ಇಂದು ಆಸ್ತಿತ್ವದಲ್ಲಿರುವ ಸಾಹಿತ್ಯಪ್ರಕಾರಗಳೆಲ್ಲವೂ ನಿಂತ ನೀರಾಗಿವೆ. ಅನುದಾನದ ಆಸೆಗೋ, ನೆರೆಹೊರೆಯವರ, ಸಂಬಂದಿಕರ ದಾಕ್ಷಿಣ್ಯಕ್ಕೋ ಅವರುಗಳ ಜೊತೆ ಏಗಬೇಕಾದ ಅನಿವಾರ್ಯತೆಯಿಂದಲೋ ಅಥವಾ ಪ್ರಕಾಶಕರನ್ನೋ/ಮುದ್ರಕರನ್ನೋ ಮೆಚ್ಚಿಸಬೇಕಾದ ಅನಿವಾರ್ಯತೆಯಿಂದಲೋ ಇಂದಿನ ಸಾಹಿತ್ಯ ತನ್ನ ಅಭಿವ್ಯಕ್ತಿ ಸ್ವತಂತ್ರವನ್ನೇ ಗಿರವಿಇಟ್ಟಿದೆ.
ತನಗನ್ನಿಸಿದುದನ್ನು ನಿರ್ಭಿಡೆಯಿಂದ ಬರೆಯುವ ಅಬ್ಯಾಸವನ್ನು ಜನ ಬಿಟ್ಟುಬಿಟ್ಟಿದ್ದಾರೆ. ತಮಗನ್ನಿಸುವುದನ್ನು ಮುಕ್ತವಾಗಿ ಹೇಳುವುದು ನಿರ್ಲಜ್ಜತನದ ಲಕ್ಷಣ ಎಂಬ ನಂಬಿಕೆಯನ್ನು ಇಂದಿನ ಆಷಾಡಭೂತಿ ಶಿಕ್ಷಣ ವ್ಯವಸ್ಥೆ ನಮ್ಮ ತಲೆಗೆ ತುಂಬುವಲ್ಲಿ ಯಶಸ್ವಿಯಾಗಿದೆ. ನಮ್ಮ ವಿಚಾರಗಳಿಗೆ ನಾವೇ ಪರಕೀಯರಾಗಿದ್ದೀವೆ.
ಈಗ ನಮ್ಮ ಮುಂದಿರುವುದು ವೃತ್ತಿಪರ ಸಾಹಿತ್ಯ. ಮಾರಟಕ್ಕೆ ಅರ್ಹವಾದದನ್ನು ಮಾತ್ರ ಬರೆಯುವುದು ಈಗಿನ ಟ್ರೆಂಡ್.
ಏನನ್ನಾದರೂ ಅಭಿವ್ಯಕ್ತಗೊಳಿಸಬೇಕು, ಬರೆಯಬೇಕು ಎಂದು ಪ್ರಾಮಾಣಿಕವಾಗಿ ಅನ್ನಿಸಿದಾಗ ಮಾತ್ರ ಹಿಂದಿನವರು ಬರೆಯುತ್ತಿದ್ದರು. ಆದರೆ ಈಗ ಹಲವರು ವರುಷ ಬೇರೆಯವರ ಬರಹಗಳನ್ನು ಓದಿ ಶಬ್ದ, ಅರ್ಥಗಳನ್ನೂ ಪೋಣಿಸಿ ಸಾಹಿತ್ಯ ತಯಾರಿಸುವುದು ಇಂದಿನ ಕ್ರಮ.
ಈ ಎಲ್ಲ ಕಾರಣಗಳಿಂದಾಗಿ ಪರ್ಯಾಯ ಸಾಹಿತ್ಯ ಚಳುವಳಿ ಆರಂಭವಾಗಿದೆ. ವೃತ್ತಿಪರರಲ್ಲದವರಿಗೆ ಬರೆಯಬೇಕು ಎಂದು ಪ್ರಾಮಾಣಿಕವಾಗಿ ಎನಿಸಿದಾಗ ಬರೆದ ಬರಹಗಳು ಮಾತ್ರ ಆತ್ಮ ವನ್ನು ಹೊಂದಿರುತ್ತವೆ. ಇಲ್ಲಿ ನಮ್ಮನ್ನು ತಿದ್ದಲು ಪ್ರಯತ್ನಿಸುವವರನ್ನು ,ವಿಮರ್ಶಕರನ್ನು ದೂರ ಇಟ್ಟಷ್ಟೂ ಒಳ್ಳೆಯದು. ಅದಕ್ಕೆ ಈ ಬ್ಲಾಗಿಗೆ ನವ್ಯಾಂತ ಎಂಬ ಹೆಸರಿಡಲಾಗಿದೆ.
ಹೀಗೆ ಆಗಲು ಕಾರಣ ಏನಿರಬಹುದು ಎಂದು ನಾನು ಈ ಮೊದಲು ಕಂಡುಹಿಡಿಯಲು ಪ್ರಯತ್ನಿಸಿದ್ದೇನೆ.
ಈ ಕಾರಣಗಳನ್ನು ಸ್ಥೂಲವಾಗಿ ವಿಂಗಡಿಸಿದಾಗ ಸಮಾಜದ,ಸಾಹಿತ್ಯದ ಅವನತಿಗೆ ಕಾರಣವಾಗಿರುವ ಮೂರು ಅಂಶಗಳು ಗಮನಕ್ಕೆ ಬಂತು .
ಸಂಪ್ರದಾಯ, ಸಂಸ್ಕೃತಿ ,ಧರ್ಮ ಇವು ಆ ಸಾಮಾಜಿಕ ಅನಿಷ್ಟತ್ರಯಗಳು.
ಇವು ಹೇಗೆ ಮಾನವನ ವಿಕಾಸವನ್ನು ಕುಂಟಿತಗೊಳಿಸುತ್ತದೆ?, ಹೇಗೆ ಇವು ಮಾನವನ ಪ್ರಗತಿಯ ಪಥದಲ್ಲಿ ಅಡ್ಡಗೋಡೆಯಾಗಿವೆ ಎಂಬುದನ್ನು ಮುಂದಿನ ಅದ್ಯಾಯದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಸೂಕ್ಷ್ಮವಾಗಿ ನೋಡಿದರೆ ಈ ಮೂರರಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲ. ಆದುದರಿಂದ ಇನ್ನು ಮುಂದೆ ಇವನ್ನೆಲ್ಲಾ ಸೇರಿಸಿ ಅನಿಷ್ಟತ್ರಯಗಳು ಎಂದು ಕರೆಯುತ್ತೇನೆ.
ಇವುಗಳೆಲ್ಲಾ ನಮ್ಮವು,ನಮ್ಮ ಸ್ವಂತದ್ದು, ನಮ್ಮ ಹಿರಿಯರದ್ದು ಎಂಬ ಮೂಡನಂಬಿಕೆ ಹಲವರಲ್ಲಿದೆ. ಆದರೆ ಇವುಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪಾಲುದಾರರಗಿದ್ದವರು ಕೆಲವುಮಂದಿ ಪಟ್ಟಭದ್ರ ಹಿತಾಸಕ್ತಿ ಹೊದಿದ್ದವರು ಮಾತ್ರ. ಆ ಹಿರಿಯರಿಗೂ ಈಗ ಇರುವ ಹೆಚ್ಚಿನವರಿಗೂ ಯಾವುದೇ ಸಂಬಂಧ ಇಲ್ಲ. ಆದರು 'ನಮ್ಮ ಹಿರಿಯರು ನೆಟ್ಟಿದ್ದು ''ನಮ್ಮ ಹಿರಿಯರು ನೆಟ್ಟಿದ್ದು ' ಎಂದುಕೊಂಡು ರಸ್ತೆಬದಿಯ ಆಲದಮರಕ್ಕೆ ಜೋತುಬೀಳುತ್ತೇವೆ. ಅಸಲಿಗೆ ಆ ಮರಕ್ಕೂ ಇವರ ಹಿರಿಯರಿಗೂ ಯಾವುದೇ ಸಂಬಂಧ ಇರುವುದಿಲ್ಲ.
ಯಾರಾದರು ಸ್ವಲ್ಪ ವಿಶೇಷ ನಡವಳಿಕೆ ತೋರಿದರೆ "ಅಯ್ಯೋ ನಮ್ಮ ಸಂಸ್ಕೃತಿ ಹಾಳಾಗಿ ಹೋಯಿತಲ್ಲ "ಎಂದು ಕೆಲವರು ಲೊಚಗುಟ್ಟುತ್ತಾರೆ . ಅಯ್ಯೋ "ನಮ್ಮ " ಎಂದು ಅವರು ಹೇಳುವಾಗ ಅವು ನಮ್ಮನ್ನು ಅಪ್ಪಿರುವುದು ಒಂದು ಬಾವನಾತ್ಮಕ ಸಂಬಂಧವಾಗಿ ನಮಗೆ ತೋರಬಹುದು. ಅವರು ನನ್ನನ್ನು ಆವರಲ್ಲಿ ಒಬ್ಬನನ್ನಾಗಿ ಪರಿಗಣಿಸುತಿದ್ದಾರೆ ಎಂಬುದು ನಮಗೆ ಅವರಲ್ಲಿ ಗೌರವ ಮೂಡಿಸಬಹುದು. ಆದರೆ ಅವರ ಈ ಕ್ರಿಯೆಯ ಹಿಂದೆ ನಿನ್ನ ಸ್ವಂತಿಕೆಯನ್ನು,ವ್ಯಕ್ತಿತ್ವವನ್ನು ಬದಲಿಸುವ ಹುನ್ನಾರ ಇದೆ ಎಂಬುದನ್ನೂ ಅರ್ಥ ಮಾಡಿಕೊಳ್ಳುವ ಮೊದಲೇ ನಾವು ಅವರಂತೆಯೇ ಆಗಿ ನಾವುಗಳೂ ಕೂಡ ಈ ಅನಿಷ್ಟತ್ರಯಗಳ ವಕ್ತಾರರಾಗಿಬಿಡುತ್ತೇವೆ. ಆಮೇಲೆ ನಮ್ಮ ವಿವೇಚನೆ ಜಟಕಾ ಕುದುರೆಯಂತೆ ಆಚೆ ಈಚೆ ನೋಡದೇ ಒಂದೇ ದಾರಿಯಲ್ಲಿ ಸಾಗುತ್ತದೆ. ಆಗ ಸಮಾಜದಲ್ಲಿ ಹಿರಿಯರು ಎನ್ನಿಸಿಕೊಳುವವರಿಗೆ ನಿಮ್ಮಮೇಲೆ ಸವಾರಿ ಮಾಡಲು ಸುಲಭವಾಗುತ್ತದೆ.
ಈ ಕಾನೂನು, ನೀತಿ ನಿಯಮ ರಚಿಸಿದವರೆಲ್ಲರೂ ಸವಾರಿ ಮಾಡಲು ಕುದುರೆ ಹುಡುಕುತಿದ್ದವರೆ. ಶಕ್ತಿಯಿಂದ ಕೆಲಸ ಆಗದಿದ್ದಾಗ ದೇವರ ಭಯ ಬಿತ್ತಿ ,ಅದೂ ಆಗದಿದ್ದಾಗ ಪುನರ್ಜನ್ಮದ ನಂಬಿಕೆ ಹುಟ್ಟಿಸಿ , ಆದೂ ಆಗದಿದ್ದಾಗ ನಾಳೆ ಒಳ್ಳೆಯದಾಗುತ್ತದೆ ಎಂಬ ಬಣ್ಣಬಣ್ಣದ ಕಥೆ ಲಾವಣಿ ,ಶ್ಲೋಕ ಗಳನ್ನೂ ಕಟ್ಟಿ ಅವರ ಗದ್ದೆಗಳನ್ನು ಉಳಲು ,ಯುದ್ದ ಮಾಡಲು, ಅರಮನೆ,ದೇಗುಲ ಕಟ್ಟಲು ಬಳಸಿಕೊಂಡಿದ್ದು ಬರೀ ಇತಿಹಾಸವಷ್ಟೇ ಅಲ್ಲ ,ಇಂದಿನ ವಸ್ತುಸ್ಥಿತಿ ಕೂಡ . ಒಬ್ಬ ರಾಜಕುಮಾರ ಸ್ವಲ್ಪ ದಿನ ಅಜ್ಞಾತನಾಗಿ ಬದುಕಿ ನಂತರ ಜನರ ನಡುವೆ ಪ್ರತ್ಯಕ್ಷನಾಗಿ ಅವರಿಗೆ ತಿಳಿಯದ ಹೊಸ ಲೋಕದ ಬಗ್ಗೆ ಹೇಳುತ್ತಾನೆ. ಜನ ಸುಲಭವಾಗಿ ಕುರಿಗಳಗುತ್ತಾರೆ.
ಹೊಸ ಸಾಮ್ರಾಜ್ಯಗಳು ಉದ್ಭವವಾಗುತ್ತದೆ. ಹೊಸ ಹೆಣಗಳು ಬೀಳುತ್ತವೆ.
ಯಾವುದು ಸರಿ ,ಯಾವುದು ತಪ್ಪು ಎಂದು ತಿಳಿಯಲು ವಿವೇಚನೆಯ ಸೂರ್ಯ ರಶ್ಮಿ ಸಾಕು. ಅದಕ್ಕೆ ಧರ್ಮ ,ಸಂಸ್ಕೃತಿ ಇತ್ಯಾದಿ ದೀಪಗಳ ಅವಶ್ಯಕತೆ ಇರುವುದಿಲ್ಲ.
(ಮುಂದುವರಿಯುತ್ತದೆ)
No comments:
Post a Comment