Thursday, January 11, 2007

ಗುರುಗೀತಾ

ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ:

ಗುರುವಿನ ಚರಣಾರವಿಂದಕ್ಕೆ ಎರಗುತ್ತಾ ಈ ಲೇಖನ ಬರೆಯಲು ಆರಂಬಿಸುತ್ತೇನೆ!!! ಯಾಕೆಂದರೆ ಗುರುವೇ ಎಲ್ಲವೂ ಆಗಿದ್ದಾನೆ!, ನಾವೆಲ್ಲರೂ ಅವನ ಗುಲಾಮ ರಾಗಬೇಕು .

ಗುಲಾಮರಾಗಬೇಕು!.

ಗುಲಾಮರಾಗಬೇಕು?

ಗುಲಾಮರಾಗಲೇ ಬೇಕೇ?

ಹೌದು ಬೇರೆ ದಾರಿಯೇ ಇಲ್ಲ. ಗುರು ಇಲ್ಲದೆ ಮುಕುತಿ ಇಲ್ಲ!

ಗುರು ಇಲ್ಲದೆ ಮುಕ್ತಿ ಇಲ್ಲವೇ ಇಲ್ಲ....ಉ..ಹೂಂ

ಹಾಗಾದರೆ ಗುಲಾಮಗಿರಿಗೂ ಗುರುತ್ವಕ್ಕೂ ಅವಿನಾಭಾವ ಸಂಬಂಧವಿದೆಯೇ?.



ನಮ್ಮ ಸಮಾಜದಲ್ಲಿ ಈ "ಗುರು" ಎಂಬ ಪಾತ್ರ ದರೆಗಿಳಿದು ನಮ್ಮ ಭೂಮಿಯನ್ನು ಪಾವನಗೊಳಿಸಿ ಎರಡು ಸಾವಿರ ವರ್ಷಗಳು ಸಂದರೂ,

ನಮ್ಮ ಚರ್ಮವನ್ನೇ ಸುಲಿದು ಚಪ್ಪಲಿ ಮಾಡಿಕೊಂಡರೂ,

ನಮ್ಮ ಮೇಲೆ ತಾಂಡವ ನೃತ್ಯ ಮಾಡಿದರೂ,

ನಮ್ಮ ಶ್ರಮದಿಂದಲೇ ಅವರ ದೇವಾಲಯಗಳನ್ನು, ಗುರುಕುಲಗಳನ್ನು,ಮದಾರಸಗಳನ್ನು,ಚೈತ್ಯಗಳನ್ನು,ಇಗರ್ಜಿಗಳನ್ನು,ಶಾಲೆಗಳನ್ನು ಕಟ್ಟಿದರೂ,

ವಿದ್ಯೆ ಹೇಳಿಕೊಡುವ ನೆಪದಲ್ಲಿ ಶಿಶುಗಳನ್ನು ಅವುಗಳ ತಾಯ್ತಂದೆಯರಿಂದ ಬೇರ್ಪಡಿಸಿ ಆಶ್ರಮದಲ್ಲಿ/ಗುರುಕುಲದಲ್ಲಿ ದನ ಕಾಯಲು ನೇಮಿಸಿದರೂ......

ನಮಗೆ "ಮುಕ್ತಿ" ಸಿಗಲೊಲ್ಲದು.

ಅಂದರೆ ಎಲ್ಲೋ ತಪ್ಪಾಗಿದೆ ಎಂದು ಅನ್ನಿಸುವುದಿಲ್ಲವೇ?.

ಸದ್ಯದ ಪರಿಸ್ತಿತಿಯಲ್ಲಿ ನಮಗೆ ಮುಕ್ತಿ ಬೇಕು ಎಂಬುದು ಪ್ರಶ್ನಾತೀತ.

ಅಂದರೆ ಈ " ಮುಕ್ತಿ"ಯನ್ನು ಹೇಗೆ ಗಳಿಸಬಹುದು.

ತಜ್ಞರು ಹೇಳುವಂತೆ ಗುರುವಿನ ಗುಲಾಮನಾಗುವ ಮೂಲಕ?

ಅಲ್ಲವೇ?,

ಹಾಗಾದರೆ ಎಲ್ಲಕ್ಕಿಂತಲೂ ಮೊದಲು ನಮಗೆ ಬೇಕಾಗಿರುವುದು ಈ "ಗುರು"ವಿನಿಂದಲೇ ಮುಕ್ತಿ !.

ಈ ಕೂಡಲೇ ನಾವು ನಮ್ಮ ಬೆನ್ನ ಮೇಲೆ ಹೊತ್ತು ಬಂದಿರುವ ಗುರುವೆಂಬ ಮೂಟೆಯನ್ನು ಕೆಳಗೆಸಿಯಬೇಕು.

ಸತ್ಯಾಕಾಮ ಒಂದೆಡೆ ಹೇಳಿದ್ದಾರೆ "ಗುರು ಹೆಗಲ ಮೇಲಿನ ಹೆಣ,ಅದನ್ನು ಇಳಿಸಿ ಮುಂದೆ ಸಾಗು".

ಅವರೂ ಸಹ ಕೆಲವರಿಗೆ ಗುರು ಅನ್ನಿಸಿಕೊಂಡವರೇ, ನನ್ನನ್ನು ಗುರು ಎಂದು ಮೆರೆಸಿ ಎಂದು ಅವರೇನೂ ಹೇಳಲಿಲ್ಲ. ಆದರೆ ಗುರು ಎಂಬ "ಊರುಗೋಲು" ಇಲ್ಲದೆ ನಡೆಯುವಷ್ಟು ದೈರ್ಯ ನಮ್ಮಲ್ಲಿ ಉಳಿದಿರಲಿಲ್ಲ. ದುರ್ಗಮವಾದ ಸಂಸಾರಸಾಗರವನ್ನು ದಾಟುವ ದಾರಿತೋರಿಸಲು ನಮಗೆ ಯಾರಾದರೂ ಬೇಕು ಎಂಬ ನಂಬಿಕೆಯನ್ನು ನಮ್ಮಲ್ಲಿ ಬಿತ್ತಲಾಗಿದೆ. ಅದೀಗ ನಮ್ಮ ಸುಪ್ತ ಮನಸ್ಸಿನಲ್ಲಿ ಹೆಮ್ಮರವಾಗಿ ಬೆಳೆದಿದೆ.

'ಅಯ್ಯೋ ,ಗುರು ಎಂಬುವವನು ಬೇಕಲ್ಲವೇ? ನಮಗೆ ವಿದ್ಯೆ ಹೇಳಿಕೊಡಲು, ನಮಗೆ ಮಾರ್ಗದರ್ಶನ ಮಾಡಲು.... ಮೇಲೆ ಹೇಳಿರುವ ಗುರು ಮಂತ್ರ ...ಆಹಾ ..ಇದು ಎಂತಾ ಅರ್ಥಗರ್ಬಿತವಾದದ್ದು' ಎಂದು ಸುಮಾರು ಮಂದಿ ಭಾವೀ ಗುರುಗಳು ಹಪಹಪಿಸುತ್ತಾರೆ.

ನಾನು "ಹೌದೇನೋ...ಇರಬಹುದೇನೋ" ಅಂದುಕೊಂಡಿದ್ದೆ!. ಹಾಡಲಿಕ್ಕೆ,ಕುಣಿಯಲಿಕ್ಕೆ,ಆಟಕ್ಕೆ,ಪಾಠಕ್ಕೆ ಎಲ್ಲದಕ್ಕೂ ಗುರು ಬೇಕೇ ಬೇಕೆನ್ನುವ ಪರಾವಲಂಬಿತನವನ್ನು ನಮ್ಮಲ್ಲಿ ಮೂಡಿಸಲಾಗಿದೆ. ಎಲ್ಲದಕ್ಕೂ ಶಾಸ್ತ್ರಗಳಿವೆ. ಗುರುವೆಂಬ ಅಹಂ ಹೊಂದಿರುವವರಿಗೆ ಜನರ ಜೀವನದಲ್ಲಿ ಮೂಗುತೂರಿಸುವ  ತೆವಲು ಎಷ್ಟೆಂದರೆ ಅವರು "ಕಾಮ" ವನ್ನು ಕೂಡ ಬಿಡಲಿಲ್ಲ.ವಾತ್ಸಾಯನ ನೆಂಬ ಋಷಿ ಅದರ ಬಗ್ಗೆ ಒಂದು ಶಾಸ್ತ್ರವನ್ನೇ ಸೃಷ್ಟಿಸಿದ. ಅದರ ಪಠಣೆಯನ್ನು ಕಡ್ಡಾಯ ಮಾಡಿಲ್ಲ ಸಧ್ಯ!

ಆಮೇಲೆ,ಯಾರೇನೇ ಮಾಡಲಿ,ಅದನ್ನು ಶಾಸ್ತ್ರದ ಹಿನ್ನೆಲೆಯಲ್ಲಿ ಒರೆಹಚ್ಚಿ ಇದು ಸರಿ,ಇದು ತಪ್ಪು ಎಂದು ನಿರ್ಧರಿಸುವ ಅಧಿಕಾರಗಳನ್ನು ಗುರುಗಳು ತಮಗೆ ತಾನೇ ಕೊಟ್ಟುಕೊಂಡಿದ್ದಾರೆ.. ಸಾವಿರಾರು ಜನರ ಆತ್ಮಗಳನ್ನು ತಣಿಸಬಲ್ಲ ಗಾಯಕ ಇವರ ಕಣ್ಣಿಗೆ ಅಯೋಗ್ಯನಂತೆ ಕಾಣುತ್ತಾನೆ. ಪ್ರೇಕ್ಷಕರನ್ನು ಕ್ಷಣಾರ್ಧದಲ್ಲೇ ನಿದ್ರೆಗೆ ತಳ್ಳುವವನು ಇವರ ಪ್ರಕಾರ ಒಳ್ಳೇ ಗಾಯಕ ಎನ್ನಿಸಿಕೊಳ್ಳುತ್ತಾನೆ. ಈ ಶಾಸ್ತ್ರಗಳ ಆಚರಣೆಗಳಲ್ಲಿ ಪ್ರತ್ಯಕ್ಷ ಉಪಯೋಗಗಳ್ಯಾವುವೂ ಸಿಗುತಿಲ್ಲವೆಂದು ಜನ ಖ್ಯಾತೆ ತೆಗೆಯಲು ಶುರು ಮಾಡಿದಕೂಡಲೇ ಆ ಆಚರಣೆಗಳಿಂದ ಪರೋಕ್ಷ ಉಪಯೋಗಗಳಿವೆಯೆಂದು ಗುಲ್ಲೆಬ್ಬಿಸಿದರು.ಪ್ರಾಚೀನ ನಾನ್ಸೆನ್ಸ್ ಗಳ ಪ್ರಚಾರಕ್ಕಾಗಿ ನವೀನ ತಂತ್ರಜ್ಞಾನಗಳ ಉಪಯೋಗ ಬಹಳ ವ್ಯವಸ್ತಿತವಾಗಿ ನಡೆಯುತ್ತಿದೆ.

ಭಾರತದ ದುರಂತವೆಂದರೆ ಹಳೆಯದು ನಾಶವಾದ ಕೂಡಲೇ ಅದರಜಾಗವನ್ನು ಇನ್ನೊಂದು ಹೊಸ ಕೊಳೆ ಅಕ್ರಮಿಸಿಕೊಳ್ಳುತ್ತವೆ.ಉದಾಹರಣೆಗೆ ಗುರುಕುಲಹೋಗಿ ವಿಶ್ವವಿದ್ಯಾನಿಲಯ ಬಂದವು. ಮೂಲಭೂತವಾಗಿ ಅದರ ಮೂಲ ಆಶಯಗಳು ಬೇರೆ ಬೇರೆ ಇದ್ದರೂ ಈಗ ಅವೂ ಗುರುಕುಲಗಳ ಲೆವೆಲ್ಲಿಗೆ ಇಳಿದುಬಿಟ್ಟಿವೆ. ಅವಕ್ಕಿಂತ ನೀಚ ಮಟ್ಟಕ್ಕಿಳಿದಿವೆ ಅಂದರೂ ಉತ್ಪ್ರೇಕ್ಷೆಯಾಗಲಾರದು.

ಅವುಗಳ ಉಗಮ,ಉದ್ದೇಶ,ಸ್ಥಿತಿ/ಗತಿ ಗಳನ್ನೊಮ್ಮೆ ಅವಲೋಕಿಸೋಣ.ಮೊದಲಿಗೆ ಗುರುಸ್ತುತಿಯಿಂದಲೇ ಆರಂಭಿಸೋಣ.



ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರಃ

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ



ನನ್ನ ಪ್ರಕಾರ ಈ ಶ್ಲೋಕ ಸಂಸ್ಕೃತದಲ್ಲೇ ಅತ್ಯಂತ ಅಸಹ್ಯವಾದ ಶ್ಲೋಕ. ಇದನ್ನು ಯಾವುದೇ ಕೆಲಸದ ಪ್ರಾರಂಭದಲ್ಲೇ ಹೇಳಬೇಕಂತೆ. ಏಕೆ?

ಯಾಕೆಂದರೆ ಇದು ಭಯವನ್ನು ಬಿತ್ತುವ ಸಾಧನ. ಏನಾದರು ಕೆಲಸ ಅಯಶಸ್ವಿ ಆದರೆ ಅದು ಗುರುನಿಂದೆಯ ಕಾರಣ ಆರೋಪಿಸಬಹುದಲ್ಲಾ. ನಮ್ಮಲ್ಲಿ ಗುಲಾಮಗಿರಿಯ ಮನಸ್ತಿತಿಯನ್ನು ಬಿತ್ತಲು ಈ ಶ್ಲೋಕವನ್ನು ಅತ್ಯಂತ ವ್ಯವಸ್ತಿತವಾಗಿ ಬಳಸಲಾಗುತ್ತದೆ.

ಗುರುವನ್ನು ಸಾಕ್ಷಾತ್ ದೇವರಿಗೆ ಹೋಲಿಸಿ ಹಾಡಲಾಗುತ್ತದೆ. ನಮ್ಮ ನಾಡಿನಲ್ಲಿ ಹಿಂದಿನ ಹಲವು ಆಚರಣೆಗಳು ಈಗಲೂ ಉಳಿದುಬಂದಿದೆ. ಬಲಿಕೊಡುವುದು, ದೇವದಾಸಿ ಪದ್ಧತಿ ಇತ್ಯಾದಿ. ಅದರಲ್ಲಿ ಗುರು ಶಿಷ್ಯ ಪರಂಪರೆಯೂ ಒಂದು.

ಗುರು-ಶಿಷ್ಯ ಪರಂಪರೆ ನಮ್ಮ ಸಮಾಜ ದಲ್ಲಿರುವ ಮೇಲು ಕೀಳು ಪದ್ದತಿಯ ಪ್ರಥಮ ಪ್ರವರ್ತಕ.

ಇಲ್ಲಿ ಗುರುವೇ ದೇವರು, ಶಿಷ್ಯನೇ ಭಕ್ತ.



ಮುಂದುವರಿದು ಇನ್ನೊದು ಶುಭಾಷಿತ ಅವಲೋಕಿಸೋಣ.

"ವಿದ್ಯೆ ಇಲ್ಲದವ ಪಶುವಿಗೆ ಸಮಾನ" (ವಿದ್ಯಾ ವಿಹಿನಂ ,ಪಶು ಸಮಾನಮ್)ಎಂಬ ಸಂಸ್ಕೃತ ನಾಣ್ನುಡಿ ಇದೆ.

ಅಂದರೆ ಇಲ್ಲಿ ಶಿಷ್ಯ ಎಂಬುವವನು ಗುರುವಿನ ಪಾಲಿಗೆ ಒಂದು ಪಶು ಇದ್ದಂತೆ!.ಯಾಕೆಂದರೆ ಅವನಿಗೆ ವಿದ್ಯೆ ಗೊತಿಲ್ಲವಲ್ಲ. ಹಿಂದಿನ ಯಾವ ಗುರುವೂ ಹೊಸದಾಗಿ ಸೇರಿದ ಶಿಷ್ಯನಿಗೆ ಬಂದ ಕೂಡಲೇ ವಿದ್ಯೆ ಹೇಳಿಕೊಡಲು ಆರಂಬಿಸುತ್ತಿರಲಿಲ್ಲ. ಅವನಿಗೇ ದನ ಕಾಯುವುದಕ್ಕೋ, ಕಸಗುಡಿಸುವುದಕ್ಕೋ ,ಒಟ್ಟಾರೆ ಗುರುವಿನ ಚಾಕರಿಗೆ ನೇಮಿಸುತಿದ್ದರು. ಆ ಗುರು ಇವನ ಸೇವೆ ಯಿಂದ ಸಂತೃಪ್ತನಾದರೆ ಮಾತ್ರ ವಿದ್ಯೆ ಹೇಳಿಕೊಡುತಿದ್ದ. (ಇಂದು ಇಂತಹ ಪದ್ಧತಿ ಹಳ್ಳಿಯ ಗರಡಿ ಮನೆಯಲ್ಲಿ ಕೂಡ ನೋಡಬಹುದು. ಶಿಷ್ಯ ಮೊದಲು ಉಸ್ತಾದ್ ನಿಗೆ ಮಾಲೀಶು ಮಾಡಬೇಕಾಗಿರುತ್ತದೆ. ಆಮೇಲೆ ಸುಮಾರು ದಿನ ಅವನು ಅವರಿಗೆ ತೂಕದ ವಸ್ತು ಮುಟ್ಟಲು ಬಿಡುವುದಿಲ್ಲ. ಚಿಕ್ಕ ಪುಟ್ಟ ವ್ಯಾಯಾಮ ಬಸ್ಕಿ ಹೊಡೆಯುವುದು ಇತ್ಯಾದಿ ಮಾಡಿಸುತ್ತಾನೆ ಆದರೆ ತನ್ನ ಕೆಲಸ ಮಾತ್ರ ಚೆನ್ನಾಗಿ ಮಾಡಿಸಿಕೊಳ್ಳುತ್ತಾನೆ.ಇದು ಬಹಳ ಸೈಂಟಿಫಿಕ್ ಕ್ರಮ ಎನ್ನುವವರು ಸಹ ಇದ್ದಾರೆ. ಆದರೆ ನಾವು ಇಲ್ಲಿ ಗಮನಿಸಬೇಕಾದ್ದು ಈ ಉಸ್ತಾದ್ ಗಳ ಮನೋಭಾವ.

ಅಂದರೆ ,ಈ ಚಾಕರಿ ಮಾಡಿ ವಿದ್ಯೆ ಕಲಿಯಬೇಕಾದರೆ ,ಅಂದರೆ ಬರೀ ಅಕ್ಷರ ಅಭ್ಯಾಸವನ್ನು ಮಾಡಬೇಕಾದರೆ ಹತ್ತಾರು ವರುಷಗಳೇ ಆಗಿ ಹೋಗುತಿತ್ತು. ಆದರೆ ಗುರುವಿನ ಮಗ ಮಾತ್ರ ಬಹಳ ವೇಗವಾಗಿ ಎಲ್ಲವನ್ನೂ ಕಲಿತು ರಾಜನ ಅಸ್ಥಾನ ಸೇರಿಬಿಡುತಿದ್ದ.



ಸರಿ, ಈಗ ಇನ್ನೊದು ಹಿತವಚನವನ್ನು ಅವಲೋಕಿಸೋಣ.

"ಗುರು ಪತ್ನ್ಯಾಗಮನ ಮಹಾಪಾಪ " ಎಂಬ ವಾಕ್ಯವನ್ನು ಯಾವುದೂ ಸಂಸ್ಕೃತ ಶ್ಲೋಕದಲ್ಲಿ ಒತ್ತಿ ಒತ್ತಿ ಹೇಳಲಾಗಿದೆ.

ಅಂದರೆ ಗುರುಗಳು ತಮ್ಮ ಶಿಷ್ಯರಿಂದ ಎಲ್ಲಾ ಖಾಸಗಿ ಕೆಲಸ ಮಾಡಿಸಿಕೊಳ್ಳುತಿದ್ದರು. ಆಗ ಬೇಸತ್ತ ಶಿಷ್ಯರುಗಳ ಕೆಲವು ದುಸ್ಸಹಾಸಗಳು ಇಂತಹ ಶ್ಲೋಕಗಳ ರಚನೆಗೆ ಕಾರಣವಾಗಿದ್ದವು ಎಂದು ನಾವು ನಿಸ್ಸಂದೇಹವಾಗಿ ಭಾವಿಸಬಹುದು.

ಇಷ್ಟಲ್ಲದೆ ಗುರುವು ದಕ್ಷಿಣೆಯನ್ನೂ ಕೂಡ ಚೆನ್ನಾಗಿಯೇ ಸುಲಿಯುತಿದ್ದ. ಆದರೆ 'ಜೀವಮಾನವಿಡೀ ನನಗೆ ಋಣಿಯಾಗಿರು' ಎಂಬುದನ್ನು ಶಿಷ್ಯನ ತಲೆಗೆ ತುಂಬುತಿದ್ದ. ಜೀವಮಾನವಿಡೀ ಶಿಷ್ಯನನ್ನು ಸುಲಿಯುವ ಐಡಿಯಾ ಇದು. ನಾವು ದಕ್ಷಿಣೆ /ಫೀ ಕೊಡುವುದರಿಂದ ನಾವು ಅವನ ಗಿರಾಕಿಗಳು. ಕಷ್ಟಮರ್ಸ್ .ನಾವು ಕಲಿತಮೇಲೂ ಅವನಿಗೇ ಗೌರವ ಕೊಡುವುದರಲ್ಲಿ ತಪ್ಪೇನಿಲ್ಲ . ಆದರೆ ಕಪ್ಪವನ್ನೇಕೆ ಕೊಡಬೇಕು ಎಂದು ಕೆಲವರು ಅವಿಧೇಯರು ಪ್ರಶ್ನಿಸಲಾರಂಭಿಸಿದರು.

ಅದಕ್ಕೆ ಕೆಲವರು ಹೀಗೆ ಹೇಳುತ್ತಾರೆ,"ಎಲ್ಲಾ ಗುರುಗಳು ಕೆಟ್ಟವರಲ್ಲ.ಕೆಲವರು ಬಹಳ ಪ್ರೀತಿಯಿಂದ,ಅಚ್ಚುಕಟ್ಟಾಗಿ ವಿದ್ಯೆ ಹೇಳಿಕೊಡುತ್ತಾರೆ.ಅದಕ್ಕೆ ನಾವು ಅವರನ್ನು ಅಷ್ಟಾಗಿ ಹಚ್ಕೊಂಡಿರುವುದು".

ಹೌದೆ?,ನಿಮ್ಮ ಮನೆ ಕಟ್ಟಿದ ಮೇಸ್ತ್ರಿ ಅಚ್ಚುಕಟ್ಟಾಗಿ ಮನೆಕಟ್ಟಿಕೊಟ್ಟಿಲ್ಲವೇ(ಕೊಟ್ಟಿಲ್ಲದಿದ್ದರೆ ಮುಂದಿನ ಉದಾಹರಣೆಗೆ ಹೋಗಿ),ನಿಮ್ಮ ಮನೆ ಕೆಲಸದಾಕೆ ಚನ್ನಾಗಿ ದೂಳು ಹೊಡೆದು ನಿಮ್ಮನ್ನು ರೋಗಗಳಿಂದ ರಕ್ಷಿಸುವುದಿಲ್ಲವೇ, ಇಸ್ತ್ರಿಹಾಕುವವನು ನಿಮ್ಮ ಅಮೂಲ್ಯ ಸಮಯ ಉಳಿಸುವುದಿಲ್ಲವೇ?, ಆದರೂ ಇವರ್ಯಾರಿಗೂ ಮರ್ಯಾದೆ ಕೊಡಬೇಕೆಂದಿಲ್ಲ!. "ದುಡ್ಡು ಕೊಟ್ಟಿಲ್ಲವೇ? ಸೇವೆ ಮಾಡುವುದು ಅವರ ಧರ್ಮ" ಎನ್ನುತ್ತೀರಿ . ಆದರೆ ಗುರು ಮಾತ್ರ ಆ ಧರ್ಮದಿಂದ ಬಂಧಿತನಾಗಿಲ್ಲ.ಅವನು ದಕ್ಷಿಣೆ ತೆಗೆದುಕೊಳ್ಳಬಹುದು.ಆದರೆ ಅದಕ್ಕೆ ತಕ್ಕ ಸೇವೆ ನೀಡುವುದು ಕಂಪಲ್ಸರಿಯಲ್ಲ.ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಇಲ್ಲಿ ನಮ್ಮ ಜಾತಿ ಪದ್ದತಿಯ ವಾಸನೆ ಹೊಡೆಯುತ್ತದೆ. ಈ ಜಾತಿ ಪದ್ಧತಿ ಎಂದರೆ ಬರಿ ಬ್ರಾಹ್ಮಣ ಎಂದಲ್ಲ. ಬೌಧಿಕ ಸಂಪತ್ತನ್ನು ಶೇಕರಿಸಿ ಇಟ್ಟು ಕೊಂಡಿರುವ ಜನ ಎಂದು.ಈಗಿನ ಶಿಕ್ಷಣತಜ್ನರನ್ನು ಸಹ ಈ ಜಾತಿಗೇ ಸೇರಿಸಬಹುದು.ಅಂದರೆ ಉಳ್ಳವರದ್ದೇ ಒಂದು ಜಾತಿ. (ಇದನ್ನು ನೀವು "ಯು.ಜಿ.ಸಿ. ಶ್ರೇಣಿ ವೇತನ ಪಡೆಯುವರದ್ದು" ಎಂದು ಓದಿಕೊಂಡರೆ ಅದು ನನ್ನ ತಪ್ಪಲ್ಲ).

ಗುರುಗಳೆಂಬುವರ ಈ ಗಲೀಜು ಮನಸ್ತಿತಿ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಇಸ್ಲಾಂನಲ್ಲೂ ಇದೆ.( ಪೀರ್-ಮುರೀದ್ ಸಂಪ್ರದಾಯ ಎನ್ನುತ್ತಾರೆ.) ಮಹಮದ್ ಗವಾನ್ ಗುಲಬರ್ಗಾದಲ್ಲಿ ಮದಾರಸ ಮಾಡಿದ್ದು ಯಾಕೆಗೊತ್ತೆ?, ಅದಕ್ಕೆ ಆಗಿನ ಇರಾನಿ/ತುರಾನಿ/ಧಖನ್ನಿ ಮುಸ್ಲಿಮರಲಿದ್ದ ಜಾತಿ ಜಗಳವೂ ಒಂದು ಕಾರಣ. ಇರಾನಿ ಪಕ್ಷವು ಮದಾರಸಾದ ಮೂಲಕ ಆದಷ್ಟು ಇರಾನಿಗಳಿಗೆ ಬೆಂಬಲ ನೀಡಿ ಬಹುಮನಿ ರಾಜ್ಯವನ್ನು ನಿಯಂತ್ರಿಸುವ ಹುನ್ನಾರವು ಇದರಲ್ಲಿತ್ತು.

ಇನ್ನು ಇಂದಿನ ಡಿಗ್ರೀ ಕಾಲೇಜುಗಳ ಗುರುಮಹಾಶಯನೋ ,ಅವನು ದಿನಕ್ಕೆರಡು ಕ್ಲಾಸ್ ತೆಗೆದುಕೊಂಡರೆ ಅವನ ಜವಾಬ್ದಾರಿ ಮುಗಿಯಿತು.ದಿನವೆಲ್ಲಾ ಓತ್ಲಾ ಹೊಡೆಯಬಹುದು. ವಿಶ್ಯವಿಧ್ಯಾಲಯದ ಈ ಆಧುನಿಕ ಗುರುಗಳನ್ನು ಮಾತಾಡಿಸುವಂತೆಯೇ ಇಲ್ಲ. ಸೆನ್ಸಸ್, ಎಲೆಕ್ಷನ್ ಡ್ಯೂಟಿ ಇವುಗಳಿಗೆ ಅವರನ್ನು ಹಾಕುವಂತಿಲ್ಲ. ಸಮಾಜದ/ಸರ್ಕಾರದ ವೇತನ ಪಡೆಯುವ ಈ ಪುಣ್ಯಾತ್ಮರನ್ನು ಸಾರ್ವಜನಿಕ ಕೆಲಸಕ್ಕೆ ಬಳಸುವಂತಿಲ್ಲ. ಮೇಲಾಗಿ ಸರ್ಕಾರದ ಶಿಸ್ತಿನ ನಿಯಮಗಳು ಅವರಿಗೆ ಅನ್ವಯವಾಗುವುದಿಲ್ಲ. ಒಟ್ಟಾರೆ ಈ ಗುರುಗಳು ಅಂದು,ಇಂದು,ಎಂದೆಂದೂ ಸಾಮಾಜಿಕ ಹೊರೆಗಳೇ.

ಸತ್ಯಕಾಮ ಹೇಳಿದಂತೆ ಈ ಹೆಗಲ ಮೇಲಿನ ಈ ಹೆಣಗಳನ್ನು ಎಸೆದು ಮುಂದೆ ಸಾಗುವುದು ಸಾಧ್ಯವೇ?

ಈ ಜಾತೀಯತೆ ಎಂಬುದು ಹುಲುಸಾಗಿ ಬೆಳೆಯುವುದು ಸ್ಲಂ ನಲ್ಲಿ ಅಲ್ಲ. ಫೂಟ್ ಪಾತ್ ಗಳಲ್ಲಿ ಅಲ್ಲ.ಬದಲಾಗಿ ಸರ್ಕಾರಿ ಕಚೇರಿಗಳ,ವಿಶ್ವವಿದ್ಯಾಲಯಗಳ ಮೊಗಸಾಲೆಗಳಲ್ಲಿ!. ಇಲ್ಲಿ ಯಾರು ಮೆರೆಯುತ್ತರೋ ಅವರದೇ ಮೇಲ್ಜಾತಿ. ಉಳಿದವರು ಕೆಳಜಾತಿ. ಕೆಲವರು ಇಲ್ಲಿಗೆ ಬರುವಾಗ ಕೆಳಜಾತಿ, ಹೋಗುವಾಗ ಮೇಲ್ಜಾತಿ!.

ಇತ್ತೀಚಿಗೆ ಒಂದು ವಿಶ್ವವಿಧ್ಯಾಲಯದ ಮಾಜಿ ಕುಲಪತಿಯೊಬ್ಬ ಅವನ ಅಪ್ಪನಂತೆಯೇ ವಿಪರೀತ ಜಾತಿ ರಾಜಕಾರಣ ಮಾಡಿದ ಕಾರಣ ಅವನ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕೆಂದು ಸರ್ಕಾರವು ವಿಶ್ವವಿದ್ಯಾಲಯಕ್ಕೆ ಸೂಚಿಸಿದ ಘಟನೆ ನೀವು ಓದಿರಬಹುದು.ಅಪ್ಪ ಮಕ್ಕಳಿಬ್ಬರೂ ವಿಧಾನಸೌಧಕ್ಕೆ ಬಂದು ಮುಖ್ಯಮಂತ್ರಿಯ ಕಾಲು ಹಿಡಿದು ಬಚಾವಾದರು) .ಹೀಗೆಯೇ ಸಾಗುತ್ತದೆ ಗುರುಕುಲ/ವಿ.ವಿ ಗಳ ಗಲೀಜು ಪ್ರವರ. ಇಲ್ಲಿ ಪರಂಪರೆ ಎಂದರೆ ಜಾತೀಯತೆ, ಗುಂಪುಗಾರಿಕೆ.

ಗುರು-ಶಿಷ್ಯ ಪರಂಪರೆ ಒಂದು ವಿಧದ ಜೀತಪದ್ದತಿ. ಶೂದ್ರ/ಕ್ಷತ್ರಿಯರು ದೈಹಿಕ ಬಲದಿಂದ ಜನರನ್ನು ಗುಲಾಮಗಿರಿಗೆ ತಳ್ಳಿದರೆ ಗುರು ಬುದ್ದಿಬಲದಿಂದ ಶಿಷ್ಯರನ್ನು ನಿಯಂತ್ರಿಸುತಿದ್ದ. ಯಂತ್ರಗಳು ಬಂದಮೇಲೆ ಜೀತದಾಳುಗಳ ಅಗತ್ಯ ಕಡಿಮೆಯಾಯಿತು. ಅಧಿಕಾರದಲ್ಲಿದ್ದ ಮೇಲ್ವರ್ಗದ ಜನ ಜೀತಪದ್ದತಿ ನಿರ್ಮೂಲನೆ ಕಾಯ್ದೆ ಜಾರಿಗೊಳಿಸಿ ಜೀತದಾಳುಗಳನ್ನು ಸಾಕುವ ಜವಾಬ್ದಾರಿಯಿಂದ ತಪ್ಪಿಸಿಕೊಂಡರು.

ಆದರೆ ಗುರುಗಳ ಸಂಖ್ಯೆ ಕಡಿಮೆಯಾದ ಕೂಡಲೇ ಆ ಜಾಗವನ್ನ ಶಿಕ್ಷಕರು ಆಕ್ರಮಿಸಿಕೊಂಡು "ಗುರು ಬ್ರಹ್ಮ ..ಗುರು ವಿಷ್ಣು.....ಮುಂದುವರಿಸಿದರು. ಈಗಲು ಕೆಲವು ಕಡೆ internal marks ನೀಡಲು ಬಹಳ ಸತಾಯಿಸಲಾಗುತ್ತದೆ. ಇನ್ನು ಸಂಶೋದನಾ ವಿಧ್ಯಾರ್ಥಿಗಳನ್ನು ಗೈಡ್ಸ್ಗಳು ಯಾವ ರೀತಿ ಹಿಂಸಿಸುತ್ತಾರೆ ಎಂಬುದನ್ನು ಅನುಭವಿಸಿಯೇ ತಿಳಿಯಬೇಕು. ಇಂತಹ ಪರಿಸ್ತಿತಿಯಲ್ಲಿ ಮನಸಿಲ್ಲದಿದ್ದರೂ 'ಗುರು'ಗಳಿಗೆ ಗೂಸ ನೀಡಲೇ ಬೇಕಾದ ಅನಿವಾರ್ಯತೆಯನ್ನು ಶಿಷ್ಯರು ಆಗಾಗ ಎದುರಿಸುತಿದ್ದಾರೆ.



ಇನ್ನೊಂದು ಶಾಸ್ತ್ರದಲ್ಲಿ ಹೇಳಿದೆ. ಶಿಷ್ಯನು ಮೊದಲು ಗುರುವನ್ನು ಸಮೀಪಿಸಬೇಕು. ನಂತರ ಹಿತವಾದ ಮಾತುಗಳಿಂದ ದೈನ್ಯವಾಗಿ ಅವನ ಮನಸ್ಸಂತೋಷಪಡಿಸಬೇಕು.ಅವನ ಬಗ್ಗೆ ಶ್ರದ್ದೆಯನ್ನು ತಾಳಬೇಕು.

ಸೂಕ್ಷ್ಮವಾಗಿ ಗಮನಿಸಿ.ಇಲ್ಲಿ ಶ್ರದ್ದೆ ಇರಬೇಕಾದ್ದು ಗುರುವಾಕ್ಯದ ಮೇಲೆ. ಜ್ಞಾನದ ಮೇಲಲ್ಲ !.

ತಪ್ಪೇನು?, ವಿದ್ಯಾರ್ಚನೆಯಲ್ಲಿ ಶ್ರದ್ದೆ ಅತಿ ಮುಖ್ಯ ....ಹೀಗೆ ಸಾಗುತ್ತದೆ ಹಳಬರ ತರ್ಕ.

ಹಳಬರು ಹಾಳಾಗಿ ಹೋಗಲಿ. ಈಗಿನ ಸೆಕ್ಯುಲಾರ್ ಗುರುಗಳು ಅವರಿಗಿಂತಲೂ ಕೀಳು.ಬೇರೆಯವರಿಂದ ಮರ್ಯಾದಿ ಬೇಡುವ ವಿಷಯದಲ್ಲಿ ಇವರು ಹಳಬರಿಗಿಂತ ಒಂದು ಹೆಜ್ಜೆ ಮುಂದೆ. ನ್ಯಾಯವಾದ ಕಾರಣಕ್ಕೆ ಗೂಸಾ ನೀಡಿದರೆ 'ಇಂದಿನ ವಿದ್ಯಾರ್ಥಿಗಳಲ್ಲಿ ಮೌಲ್ಯವೇ ಇಲ್ಲ" ಎಂದು ಆರೋಪಿಸುತ್ತಾ ಓಡಾಡುತ್ತಾರೆ.

ಕೆಲವರು ಹೇಳಬಹುದು. ನಿಮಗೆ ಸೈಕಲ್ಹೇಳಿಕೊಡಲು ಗುರು ಬೇಕಾಗಲಿಲ್ಲವೇ?,ಈಜನ್ನು ಕಲಿಸಿದವನು ಗುರು ಅಲ್ಲವೇ?, ಎಷ್ಟೊಂದು ವಿಷಯವನ್ನು ನಾವು ಆಟವಾಡುತ್ತಾ ಕಲಿತುಬಿಟ್ಟಿದ್ದೇವೆ. ಅಲ್ಯಾರು ನಾನು ನಿನ್ನ ಗುರು,ನೀನು ನನ್ನ ಕಾಲು ಹಿಡಿ ಎಂದು ಅಂಗಲಾಚಲಿಲ್ಲ. ಕೆಲವೊಮ್ಮೆ ಗುರುಗಳೇ ಶಿಷ್ಯರ ಬೆನ್ನು ಹತ್ತಿ ಬರುತ್ತಾರೆ.

ಹಿಂದಿನ ಎಲ್ಲಾ ಗುರುಗಳು ಅಷ್ಟೇ, ಕಾಡಿಗೆ ಹೋದಂತೆನಟಿಸಿ ನಂತರ ಶಿಷ್ಯರನ್ನು ನಾಯಿಯಂತೆ ಬೆನ್ನಟ್ಟುವವರೇ. ಇತಿಹಾಸದಲ್ಲಿ ಬಂದು ಹೋದ ಎಲ್ಲಾ ಬೋದಕರನ್ನು ತೆಗೆದುಕೊಳ್ಳಿ. ಏನಾದರೂ ದೊಂಬರಾಟ ಮಾಡಿ ಗುಂಪು ಸೇರಿಸುವುದು.ಆಮೇಲೆ ಭಾಷಣ ಕೊರೆಯುವುದು. ಇತಿಹಾಸ ವನ್ನೊಮ್ಮೆ ಅವಲೋಕಿಸಿ.ಈ ಕೊರೆತದಿಂದ ಏನಾದರೂ ಉಪಯೋಗವಾಗಿದೆಯೇ?.ಈ ಜ್ಞಾನಿಗಳು ಬಂದು ಹೋದ ಸಾವಿರಾರು ವರುಷ ಆದಮೇಲೂ ಅಜ್ಞಾನದ ಬೆಳಕು ಹಾಗೇ ಇದೆ.

ಈ ಭಜನೆ,ಧ್ಯಾನ,ನಾಮ ಸಂಕೀರ್ತನೆ,ಪ್ರಾರ್ಥನೆ,ನಮಾಜು,ಕಲ್ಮಾ ಇತ್ಯಾದಿಗಳು ನಮ್ಮ ಧರ್ಮ ಪ್ರವರ್ತಕರು ಹೇಳಿಕೊಟ್ಟದ್ದು ಅಂಥಹ ದುರುದ್ದೇಶದಿಂದಲೇ. ಯಾವ ಸಂತನೂ ಕಾಡಲ್ಲಿ ಹೋಗಿ ದ್ಯಾನ ಮಾಡುತ್ತಾ ತಾನು ಕಂಡ ದೇವರೊಂದಿಗೆ ಅರಾಮವಾಗಿರಲಿಲ್ಲ. ಅವರಿಗೆ ಸತ್ಯದ ದರ್ಶನವಾಯಿತೋ,ಇಲ್ಲವೋ ಆದರೆ ಅವರು ನಾಡಿಗೆ ನುಗ್ಗಿ ಜನರನ್ನು ಬೆನ್ನತ್ತುವ ಚಟವನ್ನು ಮಾತ್ರ ಬಿಡಲಿಲ್ಲ. ಹೌದು,ಇವುಗಳಲ್ಲಿ ಕೆಲವು ಅರ್ಥಗರ್ಬಿತವಾದ ವಸ್ತುಗಳು ಇದ್ದಿರಬಹುದು. ಆದರೆ ಇವು ಈಗ ಉಳಿದಿರುವ ಪೂಜನೀಯವೆನ್ನಿಸಿಕೊಂಡಿರುವ ಧರ್ಮಗಳ,ಗುರುಗಳ ಅವಿಷ್ಕಾರಗಳಲ್ಲವೇನೋ ಎಂದು ನನಗೆ ಸಂಶಯಬರುತ್ತಿದೆ. ಬಾಹ್ಯ ಪ್ರಚಾರಕ್ಕೆಂದೇ ಟೊಂಕ ಕಟ್ಟಿ ನಿಂತ ಈ ಸಮಾಜಮುಖಿ ಧರ್ಮಗುರುಗಳು ಅಂತರಿಕ ಜ್ಞಾನದ ಬಗ್ಗೆ, ವ್ಯಕ್ತಿಗತ ಚಿಂತನೆಯ ವಿಕಸನದ ಬಗ್ಗೆ ಹೆಚ್ಚು ಗಮನ ಕೊಟ್ಟು ಈ ಕ್ಷೇತ್ರಗಳಲ್ಲಿ ಮಣ್ಣು ಹೊತ್ತಂತೆ ಕಂಡುಬರುತ್ತಿಲ್ಲ. ಬಹುಷಃ ಹೆಚ್ಚಾಗಿ ಜನಗಳ ಸಂಪರ್ಕಕ್ಕೆ ಬರದೆ ಸಮಾಜದಿಂದ ದೂರವಾಗಿ ಸಾಧನೆಯಲ್ಲಿ(?) ನಿರತರಾಗಿದ್ದ,ಇಂದು ಅಳಿದು ಹೋಗಿರುವ ಅಜೀವಿಕರಂತಹ ಪಂಥಗಳ ವಿಚಾರಗಳನ್ನೇ ಕದ್ದು ಕೆಲವು ಸಣ್ಣಪುಟ್ಟ ಬದಲಾವಣೆಯೊಂದಿಗೆ ಪ್ರಯೋಗಿಸುವ ಮೂಲಕ ಸಮಾಜವನ್ನು ತನ್ನ ಸುಪರ್ದಿಗೆ ತರುವ ಪಯತ್ನವನ್ನು ಈ ಎಲ್ಲಾ ಧರ್ಮಗಳೂ(ಈಗ ಉಳಿದಿರುವ) ಮಾಡಿರಬಹುದು.



ಇಲ್ಲಿಯವರೆಗೆ ವ್ಯವಸ್ಥೆಯ ಹೊರಗಿಂದ ಗುರುಕುಲ ಪದ್ದತಿಯನ್ನು ನೋಡಿದ್ದಾಯಿತು.ಈಗ ಒಳಗಿಂದ ನೋಡೋಣ.

ಏಕೆ ಗುರು ತನ್ನ ಶಿಷ್ಯನ ಬೆನ್ನು ಹತ್ತುತ್ತಾನೆ?.

ಏಕೆ ಶಿಷ್ಯನನ್ನು ಯಾವಾಗಲು ತನ್ನ ಕಣ್ಗಾವಲಿನಲ್ಲಿ ಇಟ್ಟುಕೊಳ್ಳಬಯಸುತ್ತಾನೆ?,

ಏಕೆ ಸುಧೀರ್ಘವಾದ ಭಾಷಣಗಳನ್ನು /ಪ್ರವಚನಗಳನ್ನು ಮಾಡುತ್ತಾನೆ?.

ಅದು ನಿಮ್ಮ ಒಳ್ಳೆಯದಕ್ಕೆ ಎಂದು ಅವನು ಹೇಳಿದ್ದನ್ನು ನಂಬಿದರೆ ನಿಮ್ಮ ಊಹೆ ತಪ್ಪು.ಈ ಸುಧೀರ್ಘ ಬೋಧನೆಗಳ ಮೂಲ ಉದ್ದೇಶಗಳು ಐದು.

೧)ನಿಮ್ಮ ಅಮೂಲ್ಯವಾದ ಸಮಯವನ್ನ ಕಿತ್ತುಕೊಳ್ಳುವುದು.

೨)ನಿಮ್ಮ ಸುತ್ತಲು ಇರುವ ಮೌನವನ್ನು ನಾಶಗೊಳಿಸುವುದು.

೩)ನಿಮ್ಮ ಏಕಾಂತಕ್ಕೆ ಭಂಗ ತರುವುದು.

೪) ನಿಮ್ಮ ಕೂತೂಹಲವನ್ನು/ಆಸಕ್ತಿಯನ್ನು ನಾಶಮಾಡುವುದು.

೫) ನಿಮ್ಮಿಂದ ಬಿಟ್ಟಿ ಕೆಲಸ ಮಾಡಿಸಿಕೊಳ್ಳುವುದು.

ದ್ರೋಣ,ಪರಶುರಾಮರನ್ನೇ ತೆಗೆದುಕೊಳ್ಳಿ. ಒಂದು ಬಿದಿರನ್ನು ಬೆಂಡ್ ಮಾಡಿ ಹಗ್ಗ/ತಂತಿ ಕಟ್ಟಿ ಬಾಣ ಹೂಡುವುದನ್ನು ಕಲಿಸಲು ಎಷ್ಟೆಲ್ಲಾ ನಖರಾ ಮಾಡುತಿದ್ದರು.ಇವರು ವರುಷಾನುಗಟ್ಟಲೆ ಕಲಿಸುತಿದ್ದುದ್ದನ್ನು ಏಕಲವ್ಯ ಕೆಲವೇ ದಿನಗಳಲ್ಲಿ ಕಲಿತ. ಗುರು ಯಾವಾಗಲು ಏನನ್ನೂ ಸ್ಪುಟವಾಗಿ ಹೇಳುವುದಿಲ್ಲ. ಎಲ್ಲಾ ಉದ್ದುದ್ದಾ ಕಥೆಗಳೇ.ಇದರ ಉದ್ದೇಶ, ಅವರ ಉಪದೇಶ ನಿಮಗೆ ಚೆನ್ನಾಗಿ ಅರ್ಥ ಆಗಲಿ ಎಂದಲ್ಲ. ಬದಲಿಗೆ ನಿಮ್ಮ ಸಮಯ ಪೋಲಾಗಲಿ ಎಂದು. ಯಾಕೆಂದರೆ ನಿಮಗೆ ಸಮಯಾವಕಾಶ ನೀಡಿದರೆ ನೀವೇ ಕಲಿತು ಬಿಡುತ್ತೀರಿ. ಆಗ ಗುರುವಿಗೆ ಎಲ್ಲಿದೆ ಅವಕಾಶ?.

ಮಾನವನ ಮಿದುಳು ಚಟುವಟಿಕೆಯ ಯಂತ್ರ. ಅದೆಂದೂ ನಿಲ್ಲುವುದಿಲ್ಲ.ಆದರೆ ಅದು ತಮಗೆ ಬೇಕಾದ ದಾರಿಯಲ್ಲೇ ನಡೆಯಬೇಕು ಎಂಬುದು ಈ ಗುರುಗಳ ವಿಕೃತ ಮನಸ್ಸಿನ ಹುನ್ನಾರ. ಅದುದರಿಂದಲೇ ಮನುಷ್ಯನ ಏಕಾಂತವನ್ನು ಕಸಿಯಲು ಎಲ್ಲಿಲ್ಲದ ಪ್ರಯತ್ನ. ಧರ್ಮಗಳ ಮುಖ್ಯ ಉದ್ದೇಶವೇ ಮನುಷ್ಯನ ಸ್ವತಂತ್ರ ಅಸ್ತಿತ್ವವನ್ನು ನಾಶಮಾಡುವುದು.

ಯಾವುದೇ ಗುರುವನ್ನು ತೆಗೆದುಕೊಳ್ಳಿ, ಅವರು ಮನುಷ್ಯನನ್ನು ಸಮಾಜದ ಒಂದು ಭಾಗವಾಗಿ ನೋಡಿದರೇ ಹೊರತು ಪ್ರತಿಯೊಬ್ಬ ಶಿಷ್ಯನನ್ನು ಒಬ್ಬ ವ್ಯಕ್ತಿಯಾಗಿ ನೋಡಲಿಲ್ಲ. ಆದುದರಿಂದಲೇ ಎಲ್ಲಧರ್ಮಗಳ ಗುರುಗಳು ಬೋಧಿಸುವ ಬೋದನೆಗಳು ಸಾಮಾನ್ಯತೆರನವಾಗಿದೆ. ಜನರನ್ನೆಲ್ಲಾ ಒಟ್ಟುಗೂಡಿಸಿ ಒಂದು ಗುಂಪು ಮಾಡಿ ಸದೆಬಡಿವ ಪ್ರವೃತ್ತಿಯನ್ನು ನಾವು ಅವುಗಳಲ್ಲಿ ಕಾಣಬಹುದು.

ಇಂತಹ ಸಂಸ್ಕೃತಿ ನಮ್ಮಲ್ಲಿ ಶತಮಾನಗಳಿಂದ ಸೃಷ್ಟಿಯಾದದ್ದರಿಂದಲೇ ನಮ್ಮ ದೇಶವು ಜಾತಿಯತೆಯ ವಿಷವರ್ತುಲದಿಂದ ಹೊರಬರಲು ಸಾಧ್ಯವಾಗಿಲ್ಲ. ಬದಲಾಗಿ ಅದೇ ಹಳೆಯ ಅನಿಷ್ಟಗಳು ಹೊಸ ರೂಪದಲ್ಲಿ ಮರುಕಳಿಸುತ್ತಿವೆ. ಹಿಂದೆ ಬ್ರಾಹ್ಮಣರಿದ್ದ ಜಾಗವನ್ನು ಒಕ್ಕಲಿಗರು,ಲಿಂಗಾಯಿತರು ಅಕ್ರಮಿಸಿಕೊಂಡರೇ ಹೊರತು ಸಮಾನತೆ ಬರಲಿಲ್ಲ.



ಯುರೋಪಿನಲ್ಲಿ ಗುರು:-

ಬೌದ್ಧ/ಜೈನಧರ್ಮಗಳು ಅಶೋಕನ ಕಾಲದಲ್ಲಿ ಏಶಿಯಾ ಖಂಡದಾದ್ಯಂತ ಹಬ್ಬಿತ್ತೆಂದು ನಾವು ಓದಿದ್ದೇವೆ. ಆದರೆ ಅದು ಯುರೋಪ್ ಖಂಡದಲ್ಲಿ ಏಕೆ ಹಬ್ಬಲಿಲ್ಲ? ಎಂದು ನೀವು ಹಲವು ಬಾರಿ ಸೋಜಿಗಪಟ್ಟಿರಬೇಕು. ಕಾರಣವೇನಿರಬಹುದು ಎಂದು ಊಹಿಸಲು ಪ್ರಯತ್ನಿಸೋಣ.ಅಲ್ಲಿನ ಖ್ಯಾತ ತತ್ವಶಾಸ್ತ್ರಜ್ಞರಾದ ಪ್ಲಾಟೋ,ಸೋಕ್ರೆಟಿಸ್ ,ಅರಿಸ್ಟಾಟಲ್ ಮುಂತಾದವರು ಯಾರು ತಮ್ಮನ್ನು ತಾವು ಗುರುಗಳು ಎಂದು ಕರೆದುಕೊಳ್ಳಲೂ ಇಲ್ಲ.ಅವರ ಮರಣಾನಂತರ ಅವರನ್ನು ಅವರ ಜನ ದೇವರೆಂದು ಪೂಜೆಮಾಡಲೂ ಇಲ್ಲ. ಅಂತಹ ಒಂದು ಪರಂಪರೆ ಅನಾದಿ ಕಾಲದಿಂದಲೂ ಯುರೋಪಿನಲ್ಲಿ ಬೆಳೆದುಬಂದಂತೆ ಕಾಣುವುದಿಲ್ಲ. ಬಹುಷಃ ಯುರೋಪಿಯನ್ ದೇಶಗಳ ಏಳಿಗೆಗೆ ಗುರು ಪರಂಪರೆ ಅಲ್ಲಿ ಬೆಳಯದಿದ್ದುದೇ ಕಾರಣವಿರಬಹುದು. ಅಲ್ಲಿನ ಖ್ಯಾತ ವಿಜ್ಞಾನಿಗಳಿಗೂ ಯಾವುದೇ ಗುರು ಇರಲಿಲ್ಲ. ಆದರೂ ಸಹ ಇತ್ತೀಚಿಗೆ ಅಲ್ಲಿನ ಗುರು ಶಿಷ್ಯರ ಬಗ್ಗೆ ಕೆಲವು ಕಥೆಗಳು ಕೇಳಿ ಬರುತ್ತಿದೆ ಕೆಲವು ಮಕ್ಕಳ ಮ್ಯಾಗಸೀನ್ ಗಳಲ್ಲಿ .ಇವು ಎಲ್ಲಿಂದ ಬಂದವು ಎಂದು ಸೋಜಿಗ ಪಟ್ಟೆ. ಈ ಪ್ರಶ್ನೆಗೆ ಇತ್ತೀಚಿಗೆ ಉತ್ತರ ಸಿಕ್ಕಿತು. ನನ್ನ ಬಿ.ಎಡ್ ಮಾಡುತ್ತಿರುವ ಮಿತ್ರನೊಬ್ಬ ಒಂದು ಪ್ರಾಜೆಕ್ಟ್ ರಿಪೋರ್ಟ್ ಬರೆಯುತಿದ್ದ. ಶೀರ್ಷಿಕೆ ಖ್ಯಾತ ವಿಜ್ಞಾನಿಗಳು ಮತ್ತವರ ಶಿಕ್ಷಕರು. ಆತ ಆ ವಿಜ್ಞಾನಿಗಳ ಜೀವನಚರಿತ್ರೆ ಓದಿ ಅದರಲ್ಲಿ ಅದರಲ್ಲಿ ಅವನ ಮೇಸ್ಟ್ರುಗಳ ಉಲ್ಲೇಖ ಸಿಕ್ಕಹಾಗೆಲ್ಲ ಅದನ್ನೇ ಉತ್ಪ್ರೇಕ್ಷಿಸಿ ಬರೆಯುತಿದ್ದ. ಅವನೊಬ್ಬ ಮಾತ್ರ ಅಲ್ಲ. ಹೆಚ್ಚಿನ ಎಲ್ಲಾ ಭಾರತೀಯ ಬರಹಗಾರರು ಅಂತಹ ತಪ್ಪನ್ನು (ಬೇಕೆಂದಲೇ)ಮಾಡುತ್ತಾರೆ. ಯಾಕೆಂದರೆ 'ಅವರು ಸಹ ನಮ್ಮ೦ತೆಯೇ' ಎಂದು ಸಮೀಕರಿಸುವ ಪ್ರಯತ್ನವನ್ನು(ಅವರಿಗೆ ಅರಿವಿಲ್ಲದೆ)ಮಾಡುತ್ತಾರೆ.

ನಮ್ಮಲ್ಲಿ ಸ್ವಯಂ ಘೋಷಿತ ಗುರುಗಳ/ಮಾರ್ಗ ದರ್ಶಕರ ಕಾಟ ಹೆಚ್ಚುತ್ತಾ ಇದೆ. ಗೈಡ್ ಮಾಡುವ ನೆಪದಲ್ಲಿ ಇವರು ಬೇರೆಬೇರೆ ವಿಷಯದ ಬಗ್ಗೆ ಗಂಟೆಗಟ್ಟಲೆ ಉಪದೇಶ ಮಾಡುವುದನ್ನೇ ಚಟವಾಗಿಸಿಕೊಂಡು ಬಿಟ್ಟಿದ್ದಾರೆ.ಬಸ್,ಬಸ್ಸ್ ಸ್ಟಾಂಡ್, ಕಛೇರಿ,ಟ್ರೈನ್ ಯಾವುದೂ ಇವರ ಕಾಟದಿಂದ ಮುಕ್ತವಾಗಿಲ್ಲ. ಕೇಳುವವರು ಸಿಕ್ಕರೆ ಮುಗಿಯಿತು. ಉಪದೇಶ ಆರಂಭ. ಇವರ ಉದ್ದೇಶ ಎರಡೇ. ಒಂದು ನಿಮ್ಮ ಸಮಯ ನಷ್ಟ ಮಾಡುವುದು. ಎರಡು ನಿಮ್ಮ ಸುತ್ತಲು ಕವಿದಿರುವ ಮೌನವನ್ನು ನಾಶಮಾಡಿ ನಿಮ್ಮ ವಿಚಾರಲಹರಿಗೆ ತಡೆಯೊಡ್ಡುವುದು..

ಈ ಆಧುನಿಕ "ಗುರುಪ್ರಜ್ಞೆ"ಯಿಂದ ನಮಗೆ ತುಂಬಾ ಹಾನಿಯಾಗುತ್ತಿದೆ.ಇವು ನಮಗರಿವಿಲ್ಲದಂತೆ ನಮ್ಮ ಸ್ವಂತ ಪ್ರಜ್ಞೆಯ ಬೆಳವಣಿಗೆಯನ್ನು ವಿಕೃತಗೊಳಿಸುತ್ತವೆ. ಇದು ಸ್ವತಂತ್ರ ದೇಶವಾದರೂ ,ಸಂವಿಧಾನ ನಮಗೆ ಕೆಲವು ಹಕ್ಕುಗಳನ್ನು ನೀಡಿದ್ದರೂ ನಾವು ಮುಕ್ತವಾಗಿ ಆಲೋಚಿಸದಂತೆ ಮಾಡಲು ಕೆಲವು ಶಕ್ತಿಗಳು ಪಣತೊಟ್ಟಿವೆ. ನಮ್ಮ ದೃಷ್ಟಿ ಯಾವಾಗಲೂ ಹಳೆಯ ತಲೆಮಾರು ಹಾಕಿಕೊಟ್ಟ ಗಾಜಿನ ಒಳಗಿಂದಲೇ ಹಾದು ಹೋಗಬೇಕೆಂದೂ,ನಮ್ಮ ಚಿಂತನೆಗಳಿಗೆ ಹಳಬರ ಚಿಂತನೆಗಳು,ಆಚಾರ,ವಿಚಾರಗಳು ಅಡಿಪಾಯ ವಾಗಬೇಕೆಂದೂ, ಅದನ್ನು ಬಿಟ್ಟು ನಮ್ಮ ಮನಸ್ಸು ಅತ್ತಿತ್ತ ಸುಳಿಯಬಾರದೆಂಬ ಒಂದು ಸಾರ್ವತ್ರಿಕ ಅಭಿಪ್ರಾಯ ಸೃಷ್ಟಿಸಲಾಗಿದೆ.

ಗುರುಕುಲದ ದ್ಯೇಯೋದ್ದೇಶಗಳಿಗೆ ವ್ಯತಿರಿಕ್ತವಾಗಿ ಜನರಲ್ಲಿ ಜ್ಞಾನ ಹರಡುವ ಉದ್ದೇಶಗಳಿಂದ ಸ್ಥಾಪಿಸಲ್ಪಟ್ಟ ವಿಶ್ವವಿದ್ಯಾಲಯಗಳು ಸಹ ಮತ್ತೆ ಗುರುಕುಲಗಳಂತೆ ಜ್ಞಾನದ ಮೇಲೆ ಏಕಸ್ವಾಮ್ಯ ಸಾಧಿಸುವ ಪ್ರಯತ್ನಕ್ಕೆ ಕೈ ಇಟ್ಟಿರುವುದನ್ನು ನಾವು ಕಾಣುತ್ತೇವೆ.

ದೇಶಕ್ಕೆ ಸ್ವಾತಂತ್ರ ಬಂದ ನಂತರ ಸರ್ಕಾರದ ಕೃಪಾಕಟಾಕ್ಷದಿಂದ ಆರಂಭವಾದ ಶೈಕ್ಷಣಿಕ ಕ್ರಾಂತಿ ಇಂದು ಬಂದು ಮುಟ್ಟಿರುವ ಸ್ಥಿತಿಯನ್ನು ಅವಲೋಕಿಸಿದರೆ ಶೈಕ್ಷಣಿಕ ಜಗತ್ತಿನ ಅಧಪತನ ಕಂಡುಬರುತ್ತದೆ. ಹಿಂದೆ ದೇಶದಲ್ಲಿ ಹೆಚ್ಚು ಹೆಚ್ಚು ಜನ ವಿಧ್ಯಾವಂತರಾಗಲಿ ಎಂದು ಹಿಂದೆ ಸಂಜೆ ಕಾಲೇಜುಗಳನ್ನು ತೆರೆಯಲಾಯಿತು.ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲಾಯಿತು.ಅದು ಸಾಲದು ಎನ್ನಿಸಿ ಅಂಚೆ ತೆರಪಿನ ಶಿಕ್ಷಣ ಆರಂಭವಾಯಿತು.ಈಗ ಜ್ಞಾನ ಪ್ರಸರಣಕ್ಕೆ ಅಂಚೆ ಅಲ್ಲದೆ ಇನ್ನೂ ಹೆಚ್ಚು ಮಾಧ್ಯಮಗಳು ಲಭ್ಯವಿದೆ.ಆದರೆ ಜ್ಞಾನ ಪಸರಿಸುವ ಮನಸ್ಸು ನಮ್ಮ ಶಿಕ್ಷಣತಜ್ಞರಲ್ಲಿ ಇದ್ದಂತಿಲ್ಲ. ಸೂಕ್ಷ್ಮವಾಗಿ ನೋಡಿದರೆ "ಗುರುಶಾಹಿಗಳ" ಕೈವಾಡವನ್ನಿಲ್ಲಿ ನೋಡಬಹುದು.

ಶಿಕ್ಷಣ ಸಂಸ್ಥೆ ಗಳು ಗಣನೀಯ ಸಂಖ್ಯೆಯಲ್ಲಿ ಹೆಚ್ಚಿದರೂ ಅಲ್ಲಿ ವಿಧ್ಯೆ ಪಡೆಯಲು ಕೆಲವರಿಗೆ ಮಾತ್ರ ಸಾಧ್ಯವಾಗುತ್ತಿದೆ.ಉನ್ನತ ಶಿಕ್ಷಣ ಸಂಸ್ಥೆಗಳ ಹತ್ತಿರ ಸಾವಿರಾರು ಏಕರೆಗಳು ಕೊಳೆಯುತಿದ್ದರೆ ಇತ್ತ ಸಾರ್ವಜನಿಕ ಗ್ರಂಥಾಲಯ ಗಳನ್ನು ತೆರೆಯಲು ಸ್ಥಳದ ಅಭಾವ!. ಮೊದಲು ರಾತ್ರಿ ಶಾಲೆಗಳಲ್ಲಿ ಕಾನೂನು ಕಲಿಸಲಾಗುತ್ತಿತ್ತು. ಈಗ ಅದನ್ನು ತೆಗೆದು ಹಾಕಲಾಯಿತು. ನ್ಯಾಷನಲ್ ಲಾ ಸ್ಕೂಲ್ ನಂತಹಾ ಸಂಸ್ಥೆಗಳಲ್ಲಿ ಕಲಿಯಲು ವಯಸ್ಸಿನ ಮಿತಿ ಹೇರಲಾಯಿತು. ಇಂಥಹ ಹಲವು ಸಂಸ್ಥೆಗಳು ನಡೆಯುತ್ತಿರುವುದು ಸಾರ್ವಜನಿಕ (ತೆರಿಗೆದಾರನ)ಹಣದಿಂದ.ಆದರೂ ಸಹ ಈ ದೇಶದ ಸಾರ್ವಜನಿಕರನ್ನು ಹೊರಗಿಡಲು ಇವು ಸಾಧ್ಯವಾದಷ್ಟು ಪ್ರಯತ್ನಿಸುತ್ತಿವೆ. ಸಂಸ್ಥೆಗಳು ನೇರವಾಗಿ ಸರ್ಕಾರದ ಅಧೀನದಲ್ಲಿದ್ದರೆ ಜನರ ಮುಂದೆ ಉತ್ತರಿಸುವ ಜವಾಬ್ದಾರಿಯಿರುತ್ತದೆ ಎಂಬ ಕಾರಣಕ್ಕೆ "ಸ್ವಾಯುತ್ತತೆ" ಎಂಬ ಅನೈತಿಕ ಪರಿಕಲ್ಪನೆ ಸೃಷ್ಟಿಸಲಾಯಿತು.

ಅಲ್ಲಿ 'ಗುರು'ಗಳು ಆಡಿದ್ದೆ ಆಟ!.ಆಟ ಗುರುಗಳದ್ದು,ದುಡ್ಡು ಸರ್ಕಾರದ್ದು.

ಲಾರ್ಡ್ ಕರ್ಜನ್ ಸಿವಿಲ್ ಸರ್ವಿಸ್ ಪರೀಕ್ಷೆಗೆ ಹಾಜರಾಗಲು ಇರುವ ವಯೋಮಿತಿಯನ್ನು ಇಳಿಸಿದ. ಆಗ ನಮ್ಮ ರಾಷ್ಟ್ರ ನಾಯಕರು ಕೂಗಾಡಿದರು.ರಾಷ್ಟ್ರಾದ್ಯಂತ ಚಳವಳಿಗಳು ಅದಕ್ಕಿಂತ ನೀಚ ಕ್ರಮಗಳನ್ನು ಶಿಕ್ಷಣತಜ್ಞರು ಇಂದು ತೆಗೆದುಕೊಂಡರೂ ನಾವು ಕಮಕ್-ಕಿಮಕ್ ಅನ್ನದೆ ಒಪ್ಪಿಕೊಳುತಿದ್ದೆ. ಏಕೆಂದರೆ ಅವು ಸ್ವಯುತ್ತ ಸಂಸ್ಥೆಗಳು. ಸಾಲದಕ್ಕೆ ಅವುಗಳಲ್ಲಿ ಕೆಲವು ಪ್ರಮುಖ ವರ್ಗಗಳ ಮುಖಂಡರ,ಧಾರ್ಮಿಕ ನಾಯಕರ ಕೈ ಇರುತ್ತವೆ. ಭಯಕ್ಕೋ,ಧಾಕ್ಷಿಣ್ಯಕ್ಕೋ ಕಟ್ಟು ಬಿದ್ದು ಯಾರೂ ಅವುಗಳ ಬಗ್ಗೆ ಜೋರಾಗಿ ಮಾತಾಡದೆ ಸಾಧ್ಯವಾದಲೆಲ್ಲಾ ವಶೀಲಿಯಿಂದಲೋ,ಹಣದಿಂದಲೋ ನಮ್ಮ ಕಾರ್ಯಸಿದ್ದಿಮಾಡಿಕೊಂಡು ಅಡ್ಜಸ್ಟ್ ಮಾಡಿಕೊಂಡು ಬದುಕುಸಾಗಿಸುತ್ತೇವೆ. ಹಳ್ಳಿಗಳಲ್ಲಿ ಒಳ್ಳೆಯ ಪ್ರಾಥಮಿಕ ಶಾಲೆಯನ್ನು ಕಟ್ಟಲು ಸರ್ಕಾರದ ಬಳಿ ಹಣವಿರುವುದಿಲ್ಲ. ಆದರೆ ಉನ್ನತ ಶಿಕ್ಷಣದ ತಿಮಿಂಗಿಲಗಳನ್ನು ಸ್ಥಾಪಿಸಲು ಸರ್ಕಾರದ ಬಳಿ ಹಣದ ಕೊರತೆಯಿಲ್ಲ. ಸಂಸತ್ತು "ಕಡ್ಡಾಯ ಶಿಕ್ಷಣ ಕಾಯ್ದೆ"ಯನ್ನು ರೂಪಿಸಿದಾಗ ಅದನ್ನು ಕಾರ್ಯ ರೂಪಕ್ಕೆ ತರುವುದಕ್ಕೆ ನಮ್ಮಲ್ಲಿ ಹಣ ಕಾಸಿನ ಕೊರತೆ ಇದೆ ಎಂದು ರಾಜ್ಯ ಸರ್ಕಾರ ಹೇಳಿತು.ಆದರೆ ಈ ಕಾಯ್ದೆಯ ಬಗ್ಗೆ ಕರ್ನಾಟಕದಲ್ಲಿ ಒಂದಿಷ್ಟು ಅಪಸ್ವರ ವ್ಯಕ್ತವಾಯಿತು. ಸೂಕ್ಷ್ಮವಾಗಿ ನೋಡಿ,ಈ ಅಪಸ್ವರದ ರೂವಾರಿಗಳೆಲ್ಲರೂ ಉನ್ನತ ಶಿಕ್ಷಣ ಮಾಫಿಯಾದೊಂದಿಗೆ ಶಿಕ್ಷಣ ತಜ್ಞರೆಂದು ಗುರುತಿಸಿಕೊಂಡಿರುವವರೇ!. "ಹುಚ್ಚು ಮುಂಡೆಯ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಹಣದ ಥೈಲಿ ಇರುವವರು,ಧರ್ಮಗುರುಗಳು, ವಿವಿಧ ಜಾತಿಯ ನಾಯಿಗಳು ,ಕ್ಷಮಿಸಿ,ನಾಯಕರು ನಾಮುಂದು ತಾಮುಂದು ಎನ್ನುತಾ ಮುಗಿಬೀಳುತ್ತಾರೆ."ಓಡಾಡುವ ದೇವರುಗಳು"ಓಡೋಡಿ ಬರುತ್ತಾರೆ. ಇಲ್ಲಿ ಸ್ವಜನಪಕ್ಷಪಾತ ಹಾಗೂ ಜಾತೀವಾದಕ್ಕೆ ಆಫಿಶಿಯಲ್ ಸ್ಟೇಟಸ್ ಇದೆ.ತನ್ಮೂಲಕ ಸಮಾಜದಲ್ಲಿ ಇವು ಜನಜೀವನದ ಒಂದು ಭಾಗವಾಗಿ ಸಕ್ರಮಗೊಳ್ಳುತ್ತವೆ.

ಹೀಗೆ ವಿಶ್ವವಿದ್ಯಾಲಯಗಳು ಜ್ಞಾನ ಕೊಡುವುದಕ್ಕಿಂತಲೂ ಜ್ಞಾನವನ್ನು ನಿಯಂತ್ರಿಸುವ ತೆವಲನ್ನು ಮೈಗೂಡಿಸಿಕೊಳ್ಳುತ್ತಿರುವುದನ್ನು ನಾವಿಲ್ಲಿ ಕಾಣುತ್ತೇವೆ. ಯಾರು ಯಾರು ಯಾವ ಕೋರ್ಸ್ ಮಾಡಲು ಅರ್ಹರು/ಅರ್ಹರಲ್ಲ ,ಯಾರು ಯಾವ ವಯಸ್ಸಿನ ವರೆಗೆ ಕಲಿಯಬಹುದು/ಕಲಿಯಬಾರದು ಇತ್ಯಾದಿಗಳನ್ನು ನಿರ್ಧರಿಸುವ ಹಕ್ಕಿನ ಏಕಸ್ವಾಮ್ಯವನ್ನು ಹೊಂದಲು ಕೆಲವರು ಪ್ರಯತ್ನ ಪಡುತಿದ್ದಾರೆ.

ಇಂದು ಭಾರತದಲ್ಲಿ ಗುರುಪೀಠಗಳು ಸಾಮಾಜಿಕ ಮೌಲ್ಯಗಳ ಬಲಿಪೀಠವಾಗಿ ಪರಿಣಮಿಸಿವೆ. ಹಿಂದೆ ಗುರು ಏನು ಮಾಡುತಿದ್ದನೋ ಇಂದು ಕೂಡ ಗುರು ಅದನ್ನೇ ಮಾಡುತಿದ್ದಾನೆ.ಜಾತೀಯತೆ,ಬಲಪಂಥೀಯ ಕೋಮುವಾದ,ಎಡಪಂಥೀಯ ಉಗ್ರಾವಾದ,ಬ್ರಷ್ಟಾಚಾರ,ಲಂಚಗುಳಿತನ, ಶಿಕ್ಷಣದಲ್ಲಿ ದಾರ್ಮಿಕ ನಾಯಕರ ಹಸ್ತಕ್ಷೇಪ, ಜಾತಿಗಳ ನಡುವೆ ಕಲಹ,ಸ್ವಜನಪಕ್ಷಪಾತ, ಅಜ್ಞಾನ,ಹೀಗೆ ದೇಶದ ಎಲ್ಲಾ ಸಮಸ್ಯೆಗಳು ಉನ್ನತ ಶಿಕ್ಷಣ ಸಂಸ್ಥೆಗಳಿಂದಲೇ ಉಗಮವಾಗುತ್ತಿರುವಂತೆ ಕಂಡು ಬರುತ್ತಿದೆ.

ಈ "ಗುರುಗಿರಿ"ಯನ್ನು ಹೋಗಲಾಡಿಸದಿದ್ದರೆ ದೇಶಕ್ಕೆ ಗಂಡಾಂತರ ಕಾದಿದೆ.

ಆದುದರಿಂದ ನಾವು ಈ ಹಾಡನ್ನು ಹಾಡಬೇಕಾಗಿದೆ,

ಗುರುವಿನ ಮುಸುಕನು ಕಳಚುವವರೆಗೆ ದೊರೆಯದಣ್ಣ ಮುಕುತಿ!