Thursday, November 9, 2017

ಪೆರೆಟೋ ಸಿದ್ದಾಂತದ ಬೆಳಕಿನಲ್ಲಿ ವೇತನದ ವಿಶ್ಲೇಷಣೆ

ಪೆರೆಟೋ ಸಿದ್ದಾಂತದ ಬೆಳಕಿನಲ್ಲಿ ವೇತನದ ವಿಶ್ಲೇಷಣೆ
www.navyanta.blogspot.in

ನೀವು  80/20 ಸಿದ್ದಾಂತ ಅಥವಾ ಪೆರೆಟೋ ನಿಯಮಗಳ ಬಗ್ಗೆ ಕೇಳಿರಬಹುದು. ಖ್ಯಾತ ಅರ್ಥಶಾಸ್ತ್ರಜ್ಞ ವಿಲ್ಫ್ರೆಡ್ ಪೆರೆಟೋ ಎಂಬುವರು ಈ ೮೦/೨೦ ರ ಸಮೀಕರಣವನ್ನು ಪ್ರತಿಪಾದಿಸಿದರು . ಈ ಥಿಯರಿಯನ್ನು ಚಿಕ್ಕದಾಗಿ ವಿವರಿಸಬೇಕೆಂದರೆ 80% ಘಟನೆಗಳು ೨೦% ಕಾರಣಗಳಿಂದ ನಡೆಯುತ್ತದೆ. ಉದಾಹರಣೆಗೆ, ೧೮೯೬ ರಲ್ಲಿ ಪ್ರಕಟವಾದ ಅವರ ಪ್ರಬಂಧದಲ್ಲಿ ಇಟಲಿಯ ಶೇ ೮೦ ರಷ್ಟು ಭೂಮಿ  ಶೇಕಡಾ ೨೦ ರಷ್ಟು ಜನರ ವಶದಲ್ಲಿದೆ ಎಂಬ ವಾದ ಮಂಡಿಸಿದ್ದರು. ಇದೇ ರೀತಿ ಹಲವರು ಈ ಇಪ್ಪತ್ತು-ಎಂಬತ್ತು ಸಿದ್ದಾಂತವನ್ನು ಹಲವಾರು ವಿಚಾರಗಳಿಗೆ ಬಳಸಿ ಕೊಳ್ಳುತಿದ್ದಾರೆ. ಕರ್ನಾಟಕದ ಸರ್ಕಾರಿ ನೌಕರರು ಕೂಡ ಇದನ್ನು ವೇತನದ ವಿಚಾರದಲ್ಲಿ ಬಳಸಿಕೊಳ್ಳಬಹುದು. ಸರಕಾರ ವೇತನದ ಹೆಸರಲ್ಲಿ ಖರ್ಚು ಮಾಡುವ ಶೇಕಡಾ ಎಂಬತ್ತರಷ್ಟು ಹಣ ೨೦% ಜನಕ್ಕೆ ಹೋಗುತ್ತದೆ. ಸರಕಾರದಲ್ಲಿ ಕೆಳಹಂತದಲ್ಲಿ ಕೆಲಸ ಮಾಡುವ ನೌಕರ ಒಂದು ಪೆನ್ನನ್ನು ಕೂಡ ತನ್ನ ಸಂಬಳದ ಹಣದಿಂದ ಕೊಳ್ಳಬೇಕು. ಆದರೆ ಉನ್ನತಾಧಿಕಾರಿಗಳ ಸಾರಿಗೆ,ಬಂಗಲೆ,ವೈಭವೊಬೇತ ನಿವಾಸ, ನೌಕರ/ಚಾಕರ ಎಲ್ಲವೂ ತೆರಿಗೆದಾರ ಹಣದಲ್ಲೇ ಆಗಬೇಕು. ಇದು ಇಂದಿನ ದುರಂತ. ಇಂದು ನೌಕರರ  ಸತ್ಯಾಗ್ರಹದ ಫಲವಾಗಿ ರೂಪುಗೊಂಡ ವೇತನ ಆಯೋಗವು ಈ ವಿಚಾರವನ್ನು ಕೈಗೆತ್ತಿಕೊಳ್ಳುವಂತೆ ಕಾಣುತ್ತಿಲ್ಲ. ಹೋರಾಟ ಮಾಡಿದವರಿಗಿಂತ ಹೋರಾಟ ಮಾಡದೇ ಇರುವವರೆ ಹೆಚ್ಚು ಲಾಭ ಪಡೆಯುತ್ತಾರೆ ಮತ್ತು ಈ ಅಸಮತೋಲನ ಹಾಗೆಯೇ ಮುಂದುವರೆಯುತ್ತದೆ. ಅಡಳಿತ ಸುಧಾರಣೆ ಎಂಬುದು  ಹುದ್ದೆಗಳ ಕಡಿತ ಮಾಡುವ ದಿಕ್ಕಿನಲ್ಲಿ ನಡೆದಿದೆಯೇ ಹೊರತು ಸಮಾಜದಲ್ಲಿ ನಿರುದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ನಡೆಯುತ್ತಿಲ್ಲ. ಕೆಳಹಂತದ ನೌಕರರ ಹುದ್ದೆಯನ್ನು ಕಡಿಮೆಮಾಡುವಷ್ಟು ಉತ್ಸಾಹ ಮೇಲಿನ ಹಂತದ ಹುದ್ದೆಗಳನ್ನು ಕಡಿತ ಮಾಡುವ ನಿಟ್ಟಿನಲ್ಲಿ ಕಾಣುತ್ತಿಲ್ಲ. ಅಭದ್ರತೆಯ ಅಂಚಿಗೆ ತಳ್ಳಲ್ಪಡುತ್ತಿರುವ ಶ್ರಮಿಕ ವರ್ಗಕ್ಕೆ  ಕಾಲಕ್ರಮೇಣ ವ್ಯವಸ್ಥೆಯ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಾ ಊಳಿಗಮಾನ್ಯ ವ್ಯವಸ್ಥೆಯನ್ನು ಅಶ್ರಯಿಸುತ್ತದೆ. ಶೇಕಡಾ ಎಂಬತ್ತರಷ್ಟಿರುವ ವರ್ಗ ಅಸ್ತಿತ್ವಕ್ಕೆ ಪರದಾಡಬೇಕಾದರೆ ಉಳಿದ ಶೇಕಡಾ 20 ರಷ್ಟಿರುವ ಕೆನೆ ಪದರ ವರ್ಗದಲ್ಲಿ ಅಂಬಾನಿ ,ಅದಾನಿಗಳಂತಾಗುವ ತುಡಿತ ಹೆಚ್ಚುತ್ತದೆ.

 ಶೇಕಡಾ ಎಂಬತ್ತರಷ್ಟು ಸಂಪನ್ಮೂಲವನ್ನು ಬಳಸುವವರ ಸಂಖ್ಯೆಯನ್ನು ಅದೇ ಮಟ್ಟದಲ್ಲಿಟ್ಟು, ಶೇಕಡಾ ಎಂಬತ್ತರಷ್ಟಿರುವ ಆದರೆ ಶೇಕಡ ೨೦ ರಷ್ಟು ಸಂಪನ್ಮೂಲ ಬಳಸುವವರ  ಸಂಖ್ಯೆಯನ್ನು ಕುಗ್ಗಿಸುವುದರಿಂದ ಸರ್ಕಾರಕ್ಕೆ ಹೆಚ್ಚಿನ ಉಳಿತಾಯ ಆಗುವುದಿಲ್ಲ.

ಇಂದು ಶಿಕ್ಷಕರ ವೇತನ ಮತ್ತು ಆರಕ್ಷಕರಿಗೆ ನೀಡುವ ವೇತನವನ್ನು ಆರ್ಥಿಕ ಹೊರೆ ಎಂದು ವರ್ಗೀಕರಣ ಮಾಡುವುದು ಎಷ್ಟು ಸೂಕ್ತ ಎಂಬ ಬಗ್ಗೆ ಮೊದಲಿನಿಂದಲೂ ಅರ್ಥಶಾಸ್ತ್ರಜ್ಞರ ವಲಯದಲ್ಲಿ ಚರ್ಚೆಗಳು ನಡೆದಿವೆ .

2016 ರ ಅವಧಿಯಲ್ಲಿ ಸಂಯುಕ್ತ ಸಂಸ್ಥಾನದ ದಕ್ಷಿಣ ಡಕೋಟ ರಾಜ್ಯವು ಮೂರು ಮಹತ್ವದ ವಿಧೆಯಕಗಳನ್ನು ಅಂಗೀಕರಿಸಿತು. ಇದರಲ್ಲಿ ಶಿಕ್ಷಕರ ವೇತನವನ್ನು ಹೆಚ್ಚಿಸುವ ಪ್ರಸ್ತಾವನೆ ಕೂಡ ಒಳಗೊಂಡಿತ್ತು .ಶಿಕ್ಷಣದ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ಉದ್ದೇಶದಿಂದ ನೇಮಿಸಲ್ಪಟ್ಟ ಬ್ಲೂ ರಿಬ್ಬನ್ ಕಮಿಟಿ ಶಿಕ್ಷಕರ ವೇತನವನ್ನು ಹೆಚ್ಚಿಸುವಂತೆ ಶಿಫಾರಸ್ಸು ಮಾಡಿತ್ತು. ಯಾವುದಾದರೂ ಕ್ಷೇತ್ರದಲ್ಲಿ ಸುಧಾರಣೆ ತರಬೇಕೆಂದರೆ ಆಯಾ ಕ್ಷೇತ್ರದಲ್ಲಿ ದುಡಿಯುವ ನೌಕರರ ವೇತನ ಹೆಚ್ಚಿಸುವುದಕ್ಕೆ ವಿದೇಶಗಳಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. ಆದರೆ ನಮ್ಮಲ್ಲಿ, ಯಾವುದೇ ಸುಧಾರಣೆ ಪ್ರಕ್ರಿಯೆಯಲ್ಲಿ ಹೊರಗುತ್ತಿಗೆಯೇ ಮೊದಲ ಹೆಜ್ಜೆ ಯಾಗಿರುತ್ತದೆ.ಅತ್ತ ಹೊರಗುತ್ತಿಗೆಯಿಂದ ಬರುವ ನೌಕರರ ಬದುಕನ್ನು ಅಭದ್ರತೆಯತ್ತ ಕೊಂಡೊಯ್ಯುತ್ತಲೇ ಸರ್ಕಾರಿ ನೌಕರರನ್ನು ಉಪೇಕ್ಷೆಗೆ ಗುರಿಪಡಿಸುವ ಪ್ರಕ್ರಿಯೆ ಒಟ್ಟಾರೆ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನೌಕರ ವೇತನ ಆಯೋಗವು ಕಡಿಮೆ ವೇತನ ಶ್ರೇಣಿಯಲ್ಲಿರುವ ನೌಕರರಿಗೆ ವಿನಿಯೋಗಿಸುತ್ತಿರುವ ವೆಚ್ಚ  ಹಾಗೂ ಗರಿಷ್ಟ ವೇತನ ಶ್ರೇಣಿಗಳ ನೌಕರರ ಎಲ್ಲಾ ವೆಚ್ಚಗಳ ವಿವರ ಎಷ್ಟು ಹುದ್ದೆಗಳು ಜನಮುಖಿಯಾಗಿರುತ್ತವೆ  ಮತ್ತು ಎಷ್ಟು ಹುದ್ದೆಗಳು ಅಧಿಕಾರಿಗಳ /ಜನಪ್ರತಿನಿದಿಗಳ ಉಪಯೋಗಕ್ಕಾಗಿ ಮೀಸಲಾಗಿದೆ ಎಂಬ ಅಂಕಿ ಅಂಶಗಳನ್ನು  ವಿಶ್ಲೇಷಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ವೇತನ ಹೆಚ್ಚಳದಿಂದ ಹೆಚ್ಚಿನ ಹೊರೆ ಬೀಳುತ್ತದೆ ಎಂಬ ಅಂತಂಕಕ್ಕಿಂತಾ ಸಂಪನ್ಮೂಲ ಹಂಚಿಕೆಯಲ್ಲಿ ವಿವಿಧ ವರ್ಗದ ನೌಕರರಲ್ಲಿ ಉಂಟಾಗುತ್ತಿರುವ ಅಸಮತೋಲನವು  ಸಾಮಾಜಿಕ ವ್ಯವಸ್ಥೆಯ ಮೇಲೆ ಬೀರುವ  ಪರಿಣಾಮ ಕೂಡ ಅಧ್ಯಯನಾರ್ಹ. ಆದರೆ ಹಾಲಿ ಸಮಿತಿಯಲ್ಲಿ ಅರ್ಥಶಾಸ್ತ್ರಜ್ಞರು, ಸಮಾಜ ಶಾಸ್ತ್ರಜ್ಞ ಇತ್ಯಾದಿ ತಜ್ಞರ ಕೊರತೆ ಇರುವುದರಿಂದ ಹಾಗೆ ಮಾಡಲು ಸಾಧ್ಯವೇ ಇಲ್ಲ.
ಸರ್ಕಾರ ಸಿಬ್ಬಂದಿಗೆಂದು ವ್ಯಯಿಸುತ್ತಿರುವ ಖರ್ಚಿನಲ್ಲಿ ಜನಮುಖಿ /ಜನರ ಕೆಲಸ ಮಾಡುವ ನೋವ್ಕರರೆಷ್ಟು? ಹಾಗೂ ಅಧಿಕಾರಶಾಹಿಯ ಸ್ವಂತ ಕೆಲಸ ಮಾಡುವ ಜನ ಎಷ್ಟು ಎಂಬುದು ಗೊತ್ತಾಗ ಬೇಕು . ಅಂತಹಾ ವೆಚ್ಚ್ವನ್ನು ಅಧಿಕಾರಿಯ ಸಂಬಳ ಎಂದು ಪರಿಗಣಿಸಬೇಕೇ ಹೊರತು ಸರ್ಕಾರಿ ನೌಕರರ ವೆಚ್ಚ ಎಂದಲ್ಲ.

 ಅದರ  ಬದಲು  ದೇಶದಲ್ಲೆಲಾ (ಕೇಂದ್ರದಲ್ಲಿ ಮತ್ತು ಅಕ್ಕ ಪಕ್ಕದ ರಾಜ್ಯಗಳಲ್ಲಿ )ಯಾವ ರೀತಿಯ ಮಾದರಿ ಇದೆಯೋ ಅದೇ ರೀತಿ ಮಾಡಿ ಕರ್ನಾಟಕದ ನೌಕರರನ್ನು  ಈ ದೇಶದ ಮುಖ್ಯವಾಹಿನಿಗೆ ಸೇರಿಸುವ  ಶಿಫಾರಸ್ಸು ಮಾಡಿದರೆ ನಂತರ ಕೇಂದ್ರದಲ್ಲಗುವ ಎಲ್ಲಾ ಅಡಳಿತ ಸುಧಾರಣೆಗಳನ್ನು  ಇಲ್ಲಿ ಅಳವಡಿಸಿಕೊಂಡು ಮುಂದುವರೆಯಲು ಅನುಕೂಲವಾಗುತ್ತದೆ..

Sunday, November 5, 2017

ಚರ್ಚೆಗೆ ಸಿಗದ ಮೋದಿಯವರ ಒಂದು ನಿಜವಾದ ಸಾಧನೆ

ಯಾವ್ಯಾವುದೋ ಗ್ರೂಪ್ ಗಳಿಗೆ ದಿನಬೆಳಗಾದರೆ ಮೋದಿ,ಮೋದಿ ,ಮೋದಿ ಎಂದು ಅವೇ ಹಳೇ ಮೆಸೇಜು ಹಾಕುವ ಅಂಧಾಭಕ್ತರಿಗೆ ಮೋದಿಯವರ ಕೆಳಕಂಡ ಸಾಧನೆ ಕಾಣದೆ ಇರುವುದು ಅವರುಗಳ ಅಂಧತ್ವವನ್ನು ಸಾಬೀತುಪಡಿಸುತ್ತದೆ

ನೋಟು ಅಮಾನ್ಯೀಕರಣದ ಸಂಪೂರ್ಣವಾಗಿ ವಿಫಲವಾಗಿರುವುದನ್ನೇ ಅಸ್ತ್ರವಾಗಿಸಿಕೊಂಡು ಮಾಧ್ಯಮಗಳು ಆಳಿಗೊಂದು ಕಲ್ಲು ಎಂಬಂತೆ ಮೋದಿಯವರನ್ನು ಟೀಕಿಸುತ್ತಿವೆ. ಆದರೆ ಮೋದಿಯವರು ಮಾಡಿದ ಇನ್ನೊಂದು ಮಹಾತ್ಕಾರ್ಯವೆಂದರೆ  ವಿ.ಐ.ಪಿ ಗಳು ಉಪಯೋಗಿಸುತಿದ್ದ ಕೆಂಪು ದೀಪಗಳನ್ನು ಕಿತ್ತು ಹಾಕಿಸಿದ್ದು. ಈ ದೇಶದಲ್ಲಿ  ಜಾತಿ ತಾರತಮ್ಯ, ಆರ್ಥಿಕ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ತೆಗೆದು ಕೊಂಡಿದ್ದರೂ ಸ್ಟೇಟಸ್ ತಾರತಮ್ಯಗಳನ್ನು ನಿವಾರಿಸಬೇಕು ಎಂಬ ದೂರದೃಷ್ಟಿ ಯಾವುದೇ ನಾಯಕರಿಗೂ ಇಲ್ಲದಿದ್ದದ್ದು ಒಂದು ಅಚ್ಚರಿಯೇ ಸರಿ. ಸರ್ಕಾರಿ ಹಣವನ್ನು ಅವಲಂಬಿಸಿ ಸಮಾಜಕ್ಕೆ ಒಂದು ಹೊರೆಯಾಗಿರುವ ಒಂದು ವರ್ಗವು  ಅದನ್ನೇ ಒಂದು ಹಿರಿಮೆಯೆಂದು ಬಿಂಬಿಸುತ್ತಾ ರಾಜ ರೋಷವಾಗಿ ಓಡಾಡುತಿದ್ದದ್ದು ಪ್ರಜಾಪ್ರಭುತ್ವವನ್ನೇ ಅಣಕಿಸುವಂತಿತ್ತು. ಈ ನಿಟ್ಟಿನಲ್ಲಿ ಮೋದಿಯವರ ಈ ಕ್ರಮ ನೋಟು ಅಮಾನ್ಯೀಕರಣಕ್ಕಿಂತಲೂ ಮಹತ್ವದ್ದು. 
ಬ್ರಿಟಿಷ್ ಹಿನ್ನೆಲೆಯ ಅಧಿಕಾರಶಾಹಿಯಿಂದ ಕೆಲಸ ತೆಗೆಯುವುದು ಎಷ್ಟು ಕಷ್ಟ ಎಂದು ನೋಟು ಅಮಾನ್ಯೀಕರಣ ಮಾಡಿದ ಮೇಲೆ ಮೋದಿಗೆ ಚೆನ್ನಾಗಿ ಅನುಭವ ಆದಂತಿದೆ. ಜನರಿಗಾಗಿ ಯಾವುದಾದರೊಂದು ಒಳ್ಳೆಯ ಕೆಲಸ ಮಾಡ ಹೊರಟರೆ ನೂರಾಒಂದು ಪ್ರಶ್ನೆ ಹಾಕಿ ಜನರಿಗೆ  ನಯಾಪೈಸೆಯೂ ದಕ್ಕದಂತೆ ಮಾಡುವ ಪ್ರೊಫೆಶನಲ್ ಅಡಳಿತ ಯಂತ್ರವನ್ನು ಪಕ್ಕಕ್ಕಿಟ್ಟು  ಪೆಟ್ರೋಲ್ ಕಂಪನಿಗಳ ಮೂಲಕ ಹಳೇ ನೋಟು ಸಂಗ್ರಹಿಸಲು ಆರಂಭಿಸಿದರು. ಇನ್ನು ಡಿಜಿಟಲ್ ಎಕಾನಮಿ ಮಾಡುವ ಅವರ ಕನಸ್ಸನ್ನು ನುಚ್ಚು ನೂರು ಮಾಡಿದ್ದೇ ಈ ಅಧಿಕಾರಿಗಳು!. ಇವತ್ತು ನೀವು ಕಿರಾಣಿ ಅಂಗಡೀಲಿ ಕಾರ್ಡ್ ಸ್ವೈಪ್ ಮಾಡಬಹುದು, ಆದರೆ ಸರ್ಕಾರದ ಬೆಂಗಳೂರು ಒನ್ ನಲ್ಲಿ ಮಾಡಬೇಕು ಅಂದರೆ ಎಕ್ಸ್ಟ್ರಾ ಚಾರ್ಜ್ ಆಗುತ್ತದಂತೆ !.,ಆಗ ರೈಲ್ವೆನವರು ಸಹಾ ಕಾರ್ಡ್ ತೆಗೆದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿರಲಿಲ್ಲ. ಪೋಸ್ಟ್ ಆಫೀಸ್ ನವರಿಗೂ ಸಹಾ ಕ್ಯಾಶೆ ಆಗಬೇಕು . ತಮಾಷೆ ನೋಡಿ, ಕರ್ನಾಟಕ ಮೊಬೈಲ್ ಒನ್ ಎಂಬ ವೆಬ್ ಸೈಟ್ ಇದೆ .ಅಲ್ಲಿ ನೀವು ಹಣ ಪಾವತಿಸಲು ಎರಡು ಆಪ್ಷನ್ ಇದೆ. ಒಂದು ಮೊಬಿಕ್ವಿಕ್  ಎಂಬ ಖಾಸಗಿ  ಸಂಸ್ಥೆ. ಇನ್ನೊಂದು paygovindia.gov.in ಎಂಬ ಕೇಂದ್ರ ಸರ್ಕಾರಿ ಸಂಸ್ಥೆ.  ಇದಕ್ಕೆ ಒಂದು ಪರ್ಸೆಂಟ್ ಸರ್ವಿಸ್ ಚಾರ್ಜ್ ಆಗುತ್ತದಂತೆ. ಆದರೆ ಖಾಸಗಿ ಮೊಬಿಕ್ವಿಕ್ ನಲ್ಲಿ ಪೇ ಮಾಡಿದರೆ  ಕ್ಯಾಶ್ ಬ್ಯಾಕ್ ಇದೆಯಂತೆ !!. ದೀಪದ ಕೆಳಗೆ ಕತ್ತಲು ಎಂಬಂತಾಗಿದೆ..ಕತ್ತರಿಯೇ ಸರಿ ಇಲ್ಲದೇ ಟೈಲರಿಂಗ್ ಶಾಪ್ ನಡೆಸಲು ಹೊರಟ ಮೋದಿಯವರ ಪ್ರಯೋಗ ಹೇಗೆ ತಾನೇ ಸಫಲವಾದೀತು?.
ವಿಚಾರ ಇರಲಿ,  ಅಡ್ಡಗಾಲು ಹಾಕಲು ನೆಪ ಹುಡುಕುವ ಭಾರತೀಯ  ಅಧಿಕಾರಶಾಹಿಯನ್ನು ದಾಟಿ  ಸೇವೆಯನ್ನು ಜನರಿಗೆ ತಲುಪಿಸುವುದು ಎಷ್ಟು ಕಷ್ಟ ಎಂದು ಅಂದು ಮೂದೀಜಿಯವರಿಗೆ ಗೊತ್ತಾಗಿರಬೇಕು. ಮೊದಲು ವ್ಯವಸ್ಥೆ ಸರಿ ಮಾಡಬೇಕು ,ನಾಲ್ಕಾಣೆ ಕೆಲಸ ಮಾಡದಿದ್ದರೂ  ವಾಹನದ  ಮೇಲೆ ರೆಡ್ ಲೈಟ್  ಹಾಕಿ ಠಳಾಯಿಸುವ  ದಂಡ ಪಿಂಡಗಳಿಗೆ ಒಂದು ಚಿಕ್ಕ ಬಿಸಿ ಮುಟ್ಟಿಸಿದರು . ಹಲವಾರು ಬೇಧಗಳಿಂದ ಬಳಲುತ್ತಿರುವ ಈ ಸಮಾಜದಲ್ಲಿ ಇನ್ನಷ್ಟು ಬಿರುಕು ಮೂಡಿಸುವ ಇಂತಹಾ ಸಂಪ್ರದಾಯಗಳನ್ನು ಮೊಲೋಚ್ಚಾಟನೆ ಮಾಡಬೇಕು. ಭಾರತದಂತಹಾ ಅಗಾದ ಜನಸಂಖ್ಯೆ ಇರುವ ದೇಶದಲ್ಲಿ  ಹುದ್ದೆಗಳನ್ನು ಅಲಂಕರಿಸುವ ಅರ್ಹತೆಗಳು ಯಾವಾಗಲೂ ವಿವಾದಾತ್ಮಕ ಹಾಗೂ ಪ್ರಶ್ನಾರ್ಹವಾಗಿಯೇ ಇರುತ್ತವೆ. ಅಂತಹಾ ಸಂಧರ್ಭದಲ್ಲಿ ಹುದ್ದೆಗಳ ನಿರ್ಲಜ್ಜ ವೈಭವೀಕರಣದಿಂದ ಆಡಳಿತಕ್ಕೆ ಯಾವುದೇ ಲಾಭವಾಗುವುದಿಲ್ಲ.
ಆದರೆ ಅದೇಕೋ ಮತ್ತೆ ಅಡಳಿತ ,ಸಮಾಜ ಸುಧಾರಣೆ ಯ ಕೆಲಸ ಅಲ್ಲಿಗೆ ಕೈ ಬಿಟ್ಟಂತೆ ಕಾಣುತ್ತಿದೆ.. ಈಗ  ಜೀ ಎಸ್ ಟಿ ಪ್ರಯೋಗದಲ್ಲಿ ಮುಳುಗಿಬಿಟ್ಟರು .ಅದೂ ಯಾಕೋ ಕೈ ಕೊಡುವಂತೆ ಕಾಣುತ್ತಿದೆ. ಕುದುರೆಯೇ ಸರಿಯಿಲ್ಲದೆ ರೇಸ್ ಗೆಲ್ಲುವುದು ಸಾಧ್ಯವಿಲ್ಲ ಎಂಬುದನ್ನರಿತು ಮೋದಿಯವರು  ಅಡಳಿತ ಯಂತ್ರವನ್ನು ಸರಿಪಡಿಸುವ ಕೆಲಸಕ್ಕೆ ಕೈ ಹಾಕದಿದ್ದರೆ ಸರಿಯಾದ ಕೆಲಸಗಳಿಗೆ ತಪ್ಪಾದ ಫಲಿತಾಂಶ  ಬರುವುದರಲ್ಲಿ ಯಾವುದೇ ಸಂಶಯವಿಲ್ಲ..


ಆದರೆ ಮೋದಿಯವರ ಹೆಸರನ್ನೇ ಹೇಳಿಕೊಂಡು ಜನರನ್ನು ಯಾಮಾರಿಸಿ  ಅಧಿಕಾರ ಹಿಡಿದು ಕೆಂಪುದೀಪ ಗೂಟದ ಕಾರಿನಲ್ಲಿ ಓಡಾಡುವ ಕನಸು ಕಾಣುವ ಅವರ ಪುಡಾರಿ ಹಿಂಬಾಲಕರಿಗೆ ಯಾವುದೇ ಸುಧಾರಣೆ ಬೇಕಾಗಿಲ್ಲ.! 

-ನವ್ಯಾಂತ