Friday, January 21, 2011

‘ಸರ್ವರಿಗೆ ಸಮಬಾಳು,ಸರ್ವರಿಗೆ ಸಮಪಾಲು???

ನಾವು ಈಗ 21 ನೇ ಶತಮಾನದಲ್ಲಿದ್ದೇವೆ. ಈ ಭೂಮಿಯ ಮೇಲೆ ಆಗಿಹೋದ ಹಲವು ರೀತಿಯ ವ್ಯವಸ್ಥೆಗಳನ್ನು ಇತಿಹಾಸದಲ್ಲಿ ಓದಿದ್ದೇವೆ. ಅಶೋಕನ ಕಾಲಕ್ಕಿಂತಲೂ ಪ್ರಾಚೀನ ಕಾಲದ ಆಡಳಿತದಿಂದ ಹಿಡಿದು ಇಂದಿನ ಮನಮೋಹನ್ ಸಿಂಗ್ ರ ಆಡಳಿತದವರೆಗೆ ಎಲ್ಲವನ್ನೂ ನೋಡಿದ್ದೇವೆ. ಅನುಭವಿಸಿದ್ದೇವೆ. ಆದರೆ ಕೆಲವರು ಈಗಲೂ ‘ಕಟ್ಟೇವು ನಾವು ಹೊಸ ನಾಡೊಂದನು ಸುಖದ ಬೀಡೊಂದನು’ ಎಂದು ಹಾಡುತ್ತಾ ಜನರ ಕಿವಿಗೆ ಹೂ ಇಡಲು ಪ್ರಯತ್ನಿಸುತಿದ್ದಾರೆ.


ಒಮ್ಮೆ ಇತಿಹಾಸದತ್ತ ತಿರುಗಿ ನೋಡಿ, ನಾವು ಎಲ್ಲಾ ರೀತಿಯ ಆಡಳಿತಗಳನ್ನು ಕಂಡಿದ್ದೇವೆ. ಸಾಕ್ರೆಟಿಸ್, ಬುದ್ಧ, ಮಹಾವೀರ,ಕ್ರಿಸ್ತ,ಮಹಮ್ಮದ್,ಬಸವಣ್ಣ,ಮಾರ್ಟಿನ್ ಲೂಥರ್ ಕಿಂಗ್,ಕಾರ್ಲ್ ಮಾರ್ಕ್ಸ್,ಎಂಗೆಲ್ಸ್,ಲೆನಿನ್,ಮಾವೋ,ನೆಹರು ಇವರಿಂದ ಹಿಡಿದು ಮಹಾತ್ಮ ಗಾಂಧಿಜೀಯವರೆಗೆ ಅವರುಗಳು ಹೇಳಿದ್ದನ್ನೆಲಾ ಮಾಡಿದ್ದೇವೆ. ಅವರುಗಳು ಬದುಕಿದ್ದಾಗ ಮಾಡಿದ್ದನ್ನು ಓದಿದ್ದೇವೆ. ಹೆಚ್ಚುಕಡಿಮೆ ಎಲ್ಲಾ ಧರ್ಮಾಧಾರಿತ ,ಚಿಂತನಾಧಾರಿತ ಸಮಾಜಗಳೂ/ವ್ಯವಸ್ಥೆಗಳೂ ಬಂದಿದೆ ಅಥವಾ ಬಂದು ಹೋಗಿವೆ. ಆದರೂ ಇತಿಹಾಸದ ಯಾವುದೇ ಹಂತದಲ್ಲಾದರೂ‘ಸರ್ವರಿಗೆ ಸಮಬಾಳು,ಸರ್ವರಿಗೆ ಸಮಪಾಲು’ ಎಂಬ ವಾಕ್ಯ ನಿಜವಾಗಿದೆಯೇ?,ಅಶೋಕ,ಮಾವೋ,ಮೊಹಮ್ಮದ್..ಯಾರ ಕಾಲದಲ್ಲಿಯೂ ಇರಲಿಲ್ಲ. ಪ್ರಯೋಗ ಮಾಡಲು ಇನ್ನೂ ಯಾವ ಸಿದ್ದಾಂತ ಉಳಿದಿದೆ?...

ಎಲ್ಲರೂ ಹೇಳುವುದು “ಸಿಸ್ಟಮ್ ಬದಲಾಗಬೇಕು” ಎಂದು . ನಿಜ, ಸಿಸ್ಟಮ್ ಒಂದೊಂದು ರೀತಿ ಬದಲಾದಾಗಲೂ ಅದರಿಂದ ಕೆಲವರಿಗೆ ಲಾಭವಾಗಿದೆ.ತಮಾಷೆಯೆಂದರೆ ಇದರಿಂದ ಎಷ್ಟು ಜನಕ್ಕೆ ಲಾಭ ಆಗಿದೆಯೋ ಅಷ್ಟೇ ಸಂಖ್ಯೆಯ ಜನಕ್ಕೆ ನಷ್ಟ ಆಗಿದೆ!. ಈ ವ್ಯವಸ್ಥೆ/ಸಿಸ್ಟಮ್ ಎನ್ನುವುದು ಒಂದು ಬೆಡ್ ಶೀಟ್ ನಂತೆ. ಸಮಸ್ಯೆಗಳು ಒಬ್ಬ ಎತ್ತರದ ಮನುಷ್ಯನಂತೆ. ಬೆಡ್ ಶೀಟ್ ಕಾಲಿಗೆ ಎಳೆದುಕೊಂಡರೆ ತಲೆ ಹೊರಬರುತ್ತೆ. ತಲೆಗೆಳೆದು ಕೊಂಡರೆ ಕಾಲು ಹೊರಬರುತ್ತೆ!. ತುಂಬಾ ಹೊತ್ತು ಚಳಿ ಅನುಭವಿಸಿದ್ದ ಅಂಗಕ್ಕೆ ಒಡನೆಯೇ ಬೆಡ್ ಶೀಟು ಸಿಕ್ಕಾಗ ಮನಸ್ಸಿಗೆ ಹಾಯ್ ಎನಿಸುತ್ತದೆ & ಹೊರಬಿದ್ದ ಅಂಗಕ್ಕೆ ತಾಕುವ ಛಳಿಯ ಬಗ್ಗೆ ಅಷ್ಟೇನೂ ವ್ಯಥೆ ಆಗುವುದಿಲ್ಲ. ಆದರೆ ಇದು ಕ್ಷಣಿಕ. ಮತ್ತೆ ಆ ಅಂಗ ಬಂಡೇಳುತ್ತದೆ. ಬಿಸಿ ಬಯಸುತ್ತದೆ. ಮತ್ತೆ ಎಳೆದಾಟ,ಅಸಹನೆ...

ಈ ಸಿಸ್ಟಮ್ ನಿಂದಾಗಲಿ ,ಸಿಸ್ಟಮ್ ಬದಲಾಯಿಸುವುದರಿಂದಾಗಲಿ ಯಾವುದೇ ಉಪಯೋಗ ಇಲ್ಲ.
ಇದು ನಮ್ಮ ಸಿಸ್ಟಮ್ ನ ರಕ್ಷಕರಿಗೂ ಗೊತ್ತು. ಅದಕ್ಕೆಂದೇ ಅವರು ಪ್ರತಿ ಹಂತದಲ್ಲೂ ಜನಸಂಖ್ಯೆಯ ಒಂದು ಭಾಗವನ್ನು ತುಳಿದಿಡುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಅದು ಹೇಗೆ?

( ಮನಸ್ಸುಬಂದಾಗ ಮುಂದುವರೆಸುತ್ತೇನೆ)

1 comment:

Anonymous said...

All the provisions of Our constitution impose so called clause “reasonable restrictions on the basis of Morality”.But when ‘Morality’ itself is defined by general level of intolerance & jelousy.How can we say Constitution is committed to reserving the rights the individual.