Monday, August 24, 2009

ಗುರು ಹಿರಿಯರ ಪುಕ್ಸಟ್ಟೆ ಸಲಹೆಗಳು


ಭಾನುವಾರ ವಯಸ್ಸಾದ ಪರಿಚಿತರೊಬ್ಬರನ್ನು ನೋಡಲು ಹೋಗಿದ್ದೆ. ಅವರು ಅವರ ಮಂಡಿನೋವಿನ ಗೋಳಾಟ ಎಲ್ಲ ಮುಗಿದ ಮೇಲೆ ನನಗೆ ಬುದ್ದಿ ಹೇಳುತ್ತಾ ,....ಹಾಗೆಲ್ಲ ತಡ ಮಾಡಬೇಡ , ಯಾವ ಯಾವ ಟೈಮ್ ಗೆ ಏನೇನು ಆಗಬೇಕು ಅದೆಲ್ಲ ಆಗಬೇಕು. ಎಂದು ತಲೆ ತಿನ್ನತೊಡಗಿದರು ."ಲೋ ....ಮೊದಲು ನಿನ್ನ ಖಾಯಿಲೆಗಳನ್ನೂ ವಾಸಿಮಾಡಿಕೊಳ್ಳುವ ಬಗ್ಗೆ ಯೋಚಿಸು ,ಆಮೇಲೆ ನನಗೆ ಬುದ್ಧಿ ಹೇಳಲು ಬಾ,ಎಂದು ಮನಸ್ಸಿನಲ್ಲಿ ಹೇಳಿಕೊಂಡೆ. ಇವರಿಗೆಲ್ಲಾ ಸೇವೆ ಮಾಡಲು ಜನ ಬೇಕು. ಅದಕ್ಕೆ ನಾವು ಮದುವೆ,ಮಕ್ಕಳು ಮಾಡಿಕೊಳ್ಳಬೇಕು . ಗುರುತನದ, ಹಿರಿತನದ ಹೆಸರಲ್ಲಿ ನನ್ನ ಹತ್ತಿರ ಬಿಟ್ಟಿ ಚಾಕರಿ ಮಾಡಿಸಿಕೊಂಡಿರುವ ಹಿರಿ ಬೇವರ್ಸಿಗಳ ಪಟ್ಟಿಯೇ ನನ್ನ ಬಳಿ ಇದೆ.( ತಪ್ಪು ತಿಳ್ಕೊಬೇಡಿ,ನಾನು ಇಲ್ಲಿ ಗೆಳೆಯರ ಮತ್ತು ಸಂಬಂಧಿಗಳ ಬಗ್ಗೆ ಹೇಳುತಿಲ್ಲ) ಭಾರತದಲ್ಲಿ ಶಿಕ್ಷಕರು, ಅಧಿಕಾರಿಗಳು ಹಾಗೆ ಬಿಟ್ಟಿ ಕೆಲಸ ಮಾಡಿಸಿಕೊಳ್ಳುವುದರಲ್ಲಿ ನಿಷ್ಣಾತರು .ಇವರಿಗೆ ಜೀತಕ್ಕೆ ಜನ ಬೇಕು.ಅದಕ್ಕಾಗಿ ಜನಗಳಿಗೆ ಏನೇನೋ ಉಪದೇಶ ಮಾಡುತ್ತಾರೆ.ಏನೇನೂ ನೆಪದಲ್ಲಿ ನಮ್ಮೆಲ್ಲರಿಂದ ನಮಸ್ಕಾರ ಹೊಡೆಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ. ನಾವು ಹಿಂದೆ ಎಂಥಹ ತ್ಯಾಗ, ಬಲಿದಾನ ಮಾಡಿದ್ದೆವು ಎಂದೆಲ್ಲ ರೈಲು ಬಿಡುತ್ತಾರೆ. ಅಸಲಿಗೆ ಹಾಗೆ ತ್ಯಾಗ ಮಾಡಿದವರು ಹಾಗೆ ಹೇಳಿ ಕೊಳ್ಳುವುದಿಲ್ಲ .ಹಾಗೆ ಹೇಳಿಕೊಳುವ ಹೆಚ್ಚಿನವರು ಜೀವಮಾನವಿಡಿ ಓತ್ಲಾ ಹೊಡೆಯುತ್ತಲೇ ತಲೆ ಕೂದಲು ಬೆಳ್ಳಗೆ ಮಾಡಿಕೊಂಡಿರುತ್ತಾರೆ.


ಕೆಲವರಿಗೆ ಇದರಿಂದ ಸಿಟ್ಟು ಬಂದರೂ 'ನಾವು ಮುಂದಿನ ಪೀಳಿಗೆಯಿಂದ ಕೆಲಸ ಮಾಡಿಸಿಕೊಳ್ಳಬಹುದು ಎಂದು ಸಮಾಧಾನ ತಾಳುತ್ತಾರೆ.ಇದೊಂದು ಮನೋವಿಕೃತಿ. ಅನ್ಯಾಯ ಆದಾಗ ಅದನ್ನು ಮಾಡಿದವರ ಮೇಲೆ ಲೆಕ್ಕ ಚುಕ್ತ ಮಾಡಬೇಕೆ ಹೊರತು ಆ ನೋವನ್ನು ಇನ್ನೊಬ್ಬನಿಗೆ ಶಿಫ್ಟ್ ಮಾಡಬಾರದು,ಸಾದ್ಯವಾದರೆ ಆ ನೋವನ್ನು ಸಹಿಸಿ ಜೀರ್ಣಿಸಿಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಇಂತಹದೇ ಕೆಲವು ವಿಕೃತ ಅಭ್ಯಾಸಗಳು ಅನಾದಿ ಕಾಲದಿಂದಲೂ ಆಚರಿಸಲ್ಪಟ್ಟು ,ಇಂದು ಸಂಪ್ರದಾಯ ಎಂಬ ಹೆಸರು ಪಡೆದುಕೊಂಡಿದೆ. ಆದುದರಿಂದ ನಾವು ಅದನ್ನು ಪ್ರಶ್ನಿಸುವಂತಿಲ್ಲ . "ಅಪ್ಪ ಹಾಕಿದ ಮರಕ್ಕೆ ನೇಣು ಹಾಕಿಕೊಳ್ಳುವುದೇ ನಮ್ಮ ಕರ್ತವ್ಯ.ಇದಕ್ಕೆ ಅವರ ಆಶಿರ್ವಾದ ಹಾರೈಕೆ ಕೂಡ ಇದೆ .(ಹಗ್ಗ ಕಡಿದುಕೊಳ್ಳದಿರಲಿ ಎಂದು?)

ಎಲ್ಲರೂ ನಿನ್ನ ಹಾಗೆ ಯೋಚನೆ ಮಾಡಿದ್ದರೆ ಈ ಪ್ರಪಂಚ ಇರುತ್ತಿರಲಿಲ್ಲ ಎಂದು ಹೇಳುತ್ತಾರೆ. ಅದರ ಅರ್ಥ ಅವರಿಗೆ ಮಿಂಚಲು ಸಾಧ್ಯವಾಗುವಂಥಹ ಪ್ರಪಂಚ ಇರುತ್ತಿರಲ್ಲಿಲ್ಲ ಎಂದು !.ಇದು ಒಂದು ಕಾಮನ್ ಡೈಲಾಗ್. ಈ ಪ್ರಪಂಚ ಉಳಿಸುತ್ತೆನೆಂದು ನಾವೇನು ಗುತ್ತಿಗೆ ಹಿಡಿದಿದ್ದೆವೆಯೇ.? ಅದನ್ನು ಗುತ್ತಿಗೆ ಹಿಡಿದವರಿಗೆ ಚೀಪ್ ಲೇಬರ್ ಬೇಕು. ಅದಕ್ಕಾಗಿಯೇ ಇಷ್ಟೆಲ್ಲಾ ರಾಗ.

ಇಷ್ಟೆಲ್ಲಾ ಆಮಿಶವೋಡಿ ನಿಮಗೆ ಸಂಸಾರ ಹೂಡಲು ಉತ್ತೇಜಿಸುವ ಇವರು ನಿಮ್ಮ ಜೀವನವನ್ನು ಸುಗಮಗೊಳಿಸಲು ಏನಾದರು ಪ್ರಯತ್ನ ಪಡುತ್ತಾರೆಯೇ?. ಹಾಗಿದ್ದರೆ ನೀವು ರೇಶನ್ ಕಾರ್ಡ್ ಪಡೆಯಲು,ಪಾಸ್ಪೋರ್ಟ್ ಪಡೆಯಲು ಇಷ್ಟೆಲ್ಲಾ ತೊಂದರೆಯಾಗುತ್ತಿತ್ತೆ?, ಮಾನವತೆಯೇ ಎಲ್ಲದಕ್ಕಿಂತ ಮುಖ್ಯ ಎಂದು ಹೇಳುತ್ತಾ ನಿಮ್ಮನ್ನು ಸಂಸಾರ ಸಾಗರಕ್ಕೆ ತಳ್ಳಿ ನಂತರ ನೀತಿ, ನಿಯಮ ಗಳನ್ನೆಲ್ಲಾ ಉಲ್ಲೇಖಿಸಿ ಮಾನಾವೀಯತೆ ಮೆರೆಯುವಲ್ಲಿ ತಮ್ಮ ಅಸಹಾಯಕತೆಯನ್ನು ದೊಡ್ಡ ಮಟ್ಟದಲ್ಲಿಯೇ ಪ್ರದರ್ಶಿಸುತ್ತಾರೆ. ನಾಗರೀಕ ಪ್ರಪಂಚದಲ್ಲಿ ಮಾನವೀಯತೆ ಮುಖ್ಯ ಎಂದು ಎಂದು ಹೇಳುವ ಮಹಾಶಯರೆಲ್ಲಾ ಕೆಲಸ ಮಾಡಿಕೊಡುವ ಅಗತ್ಯ ಬಂದಾಗೆಲ್ಲಾ ನೀತಿ,ನಿಯಮ,ಕಾನೂನು ಎಂದೆಲ್ಲ ಹೇಳಿ ಜಾರಿಕೊಳುತ್ತಾರೆ. ಯಾವಾಗಲು ಈ ದೇಶದ ಧರ್ಮ,ಸಂಸ್ಕೃತಿ ಹೀಗಿದೆ. ಅದರಂತೆಯೇ ನಡೆಯಬೇಕು ಈ ಎನ್ನುತ್ತಾರೆ ವೇದಿಕೆಯ ಮೇಲೆ. ಈ ಸಂಸ್ಕೃತಿಯನ್ನೇ ಪಾಲಿಸುತ್ತೇವೆ ಎನ್ನಲು ನಾವೇನು ಅಪ್ಲಿಕೇಶನ್ ಹಾಕಿ ಈ ದೇಶದಲ್ಲಿ ಹುಟ್ಟಿದ್ದೇವೆಯೇ?

ಹಿರಿಯರ ಕಥೆ ಇಷ್ಟಾದರೆ ಗುರುಗಳ ಕಥೆ ಇನ್ನೊಂದು ಬಾಗದಲ್ಲಿ ಹೇಳುತ್ತೇನೆ. ನಮ್ಮ ದೇಶದಲ್ಲಿ ಇಲ್ಲಿಯವರೆಗೆ ಸಾವಿರಾರು ಗುರುಗಳು ಸಂದು ಹೋಗಿದ್ದಾರೆ .ಇವ್ರು ತೋರಿಸಿದ ಸುಂದರ ಕನಸುಗಳು ಸಾವಿರ ವರ್ಷವಾದರೂ ನನಸಾಗಿಲ್ಲ. ಇನ್ನು ಇವರು ನಮಗೆ ಕೊಟ್ಟ ಕೊಡುಗೆ ಎಷ್ಟಿರಬಹುದು ?

No comments: