Sunday, March 28, 2010

ಮುಂಜಾವಿನ ಕೆಲವು ಚಿಂತನೆಗಳು -

ಭಟ್ಟ೦ಗಿತನದ ವೈಭವೀಕರಣ

ನಮ್ಮ ಶಾಲೆಯ ಪಟ್ಯ ಪುಸ್ತಕದಲ್ಲಿ ಒಂದು ಕಥೆ ಇತ್ತು.ಅದು ತೆನಾಲಿ ರಾಮಕೃಷ್ಣ ನೆಂಬ ಆಸ್ಥಾನ ವಿದೂಷಕ ನೊಬ್ಬ ಹಸಿದ ಬೆಕ್ಕಿಗೆ ಬಿಸಿ ಹಾಲು ಕುಡಿಸುವ ಕಥೆ. ನಮ್ಮ ಮೇಸ್ಟ್ರು ಅದೊಂದು ಅಪ್ರತಿಮ ಹಾಸ್ಯ ಸನ್ನಿವೇಶವೆಂಬಂತೆ ಅದನ್ನು ಬಹಳ ರಸವತ್ತಾಗಿ ಬಣ್ಣಿಸುತಿದ್ದ. ಅದನ್ನು ಕೇಳಿದ ಮಂಜ ಮತ್ತು ರವಿ ತಾವು ಅಂತಹ ಪ್ರಯೋಗ ಮಾಡುವ ಬಗ್ಗೆ ಮಾತಾಡಿಕೊಳ್ಳುತಿದ್ದರು.ಅವರು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ತಂದರು ಎಂದು ಗೊತ್ತಿಲ್ಲ. ಆ ಕಾಲದಲ್ಲಿ ಪಟ್ಯಪುಸ್ತಕ ಸೆಟ್ ಮಾಡಿದ ಮೂರ್ಖ ಬಡ್ಡಿಮಕ್ಕಳಿಗೆ ತೆನಾಲಿ ರಾಮನ ಆ ಕಥೆಯೇ ಸಿಗಬೇಕೆ?. ಇದರಲ್ಲಿ ಹಾಸ್ಯಕ್ಕೆ ಹೊರತಾಗಿ ನಾವು ಗಮನಿಸಬೇಕಾದ ಹಲವು ಅಂಶಗಳಿವೆ.ಒಂದನೆಯದು ಆ ಬೆಕ್ಕಿನ ಹಸಿವು ಮತ್ತು ಮೂಕವೇದನೆ,ಅದರ ಬಗ್ಗೆ ಕಥಾನಾಯಕ ತೋರುವ ಉಡಾಫೆತನ . (ಪೂರ್ಣಚಂದ್ರ ತೇಜಸ್ವಿಯವರ ಯಾವುದೋ ಕೃತಿಯಲ್ಲಿ,ಬಹುಶಃ ಅಣ್ಣನ ನೆನಪು ಇರಬೇಕು,ಅವರು ಮಿತ್ರರೊಂದಿಗೆ ಸೇರಿ ಬೀದಿ ನಾಯನ್ನು ಡಾಬರ್ಮನ್ ಮಾಡಲು ಹೋಗಿ ಅದರ ಬಾಲವನು ಕತ್ತರಿಸಿ ಹಾಕುವ ಸನ್ನಿವೇಶವಿದೆ)
ಎರಡನೆಯದು ಸ್ಪರ್ಧೆಯಲ್ಲಿ ನೇರವಾಗಿ ಬಾಗವಹಿಸಿ ಗೆಲ್ಲಲಾರದೆ ರಾಮಕೃಷ್ಣ ಆಯ್ದು ಕೊಳ್ಳುವ ವಾಮಮಾರ್ಗ. ಇದನ್ನು ನೀತಿಕಥೆ ಎಂದು ಬಿಂಬಿಸುವ ನಮ್ಮ ಶಿಕ್ಷಣತಜ್ಞರ ಮನೋವಿಕೃತಿ!.
ಇದರಲ್ಲಿ ಕೇಶವಪ್ರಸಾದ್ ಗೇ ಕಾಣುವುದು ಕ್ರೌರ್ಯ ಮತ್ತು ಸಂವೇದನಾಶೀಲತೆಯ ಕೊರತೆ. ಈ
ಸನ್ನಿವೇಶವನ್ನ ಕೂಡ ಮಕ್ಕಳಿಗೆ ಕರುಣೆಯನ್ನು,ಪ್ರೀತಿಯನ್ನು,ದಯೆಯನ್ನು ಬೋಧಿಸಲು ಬಳಸಬಹುದಿತ್ತು.
ತೆನಾಲಿ ರಾಮಕೃಷ್ಣ ಕಾಲಿಕಾ ದೇವಿಯಿಂದ ಅಪಾರ ಬುದ್ದಿಶಕ್ತಿಯ (?) ವರ ಪಡೆದ ಮೇಲೆ ಅದನ್ನು ಯಾವುದೇ ಒಳ್ಳೆಯ ರೀತಿಯಲ್ಲಿ ಬಳಸುವುದಿಲ್ಲ. ಬದಲಿಗೆ ರಾಜನನ್ನು ಹೊಗಳುತ್ತಾ, ರಾಜಾಶ್ರಯ ಪಡೆದು ಬಟ್ಟ೦ಗಿತನ ಮೆರೆಯುತ್ತಾನೆ. ಆಸ್ತಾನದಲ್ಲಿ ಒಂದಿಬ್ಬರು ಗೂದಚಾರರನ್ನು ಪತ್ತೆಹಚ್ಚಲು ನೆರವಾಗುತ್ತಾನೆ ಎಂಬುದನ್ನು ಬಿಟ್ಟರೆ ವಿಜಯನಗರ ಸಾಮ್ರಾಜ್ಯ ಕಟ್ಟುವಲ್ಲಿ ಇವರ ಕೊಡುಗೆ ಏನೇನು ಇಲ್ಲಾ. ಬೀರಬಲ್ಲನಾದರೂ ಅಕ್ಬರನಿಗೆ ಆಡಳಿತದಲ್ಲಿ ಒಂದಿಷ್ಟು ಸಹಾಯ ಮಾಡುತಿದ್ದ. ಸೇನಾಧಿಕಾರಿಯಾಗಿಯೂ ಕೆಲಸ ಮಾಡಿದ್ದ. NWFP ಪ್ರಾಂತ್ಯದಲ್ಲಿ ಆದ ಬುಡಕಟ್ಟು ಜನರ ದಂಗೆಯನ್ನ ಹತ್ತಿಕ್ಕಲು ಬೀರಬಲ್ಲನ ನಾಯಕತ್ವದಲ್ಲಿ ಸೇನೆ ಕಳುಹಿಸಲಾಯಿತು. ಆ ಕಾಳಗದಲ್ಲಿ ಆತ ಮರಣವನ್ನಪ್ಪುತ್ತಾನೆ.

ಒಂದು ಸಾಮ್ರಾಜ್ಯದ ಉನ್ನತಿಗೆ ಮೂಲಾಧಾರವೆಂದರೆ ಅದರ ಆರ್ಥಿಕತೆ ಮತ್ತು ಅದರ ಸೇನಾಬಲ. ಆದರೆ ಆ ಕಾಲದ ವರ್ತಕರ ಬಗ್ಗೆಯಾಗಲಿ,ಸಾಧಾರಣ ಸೈನಿಕರ ಬಗ್ಗೆಯಾಗಲಿ ಅಷ್ಟೇನೂ ಸಾಹಿತ್ಯಗಳು ಕಂಡು ಬರುವುದಿಲ್ಲ. ಅವೇನಿದ್ದರು ಶಿಷ್ಟ ಸಮಾಜಕ್ಕೆ ರುಚಿಸದ ಲಾವಣಿಗಳಲ್ಲಿ,ಅಲ್ಲಿ ಇಲ್ಲಿ ಕಂಡು ಬರುವ ವೀರಗಲ್ಲು,ಮಾಸ್ತಿಕಲ್ಲುಗಳಲ್ಲಿ ಮೂಡಿವೆಯಷ್ಟೆ.

ಆದರೆ ರಾಜನ ಆಸ್ತಾನ ಸೇರಿಕೊಂಡು ಅವನನ್ನು ತಮ್ಮ ವಿದ್ವತ್ತಿನಿಂದ ,ತಮ್ಮ ಹೊಗಳುವ ಸಾಮರ್ಥ್ಯದಿಂದ ರಾಜನ (ಇಲ್ಲದ)ಗುಣಗಳ ಪ್ರಶಂಸೆ ಮಾಡಿಕೊಂಡು ಅದರಬಗ್ಗೆ ಕಾವ್ಯಗಳನ್ನು ರಚಿಸುತ್ತಾ,ಅಥವಾ ವ್ಯಾಕರಣದ ಬಗ್ಗೆಯೋ,ಒಗಟುಗಳ ಬಗ್ಗೆಯೋ ಚರ್ಚಿಸುತ್ತಾ ರಾಜನ ಕಾಲಹರಣ ಮಾಡಿ ಅವನಿಂದ ಒಳ್ಳೊಳೆಯ ಉಡುಗೊರೆಗಳನ್ನು ಕಿತ್ತುಕೊಳ್ಳುತಿದ್ದರು. ಅತ್ತ ರಾಜ ಯುದ್ದದಲ್ಲಿ ಸತ್ತ ಸುದ್ದಿ ಕೇಳುತಿದ್ದಂತೆ ಬೆಲೆಬಾಳುವ ವಸ್ತುಗಳನ್ನೆಲ್ಲಾ ಮೂಟೆ ಕಟ್ಟಿಕೊಂಡು ರಾಜದಾನಿಯಿಂದ ಪರಾರಿಯಾಗುವುದು ಮತ್ತು ಇನ್ನೊಬ್ಬ ರಾಜನ ಆಸ್ಥಾನ ಸೇರಿಕೊಳ್ಳುವುದು!. ಆದರೆ ಯಾವುದೇ ಸಾಮ್ರಾಜ್ಯದ ಉನ್ನತಿಯ ಹಿಂದೆ ಇರುವುದು ತಮ್ಮದೇ ಶ್ರಮವೆಂದು ಈ ಬುದ್ದಿಜೀವಿಗಳು ಬಿಮ್ಬಿಸಿಕೊಳ್ಳುತ್ತಾರೆ. ಈ ಜನರ ವಂಶಾವಳಿ ಇಂದಿಗೂ ಜೀವಂತವಾಗಿದೆ. ಇನ್ಸ್ಟಿಟ್ಯೂಟ್ ಆಫ್ ಆ ಸ್ಟಡಿ.., ಈ ಸ್ಟಡಿ...,advanced study...etc ಮುಂತಾಗಿ ಸಂಸ್ತೆಗಳನ್ನು ಸರ್ಕಾರಿ ಹಣಕಾಸಿನ ನೆರವಿನಿಂದ ಕಟ್ಟಿಕೊಂಡು ತಾವುಗಳು ಸರ್ಕಾರಕ್ಕೆ ‘policy making’ ನಲ್ಲಿ ನೆರವಾಗುವ ‘Think Tank’ಗಳೆಂದು ಓಡಾಡುತ್ತಾರೆ. ಸಲಹಾ ಸಮಿತಿಗಳನ್ನು ರಚಿಸುವುದೇ ಯಾವುದೇ ಹಾಗು ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂದು ಸರ್ಕಾರಕ್ಕೆ ಸಲಹೆ ನೀಡಿ ಆ ಸಮಿತಿಗಳ ಸದಸ್ಯರಾಗುತ್ತಾರೆ. ಯಾವುದೇ ಸಮಿತಿಯ ಸಲಹೆಗಳನ್ನೂ ನೋಡಿ,ಅದರಲ್ಲಿ ಯಾವುದೇ ಪರಿಹಾರ ಇರುವುದಿಲ್ಲ.ಉದಾಹರಣೆಗೇ ಆರ್ಥಿಕ ಸಮಿತಿಗಳನ್ನು ನೋಡಿ ..ಅವರು ಕೊಡುವ ಸಲಹೆ ಗಳೆಂದರೆ .....”ಬೆಲೆ ಹೆಚ್ಚಿಸಿ, ಸಬ್ಸಿಡಿ ಗಳನ್ನು ತೆಗೆಯಿರಿ,” ಇತ್ಯಾದಿ. ಈ ಮಾರ್ವಾಡಿ ಮನೋವೃತ್ತಿಯ ಸಲಹೆ ನೀಡಲು ಅವರೇ ಆಗಬೇಕೆ?, ಇಲ್ಲಿ ಅವರಿಗೆ ಕೆಲಸ ಕೊಡದಿದ್ದರೆ ವಿದೇಶಕ್ಕೆ ಹೋಗುತ್ತಾರಂತೆ!
ಒಟ್ಟಾರೆ ನಮ್ಮ ದೇಶದಲ್ಲಿ ಸಮಿತಿಗಳು,ಕಮಿಟಿಗಳು,ತಜ್ಞ ಸಂಸ್ತೆಗಳು ರಿಟೈರ್ಡ್ ನಾಯಿಗಳ ಆಶ್ರಯ ಧಾಮಗಳಾಗಿ ಪರಿಣಮಿಸಿವೆ. ಇವರ ಸಲಹೆಗಳನ್ನು ತೆಗೆದುಕೊಳ್ಳದೆ ಪುಡಾರಿಗಳು ದೇಶವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿರುವುದು ಜನಸಾಮಾನ್ಯನ ಅದೃಷ್ಟವೆಂದೇ ಹೇಳಬಹುದು....,

ಅಂತೂ ತೆನಾಲಿ ರಾಮನ ಪಳೆಯುಳಿಕೆಗಳು ಈಗಲು ನಮ್ಮ ನಡುವೆ ಇರುವುದು ನಮ್ಮ ಪಟ್ಯ ಪುಸ್ತಕಗಳನ್ನೂ ಸೆಟ್ ಮಾಡುವುದು,ಪೇಪೆರ್ ವ್ಯಾಲುವೇಷನ್ ಮಾಡುವುದು ನಮ್ಮ ದುರದೃಷ್ಟ

No comments: