ಯಾರು ಈ ಕುಂಬಾರ ?,
ಮಡಕೆ ಮಾಡುವವನೇ?
ಮಡಕೆ ಮಾಡುವುದನ್ನು ಬಿಟ್ಟು ಬೇರೇನನ್ನೂ ಮಾಡಲು ಬರದವನೇ?
ಮಡಕೆ ಮಾಡಲು ಬರದೆ ಬರಿದೇ ಕುಂಬಾರ ಎಂದು ಕರೆದುಕೊಳ್ಳುವವನೆ?
ಅಥವಾ ಮಣ್ಣಿನ ಕೆಲಸವನ್ನು ಬಿಟ್ಟು ಬೇರೇನನ್ನು ಮಾಡಬೇಡ ಎಂದು ನಿರ್ಭಂದಿಸಲ್ಪಟ್ಟವನೇ?
ಯಾರು ಈ ಕುಂಬಾರ?
ರೈತನಿಗಿಂತ ಹೆಚ್ಚಾಗಿ ಮಣ್ಣಲ್ಲಿ ಮಣ್ಣಾಗಿ ಬೆರೆವಾತ ಕುಂಬಾರ.ಇಂದಿನ ಪರಿಸ್ತಿತಿ ಆತನನ್ನು ಮಣ್ಣಿಂದ ದೂರ ಮಾಡಿದೆ.ರೈತನಿಗೆ ಮಣ್ಣೊಂದಿಗೆ ಬೆರೆತಷ್ಟೂ ಹೊನ್ನು. ಬೆಳೆದರೂ ಹೊನ್ನು.ಜಮೀನು ಮಾರಿದರೂ ಹೊನ್ನು.
ಕುಂಬಾರನಿಗೆ? ಮಣ್ಣನ್ನು ಮುಟ್ಟಿದಷ್ಟೂ ಮಣ್ಣು....ಬಾಯಿಗೆ!
ಕುಂಬಾರ ಮಣ್ಣಿನ ಮಗ ಎಂದು ಯಾವ ರಾಜಕಾರಣಿಯೂ ಹೇಳುವುದಿಲ್ಲ. ಏಕೆಂದರೆ ಕುಂಬಾರ ಮಣ್ಣಿನ ಮಲಮಗ. ಇಂದಿವನು ಭೂಮಿಗೂ ಬೇಡವಾದವನು,ಭೂಪಾಲನಿಗೂ ಬೇಡವಾದವನು.
ಹಿಂದೆ ಮಡಕೆಗೆ ಬೇಡಿಕೆ ಇತ್ತು.ಪೂರೈಸಿ ಪೂರೈಸಿ ಕುಂಬಾರನ ಕೈ ದಣಿಯಿತು.ಧನ ಸೇರಿತು. ಕುಂಭಾರರ ಮಧ್ಯ ಶೆಟ್ಟಿಗಳು ಉದ್ಹ್ಬವಿಸಿದರು. ಶೂದ್ರ ವೈಶ್ಯನಾದ. ಕಾಲಚಕ್ರ ತಿರುಗುತಿತ್ತು. ನಾನಿಲ್ಲದಿದ್ದರೆ ಇವರ್ಯಾರಿಗೋ ಶಿಸ್ತಾಗಿ ಉಣಲು ಸಾಧ್ಯವಿಲ್ಲ ,ನಾನೇ ಜಗದೊಡೆಯ ಎಂದು ತನ್ನ ಬೆನ್ನು ತಾನೇ ತಟ್ಟಿಕೊಂಡ. ನಾನೇ ಎಲ್ಲದರ ಸೃಷ್ಟಿಕರ್ತ ಎಂದು ಬೀಗಿದ.ಜಗದೊಡೆಯ ಎಂದರೆ ಆ ಜಗದ ರಾಜ. ಪುರಾತನ ದೊರೆ ಶಾಲಿವಾಹನ!.
ಕಾಲಚಕ್ರ ತಿರುಗುತಿತ್ತು. ಚಕ್ರದ ಗಾಲಿಗಳು ಬೇರೆಬೇರೆ ರೀತಿಯಲ್ಲಿ ಉಪಯೋಗಕ್ಕೆ ಬಂತು. ಭಂಡಿಗಳು ಬಂದವು. ಆ ಭಂಡಿಗಳಲ್ಲಿ ಪಿಂಗಾಣಿ ಪಾತ್ರೆಗಳು ಬಂದವು. ಅಂದುಸಹ ಅವು ಬಂದದ್ದು ಚೀನಾದಿಂದ. ಇಂದಿನಂತೆಯೇ!.
ಚಕ್ರ ತಿರುಗುತಿತ್ತು. ಜೊತೆಗೆ ತಲೆ ಕೂಡ.....
ಶಾಲಿವಾಹನರ ಕಾಲ ಮುಗಿದೇ ಹೋಯಿತು. ಕದಂಬರು...ಚಾಲುಕ್ಯರು,ರಾಷ್ಟ್ರಕೂಟ ಹೊಯ್ಸಳರು.....,
ಸರ್ವಜ್ಞ ಒಂದಿಷ್ಟು ಸದ್ದು ಮಾಡಿದ್ದು ಬಿಟ್ಟರೆ ಕುಂಬಾರರ ಹಟ್ಟಿಯಲ್ಲಿ ಕರಾಳ ಮೌನ.
ಕಮಕ್,ಕಿಮಕ್ ಎನ್ನಲಿಲ್ಲ ಕುಂಬಾರ ಶೆಟ್ಟಿ!
ಪಿಂಗಾಣಿ ಆಯಿತು,ಕಂಚಿನ,ಹಿತ್ತಾಳೆಯ...ತಾಮ್ರದ....ಸ್ಟೀಲಿನ ಪಾತ್ರೆಗಳು ಓಡಾಡತೊಡಗಿದವು .ಶೆಟ್ಟಿಯ ಮನೆಗೆ ಧನದ ಹರಿವು ಕಮ್ಮಿಯಾಯಿತು.
ಕಾಲನ ಈನಿರಂತರ ಪ್ರವಾಹದಲ್ಲಿ ತನ್ನ ಚಕ್ರದೊಡನೆ ಯಾಂತ್ರಿಕವಾಗಿ ಸುತ್ತುತಿದ್ದ ಕುಂಬಾರನಿಗೆ ಹಣ ಬಂದದ್ದು ಗೊತ್ತಾಗಲಿಲ್ಲ. ಹೋದದ್ದೂ ಗೊತ್ತಾಗಲಿಲ್ಲ.ನಿಂತದ್ದೂ ಗೊತ್ತಾಗಲಿಲ್ಲ.
ಶೂದ್ರ ವೈಶ್ಯನಾದ. ಮತ್ತೆ ಶೂದ್ರನಾದ. ಬ್ರಿಟಿಷರು ಬರದಿದ್ದರೆ ಅಸ್ಪ್ರಶ್ಯನೇ ಆಗಿಬಿಡುತಿದ್ದನೇನೋ!
ಆತನ ಚಕ್ರ ತಿರುಗುತ್ತಲೇ ಇತ್ತು. ನಿಧಾನವಾಗಿ. .ಈಗ ಅದರ ಮೇಲೆ ಮಡಕೆ ಇಲ್ಲ. ಬರೀ ಮಣ್ಣು. ಚಕ್ರದಿಂದ ಆತ ವಿದ್ಯುತ್ ತಯಾರಿಸಬಹುದಿತ್ತೇನೋ,ಆದರೆ ಅಲ್ಲಿ ಈಗ ಏಳುತ್ತಿರುವುದು ಮಡಿಕೆಯೂ ಅಲ್ಲ.ವಿದ್ಯತ್ ಸಹಾ ಅಲ್ಲ. ಗುಡಿ ಗೋಪುರಗಳು. ತಿರುಗುತ್ತಿರುವ ನೀರು ಸುಳಿಯನ್ನು ಸೃಷ್ಟಿಸುತ್ತದೆ. ಕುಂಬಾರನ ಮುಂದೆ ತಿರುಗುತಿರುವ ಚಕ್ರ ಕೂಡ ಸುಳಿಯನ್ನು ಸೃಷ್ಟಿಸುತ್ತಿರುವಂತೆ ಬಾಸವಾಗುತ್ತಿದೆ. ಈ ಸುಳಿ...ಮೌಡ್ಯದ ಸುಳಿ!.
ಕುಂಬಾರರನ್ನುಉದ್ದರಿಸಲು ,ಸಮುದಾಯದ ನಾಯಕತ್ವ ವಹಿಸಲು ಇತ್ತೀಚೆಗೆ ಕೆಲವರು ಧರೆಗಿಳಿದಿದ್ದಾರೆ.
ಸಮೂದಾಯವನ್ನು ಕಾಡುತ್ತಿರುವ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಸಮುದಾಯವನ್ನು ಮುನ್ನಡೆಸುವುದೇ ಇವರ ಗುರಿಯಂತೆ!. ಕುಂಬಾರರನ್ನು ಸಾಲಾಗಿ ಕೂಡಿಸಿ ಮೌಡ್ಯದ ಮಣ್ಣು ಮೆತ್ತುವ ಪ್ರಾಕೃತಿಕ ಚಿಕಿತ್ಸಾ ಸಮಾವೇಶಗಳು ಜನಾಂಗವನ್ನು ಆರೋಗ್ಯವಂತವನ್ನಾಗಿಸುತ್ತದೆಯೋ? ಅಥವಾ ಪ್ರಗತಿಯತ್ತ ಕೊಂಡೊಯ್ಯುತ್ತದೆಯೂ?
ಕುಂಬಾರನ ಹಸಿಮಣ್ಣಿನ ಮಡಕೆ ಮುಂದೆಂದೂ ಮುರಿಯದಷ್ಟು ಗಟ್ಟಿಗೊಳಿಸುತ್ತದೆಯೋ ಈ ಕಾವಿಯ ಕಾರ್ಮೋಡ?,ಕಾದು ನೋಡೋಣವೇ ಅಥವಾ ನಾವೂ ಈ ಮಣ್ಣಿನ ಉತ್ಸವಕ್ಕೆ ಜಿಗಿಯೋಣವೇ?.
No comments:
Post a Comment