Friday, January 28, 2011

ವಿವಾಹ ವಿಚ್ಛೇಧನಗಳು

ಇತ್ತೀಚೆಗೆ ಸುಧಾ ಮ್ಯಾಗ್ಸೀನ್ ನಲ್ಲಿ ಒಂದು ಲೇಖನ ಓದಿದೆ. ಇಂದಿನ ದಿನಗಳಲ್ಲಿ ಹೆಚ್ಚೆಚ್ಚು ವಿವಾಹ ವಿಚ್ಛೇಧನಗಳಾಗುತ್ತಿರುವ ಬಗ್ಗೆ ಲೇಖಕರು ಅದರಲ್ಲಿ ಗೋಳಾಡಿದ್ದಾರೆ. ಹೌದಲ್ಲಾ, ಓದುವಾಗ ಅನ್ನಿಸಿತು ನನಗೆ. ಆದರೆ ಹೌದು ಅಥವಾ ಇಲ್ಲಾ ಅನ್ನಲು ನಾನು ಯಾರು? ಇಬ್ಬರು ಪ್ರಾಪ್ತ ವಯಸ್ಕರು ಅವರ ವೈಯುಕ್ತಿಕ ಸಮಸ್ಯೆಯನ್ನು ಅವರಿಗೆ ಸರಿಕಂಡ ರೀತಿಯಲ್ಲಿ ಬಗೆಹರಿಸಿಕೊಳ್ಳುವ ಪ್ರಕ್ರಿಯೆಯ ಮಧ್ಯೆ ಮೂಗುತೂರಿಸುವುದು ಅತ್ಯಂತ ಹೇಯ ಮತ್ತು ಅನೈತಿಕ ಕೆಲಸ ಎಂದು ನನಗನಿಸುತ್ತಿದೆ.ಆದುದರಿಂದ ಡೈವೋರ್ಸ್ ನ ಸಾಧಕ ಬಾಧಕಗಳನ್ನು ನಾನಿಲ್ಲಿ ಚರ್ಚಿಸುವ ಪ್ರಯತ್ನ ಮಾಡಿಲ್ಲ. ಹಾಗೆ ಮಾಡಿದರೆ ಕುರುಡರು ಆನೆಯನ್ನು ಮುಟ್ಟಿದ ಕತೆಯನ್ತಾಗುತ್ತದೆ. ಯಾಕೆಂದರೆ ಇಲ್ಲಿ ಪ್ರತಿಯೊಂದು ಪ್ರಕರಣವು ವಿಬಿನ್ನವಾಗಿರುತ್ತದೆ. ಜೊತೆಗೆ ಆ ಜನರ ಮನಸ್ಥಿತಿಯ ಸೂಕ್ಷ್ಮತೆಯ ಅರಿವು ನಮಗಿರಬೇಕಾಗುತ್ತದೆ.


ಈಗಿನ ಜನರಿಗೆ ತಾಳ್ಮೆಯಿಲ್ಲ, ಬದುಕಲು ಗೊತ್ತಿಲ್ಲಾ ,ಅತಿಯಾದ ದುರಾಸೆ,ಮೌಲ್ಯಗಳಿಲ್ಲ ಇತ್ಯಾದಿ ಬಡಬಡಿಸಬಹುದು. ಆದರೆ ಅದರಿಂದ ಪ್ರಕರಣಗಳ ವಸ್ತುನಿಷ್ಠ ಮೌಲ್ಯಮಾಪನ ಆದಂತಾಗುವುದಿಲ್ಲ.

ಸ್ವಲ್ಪ ದಿನದ ಹಿಂದೆ ಬೆಂಗಳೂರಿನ ಪೋಲಿಸ್ ಕಮಿಷನರ್ ಒಬ್ಬರು ಒಂದು ಕಿವಿಮಾತು ಹೇಳಿದ್ದರು. “ಸಂಬಂಧಗಳು ಇಷ್ಟ ಇಲ್ಲಾ ಅಂದ್ರೆ ಕಾನೂನುಬದ್ಧವಾಗಿ ಬಿಟ್ಟುಬಿಡಿ. ಆದರೆ ಹೊಡೆದಾಟ /ಕೊಲೆ ಇತ್ಯಾದಿ ಮಾಡಬೇಡಿ” ಎಂದು ಹೇಳಿದ್ದರು. ಅವರು ಯಾಕೆ ಹಾಗೆ ಹೇಳಿದರು? ,ಪೊಲೀಸರಿಗೆ ಕೆಲಸ ಜಾಸ್ತಿಯಾಗುತ್ತೆ ಅನ್ನೋ ಕಾರಣಕ್ಕಂತೂ ಖಂಡಿತಾ ಅಲ್ಲ.

ಇಂದು ವರದಿಯಾಗುತ್ತಿರುವ ಕೌಟುಂಬಿಕ ಹಿಂಸೆಯ ಸಂಖ್ಯೆ ವಿಚ್ಛೇಧನಗಳ ಸಂಖ್ಯೆಗಿಂತ ಹೆಚ್ಚು.ಇನ್ನು ವರದಿಯಾಗದ ಪ್ರಕರಣಗಳ ಸಂಖ್ಯೆ ಎಷ್ಟಿದೆಯೋ ದೇವರೇ ಬಲ್ಲ. ಕಾರಣಾಂತರಗಳಿಂದ ಇಂಥಾ ವಿಷಯಗಳನ್ನ(ಬಿನ್ನಮತವನ್ನು) ಬಹಿರಂಗಗೊಳಿಸದೆ ತಾವೇ ಒಳಗೊಳಗೇ ಕೊರಗುವ ಗಂಡ/ಹೆಂಡತಿಯರು ಹಲವರಿದ್ದಾರೆ. ಇವರ ಸಮಸ್ಯೆಗಳಿಗೆ ಪರಿಹಾರ ಆಗುತ್ತೋ ಬಿಡುತ್ತೋ ಇದು ನಮ್ಮ ಸಮಾಜಕ್ಕೆ ಬೇಕಾಗಿಲ್ಲ. ಸಮಾಜ ದಂಪತಿಗಳಿಗೆ ನೀಡುತ್ತಿರುವ ಮೆಸೇಜ್ ಇಷ್ಟೇ “ಏನಾದರೂ ಮಾಡಿಕೊಂಡು ಹಾಳಾಗಿ. ಆದರೆ ನಾವು ಹಲವಾರು ವರ್ಷಗಳಿಂದ, ತಲೆತಲಾಂತರಗಳಿಂದ ಮಾಡಿಕೊಂಡು ಬಂದ ಸಂಪ್ರದಾಯ ಬಿಡಬಾರದು”ಅಂತ . ನಮ್ಮ ಗಾದೆಗಳು ಅದಕ್ಕೆ ತಕ್ಕುದಾಗೆ ಇದೆ. ಉದಾ: ಗಂಡಾ ಹೆಂಡತಿಯರ ಜಗಳ ಉಂಡು ಮಲಗುವ ತನಕ, ಎಲ್ಲರ ಮನೆಯ ದೋಸೆಯೂ ತೂತೇ, (ಎಲ್ಲರ ಮನೆಯ ತೂತುಗಳ ಬಗ್ಗೆ ಯಾಕಿಷ್ಟು ಆಸಕ್ತಿ?) , ಏಳೇಳು ಜನುಮದ ಬಂಧ, .....ಋಣಾನುಬಂಧ ರೂಪೇನ ...ಇತ್ಯಾದಿ.ಇಂತಹಾ ತಲೆಹಿಡುಕ ಸ್ಲೋಗನ್ ಗಳನ್ನೇ ಹಿಡಕೊಂಡು ಸಾವಿರಾರು ವರುಷ ಸವೆದಿದ್ದೇವೆ . ಇವತ್ತು ತಾಳಿ ಅನ್ನೋದು ಎಷ್ಟೋ ಜನರ ಕುತ್ತಿಗೆಗೆ ನೇಣಿನ ಹಗ್ಗಕ್ಕಿಂತಾ ಕಷ್ಟದಾಯಕವಾಗಿದೆ.

ನೇಣಾದರೂ ಹಾಕೋ,ಕೊಲೆಯಾದರೂ ಮಾಡು ಏಳೇಳು ಜನ್ಮಕ್ಕೋ ಒಬ್ಬನ್ನೇ ಕಟ್ಕೊಂಡು ಸಾಯಿ ಎಂಬರ್ಥ ಬರೋ ಘೋಷಣೆಯನ್ನು ಒಂದು ಸುಬಾಷಿತ,ಹಾರೈಕೆ ಅಂತಾ ಕರೆಯೋದು ಎಷ್ಟರ ಮಟ್ಟಿಗೆ ಸರಿ.?

ಬಸ್ನಲ್ಲಿ,ಹರಟೆಕಟ್ಟೆಯಲ್ಲಿ,ಆಫಿಸ್ನಲ್ಲಿ ಮಾತ್ಮತ್ನಲ್ಲಿ ವಿಚ್ಛೇಧನವನ್ನು ಕಂಡಿಸುವ ಹಲವರನ್ನು ನೋಡಿದ್ದೇನೆ. ಇವರೆಲ್ಲಾ ಒಂದೇ ವಿಷಯವನ್ನು ಇಷ್ಟು ರೋಷಾವೇಶದಿಂದ ಖಂಡಿಸುತ್ತಾರಲ್ಲಪ್ಪಾ. ಇವರನ್ನು ಒಗ್ಗೂಡಿಸಿರುವ ಅಂಶ ಏನು? ಎಂದು ತುಂಬಾ ತಲೆ ಕೆಡಿಸಿಕೊಂಡೆ. ಇವರೆಲ್ಲಾ ಬೇರೆ ಬೇರೆ ಜಾತಿಗೆ ,ಧರ್ಮಕ್ಕೆ,ವಯೋಮಾನಕ್ಕೆ ಸೇರಿದವರು!.ಸಮಸ್ಯೆ ಇನ್ನಷ್ಟು ಜಟಿಲ ಆಯಿತು. ಆಮೇಲೆ ಒಂದು ಸಮಾನ ಅಂಶ ಗೊತ್ತಾಯಿತು. ಅದೇನು ಗೊತ್ತೇ?

“ಇವರೆಲ್ಲಾ ಬ್ರಷ್ಟರು!”

ಲಂಚದ ಬಗ್ಗೆ, ಕೆಲಸ ಕದಿಯುವ ಬಗ್ಗೆ ಬಹಳ ಪಾಸಿಟಿವ್ ಆಟಿಟ್ಯೂಡ್(?) ಇಟ್ಟುಕೊಂಡಿರುವ ಇವರು ಈ ಬಗ್ಗೆ ಮಾತ್ರ ಯಾಕೆ ಸೆನ್ಸಿಟಿವಿಟಿ ತೋರಿಸುತಿದ್ದಾರೆ ಎಂಬ ಬಗ್ಗೆ ಇನ್ನಷ್ಟು ಕುತೂಹಲ ಸುರುವಾಗಿದ್ದೇ ಈ ಲೇಖನಕ್ಕೆ ನಾಂದಿಯಾಯಿತು.
otherwise ಡಿವೋರ್ಸ್ ಬಗ್ಗೆ ನನ್ನದೇ ಆದ ಯಾವುದೇ ಅಭಿಪ್ರಾಯ ಇಲ್ಲ.

ಸಮಾಜ ಅನ್ನೋದು ಒಂದು ಸಂಕೀರ್ಣ ವ್ಯವಸ್ಥೆ .ಇಲ್ಲಿ ಒಳ್ಳೆಯ ಸ್ಥಿತಿಯಲ್ಲಿ ಇದ್ದೀವಿ ಅನ್ನೋ ಜನ ಯಾವೂದೋ ಒಂದು ಬ್ಯಾಲನ್ಸ್ ನಲ್ಲಿ ನಿಂತಿರುತ್ತಾರೆ. ಸಮಾಜ ಎಂಬುದು ಮನುಷ್ಯನ ಅಸಾಹಾಯಕತೆಯನ್ನು,ದೌರ್ಬಲ್ಯಗಳನ್ನು ಬಂಡವಾಳಮಾಡಿಕೊಂಡು ಕಟ್ಟಲಾದ ಸಂಸ್ಥೆ.

ಅದರಲ್ಲೂ ಬ್ರಷ್ಟರಾದವರು ಈ ಸಾಮಾಜಿಕ ವ್ಯವಸ್ಥೆಯ ಅತಿ ದೊಡ್ಡ ಫಲಾನುಭವಿಗಳು. ಸಮಾಜದ ಪ್ರತಿಯೊಂದು ಘಟಕಗಳಲ್ಲೂ “ಲಾಭದಾಯಕ” ಎಂಬುವ ಬಿಂದುಗಳಿವೆ. ಆ ಬಿಂದುವಿನ ಅಧಿಪತಿ ಒಬ್ಬ ಭ್ರಷ್ಟನೇ ಆಗಿರುತ್ತಾನೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ನಿಮಗೆ ತಿಳಿಯುತ್ತದೆ.(ಉದಾಹರಣೆಗೆ ಒಂದು ಸರ್ಕಾರಿ ಇಲಾಖೆಯನ್ನೇ ನೋಡೋಣ, ಎಂತಹಾ ಕಿತ್ತುಹೋದ ಇಲಾಖೆಯಲ್ಲಿಯೂ ಒಂದು ಲಾಭಬರುವ ಟೇಬಲ್ ಇದ್ದೆ ಇರುತ್ತೆ. ಅಲ್ಲಿಗೆ ಒಬ್ಬ ಖದೀಮನೆ ವರ್ಗ ಮಾಡಿಸಿಕೊಂಡು ಬರುತ್ತಾನೆಯೇ ಹೊರತು ಆ ಟೇಬಲ್ ಎಂದೂ ಸಜ್ಜನನ ಪಾಲಾಗುವುದಿಲ್ಲ!) ಸಮಾಜದಲ್ಲಿ ನಡೆಯುವ ಯಾವುದೇ ಪಲ್ಲಟಗಳು ಇಂದು ಅವರು ಹೊಂದಿರುವ ಸೌಲಭ್ಯಗಳನ್ನು ಕಿತ್ತುಕೊಳ್ಳುತ್ತದೆ ಎಂಬ ಅವ್ಯಕ್ತ ಭಯ ಅವರಲ್ಲಿ ತುಂಬಿರುವುದರಿಂದ ಅವರು ಬದಲಾವಣೆಗಳನ್ನು ವಿರೋಧಿಸುತ್ತಾರೆ. ಮೊದಮೊದಲು ಅವಿಭಕ್ತ ಕುಟುಂಬಗಳ ತೊರೆದು ಸಣ್ಣ ಕುಟುಂಬಗಳನ್ನು ರೂಪಿಸಿಕೊಳ್ಳ ಹೊರಟವರ ಬಗ್ಗೆಯೂ ಇಂತಹದೇ ವಿರೋಧ ವ್ಯಕ್ತವಾದದ್ದನ್ನು ನಾವು ಗಮನಿಸಬಹುದು.(give link to Avibhakata kutumba blog) ಇಂದು ವಿಚ್ಚೇದನ ಪಡೆದವರನ್ನು ಪಡೆಯುವವರನ್ನು ಒಂದು ರೀತಿಯ ಅಸ್ಪಶ್ಯರಂತೆ ಪರಿಗಣಿಸುವ, ಅವರನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಪ್ರಯತ್ನ ನಡೆಯುತ್ತಿದೆ. ಒಂಟಿ ಜೀವನದ ಬಗ್ಗೆ ಬಯ ಬಿತ್ತುವುದು ಹಾಗು ವಿಚ್ಛೇದಿತ ಬದುಕು ಘೋರವಾದದ್ದು ಎಂಬುದನ್ನು ಉತ್ಪ್ರೇಕ್ಷಿಸಿ ಬರೆಯುವುದರ ಮೂಲಕ ಕನ್ನಡ ಮಾದ್ಯಮಗಳು ವಿಚ್ಛೇದಿತರನ್ನು ಮಾನಸಿಕವಾಗಿ ಹಿಂಸಿಸುತ್ತಿವೆ.ಅವರು ಏನೋ ಮಹಾ ಅಪರಾಧವೆಸಗಿದವರು ಎಂಬಂತೆ ಬಿಂಬಿಸಿ ಅವರಲ್ಲಿ ಅಪರಾಧಿ ಪ್ರಜ್ಞೆ ಮೂಡುವಂತೆ ಮಾಡಲಾಗುತ್ತಿದೆ, ಅಷ್ಟೇ ಅಲ್ಲ ಅವರನ್ನು ಕೀಳಾಗಿ ಕಾಣುವಂತೆ ಇತರರನ್ನು ಪ್ರೇರೇಪಿಸುತ್ತಾರೆ.

“ವಿಚ್ಛೇಧನ”ಎಂಬ ಪದವೇ ಬಹಳ ವಿಚಿತ್ರವಾಗಿದೆ. ಕೇಳುಗರ ಕಿವಿಯಲ್ಲಿ ಅದು “ಶಿರಚ್ಚೇದನ” ಎಂಬ ಪದದಂತೆ ಧ್ವನಿಸುತ್ತದೆ. ಇದನ್ನು ಯಾವ ಮಹಾಶಯ ಸೃಷ್ಟಿಸಿದನೋ ಗೊತ್ತಿಲ್ಲ. ಒಟ್ಟಾರೆ ಈ ಪದವೇ ಕೇಳಲು ಇಷ್ಟು ಕಟೋರ ಎಂದು ಕಂಡುಬರುವಾಗ ನಮ್ಮೊಳಗೇ ಇದರ ಬಗ್ಗೆ ಅವ್ಯಕ್ತವಾಗಿ ಒಂದು ರೀತಿಯ ಭಯ ಮೂಡುವುದು ಸಹಜವಲ್ಲವೇ?. ಆದುದರಿಂದ ,ಈ ಶಬ್ದ ಉಪಯೋಗಿಸುತ್ತಾ ಬೆಳೆದು ಬಂದ ಮಕ್ಕಳ ಮನಸ್ಸಿನಲ್ಲಿ ಈ ಕ್ರಿಯೆಯ ಬಗ್ಗೆ ಇನ್ನಷ್ಟು ತಪ್ಪು ಕಲ್ಪನೆ ಬಿತ್ತಿ ಅವರನ್ನು ಮೂಲಭೂತವಾದಿ ನಂಬಿಕೆಗಳ ಅಡಿಯಾಳಾಗಿ ಮಾಡಿಕೊಳ್ಳುವ ಮಾದ್ಯಮಗಳ ಪ್ರಯತ್ನ ಬಹಳ ಸುಲಭವಾಗಿ ಫಲಕಾರಿಯಾಗಬಲ್ಲದು.

ಜನರನ್ನು ಹೆದರಿಸಿ ದನಗಳಂತೆ ವಿವಾಹವೆಂಬ ದೊಡ್ಡಿಯಲ್ಲಿ ಕೂಡಿಹಾಕುವುದಕ್ಕಿಂತ ಅವರು ನಮ್ಮ ಅವಲಂಬಿ ಸಮಾಜಿಕ ವ್ಯವಸ್ಥೆಯಿಂದ ಸ್ವತಂತ್ರವಾಗಿ ಸ್ವಾವಲಂಬಿಯಾಗುವಂತೆ ಮಾಡುವುದು ನಮ್ಮ ಪ್ರಯತ್ನವಾಗಬೇಕು.ಕೌಟುಂಬಿಕ ಹಿಂಸೆಯಿಂದ ಹೆಂಗಸರನ್ನು,ಮಕ್ಕಳನ್ನು ,ಮಾನಸಿಕ ಹಿಂಸೆಯಿಂದ ಗಂಡಸರನ್ನು ರಕ್ಷಿಸುವಂತಹಾ ಕಾನೂನುಗಳು ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ Domestic Violence Act 2005 ಒಂದು ಒಳ್ಳೆಯ ಕಾನೂನು. ಇದರಿಂದ ಗಂಡಸರಿಗೆ ತೊಂದರೆ ಆಗುತ್ತಿವೆ ಎಂಬ ಧ್ವನಿ ಕೇಳಿಬರುತ್ತಿವೆ.ಇಂತಹ ತಾಂತ್ರಿಕ ದೋಷಗಳನ್ನು ವೈಜ್ಞಾನಿಕ ರೀತಿಯಲ್ಲಿ ತಿದ್ದುಪಡಿ ಮಾಡಬೇಕೇ ಹೊರತು ಮತ್ತೆ ಹಿಂದಿನ ವ್ಯವಸ್ಥೆಗೆ ತೆರಳಿ ಎಂದು ಹೇಳುತ್ತಾ ತಮ್ಮ ಪೂರ್ವಾಗ್ರಹಗಳನ್ನು ಸಮರ್ಥಿಸಿಕೊಳ್ಳುವ ಪ್ರಯತ್ನವನ್ನು ಕಾನೂನು ರಚಿಸುವವರು ಮಾಡಬಾರದು.

ಆದರೆ ಇದಕ್ಕೆ ವ್ಯತಿರಿಕ್ತವಾದ ಪ್ರಯತ್ನಗಳು ನಡೆಯುತ್ತಿರುವುದು ವಿಷಾಧನೀಯ.

ಅದೇನೇ ಇರಲಿ, ಈ ವಿವಾಹ ಬಂಧನಗಳು ಜೀವಾವಧಿ ಶಿಕ್ಷೆಯಾಗಿ ಮಾರ್ಪಡುವ ಸಾಧ್ಯತೆ ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದು.

1 comment:

Anonymous said...

ನೀವು ದೇಶವನ್ನು ವ್ಯಕ್ತಿ ಎಂದು ಭಾವಿಸಿದಂತಿದೆ..ಪಶುಗಳಿಗೂ ಮನುಷ್ಯರಿಗೂ ವ್ಯತ್ಯಾಸ ಇರಲಿ.ಇರುವುದೆಲ್ಲವ ಬಿಟ್ಟು ಇರದುದರ ಕಡೆಗೆ ತುಡಿಯುವ ಜೀವಗಳೆಲ್ಲ ಅಂತಿಮವಾಗಿ ವಿಷಾದಗಳಲ್ಲೇ ಕೊನೆಯಾಗಿದೆ.ವಿಚ್ಚೇದನಗಳು ಆಟದ ವಸ್ತುವಾದರೆ ,ವಿವಾಹ ಡೊಂಬರಾಟವೆನಿಸಿದರೆ ದೇಶ ಅದಃಪತನಕ್ಕೆ ಇಳಿಯುವುದರಲ್ಲಿ ಸಂದೇಹವಿಲ್ಲ.ವರದಕ್ಷಿಣೆ,ಅತ್ಯಾಚಾರ ಮುಂತಾದ ಸದುದ್ದೇಶದ ಕಾನೂನುಗಳೇ ಇಂದು ಸ್ತ್ರೀಯರ ಹಣ ಗಳಿಕೆಯ ಮಾದ್ಯಮವಾಗಿರುವಾಗ ,ವಿಚ್ಚೇದನ ಮತ್ತೆ ಪರಿಹಾರದ ದಂಧೆಗೆ ಇಳಿಯುವುದನ್ನು ನೋಡಬೇಕಾದೀತು.ಇಂದು ನಮ್ಮ ನೆಮ್ಮದಿಗೆ ನಮ್ಮ ಅಪ್ಪ-ಅಮ್ಮನ ಆಶ್ರಯ ಕಾರಣವೇ ಹೊರತು ಬೇರೇನಲ್ಲ ಎಂಬುದನ್ನು ಮರೆಯದಿರಿ.ವಿಚ್ಚೇದಿತರ ಮಕ್ಕಳು ಮಾನಸಿಕವಾಗಿ ವಿಕೃತರೂ,ಖಿನ್ನರೂ,ಅಭದ್ರತೆಯಿಂದ ನರಳುವವರೂ ಆಗಿರುವ ಸಾದ್ಯತೆಗಳು ಹೆಚ್ಚು.ಮತ್ತೆ ಸಿಕ್ಕಹೊಸ ಗಂಡ ,ಹೊಸ ಹೆಂಡತಿಯೂ ಮತ್ತೆ ಹಳೆಯದಾಗುತ್ತಾರೆ..ಸಮಾಜವನ್ನು ಗಮನಿಸಿ.ತೀಟೆಗಳಿಗೆ ವಿವಾಹವಾಗಬೇಢಿ. ನಿಮ್ಮದು ಹಳೆಯ ಪೋಸ್ಟ್.ಇಂದು ನೋಡಿದೆ