Sunday, December 26, 2010

ಈ ಅಖಂಡತೆ,ಐಕ್ಯತೆ ಇತ್ಯಾದಿಗಳ ಬಗ್ಗೆ

ಮಂಗಳೂರಿನ ಮಂಜುನಾಥ "ಶಿವ"ಅಲ್ಲವೇ ಅಲ್ಲ!
ಮೇಲ್ಕಂಡ ಮಾತನ್ನು ನಾನು ಹೇಳುತ್ತಿಲ್ಲ.ಇದನ್ನು ಪತ್ತೆ ಮಾಡಿದವರು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ.ಇದಕ್ಕೆ ಅವರು ಹಲವು ಉಲ್ಲೇಖಗಳನ್ನು ಕೊಟ್ಟಿದ್ದಾರೆ. "ಮಂಜುನಾಥ" ಎಂಬ ಹೆಸರು ಶಿವ ಸಹಸ್ರನಾಮದಲ್ಲೂ ಇಲ್ಲವಂತೆ!. ಹಾಗಾದರೆ ಈ ಮಂಜ ಮಂಗಳೂರಿನ ಕದ್ರಿಗೆ ಎಲ್ಲಿಂದ ಬಂದ?.ಇದು ಬೌದ್ಧ ದೇವತೆ ಮಂಜುಶ್ರೀ ಮತ್ತು ನಾಥಪಂಥದ ರೀಮಿಕ್ಸ್ ರೂಪ. ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೌದ್ಧಧರ್ಮದ ಪ್ರಭಾವ ವಿತ್ತೆಂದು ನಂತರ 'ಶೈವಧರ್ಮ'ಪ್ರಾಬಲ್ಯಕ್ಕೆ ಬಂತೆಂದು ಹೇಳಲಾಗಿದೆ.ಈಗಿನವರನ್ನು ಕೇಳಿದರೆ ಮಂಜುಶ್ರೀ ಕೂಡ ಹಿಂದೂ ದೇವತೆ,ಶಿವನ ಅವತಾರ ಎನ್ನಬಹುದು. ಹೀಗೆ ಎಲ್ಲಾ ಒಂದೇ.,ಎಲ್ಲಾ ಒಂದೇ ಎನ್ನುತ್ತಾ ಹಲವು ಪ್ರಾಂತೀಯ,ಚಿಕ್ಕ ಚಿಕ್ಕ ದೇವತೆಗಳನ್ನು,ಸಂಪ್ರದಾಯಗಳನ್ನು ಪ್ರಬಲ ಧರ್ಮಗಳು ಆಪೋಶನ ತೆಗೆದುಕೊಂಡಿರುವುದನ್ನು ನಾವು ನೋಡಿದ್ದೇವೆ.ನಮ್ಮ ಭಕ್ತಿ ಪಂಥದ ಸಾಧು/ಸಂತರಿಂದ ಹಿಡಿದು ನಮ್ಮ ಪುಡಾರಿಗಳವರೆಗೆ ಎಲ್ಲರೂ "ಎಲ್ಲಾ ದೇವರುಗಳು ಒಂದೇ"ಎಂಬ ದೇಶಾವಾರಿ ಘೋಷಣೆ ಮಾಡುತ್ತಲೇ ಬಂದಿದ್ದಾರೆ. ಈ ಭಕ್ತಿ ಪಂಥವು ಒಂದು ಅಧ್ಯಾತ್ಮಿಕ ಚಳವಳಿ ಎನ್ನುವುದಕ್ಕಿಂತಾ ಒಂದು ಸಾಮಾಜಿಕ ರಾಜಕೀಯ ಚಳುವಳಿ ಎಂದರೆ ತಪ್ಪಾಗಲಾರದು. ಇದು ಮುಸ್ಲಿಂ ಆಕ್ರಮಣವನ್ನು ವಿರೋಧಿಸುತ್ತಲೇ "ಇಸ್ಲಾಂ ಕೂಡ ತಮ್ಮ ಧರ್ಮದಿಂದ ಬೇರೆಯಲ್ಲ" ಎಂಬ ಸಂದೇಶವನ್ನು 'ಪ್ರಚಾರ' ಮಾಡಲೆಂದೇ ಹುಟ್ಟಿಕೊಂಡ ಚಳವಳಿ.ಆದರೆ ಇಸ್ಲಾಮನ್ನು 'Dilute' ಮಾಡಲು ಈ ಚಳುವಳಿಗೆ ಸಾಧ್ಯವಾಗಲಿಲ್ಲ.ಎಲ್ಲಾ ಧರ್ಮಗಳ ನಂಬಿಕೆಗಳು ಬೇರೆ,ಅವುಗಳ ಸ್ಥಾಪಕರ ಕಾಣ್ಕೆಗಳು ಬೇರೆ,ಎಲ್ಲರೂ ಕಂಡ ದೇವರುಗಳು,ದೇವರ ಪರಿಕಲ್ಪನೆಗಳು ಬೇರೆ ಬೇರೆ.ಅಂದಮೇಲೆ ಎಲ್ಲಾ ದೇವರು ಒಂದೇ ಹೇಗೆ ಆಗಲು ಸಾಧ್ಯ?. ಅಂದ ಮೇಲೆ "ಎಲ್ಲಾ ದೇವರು ಒಂದೇ"ಎನುವುದು ಎಲ್ಲಾ ಕೋಮಿಗೆ ಸೇರಿದ ಜನರನ್ನು ಮೆಚ್ಚಿಸಲು ರೊಪಿಸಲಾದ "ಪೊಲಿಟಿಕಲ್ ಸ್ಟೇಟ್ಮೆಂಟ್ "ಎಂದಾಯಿತಲ್ಲ.
ಎಲ್ಲರು ಒಂದೇ ಎಂಬ ಘೋಷಣೆಗಳು,ಒಂದಾಗುವ ಮಾತುಗಳು,ಏಕೀಕರಣ, ಒಗ್ಗಟ್ಟಿನ ಪರಿಕಲ್ಪನೆ ಇತ್ಯಾದಿಗಳು ಮಾನಸಿಕ ವಸಾಹತುಶಾಹಿತ್ವದ ಮುಖ್ಯ ಅಸ್ತ್ರಗಳು. ಯುರೋಪಿಯನ್ನರು ಬೌತಿಕ ವಸಹಾತುಗಳನ್ನು ಸೃಷ್ಟಿ ಮಾಡಿದವರಲ್ಲಿ ಮೊದಲಿಗರೆಂದು ಹೆಸರು ಗಳಿಸಿದರೂ,ಮಾನಸಿಕ ವಸಾಹತುಶಾಹಿಯ "ಟೆಕ್ನಿಕ್"ಗಳನ್ನು ಅಭಿವೃದ್ದಿಪಡಿಸಿದವರು ಬಾರತಿಯರೇ. ಬೌದ್ಧ,ಜೈನ,ಪಾರ್ಸಿ ಧರ್ಮಗಳ ಮೇಲೆಲ್ಲಾ ಆಕ್ರಮಣ ಮಾಡಿ ಎಲ್ಲಾ ಒಂದೇ ಎಂದು ಅವುಗಳನ್ನು ನಾಶಮಾಡುವ ಒಂದು ಸಂಚು ಗುಪ್ತರ ಯುಗದಲ್ಲಿ ನಡೆದಿತ್ತು. ಬಹುಷಃ ಇಸ್ಲಾಂ ಇಂತಹ ಪ್ರಯತ್ನ ವಿರೋಧಿಸಲು ಹುಟ್ಟಿದ ಪಂಥ ವೆಂದು ಕಾಣುತ್ತದೆ.ಅದುದರಿಂದ ಅದು ತನಗೂ ಇತರರಿಗೂ ಮಧ್ಯ ಎಂದೂ ಅಳಿಸಲಾರದ ರೇಖೆಯನ್ನುಹಾಕಿಕೊಂಡಿದೆ. ಒಬ್ಬ ವರ್ತಕ ನಾಗಿದ್ದಾಗ ಪೈಗಂಬರ್ ಬೌದ್ಧಧರ್ಮದ ವಿನಾಶವನ್ನು ಬೇರೆ ಬೇರೆ ಕಡೆ ಕಣ್ಣಾರೆ ನೋಡಿದ್ದಿರಬಹುದು.

ಸ್ವಾತಂತ್ರ ಕೊಡುವ ಮುಂಚೆ "ಬಾರತಿಯರು ತಮ್ಮನ್ನು ತಾವು ಆಳಿಕೊಳ್ಳಲಾರರು.ಅದಕ್ಕೆ ನಾವು ಆಳುತಿದ್ದೇವೆ"ಎಂಬ ಬೂಟಾಟಿಕೆ ಮಾತನ್ನು ಚರ್ಚಿಲ್ ಆಡುತಿದ್ದ.ನೀವು ಬಾರತವನ್ನು ಅದರ ಪಾಡಿಗೆ ಬಿಡಿ ಎಂಬ ಮಾತು ಅವರಿಗೆ ಕೇಳುತ್ತಿರಲಿಲ್ಲ.ಏಕೆಂದರೆ ಅವರು ಅಖಂಡ ಬ್ರಿಟಿಶ್ ಸಾಮ್ರಾಜ್ಯದ ಪರಿಕಲ್ಪನೆಯಲ್ಲಿ ಮುಳುಗಿದ್ದರು. ನಾನು ಮೇಲೆ ಹೇಳಿದ್ದು ಅದನ್ನೇ. ಈ ಅಖಂಡತೆ,ಐಕ್ಯತೆ, ಇವು ಕೇಳಲು/ಓದಲು ಬಹಳ ಧೀಮಂತ ದ್ಯೇಯಗಳಂತೆ ಕಂಡರೂ ಹೊಟ್ಟೆಯಲ್ಲಿ ವಸಾಹತು ಶಾಹಿಯ ಬೂತವನ್ನು ಬಚ್ಚಿಟ್ಟುಕೊಂಡಿರುತ್ತದೆ. "ನಾವೆಲ್ಲರೂ ಒಂದು" ಎಂದರೆ "ನೀವು ಬೇರೆಯಲ್ಲ"ಎಂದು!. ಈ ಒಂದಾಗುವ ಗೌಜಿನಲ್ಲಿ ನಾವು ನಮ್ಮ ಹಲವು ವಿಶೇಷತೆಗಳನ್ನು ಕಳೆದುಕೊಂಡು ಬಿಡುತ್ತೇವೆ.ಉದಾಹರಣೆಗೆ ಬಾಷಾವಾರು ಪ್ರಾಂತ್ಯ ಎಂಬ ಪುನರ್ವಿಂಗಡನೆಯ ಸಂಧರ್ಭದಲ್ಲಿ ಆದ ಕೆಲವು ತಪ್ಪು ವಿಂಗಡನೆಗಳಿಂದ ತುಳು,ಕೊಡವ ಮುಂತಾದ ಬಾಷೆಗಳು ಗೋರಿ ಸೇರುವ ಹಂತದಲ್ಲಿದೆ!.  ಹಿಂದೆ ಭಾರತ ಸರ್ಕಾರವು ಭಾಷಾವಾರು ಪ್ರಾಂತ್ಯಗಳನ್ನು ರೂಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಅದು ಈ ಬಗ್ಗೆ ಅಧ್ಯಾಯನ ನಡೆಸಲು ಕೆಲವು ಸಮಿತಿಗಳನ್ನು ರಚಿಸಿತು. ಅದರಲ್ಲಿ ಪ್ರಮುಖವಾದದ್ದು State Reorganisation commission. ಫಜಲ್ ಆಲಿ ಆಯೋಗ ಎಂದು ಸಹಾ ಇದನ್ನು ಕರೆಯುತ್ತಾರೆ. ಇದು 8-6-1954ರಂದು ಮಂಗಳೂರಿಗೆ ಬೇಟಿ ನೀಡಿತು. ತುಳುಭಾಷೆ ದಕ್ಷಿಣ ಭಾರತದ ಪ್ರಮುಖ ಭಾಷೆಯಾದುದರಿಂದ ಈ ಭಾಷೆಯನ್ನು ಆಡುವವರು ಇರುವ ಪ್ರದೇಶಕ್ಕೆ ಬೇಟಿನೀಡಿ ಅಲ್ಲಿನ ಎಲ್ಲೆಗಳನ್ನು ತೀರ್ಮಾನಿಸುವುದು ಆ ಅಯೋಗದ ಉದ್ದೇಶವಾಗಿತ್ತು.ತುಳುನಾಡು ಒಂದು ಸಣ್ಣ ಪ್ರದೇಶವೆಂದಾಗಲಿ ಅಲ್ಲಿನ ಜನರಿಗೆ ದೊಂಬಿಎಬ್ಬಿಸುವ  ಶಕ್ತಿ ಇದೆಯೋ ಇಲ್ಲವೋ ಎಂಬ ಅಂಶವನ್ನ ಆಯೋಗ ಗಮನಕ್ಕೆ ತೆಗೆದುಕೊಳ್ಳಲಿಲ್ಲ. ಏಕೆಂದರೆ ಒಂದು ಆಯೋಗಕ್ಕೆ ಕುತ್ಸಿತ ರಾಜಕೀಯ ಉದ್ದೇಶಗಳು ಮುಖ್ಯವಾಗಿರುವುದಿಲ್ಲ.ಅವು ತಮ್ಮದೇ ಆದ ವೈಜ್ಞಾನಿಕ ಮಾನದಂಡಗಳನ್ನು ಹೊಂದಿರುತ್ತವೆ. ಆದರೆ ರಾಜಕಾರಣಿಗಳು ತಮ್ಮವೇ ಆದ ಪಟ್ಟಭದ್ರ ಹಿತಾಸಕ್ತಿಗಳನ್ನು ಹೊಂದಿರುತ್ತಾರೆ. ಇಂತಹ ಕೆಲವು ಮೂರ್ಖರು ತುಳು ಮಹಾಸಭೆ, ಕಾಂಗ್ರೆಸ್ ಪಕ್ಷ,ಲೋಕಲ್ ಪ್ರಜಾ ಸಮಾಜವಾದಿ ಪಕ್ಷದ ಬ್ಯಾನರ್ ಅಡಿ ಆಯೋಗವನ್ನು ಬೇಟಿಯಾಗಿ "ಕನ್ನಡಿಗರೊಂದಿಗೆ ಸೇರಲು ತುಳುವರು 1928 ರಿಂದಲೇ ಪ್ರಯತ್ನ ನಡೆಸಿರುವ ಪುರಾವೆ ಒದಗಿಸಿದರಂತೆ. ಈ ಮೂರ್ಖರು ಒದಗಿಸಿದ ಪುರಾವೆ ಗಳೇನು ಗೊತ್ತೆ? ಈ ಭಾಗದ ಖ್ಯಾತನಾಮರು (ವರ್ತಕರು, ಉದ್ಯಮಿಗಳು, ಕನ್ನಡ ಕವಿಗಳು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ನಡೆದ ಏಕೀಕರಣ ಸಭೆಗಲ್ಲಿ ಭಾಗವಹಿಸಿ ಭಾಷಣಗಳನ್ನು ಮಾಡಿದ್ದು. ಜೊತೆಗೆ ಕೆಲವರು ತುಳು ಬಾಷೆಯನ್ನು ಆಡುವ ಪ್ರಾಂತ್ಯಗಳನ್ನು ಕೇರಳಕ್ಕೆ ಸೇರಿಸಲಾಗುವುದು ಎಂದು ಗುಲ್ಲೆಬ್ಬಿಸಿದ್ದರಿಂದ  ಹೆದರಿದ ತುಳು ಜನತೆ ಕನ್ನಡಿಗರಾದರೂ ಪರವಾಗಿಲ್ಲ,ಮಲಿಯಾಳಿಗಳ ಸಹಾವಾಸ ಬೇಡವೇ ಬೇಡ ಎಂದು ತೀರ್ಮಾನಿಸಿದರಂತೆ. ಈ ದೀಮಂತ(?) ನಾಯಕರ ಮು೦ಚೂಣಿಯಲ್ಲಿದ್ದ ಕೆಲವು ಹೆಸರುಗಳೆಂದರೆ ಕೇ.ಬೀ. ಜಿನರಾಜ ಹೆಗಡೆ,ಕೆ.ವಾಸುದೇವಾಚಾರ್ಯ,ಪಿಂಟೋ, ಅಮ್ಮೆಂಬಳ ಬಾಳಪ್ಪ ,ಸದಾನಂದ ಹೆಗ್ಡೆ, ಕೆ.ಆರ್.ಕಾರಂತ್....
 ಕೊಡಗು ರಾಜ್ಯ ಸಹಾ ಸ್ವಾತಂತ್ರ ಪೂರ್ವದಲ್ಲಿ ಒಂದು ರಾಜ್ಯವಾಗಿದ್ದದ್ದು ಇಂದು ಕರ್ನಾಟಕದ ಒಂದು ಸಾಮಾನ್ಯ ಜಿಲ್ಲೆ ಯಾಗಿರುವುದು ಇನ್ನೊಂದು ದುರಂತ. 

ಇದು ಮೊದಲಿನಿಂದಲೂ "ಬೇರೆ ಇದ್ದವರಿಗೆ,ಬೇರೆಯೇ ಇರಬಯಸುವವರಿಗೆ,ಬೇರೆಯಾಗಬಯಸುವವರಿಗೆ ಇರುವ ಹಕ್ಕನ್ನು ಕಸಿದುಕೊಂಡು,ಅವರ "ಬೇರೆತನ"ವನ್ನು ಅವರ ವೈಶಿಷ್ಟ್ಯವನ್ನು ನಾಶಮಾಡುವ ಒಂದು ಆಯುಧ".ಬಾರತದ ಮಸ್ಲಿನ್ ಬಟ್ಟೆಯ ನಾಶಕ್ಕೆ ಕಾರಣವಾದುದು ಇಂತಹದೇ ತರ್ಕ. ಇಂಗ್ಲಂಡ್ ಒಂದು ಚಿಕ್ಕ ದೇಶ. ಆದರೆ ಅದು ಒಂದು ಚಿಕ್ಕ ದೇಶವಾಗಿರದೆ ಅಖಂಡ ಯೂರೋಪಿನ ಒಂದು ಬಾಗವಾಗಿದ್ದರೆ ಅದು ಬಾರತದಂತಾ ದೇಶವನ್ನು ತಮ್ಮ ವಸಾಹತನ್ನಾಗಿ ಮಾಡಿಕೊಳ್ಳಲು ಖಂಡಿತ ಸಾಧ್ಯವಾಗುತ್ತಿರಲಿಲ್ಲ.
 Divided we stand,United we Fall! ಎನ್ನಬಹುದು ಯುರೋಪಿಯನ್ನರು.ಏಕೆಂದರೆ ಯೂರೋಪಿನ ಚಿಕ್ಕ ಚಿಕ್ಕ ದೇಶಗಳು ಭೂಖಂಡದ ಮೂಲೆಮೂಲೆ ಗಲ್ಲಿಗೆ ನುಗ್ಗಿ ಅಲ್ಲಿ ರಾಜ್ಯಆಳಲು ಸಾಧ್ಯವಾದದ್ದೇ ಅವರ ಸಣ್ಣತನದಿಂದ !(ಅಕ್ಷರಶಃ). ಸುಮ್ಮನಿರಲಾರದೆ ಹುಳಬಿಟ್ಟುಕೊಂಡರು ಎಂಬಂತೆ ಇವತ್ತು ಕೆಲವು ತಾತ್ವಿಕ ಕಾರಣಗಳಿಂದ ಪ್ರೇರೇಪಿತರಾಗಿ ಯುರೋಪನ್ನು ಒಂದು ಮಾಡಲು ಹೋಗಿ ಪಡಬಾರದ ಕಷ್ಟ ಪಡುತಿದ್ದಾರೆ!.ಇವತ್ತು ಯುರೋಪಿಯನ್ ಯುನಿಯನ್ ಎಂಬ ಸಂಸ್ಥೆಯಿಂದ ಇಂದು ಆ ದೇಶದ ಸ್ತಿತಿವಂತ ರಾಷ್ಟ್ರಗಳಿಗೆ ಅನುಕೂಲಕ್ಕಿ೦ತಾ ಅನಾನುಕೂಲವೇ ಹೆಚ್ಚಾಗಿದೆ. ಯುರೋಪಿಯನ್ ಯುನಿಯನ್ ಪ್ರವರ್ತಕರಿಗೆ ಇದು ನುಂಗಲಾರದ ತುತ್ತಾಗಿದೆ. ಇಂದು ಇದ್ದಂತೆ ೧೪ನೆಯ ಶತಮಾನದಲ್ಲಿಯೂ ಯುರೋಪಿಯನ್ ಯುನಿಯನ್ ಇದ್ದಿದ್ದರೆ ಇಂದು ಅವರು ಬಾರತವನ್ನು ವಸಾಹತಾಗಿ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ.! 

(ಅಪೂರ್ಣ ಲೇಖನ,ಪೂರ್ಣಗೊಳಿಸುವ ಉದ್ದೇಶ  ಸದ್ಯಕ್ಕೆ ಇಲ್ಲ! ) 

No comments: