Saturday, September 12, 2009

ಸಮಾಜಿಕ ಅನಿಷ್ಟಗಳ ಸಂಕ್ಷಿಪ್ತ ಪ್ರವರ

ಸಮಾಜಿಕ ಅನಿಷ್ಟಗಳ ಸಂಕ್ಷಿಪ್ತ ಪ್ರವರ.
ಸಾಮಾಜಿಕ ಅನಿಷ್ಟ?
ಸಮಾಜವೇ ಒಂದು ಅನಿಷ್ಟ ಎಂದು ನಿಮಗೆ  ಅನಿಸಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.ಅಷ್ಟರವರೆಗೆ ಸಮಾಜ ಗಬ್ಬೆದ್ದಿದೆ .ಅಥವಾ ನಮ್ಮ ಸಹನೆಯ ಕೊರತೆಯಿಂದ ಹಾಗೆ ಅನ್ನಿಸುತ್ತದೆ.ಇನ್ನೊಬ್ಬರು ಮಾಡುತ್ತಿರುವುದು ತಪ್ಪು ಎಂದು ಕೊರಗಿ,ಕೊರಗಿ,ಅವರಿಗೆ ಬುದ್ದಿಕಲಿಸುವುದು ಹೇಗೆಂದು ಯೋಚನೆ ಮಾಡುತ್ತಲೇ ಎಷ್ಟೋ ಜನ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಾರೆ. ಇನ್ನೆಷ್ಟೋ ಜನ ಈ ಬಗ್ಗೆ ದೊಂಬಿ ಗಲಾಟೆ ಮಾಡಿ ಹೊಟ್ಟೆಯುರಿಯನ್ನು ಕಡಿಮೆಮಾಡಿಕೊಳುತ್ತಾರೆ.
ನಮ್ಮ ಬದುಕನ್ನು ನರಕವನ್ನಗಿಸಿರುವ ಈ ಅಂಶಗಳು ಯಾವುವು? ನಾನು ಕಂಡತೆ,ನನ್ನ ಮೂಗಿನ ನೇರಕ್ಕೆ ಒಂದು ವಿಶ್ಲೇಷಣೆ ಮಾಡಲು ಪ್ರಯತ್ನಪಟ್ಟಿದ್ದೇನೆ. ಇದರಬಗ್ಗೆ ಆಕ್ಷೇಪ ವ್ಯಕ್ತಪಡಿಸುವ ಅಗತ್ಯಇಲ್ಲ.ಇದನ್ನು ಯಾರು  ಆಲೋಚನೆ ಮಾಡದೆ ಒಪ್ಪಬೇಕೆಂದು ಹೇಳಲು ನಾನೇನು ಧರ್ಮಗುರುವಲ್ಲ. ಇದು ನನ್ನ ಉಪಯೋಗಕ್ಕಾಗಿ ನಾನು ಬರೆಯುತ್ತಿರುವ  ಘನಿಕರಣಗೊಂಡಿರುವ (ಅಕ್ಷರೀಕರಣಗೊಂಡಿರುವ ಸ್ವಗತಗಳಷ್ಟೇ.

ನನ್ನ ಪ್ರಕಾರ ಸಮಾಜದಲ್ಲಿ ಮೂರು ಅನಿಷ್ಟಗಳಿವೆ.
ಸಂಪ್ರದಾಯ, ಸಂಸ್ಕೃತಿ ,ಧರ್ಮ ಈ ಮೂರು ಆ ಸಾಮಾಜಿಕ ಅನಿಷ್ಟತ್ರಯಗಳು.


ಇವು ಹೇಗೆ ಮಾನವನ ವಿಕಾಸವನ್ನು ಕುಂಟಿತಗೊಳಿಸುತ್ತದೆ? ಹೇಗೆ ಇವು ಮಾನವನ ಪ್ರಗತಿಯ ಪಥದಲ್ಲಿ ಅಡ್ಡಗೋಡೆಯಾಗಿವೆ ಎಂಬುದನ್ನೂ ಮುಂದಿನ ಅದ್ಯಾಯದಲ್ಲಿ ವಿವರಿಸುವ ಪ್ರಯತ್ನ ಮಾಡಿದ್ದೇನೆ.
ಸೂಕ್ಷ್ಮವಾಗಿ ನೋಡಿದರೆ ಈ ಮೂರರಲ್ಲಿ ಅಷ್ಟೇನೂ ವ್ಯತ್ಯಾಸ ಇಲ್ಲ. ಆದುದರಿಂದ ಇನ್ನು ಮುಂದೆ ಇವನ್ನೆಲ್ಲ್ಲಸೇರಿಸಿ ಅನಿಷ್ಟತ್ರಯಗಳು ಎಂದು ಕರೆಯುತ್ತೇನೆ.
ಇವುಗಳು ನಮ್ಮವು,ನಮ್ಮ ಸ್ವಂತದ್ದು, ನಮ್ಮ ಹಿರಿಯರದ್ದು ಎಂಬ ಮೂಡನಂಬಿಕೆ ಹಲವರಲ್ಲಿದೆ. ಆದರೆ ಇವುಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪಾಲುದಾರರಗಿದ್ದವರು ಕೆಲವುಮಂದಿ ಪಟ್ಟಬದ್ರ ಹಿತಾಸಕ್ತಿ ಹೊದಿದ್ದವರು ಮಾತ್ರ. ಆ ಹಿರಿಯರಿಗೂ ಈಗ ಇರುವ ಹೆಚ್ಚಿನವರಿಗೂ ಯಾವುದೇ ಸಂಬಂಧ ಇಲ್ಲ. ಆದರು 'ನಮ್ಮ ಹಿರಿಯರು ನೆಟ್ಟಿದ್ದು ''ನಮ್ಮ ಹಿರಿಯರು ನೆಟ್ಟಿದ್ದು ' ಎಂದುಕೊಂಡು ರಸ್ತೆಬದಿಯ ಆಲದಮರಕ್ಕೆ ಜೋತುಬೀಳುತಾರೆ. ಅಸಲಿಗೆ ಆ ಮರಕ್ಕೂ ಇವರ ಹಿರಿಯರಿಗೂ ಯಾವುದೇ ಸಂಬಂಧ ಇರುವುದಿಲ್ಲ. ಯಾರಾದರು ಸ್ವಲ್ಪ ವಿಶೇಷ ನಡವಳಿಕೆತೋರಿದರೆ "ಅಯ್ಯೋ ನಮ್ಮ ಸಂಸ್ಕೃತಿ ಹಾಳಾಗಿ ಹೋಯಿತಲ್ಲ "ಎಂದು ಕೆಲವರು ಲೊಚಗುಟ್ಟುತ್ತಾರೆ . ಅಯ್ಯೋ "ನಮ್ಮ " ಎಂದು ಅವರು ಹೇಳುವಾಗ ಅವರು ನಮ್ಮನ್ನು ಅಪ್ಪಿರುವುದು ಒಂದು ಬಾವನಾತ್ಮಕ ಸಂಬಂಧವಾಗಿ ನಮಗೆ ತೋರಬಹುದು. ಅವರು ನನ್ನನ್ನು ಆವರಲ್ಲಿ ಒಬ್ಬನನ್ನಗಿ ಪರಿಗಣಿಸುತಿದ್ದಾರೆ ಎಂಬುದು ನಮಗೆ ಅವರಲ್ಲಿ ಗೌರವ ಮೂಡಿಸಬಹುದು. ಆದರೆ ಅವರ ಈ ಕ್ರಿಯೆಯ ಹಿಂದೆ ನಿನ್ನ ಸ್ವಂತಿಕೆಯನ್ನು ,ವ್ಯಕ್ತಿತ್ವವನ್ನು ಬದಲಿಸುವ ಹುನ್ನಾರ ಇದೆ ಎಂಬುದನ್ನೂ ಅರ್ಥ ಮಾಡಿಕೊಳ್ಳುವ ಮೊದಲೇ ನಾವು ಅವರಂತೆಯೇ ಆಗಿ ನಾವು ಈ ಅನಿಷ್ಟತ್ರಯದ ವಕ್ತಾರರಾಗಿಬಿಡುತ್ತೇವೆ. ಆಮೇಲೆ ನಮ್ಮ ವಿವೇಚನೆ ಜಟಕಾ ಕುದುರೆಯಂತೆ ಆಚೆ ಈಚೆ ನೋಡದೇ ಒಂದೇ ದಾರಿಯಲ್ಲಿ ಸಾಗುತ್ತದೆ. ಆಗ ಸಮಾಜದಲ್ಲಿ ಹಿರಿಯರು ಎನ್ನಿಸಿಕೊಳುವವರಿಗೆ ನಿಮ್ಮಮೇಲೆ ಸವಾರಿ ಮಾಡಲು ಸುಲಭವಾಗುತ್ತದೆ.
ಈ ಕಾನೂನು ,ನೀತಿ ನಿಯಮ ರಚಿಸಿದವರೆಲ್ಲರು ಸವಾರಿ ಮಾಡಲು ಕುದುರೆ ಹುಡುಕುತಿದ್ದವರೆ. ಶಕ್ತಿಯಿಂದ ಕೆಲಸ ಆಗದಿದ್ದಾಗ ದೇವರ ಭಯ ಬಿತ್ತಿ ,ಅದೂ ಆಗದಿದ್ದಾಗ ಪುನರ್ಜನ್ಮದ ನಂಬಿಕೆ ಹುಟ್ಟಿಸಿ , ಆದೂ ಆಗದಿದ್ದಾಗ ನಾಳೆ ಒಳ್ಳೆಯದಾಗುತ್ತದೆ ಎಂಬ ಬಣ್ಣಬಣ್ಣದ ಕಥೆ ಲಾವಣಿ ,ಶ್ಲೋಕ ಗಳನ್ನೂ ಕಟ್ಟಿ ಅವರ ಗದ್ದೆಗಳನ್ನು ಉಳಲು ,ಯುದ್ದ ಮಾಡಲು, ಅರಮನೆ,ದೇಗುಲ ಕಟ್ಟಲು ಬಳಸಿಕೊಂಡಿದ್ದು ಬರೀ ಇತಿಹಾಸವಷ್ಟೇ ಅಲ್ಲ ,ಇಂದಿನ ವಸ್ತುಸ್ಥಿತಿ ಕೂಡ . ಒಬ್ಬ ರಾಜಕುಮಾರ ಸ್ವಲ್ಪ ದಿನ ಅಜ್ಞಾತನಾಗಿ ಬದುಕಿ ನಂತರ ಜನರ ನಡುವೆ ಪ್ರತ್ಯಕ್ಷನಾಗಿ ಅವರಿಗೆ ತಿಳಿಯದ ಹೊಸ ಲೋಕದ ಬಗ್ಗೆ ಹೇಳುತ್ತಾನೆ. ಜನ ಸುಲಭವಾಗಿ ಕುರಿಗಳಗುತ್ತಾರೆ.
ಹೊಸ ಸಾಮ್ರಾಜ್ಯಗಳು ಉದ್ಭವವಾಗುತ್ತದೆ. ಹೊಸ ಹೆಣಗಳು ಬೀಳುತ್ತವೆ.
ಯಾವುದು ಸರಿ ,ಯಾವುದು ತಪ್ಪು ಎಂದು ತಿಳಿಯಲು ವಿವೇಚನೆಯ ಸೂರ್ಯ ರಶ್ಮಿ ಸಾಕು. ಅದಕ್ಕೆ ಧರ್ಮ ,ಸಂಸ್ಕೃತಿ ಇತ್ಯಾದಿ ದೀಪಗಳ ಅವಶ್ಯಕತೆ ಇರುವುದಿಲ್ಲ.ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
ಸತ್ಯವನ್ನು ಎದುರಿಸಲಾಗದೆ ಹೆಂಡತಿ ಮಕ್ಕಳನ್ನು ಬಿಟ್ಟು ಕಾಡಿಗೆ ಓಡಿದವರು,ಕಾಡಿನ ನಿಗೂದತೆಗೆ ಒಗ್ಗಿಕೊಳ್ಳಲಾರದೆ ಸತ್ಯ ಸಿಕ್ಕಿದೆ ಎಂಬ ನೆಪದಲ್ಲಿ ನಾಡಿಗೆ ಓಡಿಬಂದವರ ಅಸ್ಫಷ್ಟ ಬಡಬಡಿಕೆಗಳು,ಕಟ್ಟುಕಥೆಗಳಲ್ಲಿ ನಮ್ಮ ಐಹಿಕ ಸಮಸ್ಯೆಗಳ ಉತ್ತರ ಹುಡುಕುತ್ತೇವೆ. ಅವರನ್ನು ಗೋಡೆಗೆ ನೇತುಹಾಕಿ ಪೂಜೆಮಾಡುತ್ತೇವೆ.ಅವರ ಪಾರಮಾರ್ಥಿಕ ಸುಳ್ಳಿನ ಕಂತೆಯನ್ನು ದೀವಟಿಗೆಯಂತೆ ಬಳಸುವುದರಿಂದ ನಾವು ಎಡವುತ್ತೇವೆ.ಮತ್ತೆ ಸಾವರಿಸಿಕೊಂಡು ಎದ್ದು ಅದೇ ದೀವಟಿಗೆ ಹಿಡಿದು ನಮ್ಮ ಪ್ರಯಾಣ ಮುಂದುವರೆಸುತ್ತೇವೆ. ಪುರಾತನ ಬೊದನೆಗಳು ಜೀವನವನ್ನು ದಾಸ್ಯದತ್ತ ತಳ್ಳುತ್ತಿದೆ.ಬಾರತವನ್ನು ಮೊಗಲರಿಗೆ,ಬ್ರಿಟಿಷರಿಗೆ ಕೊಟ್ಟದ್ದು ಈ ಬೋದನೆಗಳೇ.ನಾವು ನಮ್ಮನ್ನು ನಮ್ಮತನವನ್ನು  ಬಿಡಬೇಕೆಂದು ಅವರು ಹೇಳುತ್ತಾರೆ.ನಾವು ಕಳೆದುಕೊಂಡಿದ್ದನ್ನು ಅವರು ಹುಡುಕಿ ವಶಪಡಿಸಿಕೊಲ್ಲುತ್ತಾರೆ.ನಮ್ಮ ಪ್ರತಿಬಿಂಬಕ್ಕೇ ನಾವು ಪರಕೀಯರಾಗುತ್ತೇವೆ.
ಸನಾತನ ತತ್ವ ಗಳು ಎಂದಿಗೂ ಮನುಷ್ಯನಿಗೆ ಅನ್ನದ ದಾರಿತೊರಿಸಲಿಲ್ಲ ಬಾಷೆ ಮನುಷ್ಯ ಮನುಷ್ಯನ ನಡುವೆ ಸಂಪರ್ಕಕ್ಕೆ ಆನು ಮಾಧ್ಯಮ.ಆದರೆ ಸಂಸ್ಕೃತ ಸೃಷ್ಟಿಯಾಗಿ ಸಾವಿರಾರು ವರ್ಷಗಳಾದರೂ ಅದು ಸಾಮನ್ಯ ಸಂಪರ್ಕ ಮಾಧ್ಯಮವಾಗಬಲ್ಲ ಅರ್ಹತೆ ಬೆಳೆಸಿಕೊಳ್ಳಲಿಲ್ಲ.ದೇವರಿಗೆ ಅರ್ಥವಾಗುವ ಏಕೈಕ ಬಾಷೆ ಎಂಬ ಕಾರಣದಿಂದ ಅದು ತನ್ನ ಆಸ್ತಿತ್ವವನ್ನು ಉಳಿಸಿಕೊಂಡಿದೆ.





(ಮುಂದುವರಿಯುತ್ತದೆ )

No comments: