Wednesday, October 20, 2010

ದೇವಾಲಯಗಳಿಂದ ದೂರವಿರಿ

ಇತ್ತೀಚಿನ ದಿನಗಳಲ್ಲಿ ದೇವರ ಸಾಕ್ಷಾತ್ಕಾರ (?) ಪಡೆದಿರುವ ಸಂತರಿಗೆಲ್ಲ ಒಂದು ಗೀಳು ಆರಂಭವಾಗಿದೆ. ಅದೇನೆಂದರೆ ದೇವಸ್ಥಾನ ಕಟ್ಟಿಸುವ ಗೀಳು!
ದೇವರು ಗುಡಿಯೊಳಗಿಲ್ಲ....
ದೇವರು ನಮ್ಮ ಒಳಗೇ ಇದ್ದಾನೆ...
ಸ್ತಾವರಕ್ಕಳಿವುಂಟು...ಜಂಗಮಕ್ಕಳಿವಿಲ್ಲ....
ಇತ್ಯಾದಿ ಪ್ರವಚನ ನೀಡಿದ ಮೇಲೆ "ಮಹಾಜನಗಳೇ, ನಾವು ದೇವಾಲಯವೊಂದನ್ನು ನಿರ್ಮಿಸುತಿದ್ದೇವೆ.ಅದಕ್ಕೆ ನಿಮ್ಮ ತನು ಮನ ಧನ ಸಹಕಾರ ಬೇಕು" ಎಂದೆನ್ನುತ್ತಾರೆ. "ಏನು ಕೇಶವಪ್ರಸಾದ್, ನಿಮ್ಮ ಫ್ರೆಂಡ್ಸ್ಗಳ ಹತ್ತಿರ ಕಲೆಕ್ಟ್ ಮಾಡಿ, ದೇವರ ಕೆಲಸ...ಸೇರಿ ಮಾಡೋಣ"...ಎನ್ನುತ್ತಾರೆ.
ಎಲಾ,ಇವನಾ....ಇಷ್ಟು ಹೊತ್ತು ಬೇರೆಯದನ್ನೇ ಹೇಳಿದ್ದನಲ್ಲ ಎಂಬ ಅನುಮಾನ ನಿಮಗೆ ಬಂದರೆ  ಅದಕ್ಕೆ ಇನ್ನೊಂದು ಸಮಜಾಯಿಷಿ ಕೂಡಾ ಅವರ ಬಳಿ ತಯಾರಿದೆ.ಅದು ಈ ಕೆಳಕಂಡಂತಿದೆ.
"ನಾವು ದೇವಾಲಯಕ್ಕೆ ಏಕೆ ಹೋಗಬೇಕು? ಏಕೆಂದರೆ ದೇವರು ಅಲ್ಲಿ ಮಾತ್ರ ಇದ್ದಾನೆ ಎಂಬ ಕಾರಣಕ್ಕಲ್ಲ. ಅಲ್ಲಿ ಹಲವಾರು ಜನ ಭಕ್ತಿಯ ಪವಿತ್ರ ಭಾವನೆಗಳನ್ನು ಹೊತ್ತು ಬರುತ್ತಾರೆ. ಅವರ ಪಾಸಿಟಿವ್ ವೈಬ್ರೇಶನ್ ನಿಂದ ಆ ಪರಿಸರ ಬಹಳ ಚೇತೋಹಾರಿ ತರಂಗಗಳಿಂದ ತುಂಬಿ ತುಳುಕುತ್ತಿರುತ್ತವೆ. ಆದುದರಿಂದ ದೇವಾಲಯಕ್ಕೆಹೋದರೆ ನಿಮ್ಮ ಮನಸ್ಸಿನ ದುಃಖ ದುಮ್ಮಾನಗಳು ಕಡಿಮೆಯಾಗಿ ಮನಸು ಗೆಲುವಾಗುತ್ತದೆ.ನೀವು ದೇವರನ್ನು ನಂಬದಿದ್ದರೂ ಪರವಾಗಿಲ್ಲ. ದೇವಸ್ಥಾನಕ್ಕೆ ಬೇಟಿಕೊಟ್ಟು ನೋಡಿ. ನಿಮ್ಮ ಮನಸ್ಸು ಪ್ರಶಾಂತವಾಗುತ್ತದೆ."
.
        ಆಹಾ, ಎಂತಹ ಸುಂದರ ಪರಿಕಲ್ಪನೆ. ಈಗ ಒಂದು ನಿಮಿಷ ವಾಸ್ತವ ಜಗತ್ತಿಗೆ ಬನ್ನಿ. ನಿಮ್ಮನ್ನೇ ತೆಗೆದುಕೊಳ್ಳಿ. ನೀವು ದೇವಸ್ತಾನಕ್ಕೆ ಏಕೆ ಹೋಗುತ್ತೀರಾ? ಎಂಥಹ ಸಮಯದಲ್ಲಿ ದೇವಾಲಯಗಳು ನಿಮ್ಮನ್ನು ಸೆಳೆಯುತ್ತದೆ?
ಹೆಚ್ಚಿನವರು ದೇವಾಲಯಕ್ಕೆ ಹೋಗುವುದು "ಸಂಕಟ ಬಂದಾಗ ವೆಂಕಟ ರಮಣ" ಎಂಬ ಕಾರಣಕ್ಕೆ.
ಚಿಂತೆ,ದುಃಖ,ಬೇಸರ, ಅಗಲಿಕೆ, ವಿರಹ, ನಷ್ಟ,ಸೋಲು ಮುಂತಾದ ಸಮಸ್ಯೆ ಎದುರಾದಾಗ ಅಥವಾ ಅವು ಮನಸ್ಸಿನ ಯಾವುದೋ ಒಂದು ಭಾಗದಲ್ಲಿ ಇಣುಕಿದಾಗ ನಾವು ದೇವರನ್ನ ನೆನೆಸಿಕೊಳ್ಳುತ್ತೇವೆ. ಮನೆಯಲ್ಲಿ ಪ್ರಾರ್ಥನೆ ಮಾಡುವುದು ಸಾಲದು,ಅಲ್ಲಿಂದ ದೇವರ 'ನೆಟ್ವರ್ಕ್' ಸಿಗುವುದಿಲ್ಲ ಎನ್ನಿಸಿದಾಗ ದೇವರ ಗುಡಿಗೆ ಹೋಗುತ್ತೇವೆ.ಲೋಕಲ್ ದೇವರು ವೀಕ್ ಎನಿಸಿದಾಗ ಸ್ಟ್ರಾಂಗ್ ಎಂದು ನಾವು ಭಾವಿಸಿರುವ ಪುರಾತನ ತೀರ್ಥಕ್ಷೇತ್ರಗಳಿಗೋ,ಪವಾಡಗಳು ನಡೆಯುತ್ತವೆ ಎಂದು ನಂಬಲಾಗಿರುವ ಸ್ಥಳಕ್ಕೋ ಹೋಗುತ್ತೇವೆ. ನಮ್ಮನ್ನು ರಕ್ಷಿಸುವ ಆ ಸರ್ವಶಕ್ತ  ದೇವರುಗಳು ನಮ್ಮ ಹತ್ತಿರ ಇರುತ್ತಾರೋ?...... ಅದು ಇಲ್ಲ!. ಸಾಬರುಗಳ ಭಯದಿಂದ ಬೆಟ್ಟ ಗುಡ್ದಗಳಲ್ಲಿ ಗಿರಿ ಕಂದರಗಳಲ್ಲಿ ಹೋಗಿ ನೆಲೆಸಿರುತ್ತಾರೆ. ಅಲ್ಲಿ ಹೋಗುವುದೇ ಒಂದು ಸಾಹಸ.
ಈಗ ಹೇಳಿ ದೇವಸ್ಥಾನಕ್ಕೆ ಹೋಗುವುದರಿಂದ ಪಾಸಿಟಿವ್ ಎನರ್ಜಿ ಸಿಗುತ್ತಾ? ....
ಭಕ್ತರು ದೇವಸ್ತಾನಕ್ಕೆ ತರುವುದು ದುಃಖ,ದಣಿವು,ವಿರಹ,ಭಯ,ಅಭದ್ರತೆ,ಪರಾವಲಂಬನೆ,ಕೋರಿಕೆ,ಬೇಡಿಕೆ,ದೈನ್ಯತೆ,ವ್ಯಾಕುಲತೆ,ಮಾನಸಿಕ ಪರಾವಲಂಬತೆ ಇತ್ಯಾದಿಗಳನ್ನು.
ಅಲ್ಲಿ ಯಾವ ತರಂಗ ಇರುತ್ತೆ ಸ್ವಾಮೀ?,ನೀವೇ ಗಾಳಿಯಲ್ಲಿ ಆಲಿಸಿ...ದೇವರೇ ಅದು ಕೊಡು,ಇದು ಕೊಡು,ಕಾಪಾಡು ಇತ್ಯಾದಿ ಇತ್ಯಾದಿ ಪ್ರಲಾಪಗಳು!. ದೇವರಿಗೆ ಧನ್ಯವಾದ ಹೇಳಲು ಬರುವವರು ಬಹಳ ಕಡಿಮೆ. ಹರಕೆ ತೀರಿಸಲು ಬರುವವರಿಗಿಂತ ಹರಕೆ ಹೋರಲು ಬರೋರೆ ಹೆಚ್ಚು. ಅಲ್ಲಿ ಹೆಚ್ಚಾಗಿ ಹೋಗುವವರ ಮನಸ್ಸಿನಲ್ಲಿ "ಕೊಡು}}}},ಕೊಡು}}}, ಬೇಕು}}, ಬೇಕು}}} ,ಕಾಪಾಡು}},ಕಾಪಾಡು}}} .. ಇತ್ಯಾದಿ ತರಂಗಗಳು ಸೇರಿಕೊಂಡು ಇನ್ನಷ್ಟು ಭಯಭೀತರನ್ನಾಗಿಯೋ, ಲೋಭಿಗಳನ್ನಾಗಿಯೋ ಮಾಡುತ್ತದೆ.ಮನಸ್ಸಿಗೆ ನೆಮ್ಮದಿ ಸಿಗುತ್ತೆ ಎನ್ನುವುದು ಒಂದು ರೀತಿಯ ತಾತ್ಕಾಲಿಕ ಅನುಭವ. ಆದರೆ ಮನಸ್ಸಿನಲ್ಲಿ ಸುಪ್ತವಾಗಿ ಉಳಿಯುವಂತಹ ಹಲವು ನೆಗೆಟಿವ್ ತರಂಗಗಳು ನಿಮ್ಮಲ್ಲಿ ಸೇರಿಕೊಳ್ಳುತ್ತವೆ.ಕೆಲವು ವಿದ್ವಂಸಕ ಕೋಮುಗಳು ವಾರದ ಪ್ರಾರ್ಥನೆಯ ನಂತರ ಗಲಭೆ ಆರಂಭಿಸುವುದು ಅದೇ ಕಾರಣದಿಂದ. ಈ ಪ್ರಾರ್ಥನೆ ಮುಂತಾದವು ಸುಪ್ತ ಮನಸ್ಸಿನಲ್ಲಿ ಕ್ಷೋಭೆಯನ್ನು,ಆತಂಕವನ್ನು ಹೆಚ್ಚಿಸುತ್ತವೆ.ಧರ್ಮಗಳು ಭಯೋತ್ಪಾದನೆಯನ್ನು ಸೃಷ್ಟಿ ಮಾಡುವುದಕ್ಕೆ ಅದೇ ಮುಖ್ಯ ಕಾರಣ.ಪ್ರಾರ್ಥನೆ ಮನುಷ್ಯನಲ್ಲಿ ಭಯ ಬಿತ್ತುತ್ತದೆ.ನಂತರ ಆ ಭಯ ಸಮಾಜದಲ್ಲಿ ಹೆಮ್ಮರವಾಗಿ ಬೆಳೆಯುತ್ತವೆ. ಆದುದರಿಂದ ಇನ್ನು ಮುಂದೆ ದೇವಸ್ಥಾನಕ್ಕೆ ಹೋಗುವ ಮೊದಲು ಸಾವಿರ ಬಾರಿ ಆಲೋಚಿಸಿ.ನೀವು ಆಸ್ತಿಕರೇ ಆಗಿರಬಹುದು ಅಥವಾ ನಾಸ್ತಿಕರಾಗಿರಬಹುದು ದೇವಾಲಯಗಳ ಬಳಿ ದಯವಿಟ್ಟು ಹೋಗಬೇಡಿ. ಗಟಾರಗಳು ದೇಹಕ್ಕೆ ಬಾಧೆ ತರುವಂತಹಾ ಸಂಕ್ರಾಮಿಕ ರೋಗಗಳಿಗೆ ಆಗರವಾಗಿರುವಂತೆ ಆರಾಧನೆಯ ಮತ್ತು ಪ್ರಾರ್ಥಿಸುವ ಸ್ಥಳಗಳು ಮಾನಸಿಕ ರೋಗಗಳ ಅಗರವಾಗಿರುತ್ತವೆ. ದೈಹಿಕವಾಗಿ ಕಾಡುವ ಖಾಯಿಲೆಗಳನ್ನ ಸುಲಭವಾಗಿ ಕಂಡುಹಿಡಿಯಬಹುದು.ಆದರೆ ಮಾನಸಿಕ ಖಾಯಿಲೆಯನ್ನು ಕಂಡು ಹಿಡಿಯುವುದೇ ಕಷ್ಟ.ಖಾಯಿಲೆ ಇದೆ ಎಂದು ಗೊತ್ತಾಗುವ ಮೊದಲೇ ಅದು ಇಡೀ ಸಮುದಾಯಕ್ಕೆ ಹಬ್ಬುತ್ತದೆ.
ನಮ್ಮ ದೇಶದಲ್ಲಿ ಬ್ರಷ್ಟಾಚಾರ ಹೆಚ್ಚಲು ಜನ ದೇವಸ್ಥಾನ,ಚರ್ಚು,ದರ್ಗಾಗಳಿಗೆ ಹೋಗುತ್ತಿರುವುದೇ ಒಂದು ಮುಖ್ಯ ಕಾರಣವಿರಬಹುದೇ ಎಂಬುದು ನನ್ನ ಇತ್ತೀಚಿನ ಗುಮಾನಿ! .

No comments: