Monday, August 24, 2009

ಗುರು ಹಿರಿಯರ ಪುಕ್ಸಟ್ಟೆ ಸಲಹೆಗಳು


ಭಾನುವಾರ ವಯಸ್ಸಾದ ಪರಿಚಿತರೊಬ್ಬರನ್ನು ನೋಡಲು ಹೋಗಿದ್ದೆ. ಅವರು ಅವರ ಮಂಡಿನೋವಿನ ಗೋಳಾಟ ಎಲ್ಲ ಮುಗಿದ ಮೇಲೆ ನನಗೆ ಬುದ್ದಿ ಹೇಳುತ್ತಾ ,....ಹಾಗೆಲ್ಲ ತಡ ಮಾಡಬೇಡ , ಯಾವ ಯಾವ ಟೈಮ್ ಗೆ ಏನೇನು ಆಗಬೇಕು ಅದೆಲ್ಲ ಆಗಬೇಕು. ಎಂದು ತಲೆ ತಿನ್ನತೊಡಗಿದರು ."ಲೋ ....ಮೊದಲು ನಿನ್ನ ಖಾಯಿಲೆಗಳನ್ನೂ ವಾಸಿಮಾಡಿಕೊಳ್ಳುವ ಬಗ್ಗೆ ಯೋಚಿಸು ,ಆಮೇಲೆ ನನಗೆ ಬುದ್ಧಿ ಹೇಳಲು ಬಾ,ಎಂದು ಮನಸ್ಸಿನಲ್ಲಿ ಹೇಳಿಕೊಂಡೆ. ಇವರಿಗೆಲ್ಲಾ ಸೇವೆ ಮಾಡಲು ಜನ ಬೇಕು. ಅದಕ್ಕೆ ನಾವು ಮದುವೆ,ಮಕ್ಕಳು ಮಾಡಿಕೊಳ್ಳಬೇಕು . ಗುರುತನದ, ಹಿರಿತನದ ಹೆಸರಲ್ಲಿ ನನ್ನ ಹತ್ತಿರ ಬಿಟ್ಟಿ ಚಾಕರಿ ಮಾಡಿಸಿಕೊಂಡಿರುವ ಹಿರಿ ಬೇವರ್ಸಿಗಳ ಪಟ್ಟಿಯೇ ನನ್ನ ಬಳಿ ಇದೆ.( ತಪ್ಪು ತಿಳ್ಕೊಬೇಡಿ,ನಾನು ಇಲ್ಲಿ ಗೆಳೆಯರ ಮತ್ತು ಸಂಬಂಧಿಗಳ ಬಗ್ಗೆ ಹೇಳುತಿಲ್ಲ) ಭಾರತದಲ್ಲಿ ಶಿಕ್ಷಕರು, ಅಧಿಕಾರಿಗಳು ಹಾಗೆ ಬಿಟ್ಟಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ನಿಷ್ಣಾತರು .ಇವರಿಗೆ ಜೀತಕ್ಕೆ ಜನ ಬೇಕು.ಅದಕ್ಕಾಗಿ ಜನಗಳಿಗೆ ಏನೇನೋ ಉಪದೇಶ ಮಾಡುತ್ತಾರೆ.ಏನೇನೂ ನೆಪದಲ್ಲಿ ನಮ್ಮೆಲ್ಲರಿಂದ ನಮಸ್ಕಾರ ಹೊಡೆಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ನಾವು ಹಿಂದೆ ಎಂಥಹ ತ್ಯಾಗ, ಬಲಿದಾನ ಮಾಡಿದ್ದೆವು ಎಂದೆಲ್ಲ ರೈಲು ಬಿಡುತ್ತಾರೆ. ಅಸಲಿಗೆ ಹಾಗೆ ತ್ಯಾಗ ಮಾಡಿದವರು ಹಾಗೆ ಹೇಳಿ ಕೊಳ್ಳುವುದಿಲ್ಲ .ಹಾಗೆ ಹೇಳಿಕೊಳುವ ಹೆಚ್ಚಿನವರು ಜೀವಮಾನವಿಡಿ ಓತ್ಲಾ ಹೊಡೆಯುತ್ತಲೇ ತಲೆ ಕೂದಲು ಬೆಳ್ಳಗೆ ಮಾಡಿಕೊಂಡಿರುತ್ತಾರೆ.


ಕೆಲವರಿಗೆ ಇದರಿಂದ ಸಿಟ್ಟು ಬಂದರೂ 'ನಾವು ಮುಂದಿನ ಪೀಳಿಗೆಯಿಂದ ಕೆಲಸ ಮಾಡಿಸಿಕೊಳ್ಳಬಹುದು ಎಂದು ಸಮಾಧಾನ ತಾಳುತ್ತಾರೆ.ಇದೊಂದು ಮನೋವಿಕೃತಿ. ಅನ್ಯಾಯ ಆದಾಗ ಅದನ್ನು ಮಾಡಿದವರ ಮೇಲೆ ಲೆಕ್ಕ ಚುಕ್ತ ಮಾಡಬೇಕೆ ಹೊರತು ಆ ನೋವನ್ನು ಇನ್ನೊಬ್ಬನಿಗೆ ಶಿಫ್ಟ್ ಮಾಡಬಾರದು,ಸಾದ್ಯವಾದರೆ ಆ ನೋವನ್ನು ಸಹಿಸಿ ಜೀರ್ಣಿಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಇಂತಹದೇ ಕೆಲವು ವಿಕೃತ ಅಭ್ಯಾಸಗಳು ಅನಾದಿ ಕಾಲದಿಂದಲೂ ಆಚರಿಸಲ್ಪಟ್ಟು ,ಇಂದು ಸಂಪ್ರದಾಯ ಎಂಬ ಹೆಸರು ಪಡೆದುಕೊಂಡಿದೆ. ಆದುದರಿಂದ ನಾವು ಅದನ್ನು ಪ್ರಶ್ನಿಸುವಂತಿಲ್ಲ . "ಅಪ್ಪ ಹಾಕಿದ ಮರಕ್ಕೆ ನೇಣು ಹಾಕಿಕೊಳ್ಳುವುದೇ ನಮ್ಮ ಕರ್ತವ್ಯ.ಇದಕ್ಕೆ ಅವರ ಆಶಿರ್ವಾದ ಹಾರೈಕೆ ಕೂಡ ಇದೆ .(ಹಗ್ಗ ಕಡಿದುಕೊಳ್ಳದಿರಲಿ ಎಂದು?)

ಎಲ್ಲರೂ ನಿನ್ನ ಹಾಗೆ ಯೋಚನೆ ಮಾಡಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ ಎಂದು ಹೇಳುತ್ತಾರೆ. ಅದರ ಅರ್ಥ ಅವರಿಗೆ ಮಿಂಚಲು ಸಾಧ್ಯವಾಗುವಂಥಹ ಪ್ರಪಂಚ ಇರುತ್ತಿರಲ್ಲಿಲ್ಲ ಎಂದು !.ಇದು ಒಂದು ಕಾಮನ್ ಡೈಲಾಗ್. ಈ ಪ್ರಪಂಚ ಉಳಿಸುತ್ತೆನೆಂದು ನಾವೇನು ಗುತ್ತಿಗೆ ಹಿಡಿದಿದ್ದೆವೆಯೇ.? ಅದನ್ನು ಗುತ್ತಿಗೆ ಹಿಡಿದವರಿಗೆ ಚೀಪ್ ಲೇಬರ್ ಬೇಕು. ಅದಕ್ಕಾಗಿಯೇ ಇಷ್ಟೆಲ್ಲಾ ರಾಗ.

ಇಷ್ಟೆಲ್ಲಾ ಆಮಿಶವೋಡಿ ನಿಮಗೆ ಸಂಸಾರ ಹೂಡಲು ಉತ್ತೇಜಿಸುವ ಇವರು ನಿಮ್ಮ ಜೀವನವನ್ನು ಸುಗಮಗೊಳಿಸಲು ಏನಾದರು ಪ್ರಯತ್ನ ಪಡುತ್ತಾರೆಯೇ?. ಹಾಗಿದ್ದರೆ ನೀವು ರೇಶನ್ ಕಾರ್ಡ್ ಪಡೆಯಲು,ಪಾಸ್ಪೋರ್ಟ್ ಪಡೆಯಲು ಇಷ್ಟೆಲ್ಲಾ ತೊಂದರೆಯಾಗುತ್ತಿತ್ತೆ?, ಮಾನವತೆಯೇ ಎಲ್ಲದಕ್ಕಿಂತ ಮುಖ್ಯ ಎಂದು ಹೇಳುತ್ತಾ ನಿಮ್ಮನ್ನು ಸಂಸಾರ ಸಾಗರಕ್ಕೆ ತಳ್ಳಿ ನಂತರ ನೀತಿ, ನಿಯಮ ಗಳನ್ನೆಲ್ಲಾ ಉಲ್ಲೇಖಿಸಿ ಮಾನಾವೀಯತೆ ಮೆರೆಯುವಲ್ಲಿ ತಮ್ಮ ಅಸಹಾಯಕತೆಯನ್ನು ದೊಡ್ಡ ಮಟ್ಟದಲ್ಲಿಯೇ ಪ್ರದರ್ಶಿಸುತ್ತಾರೆ. ನಾಗರೀಕ ಪ್ರಪಂಚದಲ್ಲಿ ಮಾನವೀಯತೆ ಮುಖ್ಯ ಎಂದು ಎಂದು ಹೇಳುವ ಮಹಾಶಯರೆಲ್ಲಾ ಕೆಲಸ ಮಾಡಿಕೊಡುವ ಅಗತ್ಯ ಬಂದಾಗೆಲ್ಲಾ ನೀತಿ,ನಿಯಮ,ಕಾನೂನು ಎಂದೆಲ್ಲ ಹೇಳಿ ಜಾರಿಕೊಳುತ್ತಾರೆ. ಯಾವಾಗಲು ಈ ದೇಶದ ಧರ್ಮ,ಸಂಸ್ಕೃತಿ ಹೀಗಿದೆ. ಅದರಂತೆಯೇ ನಡೆಯಬೇಕು ಈ ಎನ್ನುತ್ತಾರೆ ವೇದಿಕೆಯ ಮೇಲೆ. ಈ ಸಂಸ್ಕೃತಿಯನ್ನೇ ಪಾಲಿಸುತ್ತೇವೆ ಎನ್ನಲು ನಾವೇನು ಅಪ್ಲಿಕೇಶನ್ ಹಾಕಿ ಈ ದೇಶದಲ್ಲಿ ಹುಟ್ಟಿದ್ದೇವೆಯೇ?

ಹಿರಿಯರ ಕಥೆ ಇಷ್ಟಾದರೆ ಗುರುಗಳ ಕಥೆ ಇನ್ನೊಂದು ಬಾಗದಲ್ಲಿ ಹೇಳುತ್ತೇನೆ. ನಮ್ಮ ದೇಶದಲ್ಲಿ ಇಲ್ಲಿಯವರೆಗೆ ಸಾವಿರಾರು ಗುರುಗಳು ಸಂದು ಹೋಗಿದ್ದಾರೆ .ಇವ್ರು ತೋರಿಸಿದ ಸುಂದರ ಕನಸುಗಳು ಸಾವಿರ ವರ್ಷವಾದರೂ ನನಸಾಗಿಲ್ಲ. ಇನ್ನು ಇವರು ನಮಗೆ ಕೊಟ್ಟ ಕೊಡುಗೆ ಎಷ್ಟಿರಬಹುದು ?

ಕೇ ಹನಿ - ೧

ಕನಕನ ಕಿಂಡಿ :
ಎಲ್ಲ ಕಡೆ ಇದ್ದಾನೆ ಬೆನಕ
ಎಂದು ಮೊದಲೇ ಅರಿತಿದ್ದ ಕನಕ
ಹೋಗಿದ್ದೇಕೆ ದೇವರನ್ನು ನೋಡಲು
ಉಡುಪಿ ತನಕ ?

Saturday, August 22, 2009

ಕಾಲ ಕೆಟ್ಟು ಹೋಯ್ತು !!!..





ಒಬಾಮನ ಹೆಂಡತಿ ತುಂಡು ಚೆಡ್ಡಿ ದರಿಸಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಷಯವನ್ನು ವಿವರವಾಗಿ ಅರಿಯಬೇಕೆಂದರೆ ಈ ಕೆಳಗಿನ ಲಿಂಕ್ ನೋಡಿ.
http://www.aol.in/news-story/CAPITAL-CULTURE-Michelle-Obamas-shorts-flap/557152
ಅಷ್ಟಕ್ಕೂ ಅಮೇರಿಕಾದಲ್ಲೂ(ಅಂತಹ ಹಳೆಯ ಪ್ರಜಾಪ್ರಬುತ್ವದಲ್ಲೂ) ಈ ರೀತಿಯ ಪೂರ್ವಾಗ್ರಹ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ. ಆದರೆ ಇಲ್ಲಿನ ಕೆಲವು ಜನರು ಸನಾತನ ಬೊದನೆ ಮಾಡುವ ನೆಪದಲ್ಲಿ ಅಲ್ಲಿ ಬಿಕ್ಷೆ ಎತ್ತಲು ಹೋಗಿ ಅಲ್ಲೇ settle ಆಗಿದ್ದಾರಲ್ಲಾ . ಅವರುಗಳೇ ಅಮೇರಿಕಾದ ಮುಕ್ತ ಸಮಾಜದಲ್ಲಿ ಅಸಹನೆಯ ವಿಷ ಬಿತ್ತುತಿದ್ದರೆ ಎಂದು ನನಗೇಕೋ ಅನುಮಾನ.



ನಮ್ಮ ದೇಶದಲ್ಲಿ ಯಾರಿಗಾದರು ಜ್ಞಾನೋದಯ ಆದರೆ ಅಥವಾ ಮೈಮೇಲೆ ಖಾವಿ ಬಿದ್ದರೆ ಅಸಾಧ್ಯ ತುರಿಕೆ ಸುರುವಾಗುತ್ತದೆ.ಈ ತುರಿಕೆಗೆ ಅಮೆರಿಕ ಒಂದೇ ಪರಿಹಾರ ಎಂದು ಅವರು ತಿಳಿದುಕೊಂಡಂತಿದೆ. ಸರ್ವಸಂಗಪರಿತ್ಯಾಗಿಗಳಾದರು "doctorate' ಸಿಕ್ಕರೆ ಅದನ್ನು ತ್ಯಾಗ ಮಾಡುವುದಿಲ್ಲ. ಅಮೆರಿಕದಲ್ಲಿ ಮಠ ಸ್ತಾಪನೆಯಗದಿದ್ದರೆ ಜ್ಞಾನೋದಯವೇ ವ್ಯರ್ಥ ಎಂಬುದು ಇವರ ಭಾವನೆ.ಇವರುಗಳ ಭಾಷಣ ಕೇಳಲು ಜನ ಕಿಕ್ಕಿರಿದು ಸೇರಿದ್ದರು ಎಂದು ಇಲ್ಲಿ ಅವರ ಶಿಷ್ಯರ ಪ್ರಚಾರ .ಅಲ್ಲಿ ಮಡೊನ್ನ,ಮೈಖೇಲ್ ಜ್ಯಾಕ್ಸನ್ ಕುಣಿತಕ್ಕೆ ಇದಕ್ಕಿಂತ ಸಾವಿರಪಟ್ಟು ಜನಸೇರುತ್ತಾರೆ.ಗೇ ಪೆರೇಡ್ ಗೂ ಇನ್ನೂ ಹೆಚ್ಚು ಜನ ಸೇರುತ್ತಾರೆ. ಅವರೆಲ್ಲ ಹುಚ್ಚರು. ನಮ್ಮ ಭಾಷಣ ಕೆಲಳಲು ಬರುವವರೆಲ್ಲ ಸುಸಂಸ್ಕೃತರು ಎಂದು ಇವರ ಅಭಿಮತ.









ಇಲ್ಲಿಯೂ ಅಂತಹ ಬಹಳಷ್ಟು ಮಂದಿ ಸಕ್ರಿಯರಾಗಿದ್ದಾರೆ. ಜೇಡರ ದಾಸಿಮಯ್ಯ ಹೇಳಿರುವಂತೆ "ಗುಡಿಯ ಒಳಗಣ ಬೆಕ್ಕಿನಂತೆ ". ರಾಮನ ಫೋಟೋದ ಕೆಳಗೆ ಜಪಮಣಿ ಹಿಡಿದು ಕಣ್ಣು ಮುಚ್ಚಿ ಕುಳಿತ ಇವರ ಮನಸ್ಸಿನೊಳಗೆ ರಾಮನಿರುವುದಿಲ್ಲ . ಇವರ ಮನಸ್ಸಿನೊಳಗೆ ಕುಣಿಯುತ್ತಿರುವುದು ಪಬ್ ನಲ್ಲಿ ಕುಡಿದು ಕುಣಿಯು ತ್ತಿರುವ ಅರೆನಗ್ನ ಹುಡುಗಿಯರು, ಸ್ವಯಂವರದ ಮೂಲಕ ವರ ಹುಡುಕುತ್ತಿರುವ ನಟಿ, ವಿದೇಶೀ ಉಡುಗೆಯೊಳಗಿನ ಕಟಿ , lipstick ಬಳಿದುಕೊಂಡ ತುಟಿ. ಆ "ಧ್ಯಾನ " ದಿಂದ ಏಳುವಾಗ ಮಾತ್ರ ಒಮ್ಮೆ ನಿಮ್ಮೆಲ್ಲರಿಗೂ ಕೇಳುವಂತೆ ರಾಮರಾಮ ಎನ್ನುತ್ತಾರೆ. ಈ ವಿಷಯದಲ್ಲಿ ನೀವು ಮುದುಕರೊಂದಿಗೆ ಮತ್ತು shape ಕಳೆದುಕೊಂಡ ಮಹಿಳೆಯರೊಂದಿಗೆ ಮಾತನಾಡಿಸಲೆ ಬಾರದು . ಮುದುಕರಂತೂ ಹೊಡೆಯಕ್ಕೆ ಬರುತ್ತಾರೆ. ರಾಕಿ ಸಾವಂತ್ ,ಸಚ ಕ ಸಂನ ಇತ್ಯಾದಿ ವಿಷಯಗಳು ಕಿವಿಗೆ ಬಿದ್ದರೆ ಸ್ಪ್ರಿಂಗ್ನಂತೆ ನೆಗೆದು ಅವೆಲ್ಲವನ್ನೂ ಕಂಡಿಸುವ ನೆಪದಲ್ಲಿ ಎಲ್ಲವನ್ನು ಮನಸ್ಸಿನಲ್ಲಿ ಮತ್ತೊಮ್ಮೆ ಸವಿಯುತ್ತಾರೆ. "ವಯಸ್ಸಾದವರಿಗೆ ತೆವಲು ಹೆಚ್ಚು " ಎಂಬುದು ಇಲ್ಲೇ ಗೊತ್ತಾಗುತ್ತದೆ.ವೃದ್ಧ ನಾರಿ ಪತಿವ್ರತಾ " ಎಂಬ ಮಾತನ್ನು ನೀವು ಕೇಳೆ ಇರುತ್ತೀರಿ . ಮುದುಕಿಯರಿಗಂತೂ ತಾಳಲಾರದಷ್ಟು ಹೊಟ್ಟೆಕಿಚ್ಚು . ಹುಡುಗಿಯರೇ ಹೀಗಾದರೆ ಹುಡುಗರ ಕಥೆಯೇನಾಗಬೇಕು ಎಂದು ಲೊಚಗುಟ್ಟಿ ಜಪಮಾಲೆ ಹಿಡಿದು ಟಿವಿ ಮುಂದೆ ಕೂರುತ್ತಾರೆ.
ನಾನು ಹಿಂದೆ ಒಂದು ಕಥೆಯನ್ನು ಕೇಳಿದ್ದೆ. ಅದರ ಸಾರಾಂಶ ಹೀಗಿದೆ.-
ಗುರುಶಿಷ್ಯರ ಗುಂಪೊಂದು ದಾರಿಯಲ್ಲಿ ಹೋಗುವಾಗ ನದಿಯೊಂದು ಸಿಗುತ್ತದೆ.ಅಲ್ಲಿ ಯುವತಿ ಯೊಬ್ಬಳು ತನಗೆ ನದಿ ದಾಟಲು ಸಹಾಯ ಮಾಡಬೇಕೆಂದು ಗುರುಗಳನ್ನು ಬೇಡುತ್ತಾಳೆ. ಆಗ ಗುರುಗಳು ಆಕೆಯನ್ನು ಹೊತ್ತುಕೊಂಡು ಬಂದು ನದಿಯ ಈಚೆಕಡೆ ಬಿಡುತ್ತಾರೆ. ನಂತರ ಪ್ರಯಾಣ ಮುಂದುವರಿಸುತ್ತಾರೆ. ದಾರಿಯುದ್ದಕ್ಕೂ ಶಿಷ್ಯರು ಗುರುಗಳ ವರ್ತನೆಯ ಬಗ್ಗೆ ಗುಸುಗುಸು ಮಾತನಾಡುತ್ತಾ ಬರುತ್ತಿರುವುದನ್ನು ಗುರುಗಳು ಗಮನಿಸುತ್ತಾರೆ. ನಂತರ ಅವರು ಶಿಷ್ಯರ ಕಡೆ ತಿರುಗಿ ಹೀಗೆ ಹೇಳುತ್ತಾರೆ."ನಾನೇನೋ ಆಕೆಯನ್ನು ನದಿಯ ಈ ಬದಿಯವರೆಗಷ್ಟೇ ಹೊತ್ತುಕೊಂಡು ಬಂದೆ.ಆದರೆ ನೀವೆಲ್ಲ ಅವಳನ್ನು ಇಲ್ಲಿಯವರೆಗೂ ಹೊತ್ತುಕೊಂಡು ಬಂದಿದ್ದಿರಾ? ,ನಿಮ್ಮದೇನು ಕರ್ಮ ? ,.....,

Thursday, August 20, 2009

ಕೋಮುವಾದಿಗಳ ಜಿನ್ನಾಸ್ತುತಿ


ಅಡ್ವಾಣಿಯವರು ಪಾಕಿಸ್ತಾನಕ್ಕೆ ಹೋಗಿದ್ದಾಗ ಮಹಮ್ಮದ್ ಅಲಿ ಜಿನ್ನಾನನ್ನು ಹೊಗಳಿದ್ದಕ್ಕೆ,ಜಸ್ವಂತ್ ಸಿಂಗ್ ಅವರು ತಮ್ಮ ಪುಸ್ತಕದಲ್ಲಿ ಎಂ.ಏ.ಜಿನ್ನಾ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಕ್ಕೆ B.J.P,ಕಾಂಗೈ,ಪತ್ರಕರ್ತರಾದಿಯಾಗಿ ಎಲ್ಲರು ಆಕ್ರೋಶ ವ್ಯಕ್ತಪಡಿಸಿ ಮೈಪರಚಿಕೊಂಡರು. ಇವರಿಬ್ಬರೂ ಜಿನ್ನಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಗ್ಗೆ ಯಾವುದೇ ಅಚ್ಚರಿಪಡಬೇಕಾಗಿಲ್ಲ.ಒಬ್ಬ ಕೋಮುವಾದಿ ಇನ್ನೊಬ್ಬ ಕೋಮುವಾದಿಯ ಬಗ್ಗೆ ಪ್ರಶಂಸೆ ಮಾಡುವುದು ಸಹಜ. ಇವರಿಗೆ ಜಿನ್ನಾ ಮಾದರಿ.


ಆರಂಭದಲ್ಲಿ ಜಸ್ವಂತ್ ಸಿಂಹ ಕೂಡ ಸಾಬರನ್ನು ಕನ್ದೆಮ್ ಮಾಡುವ ಉದ್ದೇಶದಿಂದ ಜಿನ್ನಾನನ್ನು ಉಗಿದು ಪುಸ್ತಕ ಬರೆಯಲಿಚ್ಚಿಸಿರಬೇಕು. ಆದರೆ ಬರೆಯುತ್ತಾ,ಬರೆಯುತ್ತಾ ,ತನಗೆ ತಾನೇ ಅರಿವಿಲ್ಲದಂತೆ ಗೌರವ ಉಕ್ಕಲಾರಮ್ಬಿಸಿದೆ. ಎಷ್ಟೋ ವಿಧಾನಗಳನ್ನು ಅವರು ಜಿನ್ನಾ ರಿಂದ ಎರವಲು ಪಡೆದಿರಬಹುದು. ಬರೆಯುತ್ತಾ ,ಬರೆಯುತ್ತಾ ಇವರಿಗೆ ಜಿನ್ನಾಬಗ್ಗೆ ಗೌರವ ಹುಟ್ಟುತ್ತದೆಯೇ ವಿನಃ ತನ್ನನ್ನು ತಾನು ಹಿಂದೂ ಧರ್ಮದ ನಾಯಕ ಎಂದು ತಿಳಿದು ಕೊಂಡಿದ್ದ ಮಹಾತ್ಮ ಗಾಂಧಿಯ ಬಗ್ಗೆ ಅಲ್ಲ!.ಯಾಕೆಂದರೆ ಅವರಲ್ಲಿ ಇವರಿಗೆ ಒಬ್ಬ ಪ್ರತಿಸ್ಪರ್ಧಿಕಾಣುತ್ತಾನೆ!
ಸಮಾನ ಮನಸ್ಕರ ಬಗ್ಗೆ,ಸಮಾನ ಕೆಲಸ ಮಾಡುವವರ ಬಗ್ಗೆ ಗೌರವ ತಾಳುವುದು ಒಳ್ಳೆಯ ಗುಣವೇ.

ಒಬ್ಬ ಯೋಧ ಇನ್ನೊಬ್ಬ ಯೋಧನ ಬಗ್ಗೆ ಗೌರವದಿಂದ ನಡೆದು ಕೊಳ್ಳಬೇಕು ಎನ್ನುತ್ತದೆ ವಿಶ್ವಸಂಸ್ತೆಯ ಚಾರ್ಟರ್. ಪಾಕಿಸ್ತಾನಿ ಸೈನಿಕರೂ ಇದೆ ದೋರಣೆ ಹೊಂದಿದ್ದರೆ ಕ್ಯಾಪ್ಟನ್ ಸೌರವ್ ಕಾಲಿಯನ ಹೆಣ ಅಷ್ಟು ವಿರೂಪಗೊಳಿಸಲ್ಪಡುತ್ತಿರಲಿಲ್ಲ. ತಮಾಷೆಎಂದರೆ ಕಾರ್ಗಿಲ್ ಆಕ್ರಮಣದ ಕರ್ತೃ ಮುಷರಫ್ ದೆಹಲಿಯಲ್ಲಿ ಹಲವುಸಾರಿ ರಾಜ ಮರ್ಯಾದೆ ಸ್ವೀಕರಿಸಿದ, ಅದೂ ಪಾಕಿಸ್ತಾನದ ಬಗ್ಗೆ ಅಪಾರ ಆಕ್ರೋಶ ವ್ಯಕ್ತಪಡಿಸುತಿದ್ದ ಕೇಸರಿ ಸರ್ಕಾರ ಆಳುತಿದ್ದ ಸಮಯದಲ್ಲಿ!.ಇದೂ ಅಷ್ಟೇ, ಕೋಮುವಾದಿ ದೊರಣೆಯೇ.

ಇಷ್ಟಾದರೂ ಬಾರತೀಯ ಮಾಧ್ಯಮಗಳು ಪಾಕಿಸ್ತಾನಿಯರಿಗೆ ಮಣೆಹಾಕುತ್ತಿದೆ. ಬಾಕಿಸ್ತಾನಿ ಕ್ರಿಕೆಟಿಗರು,ಜೋಕರ್ ಗಳು,ಹಾಡುಗಾರರು ಇಲ್ಲಿ ಹೊಗಳಿಕೆಗೆ ಪಾತ್ರರಾಗುತಿದ್ದರೆ.ಅವರೆಲ್ಲರೂ ದುಷ್ಟರು ಎಂದು ನನ್ನ ಅಭಿಪ್ರಾಯವಲ್ಲ.ಆದರೆ ಸುಮ್ಮನೆ ಅವರಿಗೆ ಮಣೆಹಾಕಿ ಪಾಕಿಸ್ತಾನದಿಂದ ಇಲ್ಲಿಗೆ ರಸ್ತೆ ಸೃಷ್ಟಿಸುವುದಕ್ಕಿಂತ ಅವರನ್ನು ಅವರ ದೇಶದಲ್ಲಿ ಅವರ ಪಾಡಿಗೆ ಇರುವುದಕ್ಕೆ ಬಿಟ್ಟು ನಮ್ಮ ದೇಶದ ಗೋಡೆಯನ್ನು ಬಲಪಡಿಸಲು ಪ್ರಯತ್ನಿಸಬಹುದಲ್ಲ.ಆದರೆ ಈ ಪೇಪರ್(Time of India)ನವರ “ಅಮನ್ ಕೆ ಆಶಾ “ ದಂತಹಾ ಮಂಗಾಟಗಳು ಇನ್ನಸ್ಟು ಕಸಬ್ ಗಳಿಗೆ ದಾರಿಮಾಡಿಕೊಡುತ್ತಿವೆ. ಪಕ್ಕದ ಮನೆಯವರ ಮೇಲೆ ಅನುಮಾನ ವಿದ್ದರೆ ಅವರಿಗೆ ನಿಮ್ಮ ಮನೆ ಬೀಗದ ಕೈ ಕೊಡಬಾರದು. ಹಾಗೇ ಕೊಟ್ಟು ಅಯ್ಯೋ ನನ್ನ ಮನೆ ಯಿಂದ ಅದು ಹೋಯಿತು,ಇದು ಹೋಯಿತು ಎಂದರೆ ಅದರಿಂದ ಏನು ಪ್ರಯೋಜನ ?

ಪರ್ಯಾಯ ಸಾಹಿತ್ಯ ಚಳುವಳಿ

ಇಂದು ಆಸ್ತಿತ್ವದಲ್ಲಿರುವ ಸಾಹಿತ್ಯಪ್ರಕಾರಗಳೆಲ್ಲವೂ ನಿಂತ ನೀರಾಗಿವೆ. ಅನುದಾನದ ಆಸೆಗೋ, ನೆರೆಹೊರೆಯವರ, ಸಂಬಂದಿಕರ ದಾಕ್ಷಿಣ್ಯಕ್ಕೋ ಅವರುಗಳ ಜೊತೆ ಏಗಬೇಕಾದ ಅನಿವಾರ್ಯತೆಯಿಂದಲೋ ಅಥವಾ ಪ್ರಕಾಶಕರನ್ನೋ/ಮುದ್ರಕರನ್ನೋ ಮೆಚ್ಚಿಸಬೇಕಾದ ಅನಿವಾರ್ಯತೆಯಿಂದಲೋ ಇಂದಿನ ಸಾಹಿತ್ಯ ತನ್ನ ಅಭಿವ್ಯಕ್ತಿ ಸ್ವತಂತ್ರವನ್ನೇ ಗಿರವಿಇಟ್ಟಿದೆ.
ತನಗನ್ನಿಸಿದುದನ್ನು ನಿರ್ಭಿಡೆಯಿಂದ ಬರೆಯುವ ಅಬ್ಯಾಸವನ್ನು ಜನ ಬಿಟ್ಟುಬಿಟ್ಟಿದ್ದಾರೆ. ತಮಗನ್ನಿಸುವುದನ್ನು ಮುಕ್ತವಾಗಿ ಹೇಳುವುದು ನಿರ್ಲಜ್ಜತನದ ಲಕ್ಷಣ ಎಂಬ ನಂಬಿಕೆಯನ್ನು ಇಂದಿನ ಆಷಾಡಭೂತಿ ಶಿಕ್ಷಣ ವ್ಯವಸ್ಥೆ ನಮ್ಮ ತಲೆಗೆ ತುಂಬುವಲ್ಲಿ ಯಶಸ್ವಿಯಾಗಿದೆ. ನಮ್ಮ ವಿಚಾರಗಳಿಗೆ ನಾವೇ ಪರಕೀಯರಾಗಿದ್ದೀವೆ.
ಈಗ ನಮ್ಮ ಮುಂದಿರುವುದು ವೃತ್ತಿಪರ ಸಾಹಿತ್ಯ. ಮಾರಟಕ್ಕೆ ಅರ್ಹವಾದದನ್ನು ಮಾತ್ರ ಬರೆಯುವುದು ಈಗಿನ ಟ್ರೆಂಡ್.
ಏನನ್ನಾದರೂ ಅಭಿವ್ಯಕ್ತಗೊಳಿಸಬೇಕು, ಬರೆಯಬೇಕು ಎಂದು ಪ್ರಾಮಾಣಿಕವಾಗಿ ಅನ್ನಿಸಿದಾಗ ಮಾತ್ರ ಹಿಂದಿನವರು ಬರೆಯುತ್ತಿದ್ದರು. ಆದರೆ ಈಗ ಹಲವರು ವರುಷ ಬೇರೆಯವರ ಬರಹಗಳನ್ನು ಓದಿ ಶಬ್ದ, ಅರ್ಥಗಳನ್ನೂ ಪೋಣಿಸಿ ಸಾಹಿತ್ಯ ತಯಾರಿಸುವುದು ಇಂದಿನ ಕ್ರಮ.
ಈ ಎಲ್ಲ ಕಾರಣಗಳಿಂದಾಗಿ ಪರ್ಯಾಯ ಸಾಹಿತ್ಯ ಚಳುವಳಿ ಆರಂಭವಾಗಿದೆ. ವೃತ್ತಿಪರರಲ್ಲದವರಿಗೆ ಬರೆಯಬೇಕು ಎಂದು ಪ್ರಾಮಾಣಿಕವಾಗಿ ಎನಿಸಿದಾಗ ಬರೆದ ಬರಹಗಳು ಮಾತ್ರ ಆತ್ಮ ವನ್ನು ಹೊಂದಿರುತ್ತವೆ. ಇಲ್ಲಿ ನಮ್ಮನ್ನು ತಿದ್ದಲು ಪ್ರಯತ್ನಿಸುವವರನ್ನು ,ವಿಮರ್ಶಕರನ್ನು ದೂರ ಇಟ್ಟಷ್ಟೂ ಒಳ್ಳೆಯದು. ಅದಕ್ಕೆ ಈ ಬ್ಲಾಗಿಗೆ ನವ್ಯಾಂತ ಎಂಬ ಹೆಸರಿಡಲಾಗಿದೆ.

ಹೀಗೆ ಆಗಲು ಕಾರಣ ಏನಿರಬಹುದು ಎಂದು ನಾನು ಈ ಮೊದಲು ಕಂಡುಹಿಡಿಯಲು ಪ್ರಯತ್ನಿಸಿದ್ದೇನೆ.
ಈ ಕಾರಣಗಳನ್ನು ಸ್ಥೂಲವಾಗಿ ವಿಂಗಡಿಸಿದಾಗ ಸಮಾಜದ,ಸಾಹಿತ್ಯದ ಅವನತಿಗೆ ಕಾರಣವಾಗಿರುವ ಮೂರು ಅಂಶಗಳು ಗಮನಕ್ಕೆ ಬಂತು .

ಸಂಪ್ರದಾಯ, ಸಂಸ್ಕೃತಿ ,ಧರ್ಮ ಇವು ಆ ಸಾಮಾಜಿಕ ಅನಿಷ್ಟತ್ರಯಗಳು.

ಇವು ಹೇಗೆ ಮಾನವನ ವಿಕಾಸವನ್ನು ಕುಂಟಿತಗೊಳಿಸುತ್ತದೆ?, ಹೇಗೆ ಇವು ಮಾನವನ ಪ್ರಗತಿಯ ಪಥದಲ್ಲಿ ಅಡ್ಡಗೋಡೆಯಾಗಿವೆ ಎಂಬುದನ್ನು ಮುಂದಿನ ಅದ್ಯಾಯದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಸೂಕ್ಷ್ಮವಾಗಿ ನೋಡಿದರೆ ಈ ಮೂರರಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲ. ಆದುದರಿಂದ ಇನ್ನು ಮುಂದೆ ಇವನ್ನೆಲ್ಲಾ ಸೇರಿಸಿ ಅನಿಷ್ಟತ್ರಯಗಳು ಎಂದು ಕರೆಯುತ್ತೇನೆ.

ಇವುಗಳೆಲ್ಲಾ ನಮ್ಮವು,ನಮ್ಮ ಸ್ವಂತದ್ದು, ನಮ್ಮ ಹಿರಿಯರದ್ದು ಎಂಬ ಮೂಡನಂಬಿಕೆ ಹಲವರಲ್ಲಿದೆ. ಆದರೆ ಇವುಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪಾಲುದಾರರಗಿದ್ದವರು ಕೆಲವುಮಂದಿ ಪಟ್ಟಭದ್ರ ಹಿತಾಸಕ್ತಿ ಹೊದಿದ್ದವರು ಮಾತ್ರ. ಆ ಹಿರಿಯರಿಗೂ ಈಗ ಇರುವ ಹೆಚ್ಚಿನವರಿಗೂ ಯಾವುದೇ ಸಂಬಂಧ ಇಲ್ಲ. ಆದರು 'ನಮ್ಮ ಹಿರಿಯರು ನೆಟ್ಟಿದ್ದು ''ನಮ್ಮ ಹಿರಿಯರು ನೆಟ್ಟಿದ್ದು ' ಎಂದುಕೊಂಡು ರಸ್ತೆಬದಿಯ ಆಲದಮರಕ್ಕೆ ಜೋತುಬೀಳುತ್ತೇವೆ. ಅಸಲಿಗೆ ಆ ಮರಕ್ಕೂ ಇವರ ಹಿರಿಯರಿಗೂ ಯಾವುದೇ ಸಂಬಂಧ ಇರುವುದಿಲ್ಲ.

ಯಾರಾದರು ಸ್ವಲ್ಪ ವಿಶೇಷ ನಡವಳಿಕೆ ತೋರಿದರೆ "ಅಯ್ಯೋ ನಮ್ಮ ಸಂಸ್ಕೃತಿ ಹಾಳಾಗಿ ಹೋಯಿತಲ್ಲ "ಎಂದು ಕೆಲವರು ಲೊಚಗುಟ್ಟುತ್ತಾರೆ . ಅಯ್ಯೋ "ನಮ್ಮ " ಎಂದು ಅವರು ಹೇಳುವಾಗ ಅವು ನಮ್ಮನ್ನು ಅಪ್ಪಿರುವುದು ಒಂದು ಬಾವನಾತ್ಮಕ ಸಂಬಂಧವಾಗಿ ನಮಗೆ ತೋರಬಹುದು. ಅವರು ನನ್ನನ್ನು ಆವರಲ್ಲಿ ಒಬ್ಬನನ್ನಾಗಿ ಪರಿಗಣಿಸುತಿದ್ದಾರೆ ಎಂಬುದು ನಮಗೆ ಅವರಲ್ಲಿ ಗೌರವ ಮೂಡಿಸಬಹುದು. ಆದರೆ ಅವರ ಈ ಕ್ರಿಯೆಯ ಹಿಂದೆ ನಿನ್ನ ಸ್ವಂತಿಕೆಯನ್ನು,ವ್ಯಕ್ತಿತ್ವವನ್ನು ಬದಲಿಸುವ ಹುನ್ನಾರ ಇದೆ ಎಂಬುದನ್ನೂ ಅರ್ಥ ಮಾಡಿಕೊಳ್ಳುವ ಮೊದಲೇ ನಾವು ಅವರಂತೆಯೇ ಆಗಿ ನಾವುಗಳೂ ಕೂಡ ಈ ಅನಿಷ್ಟತ್ರಯಗಳ ವಕ್ತಾರರಾಗಿಬಿಡುತ್ತೇವೆ. ಆಮೇಲೆ ನಮ್ಮ ವಿವೇಚನೆ ಜಟಕಾ ಕುದುರೆಯಂತೆ ಆಚೆ ಈಚೆ ನೋಡದೇ ಒಂದೇ ದಾರಿಯಲ್ಲಿ ಸಾಗುತ್ತದೆ. ಆಗ ಸಮಾಜದಲ್ಲಿ ಹಿರಿಯರು ಎನ್ನಿಸಿಕೊಳುವವರಿಗೆ ನಿಮ್ಮಮೇಲೆ ಸವಾರಿ ಮಾಡಲು ಸುಲಭವಾಗುತ್ತದೆ.

ಈ ಕಾನೂನು, ನೀತಿ ನಿಯಮ ರಚಿಸಿದವರೆಲ್ಲರೂ ಸವಾರಿ ಮಾಡಲು ಕುದುರೆ ಹುಡುಕುತಿದ್ದವರೆ. ಶಕ್ತಿಯಿಂದ ಕೆಲಸ ಆಗದಿದ್ದಾಗ ದೇವರ ಭಯ ಬಿತ್ತಿ ,ಅದೂ ಆಗದಿದ್ದಾಗ ಪುನರ್ಜನ್ಮದ ನಂಬಿಕೆ ಹುಟ್ಟಿಸಿ , ಆದೂ ಆಗದಿದ್ದಾಗ ನಾಳೆ ಒಳ್ಳೆಯದಾಗುತ್ತದೆ ಎಂಬ ಬಣ್ಣಬಣ್ಣದ ಕಥೆ ಲಾವಣಿ ,ಶ್ಲೋಕ ಗಳನ್ನೂ ಕಟ್ಟಿ ಅವರ ಗದ್ದೆಗಳನ್ನು ಉಳಲು ,ಯುದ್ದ ಮಾಡಲು, ಅರಮನೆ,ದೇಗುಲ ಕಟ್ಟಲು ಬಳಸಿಕೊಂಡಿದ್ದು ಬರೀ ಇತಿಹಾಸವಷ್ಟೇ ಅಲ್ಲ ,ಇಂದಿನ ವಸ್ತುಸ್ಥಿತಿ ಕೂಡ . ಒಬ್ಬ ರಾಜಕುಮಾರ ಸ್ವಲ್ಪ ದಿನ ಅಜ್ಞಾತನಾಗಿ ಬದುಕಿ ನಂತರ ಜನರ ನಡುವೆ ಪ್ರತ್ಯಕ್ಷನಾಗಿ ಅವರಿಗೆ ತಿಳಿಯದ ಹೊಸ ಲೋಕದ ಬಗ್ಗೆ ಹೇಳುತ್ತಾನೆ. ಜನ ಸುಲಭವಾಗಿ ಕುರಿಗಳಗುತ್ತಾರೆ.
ಹೊಸ ಸಾಮ್ರಾಜ್ಯಗಳು ಉದ್ಭವವಾಗುತ್ತದೆ. ಹೊಸ ಹೆಣಗಳು ಬೀಳುತ್ತವೆ.
ಯಾವುದು ಸರಿ ,ಯಾವುದು ತಪ್ಪು ಎಂದು ತಿಳಿಯಲು ವಿವೇಚನೆಯ ಸೂರ್ಯ ರಶ್ಮಿ ಸಾಕು. ಅದಕ್ಕೆ ಧರ್ಮ ,ಸಂಸ್ಕೃತಿ ಇತ್ಯಾದಿ ದೀಪಗಳ ಅವಶ್ಯಕತೆ ಇರುವುದಿಲ್ಲ.

(ಮುಂದುವರಿಯುತ್ತದೆ)

Wednesday, August 19, 2009

ಅತಿಥಿ ಮತ್ತು ಅವನ ತಿಥಿ . -ಕೆಲಸ ಇದ್ದಾಗ ಮರೀಬೇಡಿ ,ಊಟಕ್ಕೆ ಮಾತ್ರ (ನನ್ನನ್ನು)ಕರಿಬೇಡಿ !



ಒಂದು ಪಂಚತಂತ್ರ ಕಥೆ ಇದೆ. ಒಂದು ನರಿ ಕೊಕ್ಕರೆಯನ್ನು ಮನೆಗೆ ಊಟಕ್ಕೆ ಆಹ್ವಾನಿಸುತ್ತದೆ. ಅದು ಕೊಕ್ಕರೆಗೆ ಇಷ್ಟವಾದ ಖಾದ್ಯವನ್ನು ಮಾಡಿಸಿರುತ್ತದೆ. ಆದರೆ ಅದನ್ನು ಒಂದು ತಟ್ಟೆಯಲ್ಲಿ ಬಡಿಸುತ್ತದೆ. ಕೊಕ್ಕರೆಯ ಕೊಕ್ಕು ಉದ್ದ. ತಟ್ಟೆಯಲ್ಲಿ ಕೊಕ್ಕರೆಗೆ ತಿನ್ನಲು ಆಗದು.ನರಿ ಹೇಳುತ್ತದೆ ,ಕೊಕ್ಕರೆಯಣ್ಣ,ಕೊಕ್ಕರೆಯಣ್ಣ ,ನಿನಗೆ ಇಷ್ಟವಾದ ತಿಂಡಿ ಮಾಡಿದ್ದೇನೆ .ಚೆನ್ನಾಗಿ ತಿನ್ನು . ಸರಿ, ಕೊಕ್ಕರೆಗೆ ತಿಂಡಿಯನ್ನು ನೋಡಿ ಬಾಯಲ್ಲಿ ನೀರು,ತಟ್ಟೆ ನೋಡಿ ಕಣ್ಣಲ್ಲಿ ನೀರು ! ಅದಕ್ಕೆ ಬೇಜಾರಾಗುತ್ತದೆ. ಸರಿ ನಿನಗೆ ಬುದ್ದಿ ಕಲಿಸುತ್ತೇನೆ ಅಂತ ಸಿಟ್ಟಿನಿಂದ ತೆರಳುವ ಅದು ನರಿಯನ್ನು ಊಟಕ್ಕೆ ಕರೆದು ತಾನು ತಿನ್ನುವಂತಹ ಅಗಲ ಕಡಿಮೆ,ಉದ್ದ ಹೆಚ್ಚಿರುವ ಪಾತ್ರೆಯಲ್ಲಿ ಪಾಯಸ ಕೊಟ್ಟು ಸೇಡು ತೀರಿಸಿಕೊಳುತ್ತೆ. ಈ ಕಥೆ ಓದಿದಾಗ ನನಗೆ ನಾನು ಆಥಿತ್ಯ ಸ್ವೀಕರಿಸಲು ಹೋಗಿ ಪಜೀತಿಗೀಡಾದ ಕೆಲವು ಪ್ರಸಂಗಗಳು ನೆನಪಿಗೆ ಬರುತ್ತಿದೆ.
ಮೇಲಿನ ಕಥೆಯನ್ತಲ್ಲದಿದ್ದರೂ ,ಆಹ್ವಾನನೀಡುವವರದ್ದು ಸದುದ್ದೇಶವೇ ಆದರೂ ನಿಮ್ಮ ಕಾಲ,ದೇಶ,ಪರಿಸ್ತಿತಿಗಳಿಂದಾಗಿ ಕೆಲವು ಸಮಸ್ಯೆ ಉದ್ಬವವಾಗುವ ಸಾಧ್ಯತೆಗಳಿರುತ್ತವೆ. "ಒಬ್ಬ ಮನುಷ್ಯನ ಆಹಾರ ಇನ್ನೊಬ್ಬನಿಗೆ ವಿಷವಾಗಬಹುದು." ಆದರೆ ಎಲ್ಲರು ಒಂದೇ ಥರ ಇರುತ್ತಾರೆ ಎನ್ನುವ ನಂಬಿಕೆಗಿಂತಾ ಎಲ್ಲರು ಒಂದೇ ತರಹ ಇರಬೇಕು ಎಂಬ ಅಸಹಿಷ್ಣು ಮನೋಭಾವದಿಂದಾಗಿ ಒಬ್ಬ ಇನ್ನೊಬ್ಬನನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗಿದೆ.
ಕೆಲವರಿಗೆ ಔತಣ ಕೊಡುವುದೆಂದರೆ ಬಹಳ ಖುಷಿ. ಅತಿಥಿದೇವೋಭವ ಎಂಬುವ ಕಡೆ ಅದು ಇರಬೇಕಾದ್ದೇ ಬಿಡಿ. ಆದರೆ ಕೆಲವರು ಇದನ್ನು ಕಾರ್ಯರೂಪಕ್ಕೆ ಇಳಿಸುವ ವೈಖರೀ ನೋಡಿದರೆ ಭಯವಾಗುತ್ತದೆ." ನಮ್ಮಲ್ಲಿ _____ ಸಮಾರಂಭ ಇದೆ. ನೀವು ಬರಲೇಬೇಕು" ಎಂದು ಹೇಳುತ್ತಾರೆ. ಸಮಾರಂಭ ನಡೆಯುವ ಸ್ಥಳ ನಿಮಗೆ ಏಷ್ಟು ದೂರ ಇದ್ದರು ಪರವಾಇಲ್ಲ .ಅಲ್ಲಿ ಹೋಗಿಬರುವ ಪ್ರಕ್ರಿಯೆಯಲ್ಲಿ ನಿಮ್ಮ ಹೆಣಬಿದ್ದರೂ (ಅವರಿಗೆ)ಚಿಂತೆ ಇಲ್ಲ.ನಿಮ್ಮ ಅನುಕೂಲ ,ಅನಾನುಕೂಲಗಳ ಬಗ್ಗೆ ಕಿಂಚಿತ್ತೂ ಆಲೋಚಿಸುದಿಲ್ಲ. ಓ ಅದಕ್ಕೇನು?, ಬಹಳ ಸುಲಭ ,ಬೇಕಾದಷ್ಟು ಬಸ್ ಇದೆ, ಎಲ್ಲ ವ್ಯವಸ್ಥೆ ಇದೆ ಇತ್ಯಾದಿ ಮಾತುಗಳು ಆಶ್ವಾಸನೆಯ ರೂಪದಲ್ಲಿ ಸಿಗುತ್ತದೆ.

ಅವರ ಆತಿಥ್ಯದ ಸಂಭ್ರಮದಲ್ಲಿ ಎಷ್ಟೋ ಸಾರಿ ನನಗೆ ಬಸ್ ಮಿಸ್ ಆಗಿದೆ. ಪಾರ್ಟಿ ಮಾಡುವ ಗಮ್ಮತ್ತಿನಲ್ಲಿ ಬೇಕಾದಷ್ಟು ಪರಿಪಾಟಲು ಪಟ್ಟಿದ್ದೇನೆ. "ಆಮೇಲೆ ಬೇಕಾದರೆ ಅವನು ಸುಡುಗಾಡಿಗಾದರೂ ಹೋಗಲಿ ,ಆದರೆ ಈಗ ನಾವು ಅವರನ್ನು ಸಿಕ್ಕಾಪಟ್ಟೆ ಸಂತೋಷ ಗೊಳಿಸೋಣ ಎಂಬುದು ಅತಿಥೇಯರ ನಿಲುವು.

ನಮಗೆ ಇಷ್ಟೆಲ್ಲಾ ಪಜೀತಿ ಆದರೆ ಅವರಿಗೆ "ಮನಸ್ಸಂತೋಷ" ವಾಗುತ್ತದಂತೆ. ಹಾಗೆಂದು ಕೆಲವರು ಪ್ರಿಂಟ್ ಹಾಕಿಸುತ್ತಾರೆ invitation ಮೇಲೆ.!.

ಆದರೆ ಕೆಲವು ಸಮಾರಂಭಗಳು ಬರಿ ಸತ್ಕಾರಕೂಟವಾಗಿರುವುದಿಲ್ಲ. ಮುಯ್ಯಿಗೆ ಮುಯ್ಯಿ ತೀರಿಸುವ ಜಿದ್ದಾಜಿದ್ದಿನ ಕ್ರೀಡೆಯಾಗಿರುತ್ತದೆ. ನಾವು ಅವರಲ್ಲಿಗೆ ಹೋದಾಗ ಅವರು ನಮ್ಮನ್ನು ಬಹಳ "ಚೆನ್ನಾಗಿ" ನೋಡಿಕೊಂಡಿದ್ದರು .ಅವರು ಇಲ್ಲಿ ಬಂದಾಗ ಹಾಗೆ ನೋಡಿಕೊಳ್ಳಬೇಕು ಎಂಬ ಕೃತಜ್ಞತೆ ಭಾವ ಸಹ ಅದರೊಂದಿಗೆ ಮಿಳಿತವಾಗಿರುತ್ತದೆ.

ಅಲ್ಲಿಗೆ ಹೋಗದಿದ್ದರೆ ಅವರು ನಿಮಗೆ ಮತ್ತೆ ಸಿಕ್ಕಾಗ ಅವರು ಆಡುವ ನಾಟಕ ನೋಡಬೇಕು!! ಅವರಾದರೂ ಓಕೆ .ಇನ್ನು ಕೆಲವರು ಅವರು ಕರೆದಿದ್ದ ಸಮಾರಂಭಕ್ಕೆ ಹೋಗದೆ ಇದ್ದಾರೆ ನಿಜವಾಗಲೂ ಸಿಟ್ಟಿಗೆದ್ದು ವಿನಾಕಾರಣ ಹಗೆ ಸಾದಿಸುತ್ತಾರೆ. ಉಡುಗೊರೆ ಇಟ್ಟಿಲ್ಲ ಎಂಬ ಸಿಟ್ಟೋ ?, ಏನು ಸುಡುಗಾಡೋ ....ಗೊತ್ತಿಲ್ಲ .ಇಲ್ಲಿ "ನಗುವಾಗ ಎಲ್ಲರೂ ನೆಂಟರು"ವಾಕ್ಯ ಅವರು ಮರೆತಿದ್ದಾರೆ ಎನಿಸುತ್ತದೆ.

ನಿರುಪದ್ರವಿಯಾಗಿ ದೂರ ಇದ್ದರೂ ಮನಸ್ಸಿಗೆ ಬೇಜಾರುಮಾಡಿಕೊಂಡು ಅವರೂ ಕೊರಗಿ ನಮ್ಮನ್ನು ಕೊರಗಿಸುತ್ತಾರೆ.
ಒಟ್ಟಾರೆ ಅತಿಥ್ಯ ಸ್ವೀಕರಿಸುವ ಸಡಗರದಲ್ಲಿ ಅವನ ತಿಥಿಯಾಗದಿದ್ದರೆ ಅದೇ ಅವನ ಬಾಗ್ಯ .