ಹಿಂದೆ ೯೦ರ ದಶಕದಲ್ಲಿ ನಾನು ಮೈಸೂರಿನಲ್ಲಿದ್ದಾಗ ಹಲವು ಬಾರಿ ಸರಳ ವಿವಾಹಗಳಲ್ಲಿ ಭಾಗವಹಿಸುವ ಅವಕಾಶ ಸಿಗುತಿತ್ತು. ವಿವಾಹಗಳು ಎಷ್ಟು ಸರಳವಾಗಿರುತಿತ್ತು ಎಂದರೆ ಬರೀ ಬಿಸ್ಕತ್ತು ಟೀ ಗಳಲ್ಲಿ ವಿವಾಹ ಮುಗಿದು ಹೋಗುತಿತ್ತು. ಕೆಲವು ಮದುವೆಗಳು ದೇವಾಲಯದಲ್ಲಿ ನಡೆಯುತಿದ್ದವು. ಇನ್ನು ಕೆಲವು ಮದುವೆಗಳು ಮಾನಸ ಗಂಗೋತ್ರಿಯ ಗಾಂಧಿ ಭವನದಲ್ಲಿ ಅಥವಾ ಶ್ರೀ .ಸಿ.ಡಿ.ನರಸಿಂಹಯ್ಯನವರ ದ್ವನ್ಯಲೋಕದಲ್ಲಿ ನಡೆದಿದ್ದ ನೆನಪು.ಇವು ಕುವೆಂಪುರವರ ಮಂತ್ರ ಮಾಂಗಲ್ಯ ಪದ್ದತಿಯನುಸಾರ ನಡೆಯುತ್ತಿತ್ತು. ಈ ಪದ್ದತಿಯನುಸಾರ ರಾಜ್ಯ ರೈತ ಸಂಘದವರು ಹಳ್ಳಿಹಳ್ಳಿಗಳಲ್ಲಿ ಹಲವು ಸರಳವಿವಾಹಗಳನ್ನು ಮಾಡಿದ್ದರು ಎಂದು ಆಗಾಗ ರಾಮದಾಸ್ ಹೇಳುತಿದ್ದರು. ಇದರಿಂದ ರೈತರಿಗೆ ಬಹಳ ಅನುಕೂಲ ಆಗುತಿತ್ತು. ಏಕೆಂದರೆ ಮದುವೆ ಮಾಡುವ ಸಂಭ್ರಮದಲ್ಲಿ ರೈತ ಇದ್ದ ಬದ್ದದ್ದನ್ನೆಲ್ಲಾ ಕಳೆದುಕೊಳ್ಳುವುದೇ ಅಲ್ಲದೇ ಹೊಸ ಸಾಲದ ಸುಳಿಗೆ ಸಿಲುಕುತಿದ್ದ. ಇದರಿಂದ ಅವನ ಬೇಸಾಯಕ್ಕೂ,ವೈಯುಕ್ತಿಕ ಜೀವನಕ್ಕೂ ಹೊಡೆತಬೀಳುತ್ತಿತ್ತು.ಇಂತಹಾ ಹೆಚ್ಚಿನ ವಿವಾಹಗಳು ಸಾಮಾನ್ಯವಾಗಿ ಸ್ವಜಾತಿ ಮತ್ತು ಅರೇಂಜ್ಡ್ ಮದುವೆಗಳೇ ಆಗಿರುತಿತ್ತು.
ಮೈಸೂರಿನಲ್ಲಿ ಕೆ.ರಾಮದಾಸ್ ಅವರ ನಾಯಕತ್ವದ ‘ಮಾನವ ಮಂಟಪ’ ಇಂತಹಾ ಸಮಾರಂಭಗಳನ್ನು ಏರ್ಪಡಿಸುತ್ತಿತ್ತು. ಈ ನಿಟ್ಟಿನಲ್ಲಿ ‘ಮಾನವ ಮಂಟಪ’ ಒಂದು ಹೆಜ್ಜೆ ಮುಂದೆ ಹೋಯಿತು. ಮಾನವ ಮಂಟಪ ಎಂಬುದು ಸರಳ ವಿವಾಹಕ್ಕಿಂತ ಹೆಚ್ಚಾಗಿ ಅಂತರ್ಜಾತಿ ವಿವಾಹಗಳನ್ನು ಏರ್ಪಡಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿತು. ಲೋಹಿಯಾವಾದಿ ರಾಮದಾಸ್ ಈ ಮೂಲಕ ತಮ್ಮದೇ ಆದ ರೀತಿಯಲ್ಲಿ ಜಾತೀವಿನಾಶ ಚಳುವಳಿ ಆರಂಭಿಸಿದರು. ಈ ಮೂಲಕ ಸಮಾಜದಲ್ಲಿ ಜಾತೀ ವ್ಯವಸ್ತೆಯನ್ನು ಸಂಪೂರ್ಣವಾಗಿ ನಾಶ ಮಾಡುವ ಕನಸು ಅವರದಾಗಿತ್ತು.
ಈಗ ಎರಡು ಸಾವಿರದ ಹನ್ನೊಂದರಲ್ಲಿ ನಿಂತು ಹಿಂತಿರುಗಿ ನೋಡಿದರೆ ಆಶ್ಚರ್ಯವಾಗುತ್ತದೆ. ಎಲ್ಲಿ ಹೋಯಿತು ಈ ಸರಳ ವಿವಾಹಗಳು, ಸರಳ ಅಂತರ್ಜಾತಿ ವಿವಾಹಗಳು....
ವೈಭವೋಪೇತ ವಿವಾಹಗಳನ್ನು ನಡೆಸುವುದು ಒಂದು ಕಂಪಲ್ಸರಿ ವಿಷಯವಾಗಿದೆ. ದುಂದುವೆಚ್ಚಇಲ್ಲದಿದ್ದರೆ ಅದು ಮದುವೆಯೇ ಅಲ್ಲ ಅನ್ನುವಂತಾಗಿದೆ. ರೈತಸಂಘದ ಹೋರಾಟದಿಂದ , ಸುಂದರೇಶ್,ಕೆ.ರಾಮದಾಸ್,ತೇಜಸ್ವಿ ಯಂತವರ ಅವಿರತ ಶ್ರಮದಿಂದ ಕಟ್ಟಲ್ಪಟ್ಟ “ಮಾನವ ಮಂಟಪ”ಇಷ್ಟು ಸುಲಭವಾಗಿ ಶಿಥಿಲವಾದದ್ದು ಹೇಗೆ ಎಂಬ ಪ್ರಶ್ನೆ ಹಲವು ಸಾರಿ ನನ್ನನ್ನು ಬಾಧಿಸುತ್ತಿತ್ತು.
ಈ ಬಗ್ಗೆ ನನಗನಿಸಿದ್ದನ್ನು ದಾಖಲಿಸುವ ಹಂಬಲವೂ ನನ್ನಲ್ಲಿತ್ತು.
ರೈತಸಂಘದ ಹೋರಾಟದಲ್ಲಿ ನಾನೆಂದೂ ಭಾಗವಹಿಸಿಲ್ಲ. ನಾನು ಕಣ್ಣುಬಿಡುವ ಹೊತ್ತಿಗೆ ರೈತಸಂಘದ ಸ್ವರ್ಣಕಾಲ ಮುಗಿದು ಸಂಘದ ಹಲವು ಬಣಗಳು ನಾಯಿಗಳಂತೆ ಕಚ್ಚಾಡುತಿದ್ದವು. ಕೆಲವರು ರೈತಸಂಘದ ಹೋರಾಟದಲ್ಲಿ ಬೆಳೆಸಿಕೊಂಡಿದ್ದ ವರ್ಚಸ್ಸನ್ನು ಬಳಸಿಕೊಂಡು ಇತರ ಪಕ್ಷಗಳಲ್ಲಿ ಮಿಂಚತೊಡಗಿದರು. ನಾನು ಹೋದ ಕೆಲವು ಮದುವೆಗಳಲ್ಲಿ ಕೆಲವು ಹಸಿರು ಶಾಲುಗಳು ಕಂಡರೂ ಸಹಾ ಅವ್ಯಾವುದಕ್ಕೂ ಅಂತಹಾ ಮೆರುಗು ಇರಲಿಲ್ಲ.
ತೊಂಬತ್ತರ ದಶಕದಲ್ಲಿ ತೆಂಗಿಗೆ ನುಸಿಪೀಡೆ ರೋಗ ಬಂದಾಗ ರೈತಸಂಘದಲ್ಲಿ ಒಂದಿಷ್ಟು ಸಂಚಲನೆ ಮೂಡಿತು. ಆ ಹೋರಾಟದಲ್ಲಿ ರೈತಸಂಘದ ಹಲವು ದೌರ್ಬಲ್ಯಗಳು ಎದ್ದುಕಾಣುತ್ತಿತ್ತು. ಸಂಘಟನಾ ಚಾತುರ್ಯದ ಕೊರತೆ,ಒಳ್ಳೆಯ ನಾಯಕತ್ವದ ಅಭಾವ,ಒಗ್ಗಟ್ಟಿನ ಕೊರತೆ,ನಾಯಕರ ಸೈಧಾಂತಿಕ ದಿವಾಳಿತನ ಎಲ್ಲಕ್ಕಿಂತಾ ಹೆಚ್ಹಾಗಿ ಧರ್ಮದ ಹಸ್ತಕ್ಷೇಪ ......,
ಮೊದಲು ರೈತನ ಮೇಲೆ ಬರೀ ಹಸಿರು ಶಾಲು ಇತ್ತು. ಈಗ ಅದರೊಂದಿಗೆ ಇನ್ನೊಂದು ಅವನ ದೇಹವನ್ನಲಂಕರಿಸಿತ್ತು. ಅದ್ಯಾವುದು ಗೊತ್ತೇ?...ಕುಂಕುಮ ಅಥವಾ ವಿಭೂತಿ!.
ರೈತಸಂಘದ ನಾಯಕತ್ವ ಈ ಕುಂಕುಮಧರಿಸಿದ ನಾಯಕರ ಕೈಗೆ ಯಾವಾಗ ಹೋಯಿತೋ ಅವತ್ತೇ ಸೈಧಾಂತಿಕ ಧಿವಾಳಿತನ ರೈತರನ್ನಾಕ್ರಮಿಸಲಾರಂಭಿಸಿದವು. ನಡೆಯುತಿದ್ದ ಸರಳವಿವಾಹಗಳಲ್ಲಿ ಮಠಧಿಪತಿಗಳ ಕರಿನೆರಳು ಕಾಣಲಾರಂಭಿಸಿತು. ಆಶಿರ್ವಚನ ನೀಡುವ ನೆಪದಲ್ಲಿ ಸರಳ ವಿವಾಹದಲ್ಲಿ ಗುರುಗಳು ಮೂಗುತೂರಿಸಿದರೆ ಅವರ ಚೇಲಾಗಳು ಕಾಲ,ಗಳಿಗೆ,ನಕ್ಷತ್ರ ,ಪಂಚಾಂಗನೋಡುವುದನ್ನೂ, ಸತ್ಯನಾರಾಯಣ ಪೂಜೆ ಮುಂತಾದ ಮೂಡ ಆಚಾರಗಳನ್ನೂ ಮರುಪ್ರಚಾರಮಾಡಿದರು. ಮಠಗಳು,ದತ್ತಿಗಳು ನೀಡುವ ತಾಳಿ,ಸೀರೆ,ಪಂಚೆ ಇತ್ಯಾದಿಗಳ ಆಮೀಷಕ್ಕೆ ಭೂರಹಿತ ರೈತರು ಬಲಿಪಶುವಾದರು. ಇತ್ತ ಕುಂಕುಮ ಹೊತ್ತ ರೈತನಾಯಕ ಹೆಚ್ಚಾಗಿ ಭೂಮಾಲೀಕ ವರ್ಗದ ಬೇಡಿಕೆಗಳತ್ತ ಗಮನಹರಿಸತೊಡಗಿದ. ಕೂಲಿಆಳುಗಳು ಬಾಲಬಿಚ್ಚದಂತೆ,ಹೆಚ್ಚು ಕೂಲಿ ಕೇಳದಂತೆ ನೋಡಿಕೊಳ್ಳುವ ಬಗ್ಗೆ ಹೆಚ್ಚಿನ ಆಸಕ್ತಿವಹಿಸಿದ.ಇತ್ತ ಭೂರಹಿತರು ಹೊಟ್ಟೆ ತುಂಬಿದರೆ ಸಾಕೆಂದು ಎಲ್ಲಾ ರೀತಿಯ ಹೋರಾಟಗಳಿಂದ ದೂರ ಉಳಿದರು.ಇತ್ತ ದಲಿತ ಸಂಘರ್ಷ ಸಮಿತಿ ಸಹಾ ದಲಿತರಲ್ಲಿ ವೈಚಾರಿಕತೆ ಮೂಡಿಸುವುದರಲ್ಲಿ ಸಂಪೂರ್ಣ ವಿಫಲವಾಯಿತು. ಅಲ್ಲಿ ಸಹಾ ಕಾವಿಯ ಕಾರ್ಮೋಡ ಕವಿಯುತ್ತಿರುವುದನ್ನು ನೀವು ಕಾಣಬಹುದು.
ಹೀಗೆ ಸರಳ ವಿವಾಹದ ಸರಳತೆ ನಾಶವಾಯಿತು. (ಸಾಮೂಹಿಕ ಸತ್ಯನಾರಾಯಣ ಪೂಜೆಯ ನೆಪದಲ್ಲಿ ಜನರನ್ನು ಒಟ್ಟುಮಾಡಿ ತಲೆತಿನ್ನುವುದು ಇವತ್ತಿಗೂ ಕಾವಿ ಕ್ರಿಮಿನಲ್ ಗಳ ಅಚ್ಚುಮೆಚ್ಚಿನ ಹವ್ಯಾಸ!..). ಹೀಗೆ ಹಳ್ಳಿಗಳಲ್ಲಿ ಸರಳ ವಿವಾಹ ಸಾವಿಗೀಡಾಯಿತು.
ಮತ್ತೆ...ಪಟ್ಟಣಗಳಲ್ಲೇನಾಯಿತು?
ಹೇಳಬೇಕೇ....ಅಲ್ಲಿ ಇರುವ ಹೆಚ್ಚಿನವರ ಬೇರುಗಳಿರುವುದು ಹಳ್ಳಿಗಳಲ್ಲೇ ಸ್ವಾಮೀ.
ಆದರೂ ಈ ಅಂತರ್ಜಾತಿ ವಿವಾಹಗಳು ಮಾನವ ಸಹಜವಾದ ಪ್ರೀತಿ ಪ್ರೇಮದ ಕಾರಣದಿಂದ ನಡೆಯುತ್ತಲೇ ಇರುತ್ತದೆ. ಆದರೆ ಅವು ‘ಮಾನವ ಮಂಟಪ’ದ ದ್ಯೆಯೋದ್ದೇಶಗಳು ಸಾರುವಂತೆ ಜಾತೀ ವಿನಾಶ ಚಳುವಳಿಯ ಬಿರುಗಾಳಿಯನ್ನೆಬ್ಬಿಸಲಿಲ್ಲ. ಇಂದು ಜಾತೀ ವ್ಯವಸ್ಥೆ ಹಿಂದಿಗಿಂತಲೂ ಹೆಚ್ಚು ಶಕ್ತಿಯುತವಾಗಿದೆ.
ಅಂತರ್ಜಾತಿ ವಿವಾಹದ ವಿರುದ್ದ ಒಂದು ವ್ಯವಸ್ತಿತ ತಡೆಗೋಡೆ ಎಲ್ಲಾ ಜಾತಿಗಳಲ್ಲೂ ನಿರ್ಮಾಣವಾಗಿದೆ. ಇದಕ್ಕೆ ಏನು ಕಾರಣ?
ಮೈಸೂರಿನ ಮಟ್ಟಿಗೆ ನಾನು ನೋಡಿದಂತೆ ರಾಮದಾಸರ ಸುತ್ತಾ ಒಂದು ಪರಮನೆಂಟ್ ನಾಯಕರ ಬಳಗ ಇತ್ತು. ಸಾಹಿತ್ಯ ಸಂಗೀತ ಇತ್ಯಾದಿ ಕ್ಷೇತ್ರದಲ್ಲಿ ಒಂದಿಷ್ಟು ಹೆಸರು ಮಾಡಿದ ಜನ ಇವರು. ಎಂದೋ ಎಮರ್ಜೆನ್ಸಿ ಕಾಲದಲ್ಲಿ ಒಂದಿಷ್ಟು ಕಿರುಚಿ ಕಥೆ ಕವನ ಬರೆದವರು. ಇವರಿಗೆ ಪ್ರಚಾರದ ಅದಮ್ಯ ಹಸಿವು. ವೇದಿಕೆ ಕಂಡರೆ ತಕ್ಷಣ ಅದರತ್ತ ಓಡುವ ಮಂದಿ. ಇವರಲ್ಲಿ ಹೆಚ್ಚಿನ ಮಂದಿ ಸ್ವತಃ ಅಂತರ್ಜಾತಿ ವಿವಾಹ ಆಗದೆ ಇರುವವರು ಅಷ್ಟೇ ಏಕೆ ,ತಮ್ಮ ಮಕ್ಕಳು ಪ್ರಾಪ್ತ ವಯಸ್ಸಿಗೆ ಬಂದೊಡನೆ ತರಾತುರಿಯಲ್ಲಿ ಜಾತಿಯೊಳಗೇ ಸಂಭಂದ ಹುಡುಕಿ ವೈಧಿಕ ಪದ್ದತಿಯಲ್ಲಿ ಮದುವೆ ಮಾಡಿದ್ದನ್ನು ನಾನು ನೋಡಿದ್ದೇನೆ.ಮೊದಲು ಇವರು ಪ್ರಗತಿಪರರು ಎನ್ನಿಸಿಕೊಂಡು ಮೀಡಿಯಾಗಳಲ್ಲಿ ಮಿಂಚಿ ಆ ಹಣೆಪಟ್ಟಿಯಿಂದ ಹೆಚ್ಚಿನ ಲಾಭವಿಲ್ಲ ಎಂದು ಗೊತ್ತಾದಾಗ ಮೆಲ್ಲಗೆ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಹಳೆಯ ಗಳಿಕೆಯನ್ನು ಉಳಿಸಿಕೊಂಡರು.ಇದಕ್ಕೆ ಚಿಕ್ಕ ನಿದರ್ಶನವೆಂದರೆ ಅಂದು ವಿಚಾರವಾದದ ಮುಖವಾಣಿಯಾಗಿದ್ದ ಲಂಕೇಶ್ ಪತ್ರಿಕೆ ಇಂದು ಯೆಡಿಯೂರಪ್ಪನ ಕುಟುಂಬದ ಪಾಂಪ್ಲೆಟ್ ಆಗಿರುವುದು!. ಇಂತಿಪ್ಪ ಮಂದಿ ‘ಮಾನವ ಮಂಟಪ’ ಕಟ್ಟುವ ಜವಾಬ್ಧಾರಿಯನ್ನು ಹೊಸ ಉತ್ಸಾಹಿ ತಲೆಮಾರುಗಳಿಗೆ ಹಸ್ತಾಂತರಿಸಲೇ ಇಲ್ಲ. ತಾವೂ ಸಹಾ ಈ ನಿಟ್ಟಿನಲ್ಲಿ innovative ಆಗಿ ಕೆಲಸಮಾಡಲಿಲ್ಲ. ಪರಿಣಾಮ ಅಂತರ್ಜಾತಿ ವಿವಾಹ ಆದವರೂ ಸಹಾ ಅವರಿಗೆ ಯಾವ ಜಾತಿ ಲಾಭದಾಯಕವೋ ಆ ಜಾತಿಗೇ ತೂರಿಕೊಂಡರು.ಇದು ಅವರಿಗೆ ಅನಿವಾರ್ಯ ಸಹಾ ಆಗಿತ್ತು. ಇದರಿಂದ “ಜಾತೀ ವಿನಾಶ ಚಳುವಳಿ”ಯ ಮೂಲ ಆಶಯಕ್ಕೆ ಧಕ್ಕೆಯಾಯಿತು.
ಇಲ್ಲಿ ಕೂಡ ಸೈದಾಂತಿಕ ದಿವಾಳಿತನ ತನ್ನ ಕಬಂಧಬಾಹುಗಳನ್ನು ಚಾಚಿತ್ತು. ದಿನಬೆಳಗಾದರೆ ಸುಪ್ರಬಾತ, ಜ್ಯೋತಿಷ್ಯ, ದಿನ ಭವಿಷ್ಯ, ನಾಮಕರಣ,ಸತ್ಯನಾರಾಯಣ ಪೂಜೆ, ರಾಮನವಮಿ,ಆಯುಧ ಪೂಜೆ, ವ್ರತ,ಹರಕೆ,ತೀರ್ಥಯಾತ್ರೆ,ಗಣಹೋಮ, ಯೋಗ,ಧ್ಯಾನ ,ಪಾರಾಯಣ,ಸಾಮೂಹಿಕ ಪೂಜೆ ಮುಂತಾದ ಹೇಸಿಗೆಗಳಲ್ಲೇ ಮುಳುಗಿರುವ ನಾವು ಬಹುಶಃ ಮುಂದೆಂದೂ ಆ ‘ಸರಳ’ ದಿನಗಳಿಗೆ ಹಿಂತಿರುಗುವ ಸಾಧ್ಯತೆ ಕಂಡುಬರುತ್ತಿಲ್ಲ. ಇವೆಲ್ಲದರ ಮಧ್ಯೆ ನಮಗೆ ಉಳಿಯುವುದು (ಉಳಿಯಬೇಕಾಗಿರುವುದು)ಒಂದಿಷ್ಟು ವಿಷಾದ ಮತ್ತು ನಾಚಿಗೆ ಮಾತ್ರ.