಠ" ಚಿತ್ರದ ಟೈಟಲ್ "ಕೆಲಸಕ್ಕೆ ಕರೀಬೇಡಿ,ಊಟಕ್ಕೆ ಮಾತ್ರ ಮರಿಬೇಡಿ"ಎಂಬುದನ್ನೇ ಈ ಸ್ವಾಮೀಜಿಗಳು ತಮ್ಮ ಜೀವನದ ಧ್ಯೇಯವಾಕ್ಯ ಮಾಡಿಕೊಂಡಿದ್ದರು. ಶತ ಶತಮಾನಗಳವರೆಗೆ ಹಾಗೇ ಇತ್ತು. ಕ್ರಿಸ್ತಿಯನ್ನರು ಬಂದು ಇಲ್ಲಿ ಹಣ ಹೂಡಿ ಶಾಲೆಗಳನ್ನು ತೆಗೆದಕೂಡಲೇ ಇವರು ಸಹ ಎಚ್ಚೆತ್ತು ಶಾಲೆಗಳನ್ನು ಓಪನ್ ಮಾಡತೊಡಗಿದರು. ಈ ಸೇವಾ ಮನೋಬಾವವೂ ಹೆಚ್ಚು ದಿನ ಉಳಿಯಲಿಲ್ಲ. ಪಾರಮಾರ್ಥಿಕ ಸೋಮಾರಿತನದ ಬುದ್ದಿ ಮತ್ತೆ ಮುಸುಕಿನಿದ ಇಣುಕತೊಡಗಿತು. ಹುಟ್ಟುಗುಣ ಸುಟ್ಟರೆ ಹೋಗುತ್ತದೆಯೇ? ಎಂಬ ಗಾದೆಯಂತೆ ಶಿಕ್ಷಣವು "ಶಿಕ್ಷಣ ಮಾಫಿಯಾ"ಆಯಿತು. ಶಾಲೆಗಳು ಬೋದಕರ,ಶಿಕ್ಷಣ ತಜ್ಞರ ಸ್ವತ್ತಾಗಲಿಲ್ಲ.ಶಿಕ್ಷನೋದ್ಯಮಿಗಳ ಸ್ವತ್ತಾಯಿತು.ದಾರ್ಮಿಕ ನಾಯಕರು ಜ್ಞಾನವನ್ನು ಗುತ್ತಿಗೆ ಹಿಡಿದಂತೆ ವರ್ತಿಸಿದ್ದೆ ಇದಕ್ಕೆ ಮುಖ್ಯ ಕಾರಣ.
ಪುಟ್ಟರಾಜ ಗವಾಯಿಗಳಿಗೆ ಸಂಗೀತ ಶಾಲೆ ತೆಗೆಯಬೇಕು ಅನ್ನಿಸಿತು. ಇಂಜಿನಿಯರಿಂಗ್ /ಮೆಡಿಕಲ್ ಕಾಲೇಜು ತೆಗೆಯಬೇಕು ಅನ್ನಿಸಲಿಲ್ಲ. ಏಕೆಂದರೆ ಅವರಿಗಿದ್ದದ್ದು ನಿಜವಾದ ಜ್ಞಾನ. ಅದನ್ನು ಅವರು ಪ್ರಾಮಾಣಿಕವಾಗಿ ಹಂಚಿದರು. ತನ್ನಲಿದ್ದದ್ದನ್ನು ಎಲ್ಲರಿಗೂ ಹಂಚಿದರು. (ಇಲ್ಲಿ ನಾವು ಮಲ್ಲಾಡಿ ಹಳ್ಳಿಯ ಸ್ವಾಮೀಜಿಯನ್ನು ನೆನೆಸಿಕೊಳ್ಳಬಹುದು.) ಆದರೆ ಕೆಲವು ಸ್ವಾಮೀಜಿಗಳಿಗೆ ಮೆಡಿಕಲ್ ಸೈಯನ್ಸ್ ಆಗಲಿ ಇಂಜಿನಿಯರಿಂಗ್ ಆಗಲಿ ಪಾಠಮಾಡಲು ಬರುವುದಿಲ್ಲ. ಆದರೂ ಇನ್ಜಿನೆರಿಂಗ್ /ಮೆಡಿಕಲ್ ಕಾಲೇಜ್ ತೆಗೆಯುವ ತೆವಲು. ದುಡ್ಡು ಸರ್ಕಾರದ್ದು,ಹೆಸರು ಇವರದ್ದು. ನೀಡಲಾಗುವ ಜ್ಞಾನ ವಿದೇಶದ್ದು!. ದುರಂತ ಎಂದರೆ ಇಂತಾ ದೊಡ್ಡ ಮಾಫಿಯಾಗಳ ಶಿಕ್ಷಣ ಸಂಸ್ತೆಗಳಿಗೆ ರಾಷ್ಟ್ರಪತಿಗಳು ಬರುತ್ತಾರೆ.
"In rome,be a Roman" ಎನ್ನುವಂತಹಾ ಇಂದಿನ ಪರಿಸ್ತಿತಿಯಲ್ಲಿ ಗವಾಯಿಗಳು ನಡೆದ ಹಾದಿಯಲ್ಲಿ ಇತರರು ನಡೆಯುವುದರಿಂದ ಏನಾದರೂ ಉಪಯೋಗವಿದೆಯೇ?  

Sunday, September 19, 2010

ಸಮಾಜ ಮತ್ತು ಬೇಲಿ


ಗಾಂಧೀಜಿಯವರ ಗ್ರಾಮಸ್ವರಾಜ್ಯದ ಚಿತ್ರಣವನ್ನು ಜನರ ಮನಸ್ಸಿಗೆ ತಂದು ಆಡಳಿತವನ್ನು ಹಳ್ಳಿಗೆ ತೆಗೆದುಕೊಂಡು ಹೋಗಬಹುದು, ಬರಿ ಆಲದಮರದ ಕೆಳಗಿನ ಪಂಚಾಯತಿಯಿಂದ ಜನರ ಸಮಸ್ಯೆ ಬಗೆಹರಿಸಬಹುದು ಎಂದೆಲ್ಲಾ ಬೊಗಳೆ ಹೊಡೆದು ಸ್ವತಂತ್ರ ಹೋರಾಟಕ್ಕೆ ಜನರನ್ನು ಸೆಳೆದು ಅವರನ್ನ ಬ್ರಿಟಿಷರ ಬೂಟುಗಾಲುಗಳ ಕೆಳಗೆ ಹಾಕಿ ಒದೆಸಿದ್ದ ಧೀಮಂತ ನಾಯಕರಗಳೆಲ್ಲಾ ಸ್ವತಂತ್ರ ಬಂದ ಕೂಡಲೇ ಬದಲಾದರು. ಸಾಮಾನ್ಯ ಜನರಿಗೂ ಆಳುವವರಿಗೂ ವ್ಯತ್ಯಾಸ ಬೇಡವೇ ಎನಿಸಿತು. ಈ ಅಸೆ ಮನಸ್ಸಿಗೆ ಬಂದೊಡನೆ ಎದ್ದು ನಿಂತದ್ದು ವಿಧಾನಸೌಧ. ನೀಚಾತಿನೀಚ ಬ್ರಿಟಿಷ್ ಅಧಿಕಾರಿಗೂ ಇಂತಹ ತಾರತಮ್ಯದ ಆಲೋಚನೆ ಬಂದಿರಲು ಸಾಧ್ಯವಿಲ್ಲ. ಅತ್ತ ಸ್ವಾತಂತ್ರ ಬರುತ್ತಲೇ ಬಹಳ ದಿನಗಳಿಂದ ಹತ್ತಿಕ್ಕಿದ್ದ "ಮೇಲು-ಕೀಳು" ಉಚ್ಚ ನೀಚ" ಒಡೆಯ-ಸೇವಕ ಮುಂತಾದ ಭಾವನೆಗಳು ರೆಕ್ಕೆ ಪುಕ್ಕ ಕಟ್ಟಿ ಹಾರತೊಡಗಿದವು. ಸಬರಮತಿ ಆಶ್ರಮದ ಗುಡಿಸಲಿಂದ ರಾಮರಾಜ್ಯ ಕಟ್ಟುತ್ತೇವೆ ಎಂದು ಘೋಷಣೆ ಕೂಗುತ್ತಿದ್ದವರು ಸ್ವತಂತ್ರ ಬಂದ ಕೊಡಲೇ ಬ್ರಿಟಿಷರು ಬಿಟ್ಟು ಹೋದ ಬಂಗಲೆಗಳನ್ನು ಆಕ್ರಮಿಸಿಕೊಂಡರು. ನಾವು ಸ್ವತಂತ್ರ ಹೋರಾಟದ ಕಲಿಗಳು ಎಂದು ಯಾರನ್ನು ಹೊಗಳುತ್ತೆವೆಯೋ ಅವರುಗಳ್ಯಾರೂ ಬಾಷಾವಾರು ಪ್ರಾಂತ್ಯದ ರಚನೆಗೆ ಬೆಂಬಲ ನೀಡಲಿಲ್ಲ. ಬಾಷಾವಾರು ಪ್ರಾಂತ್ಯದ ಕೂಗು ಮುಗಿಲು ಮುಟ್ಟಿದಾಗ ತಾವೂ ಕೂಡ ಎಲ್ಲಿ ಬ್ರಿಟಿಷರ೦ತೆ ಅಧಿಕಾರ ಕಳೆದುಕೊಳ್ಳುತ್ತೆವೋ ಎಂಬ ಭಯಕ್ಕೆ ಬಿದ್ದು ಬಾಷಾವಾರು ಪ್ರಾಂತ್ಯ ರಚನೆಗೆ ಒಪ್ಪಿಗೆ ನೀಡಿದರು. ಇದು ನೇರ ಒಪ್ಪಿಗೆ ಆಗಿರಲಿಲ್ಲ. ಜನರ ಕಣ್ಣೊರೆಸುವ ನಾಟಕವಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ  ಹುನ್ನಾರವಾಗಿತ್ತು. ಬಾಷಾವಾರು ಪ್ರಾಂತ್ಯದ ಬಗ್ಗೆ ಕೇಂದ್ರದ ಯಾವ ನಾಯಕನಿಗೋ ಸ್ಪಷ್ಟ ಅಭಿಪ್ರಾಯ ಇರಲಿಲ್ಲ. ಅಧಿಕಾರ ಉಳಿಸಿಕೊಳ್ಳುವುದಷ್ಟೇ ಅವರ ಗುರಿಯಾಗಿತ್ತು. ಇಂತಹಾ ಎಡಬಿಡಂಗಿ ನಾಯಕರುಗಳ ಕೈಗೆ ೧೯೨೨ ರಲ್ಲೆನಾದರೂ ಅಧಿಕಾರ ಸಿಕ್ಕಿದ್ದರೆ ಭಾರತದ ಇಂದಿನ ಪರಿಸ್ತಿತಿ ಇನ್ನೂ ಭೀಕರವಾಗಿರುತಿತ್ತು. ಅದಕ್ಕಾಗಿಯೇ ಮಹಾತ್ಮಾ ಗಾಂಧೀ ಸ್ವಾತಂತ್ರ ಚಳುವಳಿಯಿಂದ ಹೊರಬಂದು ಸಮಾಜ ಸುದಾರಣೆಯತ್ತ ಗಮನಹರಿಸಿದರು.
ಆದರೆ ಬಾರತೀಯ ಸಂಸ್ಕ್ರತಿಯ ಮೂಲಭೂತ ಅಂಶವಾದ "ತಾರತಮ್ಯ " ಎಂಬುದು ಎಲ್ಲರಲ್ಲಿಯೂ ಎಲ್ಲೋ ಒಂದೊಂದು ಕಡೆ ಇಣುಕುತ್ತದೆ.  ಜನ ಪರಸ್ಪರರ ಸ್ವಾತಂತ್ರವನ್ನು ಮೊಟಕು ಗೊಳಿಸುವುದರಲ್ಲೇ ತಲ್ಲಿನರಾಗಿರುತ್ತಾರೆ. ಸಂಸ್ಕ್ರತಿಯ ಹೆಸರಿನಲ್ಲಿ ನಾವು ನಮ್ಮ ಪುರಾತನ ವಿಕೃತಿಗಳಿನ್ನು ಪುನರುಜ್ಜೀವನ ಗೊಳಿಸಲು ಪ್ರಯತ್ನಿಸುತಿದ್ದೇವೆ.

ರಾಜಕೀಯ ಮಾಡಲು ಸಮಾಜ ಮತ್ತು ಸಮುದಾಯದ ಹಿರಿಮೆಯ ಬಗ್ಗೆ ಮಾತಾಡುತ್ತೇವೆ. ಸಮುದಾಯ ಹೇಗೆ ಒಟ್ಟಾಗಬೇಕು ಎಂದು ಭಾಷಣ ಮಾಡುತ್ತೇವೆ. ಆದರೆ ಈ ಸಮಾಜದಲ್ಲಿ ಮೇಲ್ಪದರಕ್ಕೆ ಬರುವವನು ಪಡೆಯುವ ಮೊದಲ ಸೌಲಭ್ಯವೆಂದರೆ ".ಬೇಲಿ".
ಬೇಲಿ?
ಹೌದು. ಅವನಿಗೂ ಸಮಾಜಕ್ಕೂ ನಡುವೆ ಒಂದು ಬೇಲಿ. ಉದಾಹರಣೆಗೆ ಅಧಿಕಾರಿಯಾಗುವವನು ಒಂದು ಖಾಸಗಿ ಕೊಠಡಿ ಪಡೆಯುತ್ತಾನೆ. ನಂತರ ಒಬ್ಬ ಗಾರ್ಡು ಇರುವ ಒಂದು ಬಂಗಲೆ ಹೊಂದುತ್ತಾನೆ. ಅದು ಅವನಿಗೇ ಒಂದು ರೀತಿಯ ಘನತೆ ತಂದು ಕೊಡುತ್ತದೆ ಎಂದು ಭಾವಿಸಲಾಗುತ್ತೆ.
ಇದರಿಂದಲೇ ನಮ್ಮ ನಾಯಕರು ಆಶ್ರಮಗಳನ್ನು ಬಿಟ್ಟು ರಾಷ್ಟ್ರಪತಿ ಭಾವನದಂತಹಾ ವೈಭವೋಪೇತ ಬಂಗಲೆ ಹಿಡಿದು ಕೊಳ್ಳುತ್ತಾರೆ. ಮನುಷ್ಯ ಸಾಧ್ಯವಾದಾಗಲೆಲ್ಲ ಸಮುದಾಯದ ಮತ್ತು ತನ್ನ ನಡುವೆ ಬೇಲಿ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಈ ಬೇಲಿಗೆ ಬೇಕಾಗುವ ಸಾಮಾನಿಗಾಗಿ ಅವನು ಸಮುದಾಯವನ್ನೇ ಅಶ್ರಯಿಸಿಕೊಂಡಿರುತ್ತಾನಾದರಿಂದ ಆತ ಸಮಾಜವನ್ನು ಬಲವಾಗಿರಲು ಉತ್ತೇಜಿಸುತ್ತಾನೆ.
ಅವನಿಗೆ  ಸಮಾಜ ಬೇಕು ಆದರೆ ಅವನಿಗೆ ಸಮಾಜ ಬೇಕಾಗಿಲ್ಲ. ಸಮಾಜವನ್ನು,ಸಮಾಜವಾದವನ್ನು ಸೃಷ್ಟಿ ಮಾಡುವವರೂ ಇವರೇ. ತಾರತಮ್ಯ ಮಾಡುವವರೂ ಇವರೇ. ಅಂತೆಯೇ ಸಮಾಜಮುಖಿ ಎಂದು ಕರೆಯಲ್ಪಡುವ ಅಂದೊಲನಗಳು ಸಾಮಾನ್ಯ ಜನರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗದಿದ್ದರೂ ಅದು ನಾಯಕರಿಗೆ ಬಹಳ ಅನುಕೂಲ ಕರವಾಗಿಪರಿಣಮಿಸಿದೆ. ಆದುದರಿಂದ ಸಾಮಾನ್ಯ ಮನುಷ್ಯ ರಾಜನಿಗಿಂತಲೂ ಹೆಚ್ಚು ರಕ್ತ ಬೆವರು ಸುರಿಸಿದರೂ ಅವನು  ಇತಿಹಾಸದ ಪುಟಗಳನ್ನು ಸೇರುವುದಿಲ್ಲ. ನೇರವಾಗಿ ಗೋರಿಸೇರುತ್ತಾನೆ. ಅವನ ಗೋರಿ ಮೇಲೆ ನಿಲ್ಲಿಸಲಾದ ಕಲ್ಲು ಅವನ ಒಡೆಯನ ಹೆಸರನ್ನು ಹೇಳುತ್ತದೆಯೇ ಹೊರತು ಅವನ ಹೆಸರನ್ನು ಹೇಳುವುದಿಲ್ಲ.(ವಿರಳ). ಸಾಮಾನ್ಯ ಮನುಷ್ಯನು ದುಡಿಯಲು ಕೈಗಳನ್ನು ತಯಾರಿಸುವ ಕಾರ್ಖಾನೆಯಷ್ಟೇ. ಅದಕ್ಕಾಗಿಯೇ ರಾಜಕಾರಣಿಗಳು ಸಾಮೂಹಿಕ ವಿವಾಹವನ್ನು ಮಾಡಿಸುವುದು ಮತ್ತು ಸ್ವತಃ ಸ್ವಾತಂತ್ರರಾಗಿರುವ   ಧಾರ್ಮಿಕ ನಾಯಕರು ವೈವಾಹಿಕ ಮೌಲ್ಯಗಳ ಬಗ್ಗೆ ಭಾಷಣ ಬಿಗಿದು ಅವುಗಳಿಗೆ ಇಲ್ಲದ ಪಾವಿತ್ರತೆಯನ್ನು ಆರೋಪಿಸುವುದು.
(ಸಶೇಷ)

Thursday, September 16, 2010

ಬ್ರಷ್ಟಾಚಾರದ ಆಚರಣೆಗಳು

ಈಗ ಗಣಪತಿ ಹಬ್ಬದ ಸಂಬ್ರಮ. ಬೀದಿ ಬೀದಿಗಳಲ್ಲಿ ಗಣಪತಿ ಕೂರಿಸುವವರದೇ ಭರಾಟೆ.ರಾತ್ರಿ ಬಹಳ ಹೊತ್ತಿನವರೆಗೆ ಗಣಪತಿ ಪೆಂಡಾಲಿನ ಮೈಕ್ ಸೆಟ್ ಗಳು ಪ್ರಾಣಹಿಂಡುತ್ತವೆ.ಪರೀಕ್ಷೆ ಬರೆಯುವ  ಬಹುಷಃ ಇದಕ್ಕೆ ಇರಬೇಕು ತನ್ನ ಧರ್ಮದವರಿಂದ  ಪ್ರವಾದಿಯೆಂದು ಕರೆಸಿಕೊಳ್ಳುವ ಮಹಮ್ಮದ್ ಖಡ್ಡಾಯವಾಗಿ ಮೂರ್ತಿ ಪೂಜೆಯನ್ನು ನಿಷೇದಿಸಿದ್ದು. 
ಹೆಚ್ಚಿನ ಕಡೆ ಸಾಮೂಹಿಕವಾಗಿ ಗಣಪತಿ ಕೂರಿಸುವವರು ಹೆಸರಾಂತ ರೌಡಿಗಳೇ.ರೌಡಿಗಳಿಗೆ ಸಮಾಜ ಸೇವಕ ಎಂಬ ಬಿರುದು ಕೊಡುವುದು ಈ ಗಣಪತಿ ಹಬ್ಬದ ಸಮಾರಂಭಗಳಲ್ಲೇ. ಇದೊಂದು ರೀತಿಯ ಅಕ್ರಮ-ಸಕ್ರಮ ವಹಿವಾಟು. ಇಂತಹ ಸಾಮೂಹಿಕ ಉತ್ಸವಗಳಿಗೆ ಲಕ್ಷಾಂತರ ರುಪಾಯಿಗಳನ್ನು ವ್ಯಯಿಸಲಾಗುತ್ತದೆ. ಒಂದೊಂದು ಆರ್ಕೆಷ್ಟ್ರಾಗಳು ದಿನಕೆ ಐವತ್ತು ಸಾವಿರದವರೆಗೂ ಚಾರ್ಜ್ ಮಾಡುತ್ತವೆ.
ಇದಕ್ಕೆ ಹಣ ಎಲ್ಲಿಂದ ಬರುತ್ತವೆ? ಇತ್ತೀಚಿಗೆ ಗಣಪತಿ ಗ್ಯಾಂಗ್ ಗಳು ಸಾರ್ವಜನಿಕರಿಂದ ರೋಲ್ ಕಾಲ್ ಮಾಡುವುದನ್ನು ಕಡಿಮೆ ಮಾಡಿವೆ.ಹೆಚ್ಚಿನಂಶ ಹಣವನ್ನು ಆ ಪ್ರದೇಶದ ರಾಜಕಾರಣಿಯಿಂದ ಮತ್ತು ಖ್ಯಾತ ವರ್ತಕರಿಂದ ಕೀಳುತ್ತವೆ. ಇವರ್ಯಾರು ಹಣವನ್ನು ಮುದ್ರಿಸುವುದಿಲ್ಲ. ಇಲ್ಲಿ ವಂತಿಗೆ ಕೊಡುವ ಹಣವನ್ನು ಬಡ್ಡಿಸಮೇತ ಗ್ರಾಹಕರಿಂದ ಮತ್ತು ಸಾರ್ವಜನಿಕರಿಂದ ಬೇರೆ ರೀತಿಯಿಂದ ವಸೂಲಿ ಮಾಡುತ್ತಾರೆ. ಒಬ್ಬ ರಾಜಕಾರಣಿ ಬಡವ ಅಥವಾ ನಿಷ್ಟಾವಂತಆದರೂ ಸಹ ಆತ ಒಂದು ಲಕ್ಷ ಕೊಡಬೇಕು ಎಂದು ಈ "ಸಾರ್ವಜನಿಕರು" ಅಪೇಕ್ಷಿಸುತ್ತಾರೆ. ರಾಜಕಾರಣಿಗೆ ಹಣವನ್ನು ದೋಚಲೇ ಬೇಕಾದ ಪರಿಸ್ತಿತಿ ಎದುರಾಗುತ್ತದೆ.ಆಗ  ಆತ ಅಧಿಕಾರಿಗಳಗೆ ಪರ್ಸೆಂಟೇಜ್ ಫಿಕ್ಸ್ ಮಾಡುತ್ತಾನೆ. ತನ್ಮೂಲಕ ಅವರು ನಿಯತ್ತಾಗಿ ಕೆಲಸ ಮಾಡಬೇಕು ಎಂದು ಆದೇಶಿಸುವ ನೈತಿಕತೆಯನ್ನು ಕಳೆದುಕೊಳ್ಳುತ್ತಾನೆ.ಇತ್ತ ವ್ಯಾಪಾರಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಾನೆ. ಈ ಬಗ್ಗೆ ಅವನು ದೇವರಿಗೂ/ಅತ್ಮಸಾಕ್ಷಿಗೂ ಹೆದರುವ ಅಗತ್ಯ ಇರುವುದಿಲ್ಲ. ದೇವರನ್ನು ಸಾಕಲು ತಾನೇ ಆತ ಹಣ ನೀಡಿರುವುದು.ಈ ಎಲ್ಲಾ ಗಲಾಟೆಗಳ ಮಧ್ಯ ಮೂಡನಂಬಿಕೆ ಹಬ್ಬುವ ಶಕ್ತಿಗಳು ತಮ್ಮ ಸ್ವಾರ್ಥಸಾದನೆಗೆ ಇಂತಹ ಉತ್ಸವಗಳನ್ನು ಬಳಸಿಕೊಳ್ಳುತ್ತವೆ.ತನ್ಮೂಲಕ ಆ ಮೌಡ್ಯ ಸಮಾಜದಲ್ಲಿ ಇನ್ನಷ್ಟು ವರ್ಷ ಉಳಿದು ಬೆಳೆಯುವ೦ತಾಗುತ್ತದೆ.ಈ ಹಬ್ಬಗಳ ಭರಾಟೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಇದೆ. ಮೊಬೈಲು,ಇಂಟರ್ನೆಟ್ ,ಚಲನ ಚಿತ್ರ ,ಟಿ.ವಿ ಮನೋರಂಜನೆಗೆ ಅಷ್ಟೊಂದು ಮಾರ್ಗಗಳಿದ್ದರೂ   ಈ ಗಣಪತಿ ಹಬ್ಬದ ಸಂಧರ್ಭದಲ್ಲಿ ಆರ್ಕೆಷ್ಟ್ರಾ ಕೂಗಿಸುವುದನ್ನು ನಿಲ್ಲಿಸುವುದಿಲ್ಲ.ಪ್ರತಿವರ್ಷವೂ  ಮೂಡನಂಬಿಕೆಗಳು ನಮ್ಮಲ್ಲಿ ಆಳ ಆಳಕ್ಕೆ ಬೇರೂರುತ್ತದೆ. ಈ ಕಾರಣದಿಂದಲೇ ೭೦ ಮತ್ತು ೮೦ರ ದಶಕದಲ್ಲಿ ಆರಂಭವಾದ ಸರಳ ವಿವಾಹದಂತಹ ವೈಚಾರಿಕ ಆಂದೋಲನಗಳು ಇಂದು ಹಳ್ಳ ಹಿಡಿದಿರುವುದು. ಇಂದಿನ ಸಾಮೂಹಿಕ  ವಿವಾಹಗಳಲ್ಲಿ ಖಾವಿ/ಖಾದಿದಾರಿಗಳು ಬಾಗವಹಿಸಿ ಅವನ್ನು ಅವರ "hidden agenda"ಗಳನ್ನು ಪೂರೈಸಿ ಕೊಳ್ಳುವ ಒಂದು ಮಾಧ್ಯಮವನ್ನಗಿಸಿಬಿಟ್ಟಿದ್ದಾರೆ.  ೮೦ ನೇ ದಶಕದಲ್ಲಿ ಇದ್ದಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸ್ವಾಮೀಜಿಗಳು,ಮಠಗಳು ,ಜ್ಯೋತೀಷಿಗಳು ಇಂದು ದಂಧೆಮಾಡುತಿದ್ದಾರೆ.
ನಾವು ನಡೆಸುವ ಉತ್ಸವಗಳು,ಸಾಮೂಹಿಕ ಪೂಜೆಗಳು,ಉರುಸ್ ಗಳು  ಈ ನಾಡಿನ ಬ್ರಷ್ಟಾಚಾರದ ಮೈಲಿಗಲ್ಲಾಗಿವೆ.

Sunday, September 12, 2010

ಕ್ರಿಕೆಟ್ ಕ್ರೀಡೆಯ ಸಮಕಾಲೀನ ಸನ್ನೆಗಳು

ಇದು ದೇವರಾಣೆಗೂ ನಾನು ಬರೆದ ಕಾರ್ಟೂನ್ ಅಲ್ಲ. ಚೆನ್ನಾಗಿದೆ ಅನ್ನಿಸಿತು ಅದಕ್ಕೆ ಹಂಚಿಕೊಳ್ಳುತಿದ್ದೇನೆ.

Friday, September 10, 2010

ಅದು ನನ್ನಿಂದ ಸಾಧ್ಯವೇ?

ಜನರನ್ನು ಕಂಡ್ರೆ ನನ್ಗಾಗಲ್ವೆ !,.....
.ಹೌದು...ಸಾಮನ್ಯವಾಗಿ ಜನರ ಗುಂಪನ್ನು ನೋಡಿದರೆ ನನಗೆ ಆಗುವುದಿಲ್ಲ. ನಾನು ಯಾವಾಗಲು ಗುಂಪಿನಿಂದ ದೂರವಿರಲು ಬಯಸುತ್ತೇನೆ. ಅದರರ್ಥ ನಾನು ಜನ ಸಮೂಹವನ್ನು ನನ್ನ ಶತ್ರುವೆಂದು ಭಾವಿಸುತ್ತೆನೆಂದಲ್ಲ. ಅದು ನನ್ನ ಸ್ವಭಾವವಷ್ಟೇ. 
ಈ ಮೂರು ವರ್ಷಗಳಲ್ಲಿ ಮನುಕುಲದ ಬಗ್ಗೆಗಿನ ನನ್ನ ಸಂಭಂದದಲ್ಲಿ ಆದ ಕೆಲವು ಬದಲಾವಣೆಗಳು ನನ್ನನ್ನು ಈ ಸ್ಥಿತಿಗೆ ತಳ್ಳಿರುವ ಸಾಧ್ಯತೆ ಇದೆ. ನಾನು ಈ ಅವಧಿಯಲ್ಲಿ ನೋಡಿರುವ ಮನುಷ್ಯರಲ್ಲಿ ಎರಡು ಪ್ರಮುಖ ವಿಧಗಳಿವೆ.ಒಂದು ನನನ್ನು ಉಪಯೋಗಿಸಿಕೊಳ್ಳುವ ಜನ.ಎರಡನೆಯದು ನನಗೆ ಏನೂ ಉಪಯೋಗಕ್ಕೆ ಬಾರದ ಅಸಹಾಯಕ ಜನ.( ಇವರನ್ನು ಉಪಯೋಗಿಸಿ ಕೊಳ್ಳುವ ಮನಸ್ಸು,ಜಾಣ್ಮೆ ನನ್ನಲ್ಲಿಲ್ಲದಿರುವುದು ಇದಕ್ಕೆ ಕಾರಣವೇ ಹೊರತು ಅವರ ವೀಕ್ನೆಸ್ಸ್ ಅಲ್ಲ.)  ಇನೊಮ್ಮೆ ಎಲ್ಲಿ ಮೊದಲನೇ ವರ್ಗಕ್ಕೆ ಸೇರಿದ ಜನರ ಕೈಗೆ ಬೀಳುತ್ತೇನೋ ಎನ್ನುವ ಆತಂಕ ಬಹುಶಃ ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿರಬಹುದು. ಗುಂಪು ಎಂದರೆ ಸಾಮಾನ್ಯವಾಗಿ ಮೇಲೆ ಹೇಳಿದ ಎರಡೂ ವರ್ಗಗಳ ಮಿಶ್ರಣ. ನನಗೆ ಬೇಕಾದವರು ಆ ಗುಂಪಿನಲ್ಲಿದ್ದರೂ,ಅವರೊಂದಿಗೆ ಬೆರೆಯಲು ಆಸೆ, ಆ ಗುಂಪಿನಲ್ಲಿ ‘ಬೇಡವಾದವರೊಂದಿಗೆ’ ಬೆರೆಯಬೇಕಾಗುವ ಆತಂಕಕ್ಕಿಂತ ಕಡಿಮೆ ಇರುವುದರಿಂದ ನಾನು ಗುಂಪಿನಿಂದ ದೂರಇರುವ ಎಲ್ಲಾ ಪ್ರಯತ್ನ ಮಾಡುತ್ತೇನೆ. ಹೀಗೆ ಇದ್ದರೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಹಲವರು ಹೇಳುತ್ತಾರೆ. “ನಾನು ಹೇಗಿದ್ದರೂ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ“ಎಂದು ನನಗೆ ಅರ್ಥವಾಗಿದೆ. ಬ್ರಷ್ಟ ಸಮಾಜ ಯಾರಿಗೂ ಕಾಯುವುದಿಲ್ಲ. ಹೆಂಡದ ಹಿಂದೆ ಓಡುವ ಕುಡುಕರಂತೆ ನಾವೇ ಸಮಾಜದ ಹಿಂದೆ ಓಡುತ್ತೇವೆ.ಹಲವರನ್ನು ತಳ್ಳಿ ಬೀಳಿಸುತ್ತೇವೆ.ನಮ್ಮನ್ನು ಹಲವರು ತಳ್ಳಿ ಬೀಳಿಸುತ್ತಾರೆ. ನಾಗರಿಕ ಎಂದು ಕರೆಯುವ ಈ ಸಮಾಜ ಕಾಡು ಪ್ರಾಣಿಗಳ ಪ್ರಪಂಚಕ್ಕಿಂತ ಯಾವುದೇ ರೀತಿಯಲ್ಲಿ ಬಿನ್ನವಾಗಿಲ್ಲ. ನಮ್ಮ ಆಹಾರ ಕ್ರಮಗಳು,ಆಯುಧಗಳು,ಬೇಟೆಯ ವಿಧಾನಗಳು ಬದಲಾಗುತ್ತವಷ್ಟೇ. ಹುಲಿಗಳ ಬದುಕು ಜಿಂಕೆಗಳ ಸಂಖ್ಯೆಯ ಮೇಲೆ ಡಿಪೆಂಡ್ ಆಗಿರುವಂತೆ ಇಲ್ಲಿ ಬಲಿಷ್ಟರ ಬದುಕು ದುರ್ಬಲರ ಮೇಲೆ,ವಿದ್ಯಾವಂತರ ಬದುಕು ಅನಕ್ಷರಸ್ತರ ಮೇಲೆ ಡಿಪೆಂಡ್ ಆಗಿದೆ.ಈ ಸಮಾಜಕ್ಕೆ ಬಡವರ,ದುರ್ಬಲರ,ಅನಕ್ಷರಸ್ತರ ಅಗತ್ಯ ತುಂಬಾ ಇರುವುದರಿಂದಲೇ ಅದನ್ನು ಅಳಿಯದಂತೆ ನೋಡಿಕೊಳುವ ಒಂದು ವ್ಯವಸ್ಥೆ ನಮ್ಮಲ್ಲಿ ಬೆಳೆದು ಬಂದಿದೆ. ಕುರಿ ತನ್ನ ಹಿಂದಿಂದ ಹೊರಬಿದ್ದು ತನ್ನದೇ ಜಾಡಿನಲ್ಲಿ ಓದಲು ಆರಂಬಿಸಿದರೆ ಆಗ ಕುರಿಕಾಯುವವ ಪ್ರತ್ಯಕ್ಷವಾಗಿ ಕುರಿಯನ್ನು ಕೋಲಿನಿಂದ ಹೊಡೆದು/ಹೆದರಿಸಿ ಗುಂಪಿನೊಂದಿಗೆ ಸೇರುವಂತೆ ಮಾಡುತ್ತಾನೆ. ಅದೇ ರೀತಿ ಸಮಾಜದಲ್ಲಿ ಬುದ್ದ,ಬಸವ,ಏಸುಕ್ರಿಸ್ತ,ವಿವೇಕಾನಂದ,ಗಾಂದಿ ಮುಂತಾದವರು ಅವತರಿಸಿ ನಡಿ, ನುಗ್ಗಿ ನಡಿ,ಗುರಿ ತಲುಪುವ ವರೆಗೂ ನಿಲ್ಲಬೇಡ ಎಂದು ಹೇಳಿ ನಮ್ಮನ್ನು ಸಮಾಜದತ್ತ ದೂಡುತ್ತಾರೆ. ಸಮಾಜದೊಳಗೆ ಒಂದಿಷ್ಟು ಕಚಿಪಿಚಿ ಮಾಡಿ “ನೋಡಿ ನಾವು ಸಮಾಜವನ್ನು ಬದಲಾಯಿಸಿದ್ದೇವೆ,ನಾವು ಹೇಳಿದ್ದು ಪಾಲಿಸಿ, ಯಶಸ್ಸು ನಿಮ್ಮದಾಗುತ್ತದೆ” ಎಂದು ಹೇಳಿ, ಸಮಾಜದಲ್ಲಿ ಗಣ್ಯರು ಎಂದು ಹೇಳಿಸಿಕೊಂಡವರ ಬಳಿ ಆಥಿತ್ಯ(ಆತಿಥ್ಯ?) ಸ್ವೀಕರಿಸಿ ಅಂತರ್ಧಾನವಾಗುತ್ತಾರೆ. ಆಮೇಲೆ ಮತ್ತದೇ ಗೋಳು!.ಇದು ಸುಮಾರು ಐದು ಸಾವಿರ ವರ್ಷಗಳಿಂದಲೂ ನಡೆದು ಬಂದ ಪ್ರಕ್ರಿಯೆ. ನಡಿ ನುಗ್ಗಿ ನಡಿ ಎನ್ನುತ್ತಾ ನಡೆಯುತ್ತೇವೆ, ಪರೀಕ್ಷೆ,.ಕೆಲಸ,ಕಾರ್ಯ,ಮದುವೆ,ಮಕ್ಕಳು,ತೀರ್ಥಯಾತ್ರೆ,ಪೂಜೆ ಪುನಸ್ಕಾರ, ಸಾಲ ಸೋಲ,ಲಂಚ, ವರದಕ್ಷಿಣೆ, ಡೊನೇಶನ್,ಸೈಟು ,ಮನೆ,ರೇಶನ್ ಕಾರ್ಡ್,ಪಾಸ್ಪೋರ್ಟ್,ಇನ್ಸೂರೆನ್ಸ್ ,ಅಳು,ಮುಪ್ಪು,ಸಾವು.....ಜೀವನದ ಒಂದು ಹಂತ ಮುಗಿಸಿ ಮೇಲೆ ನೋಡಿದರೆ ಗೋಡೆಯಲ್ಲಿರುವ ವಿವೇಕಾನಂದರು ಆ ಕಡೆ ನೋಡುತ್ತಿರುತ್ತಾರೆ.ಬುದ್ಧ ಕಣ್ಣು ಮುಚ್ಚಿ ಕುಳಿತಿರುತ್ತಾನೆ. ಜನರ  ಕಷ್ಟಗಳನ್ನು ನೋಡುವವರು ಯಾರೂ ಇರುವುದಿಲ್ಲ. ನಗುವಾಗ ಎಲ್ಲಾ ನೆಂಟರೆ. ಜೀವನದ ಯಾವುದೋ ಹಂತದಲ್ಲಿ ತಿರುಗಿ ನೋಡಿದರೆ ನಮ್ಮ ಗುರಿ ಎಲ್ಲೊ ಇರುತ್ತದೆ.ನಾವೆಲ್ಲೋ ಇರುತ್ತವೆ. ಬಲಿಷ್ಟರ ಗುರಿಗಳಿಗೆ ಬಲವಿಲ್ಲದವರು ಮಾರ್ಗವಾಗಿರುತ್ತಾರೆ. 
ಸಮಾಜಕ್ಕೆ ಮನುಷ್ಯನ ಸುಖ ಬೇಕಾಗಿಲ್ಲ. ಸಮಾಜಕ್ಕೆ ಮನುಷ್ಯನ ಬಲಿ ಬೇಕಾಗಿದೆ. ಆತ್ಮಹತ್ಯೆ ಮಾಡಿ ಸಮಾಜದ ಹಂಗು ಕಳೆದುಕೊಂಡವರನ್ನು ಚಿ,ಥೂ...ಎನ್ನುವ ಸಮಾಜ ಯುದ್ದದಲ್ಲಿ ಮಡಿದವರನ್ನು ಹಾಡಿ ಹೊಗಳುತ್ತದೆ. ಅದಕ್ಕೆ ಬೇಕಾಗಿರುವುದು ನಮ್ಮ ಸಾವೇ,ಆದರೆ ಅದನ್ನು ನಿರ್ಧರಿಸುವ ಹಕ್ಕನ್ನು ಸಹ ಅದು ನಮ್ಮಿಂದ ಕಿತ್ತು ಕೊಳ್ಳುತ್ತದೆ.ಲಾಗಾಯ್ತಿನಿಂದಲೂ ಯೋಧರ ಸಾವಿನ ಲಾಭವನ್ನು ಪಡೆದುಕೊಳ್ಳುತ್ತಿರುವವರು ಬೆಚ್ಚಗೆ ಒಳಗೆ ಕುಳಿತು ಅಪ್ಪಣೆ ಕೊಡುವ ರಾಜರು ಹಾಗೂ ಅವರ ಅಂತರಂಗದ ಜನವೇ ಹೊರತು ಬಡ ರೈತ ನಾಗಲಿ,ಜನಸಾಮಾನ್ಯನಾಗಲಿ ಅಲ್ಲ.ಆದರೂ ನಾವು ಇತಿಹಾಸದಲ್ಲಿ ಓದುವುದು,ಹಾಡಿ ಹೊಗಳುವುದು ಆ ರಾಜರಗಳ ಬಗ್ಗೆ ಹಾಗೂ ನಮ್ಮನ್ನು ಉದ್ದರಿಸಲು ಜನ್ಮವೆತ್ತಿದ ಸಂತರ ಬಗ್ಗೆ!. ಬಹುಶಃ ಬೂಮಿಯಲ್ಲಿರುವ ಯಾವುದೇ ದೇಶದಲ್ಲಿ ಹುಟ್ಟಿರದಷ್ಟು ಸಂತರು ಈ ಭಾರತ ದೇಶದಲ್ಲಿ ಹುಟ್ಟಿದ್ದರೆ. ಎಲ್ಲಾ ದೇವಾನುದೇವತೆಗಳು ಕಂಡು ಮಾತಾಡಿ ಹಾಡಿ ಹೊಗಳಿದವರೇ. ಇತಿಹಾಸದ ಆರಂಬದಲ್ಲಿ ಋಷಿಮುನಿಗಳು ವೇದ ಸೃಷ್ಟಿಸಿದರು.ನಂತರ ಬುದ್ಧ ,ಮಹಾವೀರರು ಬಂದು ನಕ್ಷತ್ರ ತೋರಿಸಿದರು. ಅಲ್ಲಿಯವರೆಗೆ ಸುಖವಾಗಿದ್ದ ಸಮಾಜಕ್ಕೆ ಬಡಿಯಿತು ನೋಡಿ ಗ್ರಹಚಾರ.  ಮೊದಲು ಅಲೆಕ್ಸಾಂಡರ್ ಬಂದು ಎಲ್ಲರನ್ನ ಎರ್ರಾಬಿರ್ರಿ ಬಡಿದ.ಆಮೇಲೆ ಶಕರು ಬಂದರು.ನಂತರ ಗುರ್ಜರರು, ಹೂಣರು,ತುರ್ಕರು,ಪೋರ್ತುಗೀಸರು,ಬ್ರಿಟಿಷರು ಎಲ್ಲರೂ ಬಂದು ನಮ್ಮನ್ನು ಬಾರಿಸಿದರು. ಪಾಪ, ಇವರ್ಯಾರೂ ದೇವರನ್ನು ನೋಡೇ ಇರಲಿಲ್ಲ.ನಾವು ಹಿಂದೆ ಗಗನ ನೌಕೆಗಳಲ್ಲಿ ಚಂದ್ರಗ್ರಹಕ್ಕೆ ಹೋಗಿ ಬರುತಿದ್ದಾಗ ಬ್ರಿಟಿಷರಿಗೆ ಬಟ್ಟೆ ಹಾಕಿಕೊಳ್ಳಲೂ ಬರುತ್ತಿರಲಿಲ್ಲ ಎಂದು ಬೊಗಳೆ ಹೊಡೆಯುತ್ತೇವೆ. ನಮ್ಮ ಸೋಲಿಗೆ, ಸಾವು ನೋವಿಗೆ ಕಾರಣ ಯಾರು ಗೊತ್ತೇ?,ನಮ್ಮ ಎಲ್ಲಾ ಸಾಧು ಸಂತರು, ಕವಿಗಳು, ಪಂಡಿತರು, ಜ್ಞಾನಿಗಳು,ಶಿಲ್ಪಿಗಳು. ನಮ್ಮ ದಾಸ್ಯ ಈ ಎಲ್ಲರ ಸಾಮೂಹಿಕ ಪ್ರಯತ್ನದ ಪಲಶ್ರುತಿಯಷ್ಟೆ. ಅದು ಅವರ ತಪ್ಪಲ್ಲ. ಅವರು ಒಳ್ಳೆಯ ಸಮಾಜ ಕಟ್ಟಬಯಸಿದರು. ಒಳ್ಳೆಯ ಸಮಾಜ ಸಾಮಾನ್ಯನನ್ನು ಚೆನ್ನಾಗಿ ಮೇಯಿತು.ಆತನ ಸ್ವಾತಂತ್ರವನ್ನಷ್ಟೇ ಅಲ್ಲ,ಸ್ವತಂತ್ರ ವ್ಯಕ್ತಿತ್ವವನ್ನು, ರೂಪಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ನಾಶಮಾಡಿತು. ನಾಳೆ ರಂಜಾನ್ ಇದೆ.ನಾಳಿದ್ದು ಗಣಪತಿ ಹಬ್ಬ. ಎರಡು ಸಹ ಸಮೂಹ ಸನ್ನಿಯನ್ನು ಸೃಷ್ಟಿಸುವ ಪುರಾತನ ಪ್ರಕಾರಗಳೇ. ಮತ್ತದೇ ರಾಗ ,ಮತ್ತದೇ ಹಾಡು, ಉಸಿರುಗಟ್ಟಿಸುವ ವಾತಾವರಣ. 


ಸುಮ್ಮನೆ ಎದ್ದು ಹೊರಟುಹೋಗಬೇಕು ಎನ್ನಿಸುತ್ತದೆ....ಆದರೆ ಅದು ನನ್ನಿಂದ ಸಾಧ್ಯವೇ?.

Tuesday, September 7, 2010

ಕೊಟ್ಟ ಕುದುರೆಯ ಏರಲು ಅರಿಯ...

ಕೊಟ್ಟ ಕುದುರೆಯ ಏರಲು ಅರಿಯ... ಧೀರನೂ ಅಲ್ಲ ಶೂರನೂ ಅಲ್ಲ...  ಅಲ್ಲಮ ಪ್ರಭು ವಚನವನ್ನು ಅವಾಗಾವಾಗ ಖದೀಮ ರಾಜಕಾರಣಿಗಳು, ವ್ಯಾಪಾರಿ ಮನೋವ್ರುತ್ತಿಯವರು ಉದ್ಗರಿಸುತ್ತಾ ಇರುತ್ತಾರೆ. ಕುಂಟ ಕುದುರೆಯನು ನೀಡಿ ಅದನ್ನೇ ಅಡ್ಜಸ್ಟ್ ಮಾಡಿಕೊ ಎನ್ನುವ ಪ್ರವೃತ್ತಿ ನೋಡಿದರೆ ಅಲ್ಲಮ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತಿದ್ದನೇ  ಎಂಬ ಅನುಮಾನ ಮೂಡುತ್ತದೆ. ನೀಡಲು ಮನಸಿಲ್ಲದೇ ಜಾರಿಕೊಳ್ಳುವ ಬುದ್ದಿ ಇರುವ ಜನಕ್ಕೆ ಈ ವಚನ ಕರ್ಣಾಮೃತ.
ಹಾಗೆ ನೋಡಿದರೆ ಅಲ್ಲಮ ಒಳ್ಳೆಯ ವಚನಗಳನ್ನು ಬರೆದಂತೆ ಕಂಡು ಬರುವುದಿಲ್ಲ. ಅವನ ವಚನಕ್ಕೆ ಅರ್ಥವನ್ನು ನಾವೇ ಕಲ್ಪಿಸಿಕೊಳ್ಳಬೇಕಾಗುತ್ತದೆ. ಪ್ರಾಸ ಮೊದಲೇ ಇರುವುದಿಲ್ಲ. ರಾಗ ನಾಸ್ತಿ.ಆದರೂ "ಗುಹೇಶ್ವರ ಲಿಂಗ " ಎನ್ನುವ ಅಂಕಿತ ಒಬ್ಬೊಬ್ಬರಿಗೋ ಒಂದೊಂದು ಕಲ್ಪನೆ ನೀಡುತ್ತದೆ. ಇದು ಹಲವು ಜೋಕ್ ಗಳ  ಹುಟ್ಟಿಗೆಕಾರಣವಾಗಿದೆ.

ನ್ಯೂಜೆರ್ಸಿ ‘ಅಕ್ಕ’ ಸಮ್ಮೇಳನದಲ್ಲಿ ರಾಜ್ಯ ನಿಯೋಗದ ನಾಯಿಪಾಡು

http://www.prajavani.net/Content/Sep72010/state20100906203127.asp?section=updatenews


ತೆರಿಗೆದಾರನ ಹಣದಲ್ಲಿ ಮಜಾ ಉಡಾಯಿಸಲು ಅಮೆರಿಕಾಕ್ಕೆ ಹೋಗಿದ್ದ ಖದೀಮರಿಗೆ ತಕ್ಕ ಶಾಸ್ತಿಯಾಗಿದೆ. ಇನ್ನಾದರೂ ವಿವಿಧ ಕ್ಷೇತ್ರಗಳಲ್ಲಿ* ರಾಜಕೀಯ ಮಾಡುತ್ತಿರುವ ಈ ಪುಡಾರಿಗಳು ಒಂದಿಷ್ಟು ಬುದ್ದಿಕಲಿಯಲಿ. ಸರ್ಕಾರಿ ಹಣದಲ್ಲಿ "ಅಕ್ಕ" ಸಮ್ಮೇಳನದಲ್ಲಿ ಮಿಂಚಲು ಬಂದವರನ್ನು ಆಯೋಜಕರು "ನಿಮ್ಮಕ್ಕನ್ ...." ಎಂದು ಅಸಡ್ಡೆ ಮಾಡಿದ್ದಾರೆ.ಇಷ್ಟಕ್ಕೋ ಸರ್ಕಾರ ನೀಡಿರುವುದು ಸಾಮಾನ್ಯ ಜನರ ಹಣವೇ ಹೊರತು ಅಲ್ಲಿಗೆ ಹೋದ ಹಿಂದೂಸ್ತಾನಿ ಗಾಯಕರ, ಕವಿಗಳ, ಚಲನಚಿತ್ರ ನಟರ, ವಿಶ್ವವಿದ್ಯಾಲಯದ ಕುಲಪತಿಗಳ, ಮಂತ್ರಿಗಳ  ಎಂ ಎಲ್  ಎ ಗಳ ,ಪತ್ರಕರ್ತರ  ಇತ್ಯಾದಿಗಳ ಸ್ವಂತ ದುಡಿಮೆಯ ಹಣವನ್ನಲ್ಲ.


*(ಹಿಂದೂಸ್ತಾನಿ ಗಾಯಕರು, ಕವಿಗಳು, ಚಲನಚಿತ್ರ ನಟರು, ವಿಶ್ವವಿದ್ಯಾಲಯದ ಕುಲಪತಿಗಳು)