Monday, January 24, 2011

ಮೋಸಕ್ಕೆ ವಾಸ್ತು,ವಾಸಕ್ಕೆ ಮನೆ

ಶ್ರೀ ಶಾಂತಾರಾಮ ಸೋಮಯಾಜಿ ಇವರು ವಾಸ್ತುವಿನ ಬಗ್ಗೆ ಬರೆದಿರುವ ಪುಸ್ತಕ ಕಣ್ಣಿಗೆ ಬಿದ್ದೊಡನೆ ಕೈಗೆತ್ತಿಕೊಂಡೆ. ೯೦ ರ ದಶಕದಲ್ಲಿ ಇವರು 'ಸುಧಾ'ಪತ್ರಿಕೆಯಲ್ಲಿ ಬರೆಯುತ್ತಿದ್ದ ಕಥೆಗಳನ್ನು ಓದಿ ಮೆಚ್ಚಿಕೊಂಡಿದ್ದವನು ನಾನು. ಜೊತೆಗೆ ಈತ ವಾಸ್ತುವಿನ ಬಗ್ಗೆ ಏನು ಬರೆದಿರಬಹುದು? ಎಂಬ ಕೂತೂಹಲ. ಇದರ ಶೀರ್ಷಿಕೆ "ಮೋಸಕ್ಕೆ ವಾಸ್ತು,ವಾಸಕ್ಕೆ ಮನೆ" ಎಂದು. ವಾಸ್ತುವನ್ನು ಅತಿಯಾಗಿ ನಂಬುವ ನಮ್ಮ ಸಂಭಂಧಿಕರಿಗೆ ಇದನ್ನು ನೀಡಬೇಕು ಅಂತ ಆ ಕ್ಷಣ ಅನ್ನಿಸಿತು. ಸರಿ, ಬುಕ್ ತಗೊಂಡೆ. ಓದಿದೆ...,ಓದಿದೆ....ವಾಸ್ತುವಿನ ಬಗ್ಗೆ ಏನಿದೆ? ಎಲ್ಲಿದೆ?!.
ಅಂತೂ ಕೊನೆಗೆ 7ನೆಯ  ಅಧ್ಯಾಯದಲ್ಲಿ ವಾಸ್ತುವಿನ ಬಗ್ಗೆ ಒಂದಿಷ್ಟು ವಿಷಯ ಸಿಕ್ಕಿತ್ತು!. ಇದರಲ್ಲಿ ಲೇಖಕರು ವಾಸ್ತುವಿನ ತಾಂತ್ರಿಕ ಅಂಶಗಳ ಬಗ್ಗೆ ಹೆಚ್ಚು ಚರ್ಚಿಸಿಲ್ಲ. ಏಕೆ? ಎಂಬುದನ್ನು  ಪ್ರಸ್ತಾವನೆಯಲ್ಲಿ ಅವರೇ ವಿವರಿಸಿದ್ದಾರೆ.ಈ ಕೃತಿಯ ವ್ಯಾಪ್ತಿ ವಾಸ್ತುಶಾಸ್ತ್ರಕ್ಕಿಂತ ವಿಸ್ತಾರವಾಗಿದೆ.ಇದರಲ್ಲಿ ಲೇಖಕರು ಒಂದು ವಿಷಯನ್ನು ನಾವು ಯಾವ ರೀತಿ ಗ್ರಹಿಸಬೇಕು ಎಂಬುದನ್ನು ತರ್ಕಬದ್ದವಾಗಿ ಚರ್ಚಿಸಿದ್ದಾರೆ. ಜೊತೆಗೆ ಹಲವು ದೃಷ್ಟಾಂತಗಳನ್ನೂ ನೀಡಿದ್ದಾರೆ. ವಿಧ್ಯಾರ್ಥಿಗಳಲ್ಲಿ  ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಇದು ಬಹಳ ಸಹಾಯಕವಾಗಬಹುದಾದಂತಹ ಪುಸ್ತಕ. ಆದುದರಿಂದ ಇದನ್ನು ಪಟ್ಯ ಪುಸ್ತಕವಾಗಿ ಮಾಡಿದರೆ ಒಳ್ಳೆಯದು.ಸಾಹಿತ್ಯದ ಹೆಸರಲ್ಲಿ ಕಾಗಕ್ಕ-ಗುಬ್ಬಕ್ಕನ ಕಥೆಗಳನ್ನು ಪಟ್ಯ ಪುಸ್ತಕ ಮಾಡುವುದಕ್ಕಿಂತ ಇಂತಹಾ ವೈಚಾರಿಕ ಕೃತಿಗಳನ್ನು ಓದಿಸಿದರೆ ವಿಧ್ಯಾರ್ಥಿಗಳಿಗೆ,ಅದಕ್ಕಿಂತ ಹೆಚ್ಚಾಗಿ ಮೌಡ್ಯದ ಕಿಲುಬು ಹತ್ತಿಸಿಕೊಂಡಿರುವ ಅಧ್ಯಾಪಕರಿಗೆ ಒಂದಿಷ್ಟು ಸಹಾಯಕವಾಗುತ್ತದೆ. ಈ ಕೃತಿಗೆ 'ಮೋಸಕ್ಕೆ ವಾಸ್ತು,ವಾಸಕ್ಕೆ ಮನೆ" ಎಂಬ ಹೆಸರು ಸರಿಯಿಲ್ಲ ಅನ್ನಿಸುತ್ತೆ. ಯಾಕೆಂದರೆ ಇದರ ಫೋಕಸ್ ವಾಸ್ತುಶಾಸ್ತ್ರದ ಮೇಲೆ ಅಷ್ಟಾಗಿ ಇಲ್ಲ.ಆದುದರಿಂದ ಈ ಪುಸ್ತಕ ಒಂಥರಾ ಅಪೂರ್ಣ ಅನ್ನಿಸುತ್ತೆ. ಹಾಗಾಗಿ ವಾಸ್ತುವಿನ ಬಗ್ಗೆ ಹೆಚ್ಚು ಫೋಕಸ್ ಮಾಡಿ ಇದರ ಮುಂದುವರಿದ ಎರಡನೇ ಭಾಗವನ್ನು ಶ್ರೀ ಸೋಮಯಾಜಿಗಳು ಬರೆಯುತ್ತಾರೆ ಎಂದು ಆಶಿಸೋಣ.
ಇದನ್ನು ನನ್ನ ಸಂಭ೦ದಿಕರಿಗೆ ನೀಡಬೇಕು ಅಂದುಕೊಂಡಿದ್ದೆ. ಆದರೆ ಅದರಿಂದ ಎನೂ ಉಪಯೋಗ ಇಲ್ಲ ಅನ್ನಿಸುತ್ತೆ. ಈಗಾಗಲೇ "ವಾಸ್ತು"ಎಂಬ ವೈರಸ್ ನಿಂದ infect ಆಗಿರುವವರಿಗೆ ಈ ಪುಸ್ತಕ ಮದ್ದಾಗಲಾರದು.ನಂಬಿಕೆ ಎಂಬೋದು ಒಂತರಾ "AIDS" ಇದ್ದಂತೆ. ಹೊಸಬರಿಗೆ ಈ ವೈರಸ್ ಹಬ್ಬದಂತೆ ತಡೆಯಲು ಈ ಕೃತಿಯನ್ನು ಬಳಸಬಹುದಷ್ಟೇ.ಕನ್ನಡ ಸಾಹಿತ್ಯ ಜಗತ್ತಿಗೆ ವೈಜ್ಞಾನಿಕ ಮನೋಧರ್ಮದ ಪ್ರವರ್ತಕರಾಗಿದ್ದ  ಶ್ರೀ ಜಿ.ಟಿ.ನಾರಯಣರಾಯರ ಅಗಲಿಕೆಯಿಂದ ಉಂಟಾದ ಶೂನ್ಯವನ್ನು ತುಂಬುವ ಸಾಮರ್ಥ್ಯ ತಮ್ಮಲಿದೆಯೆಂದು ಶ್ರೀ ಸೋಮಯಾಜಿಗಳು ಈ ಕೃತಿಯ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರ  ಲೇಖನಿಯಿಂದ ಇಂತಹಾ ಕೃತಿಗಳು ಇನ್ನಷ್ಟು ಬರಲಿ ಎಂದು ಆಶಿಸೋಣ.


"Mosakke Vastu,Vasakke Mane".
A detailed look at a fraud called "Vastu shaastra"along with some general hints to homebuilding by Shantarama Somayaji.
Published by Sadhana Prakashana, Bangalore. Ph.9480088960.
168 pages, Price Rs 80, 1st Publication 2009

No comments: