Friday, September 10, 2010

ಅದು ನನ್ನಿಂದ ಸಾಧ್ಯವೇ?

ಜನರನ್ನು ಕಂಡ್ರೆ ನನ್ಗಾಗಲ್ವೆ !,.....
.ಹೌದು...ಸಾಮನ್ಯವಾಗಿ ಜನರ ಗುಂಪನ್ನು ನೋಡಿದರೆ ನನಗೆ ಆಗುವುದಿಲ್ಲ. ನಾನು ಯಾವಾಗಲು ಗುಂಪಿನಿಂದ ದೂರವಿರಲು ಬಯಸುತ್ತೇನೆ. ಅದರರ್ಥ ನಾನು ಜನ ಸಮೂಹವನ್ನು ನನ್ನ ಶತ್ರುವೆಂದು ಭಾವಿಸುತ್ತೆನೆಂದಲ್ಲ. ಅದು ನನ್ನ ಸ್ವಭಾವವಷ್ಟೇ. 
ಈ ಮೂರು ವರ್ಷಗಳಲ್ಲಿ ಮನುಕುಲದ ಬಗ್ಗೆಗಿನ ನನ್ನ ಸಂಭಂದದಲ್ಲಿ ಆದ ಕೆಲವು ಬದಲಾವಣೆಗಳು ನನ್ನನ್ನು ಈ ಸ್ಥಿತಿಗೆ ತಳ್ಳಿರುವ ಸಾಧ್ಯತೆ ಇದೆ. ನಾನು ಈ ಅವಧಿಯಲ್ಲಿ ನೋಡಿರುವ ಮನುಷ್ಯರಲ್ಲಿ ಎರಡು ಪ್ರಮುಖ ವಿಧಗಳಿವೆ.ಒಂದು ನನನ್ನು ಉಪಯೋಗಿಸಿಕೊಳ್ಳುವ ಜನ.ಎರಡನೆಯದು ನನಗೆ ಏನೂ ಉಪಯೋಗಕ್ಕೆ ಬಾರದ ಅಸಹಾಯಕ ಜನ.( ಇವರನ್ನು ಉಪಯೋಗಿಸಿ ಕೊಳ್ಳುವ ಮನಸ್ಸು,ಜಾಣ್ಮೆ ನನ್ನಲ್ಲಿಲ್ಲದಿರುವುದು ಇದಕ್ಕೆ ಕಾರಣವೇ ಹೊರತು ಅವರ ವೀಕ್ನೆಸ್ಸ್ ಅಲ್ಲ.)  ಇನೊಮ್ಮೆ ಎಲ್ಲಿ ಮೊದಲನೇ ವರ್ಗಕ್ಕೆ ಸೇರಿದ ಜನರ ಕೈಗೆ ಬೀಳುತ್ತೇನೋ ಎನ್ನುವ ಆತಂಕ ಬಹುಶಃ ನನ್ನನ್ನು ಅಂತರ್ಮುಖಿಯನ್ನಾಗಿ ಮಾಡಿರಬಹುದು. ಗುಂಪು ಎಂದರೆ ಸಾಮಾನ್ಯವಾಗಿ ಮೇಲೆ ಹೇಳಿದ ಎರಡೂ ವರ್ಗಗಳ ಮಿಶ್ರಣ. ನನಗೆ ಬೇಕಾದವರು ಆ ಗುಂಪಿನಲ್ಲಿದ್ದರೂ,ಅವರೊಂದಿಗೆ ಬೆರೆಯಲು ಆಸೆ, ಆ ಗುಂಪಿನಲ್ಲಿ ‘ಬೇಡವಾದವರೊಂದಿಗೆ’ ಬೆರೆಯಬೇಕಾಗುವ ಆತಂಕಕ್ಕಿಂತ ಕಡಿಮೆ ಇರುವುದರಿಂದ ನಾನು ಗುಂಪಿನಿಂದ ದೂರಇರುವ ಎಲ್ಲಾ ಪ್ರಯತ್ನ ಮಾಡುತ್ತೇನೆ. ಹೀಗೆ ಇದ್ದರೆ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ ಎಂದು ಹಲವರು ಹೇಳುತ್ತಾರೆ. “ನಾನು ಹೇಗಿದ್ದರೂ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ“ಎಂದು ನನಗೆ ಅರ್ಥವಾಗಿದೆ. ಬ್ರಷ್ಟ ಸಮಾಜ ಯಾರಿಗೂ ಕಾಯುವುದಿಲ್ಲ. ಹೆಂಡದ ಹಿಂದೆ ಓಡುವ ಕುಡುಕರಂತೆ ನಾವೇ ಸಮಾಜದ ಹಿಂದೆ ಓಡುತ್ತೇವೆ.ಹಲವರನ್ನು ತಳ್ಳಿ ಬೀಳಿಸುತ್ತೇವೆ.ನಮ್ಮನ್ನು ಹಲವರು ತಳ್ಳಿ ಬೀಳಿಸುತ್ತಾರೆ. ನಾಗರಿಕ ಎಂದು ಕರೆಯುವ ಈ ಸಮಾಜ ಕಾಡು ಪ್ರಾಣಿಗಳ ಪ್ರಪಂಚಕ್ಕಿಂತ ಯಾವುದೇ ರೀತಿಯಲ್ಲಿ ಬಿನ್ನವಾಗಿಲ್ಲ. ನಮ್ಮ ಆಹಾರ ಕ್ರಮಗಳು,ಆಯುಧಗಳು,ಬೇಟೆಯ ವಿಧಾನಗಳು ಬದಲಾಗುತ್ತವಷ್ಟೇ. ಹುಲಿಗಳ ಬದುಕು ಜಿಂಕೆಗಳ ಸಂಖ್ಯೆಯ ಮೇಲೆ ಡಿಪೆಂಡ್ ಆಗಿರುವಂತೆ ಇಲ್ಲಿ ಬಲಿಷ್ಟರ ಬದುಕು ದುರ್ಬಲರ ಮೇಲೆ,ವಿದ್ಯಾವಂತರ ಬದುಕು ಅನಕ್ಷರಸ್ತರ ಮೇಲೆ ಡಿಪೆಂಡ್ ಆಗಿದೆ.ಈ ಸಮಾಜಕ್ಕೆ ಬಡವರ,ದುರ್ಬಲರ,ಅನಕ್ಷರಸ್ತರ ಅಗತ್ಯ ತುಂಬಾ ಇರುವುದರಿಂದಲೇ ಅದನ್ನು ಅಳಿಯದಂತೆ ನೋಡಿಕೊಳುವ ಒಂದು ವ್ಯವಸ್ಥೆ ನಮ್ಮಲ್ಲಿ ಬೆಳೆದು ಬಂದಿದೆ. ಕುರಿ ತನ್ನ ಹಿಂದಿಂದ ಹೊರಬಿದ್ದು ತನ್ನದೇ ಜಾಡಿನಲ್ಲಿ ಓದಲು ಆರಂಬಿಸಿದರೆ ಆಗ ಕುರಿಕಾಯುವವ ಪ್ರತ್ಯಕ್ಷವಾಗಿ ಕುರಿಯನ್ನು ಕೋಲಿನಿಂದ ಹೊಡೆದು/ಹೆದರಿಸಿ ಗುಂಪಿನೊಂದಿಗೆ ಸೇರುವಂತೆ ಮಾಡುತ್ತಾನೆ. ಅದೇ ರೀತಿ ಸಮಾಜದಲ್ಲಿ ಬುದ್ದ,ಬಸವ,ಏಸುಕ್ರಿಸ್ತ,ವಿವೇಕಾನಂದ,ಗಾಂದಿ ಮುಂತಾದವರು ಅವತರಿಸಿ ನಡಿ, ನುಗ್ಗಿ ನಡಿ,ಗುರಿ ತಲುಪುವ ವರೆಗೂ ನಿಲ್ಲಬೇಡ ಎಂದು ಹೇಳಿ ನಮ್ಮನ್ನು ಸಮಾಜದತ್ತ ದೂಡುತ್ತಾರೆ. ಸಮಾಜದೊಳಗೆ ಒಂದಿಷ್ಟು ಕಚಿಪಿಚಿ ಮಾಡಿ “ನೋಡಿ ನಾವು ಸಮಾಜವನ್ನು ಬದಲಾಯಿಸಿದ್ದೇವೆ,ನಾವು ಹೇಳಿದ್ದು ಪಾಲಿಸಿ, ಯಶಸ್ಸು ನಿಮ್ಮದಾಗುತ್ತದೆ” ಎಂದು ಹೇಳಿ, ಸಮಾಜದಲ್ಲಿ ಗಣ್ಯರು ಎಂದು ಹೇಳಿಸಿಕೊಂಡವರ ಬಳಿ ಆಥಿತ್ಯ(ಆತಿಥ್ಯ?) ಸ್ವೀಕರಿಸಿ ಅಂತರ್ಧಾನವಾಗುತ್ತಾರೆ. ಆಮೇಲೆ ಮತ್ತದೇ ಗೋಳು!.ಇದು ಸುಮಾರು ಐದು ಸಾವಿರ ವರ್ಷಗಳಿಂದಲೂ ನಡೆದು ಬಂದ ಪ್ರಕ್ರಿಯೆ. ನಡಿ ನುಗ್ಗಿ ನಡಿ ಎನ್ನುತ್ತಾ ನಡೆಯುತ್ತೇವೆ, ಪರೀಕ್ಷೆ,.ಕೆಲಸ,ಕಾರ್ಯ,ಮದುವೆ,ಮಕ್ಕಳು,ತೀರ್ಥಯಾತ್ರೆ,ಪೂಜೆ ಪುನಸ್ಕಾರ, ಸಾಲ ಸೋಲ,ಲಂಚ, ವರದಕ್ಷಿಣೆ, ಡೊನೇಶನ್,ಸೈಟು ,ಮನೆ,ರೇಶನ್ ಕಾರ್ಡ್,ಪಾಸ್ಪೋರ್ಟ್,ಇನ್ಸೂರೆನ್ಸ್ ,ಅಳು,ಮುಪ್ಪು,ಸಾವು.....ಜೀವನದ ಒಂದು ಹಂತ ಮುಗಿಸಿ ಮೇಲೆ ನೋಡಿದರೆ ಗೋಡೆಯಲ್ಲಿರುವ ವಿವೇಕಾನಂದರು ಆ ಕಡೆ ನೋಡುತ್ತಿರುತ್ತಾರೆ.ಬುದ್ಧ ಕಣ್ಣು ಮುಚ್ಚಿ ಕುಳಿತಿರುತ್ತಾನೆ. ಜನರ  ಕಷ್ಟಗಳನ್ನು ನೋಡುವವರು ಯಾರೂ ಇರುವುದಿಲ್ಲ. ನಗುವಾಗ ಎಲ್ಲಾ ನೆಂಟರೆ. ಜೀವನದ ಯಾವುದೋ ಹಂತದಲ್ಲಿ ತಿರುಗಿ ನೋಡಿದರೆ ನಮ್ಮ ಗುರಿ ಎಲ್ಲೊ ಇರುತ್ತದೆ.ನಾವೆಲ್ಲೋ ಇರುತ್ತವೆ. ಬಲಿಷ್ಟರ ಗುರಿಗಳಿಗೆ ಬಲವಿಲ್ಲದವರು ಮಾರ್ಗವಾಗಿರುತ್ತಾರೆ. 
ಸಮಾಜಕ್ಕೆ ಮನುಷ್ಯನ ಸುಖ ಬೇಕಾಗಿಲ್ಲ. ಸಮಾಜಕ್ಕೆ ಮನುಷ್ಯನ ಬಲಿ ಬೇಕಾಗಿದೆ. ಆತ್ಮಹತ್ಯೆ ಮಾಡಿ ಸಮಾಜದ ಹಂಗು ಕಳೆದುಕೊಂಡವರನ್ನು ಚಿ,ಥೂ...ಎನ್ನುವ ಸಮಾಜ ಯುದ್ದದಲ್ಲಿ ಮಡಿದವರನ್ನು ಹಾಡಿ ಹೊಗಳುತ್ತದೆ. ಅದಕ್ಕೆ ಬೇಕಾಗಿರುವುದು ನಮ್ಮ ಸಾವೇ,ಆದರೆ ಅದನ್ನು ನಿರ್ಧರಿಸುವ ಹಕ್ಕನ್ನು ಸಹ ಅದು ನಮ್ಮಿಂದ ಕಿತ್ತು ಕೊಳ್ಳುತ್ತದೆ.ಲಾಗಾಯ್ತಿನಿಂದಲೂ ಯೋಧರ ಸಾವಿನ ಲಾಭವನ್ನು ಪಡೆದುಕೊಳ್ಳುತ್ತಿರುವವರು ಬೆಚ್ಚಗೆ ಒಳಗೆ ಕುಳಿತು ಅಪ್ಪಣೆ ಕೊಡುವ ರಾಜರು ಹಾಗೂ ಅವರ ಅಂತರಂಗದ ಜನವೇ ಹೊರತು ಬಡ ರೈತ ನಾಗಲಿ,ಜನಸಾಮಾನ್ಯನಾಗಲಿ ಅಲ್ಲ.ಆದರೂ ನಾವು ಇತಿಹಾಸದಲ್ಲಿ ಓದುವುದು,ಹಾಡಿ ಹೊಗಳುವುದು ಆ ರಾಜರಗಳ ಬಗ್ಗೆ ಹಾಗೂ ನಮ್ಮನ್ನು ಉದ್ದರಿಸಲು ಜನ್ಮವೆತ್ತಿದ ಸಂತರ ಬಗ್ಗೆ!. ಬಹುಶಃ ಬೂಮಿಯಲ್ಲಿರುವ ಯಾವುದೇ ದೇಶದಲ್ಲಿ ಹುಟ್ಟಿರದಷ್ಟು ಸಂತರು ಈ ಭಾರತ ದೇಶದಲ್ಲಿ ಹುಟ್ಟಿದ್ದರೆ. ಎಲ್ಲಾ ದೇವಾನುದೇವತೆಗಳು ಕಂಡು ಮಾತಾಡಿ ಹಾಡಿ ಹೊಗಳಿದವರೇ. ಇತಿಹಾಸದ ಆರಂಬದಲ್ಲಿ ಋಷಿಮುನಿಗಳು ವೇದ ಸೃಷ್ಟಿಸಿದರು.ನಂತರ ಬುದ್ಧ ,ಮಹಾವೀರರು ಬಂದು ನಕ್ಷತ್ರ ತೋರಿಸಿದರು. ಅಲ್ಲಿಯವರೆಗೆ ಸುಖವಾಗಿದ್ದ ಸಮಾಜಕ್ಕೆ ಬಡಿಯಿತು ನೋಡಿ ಗ್ರಹಚಾರ.  ಮೊದಲು ಅಲೆಕ್ಸಾಂಡರ್ ಬಂದು ಎಲ್ಲರನ್ನ ಎರ್ರಾಬಿರ್ರಿ ಬಡಿದ.ಆಮೇಲೆ ಶಕರು ಬಂದರು.ನಂತರ ಗುರ್ಜರರು, ಹೂಣರು,ತುರ್ಕರು,ಪೋರ್ತುಗೀಸರು,ಬ್ರಿಟಿಷರು ಎಲ್ಲರೂ ಬಂದು ನಮ್ಮನ್ನು ಬಾರಿಸಿದರು. ಪಾಪ, ಇವರ್ಯಾರೂ ದೇವರನ್ನು ನೋಡೇ ಇರಲಿಲ್ಲ.ನಾವು ಹಿಂದೆ ಗಗನ ನೌಕೆಗಳಲ್ಲಿ ಚಂದ್ರಗ್ರಹಕ್ಕೆ ಹೋಗಿ ಬರುತಿದ್ದಾಗ ಬ್ರಿಟಿಷರಿಗೆ ಬಟ್ಟೆ ಹಾಕಿಕೊಳ್ಳಲೂ ಬರುತ್ತಿರಲಿಲ್ಲ ಎಂದು ಬೊಗಳೆ ಹೊಡೆಯುತ್ತೇವೆ. ನಮ್ಮ ಸೋಲಿಗೆ, ಸಾವು ನೋವಿಗೆ ಕಾರಣ ಯಾರು ಗೊತ್ತೇ?,ನಮ್ಮ ಎಲ್ಲಾ ಸಾಧು ಸಂತರು, ಕವಿಗಳು, ಪಂಡಿತರು, ಜ್ಞಾನಿಗಳು,ಶಿಲ್ಪಿಗಳು. ನಮ್ಮ ದಾಸ್ಯ ಈ ಎಲ್ಲರ ಸಾಮೂಹಿಕ ಪ್ರಯತ್ನದ ಪಲಶ್ರುತಿಯಷ್ಟೆ. ಅದು ಅವರ ತಪ್ಪಲ್ಲ. ಅವರು ಒಳ್ಳೆಯ ಸಮಾಜ ಕಟ್ಟಬಯಸಿದರು. ಒಳ್ಳೆಯ ಸಮಾಜ ಸಾಮಾನ್ಯನನ್ನು ಚೆನ್ನಾಗಿ ಮೇಯಿತು.ಆತನ ಸ್ವಾತಂತ್ರವನ್ನಷ್ಟೇ ಅಲ್ಲ,ಸ್ವತಂತ್ರ ವ್ಯಕ್ತಿತ್ವವನ್ನು, ರೂಪಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ನಾಶಮಾಡಿತು. ನಾಳೆ ರಂಜಾನ್ ಇದೆ.ನಾಳಿದ್ದು ಗಣಪತಿ ಹಬ್ಬ. ಎರಡು ಸಹ ಸಮೂಹ ಸನ್ನಿಯನ್ನು ಸೃಷ್ಟಿಸುವ ಪುರಾತನ ಪ್ರಕಾರಗಳೇ. ಮತ್ತದೇ ರಾಗ ,ಮತ್ತದೇ ಹಾಡು, ಉಸಿರುಗಟ್ಟಿಸುವ ವಾತಾವರಣ. 


ಸುಮ್ಮನೆ ಎದ್ದು ಹೊರಟುಹೋಗಬೇಕು ಎನ್ನಿಸುತ್ತದೆ....ಆದರೆ ಅದು ನನ್ನಿಂದ ಸಾಧ್ಯವೇ?.

No comments: