Monday, January 3, 2011

ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್ (Part-2)

ಥಾಮಸ್ ಫ್ರೈಡ್ಮ್ಯಾನ್ ಎಂಬುವರು ಬರೆದಿರುವ "ಹಾಟ್,ಫ್ಲಾಟ್ ಅಂಡ್ ಕ್ರೌಡೆಡ್" ಈ ಪುಸ್ತಕವು ಪರಿಸರವಾದಕ್ಕೆ ಸಂಭಂಧಿಸಿದೆ. ಮಾಲಿನ್ಯ ಮುಂತಾದ ಸಮಸ್ಯೆಗಳಿಂದಾಗಿ ಭೂಮಿ ತೀವ್ರಗತಿಯಲ್ಲಿ ವಿನಾಶದ ಅಂಚಿಗೆ ಸಾಗುತ್ತಿದೆ ಎನ್ನುತ್ತಾರೆ ಲೇಖಕ ಫ್ರೈಡ್ಮ್ಯಾನ್. ನಮ್ಮ ಇಂಧನದ ಅಗತ್ಯಗಳು ಹೇಗೆ ನಮ್ಮ ಭೂಮಿಯನ್ನು ನಿಧಾನವಾಗಿ ಬಲಿತೆಗೆದುಕೊಳ್ಳುತ್ತಿವೆ,ಏಕೆ ಸರ್ಕಾರಗಳು ಪೆಟ್ರೋಲ್ನಂತಹ ಇಂಧನಗಳ ಉಪಯೋಗವನ್ನು ಕಡಿಮೆಮಾಡುವ ಬಗ್ಗೆ ಕ್ರಮ ಕೈಗೊಳ್ಳುತಿಲ್ಲ ಎಂಬ ವಿಷಯವನ್ನು ಕೂಲಂಕಷವಾಗಿ ಚರ್ಚಿಸುವ ಪುಸ್ತಕ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ ಹಣ ತೊಡಗಿಸುವ ಅಗತ್ಯಗಳನ್ನು ಎತ್ತಿತೋರಿಸುತ್ತವೆ. ಆದರೆ ಈ ಪುಸ್ತಕ ಪದೇ ಪದೇ ಭೂಮಿ ನಾಶದ ಅಂಚಿನಲ್ಲಿದೆ ಎಂದು ಹುಯಿಲೆಬ್ಬಿಸಿರುವುದು ನನಗಂತೂ ಕಿರಿಕಿರಿ ಎನ್ನಿಸುತ್ತದೆ.ಏಕೆಂದರೆ ಭೂಮಿ ನಾಶ ಆಗುತ್ತದೆ, ಮನುಕುಲ ನಾಶ ಆಗುತ್ತದೆ ,ಪ್ರಳಯ ಆಗುತ್ತದೆ ಎಂದು ವರ್ಷವರ್ಷ ನಮ್ಮ ಲೋಕಲ್ ಜ್ಯೋತಿಷಿಗಳು ಹಾಗು ಪರಿಸರವಾದಿಗಳು ಬೊಬ್ಬೆ ಹಾಕುತ್ತಲೇ ಇರುವುದನ್ನು ಕೇಳಿ ಕೇಳಿ ತಲೆ ಚಿಟ್ಟು ಹಿಡಿದಿದೆ.ಭೂಮಿಯ ತಾಪಮಾನ ಏರಿಕೆಯಿಂದ,ಮಾಲಿನ್ಯದಿಂದ ಜನರು ಸಾಯುತ್ತಾರೆ ಎಂಬುದು ಇವರ ವಾದ. ಈಗೇನು ಯಾರೂ ಸಾಯುತಿಲ್ಲವೇ ? ವರ್ಷ ವರ್ಷ ಶೀತ ಗಾಳಿಯ ಬೀಸುವಿಕೆಯಿಂದ 200 -300 ಜನ ಸಾಯುತ್ತಲೇ ಇದ್ದಾರೆ. ವಿಶ್ವದಾದ್ಯಂತ ಈ ಸಂಖ್ಯೆ ಇನ್ನು ಹೆಚ್ಚು. ಇನ್ನು ಬರ,ನೆರೆ ,ಭೂಕಂಪ, ಅತಿವೃಷ್ಟಿ, ಅನಾವುಷ್ಟಿ ಇತ್ಯಾದಿಗಳಿಗೆ ಸಿಕ್ಕು ಇಲ್ಲಿಯವರೆಗೆ ವರ್ಶಾವರ್ಷ ಹಲವಾರು ಜನ ಸಾಯುತ್ತಲೇ ಇದ್ದಾರೆ, ಮುಂದೆಯೂ ಸಾಯುತ್ತಲೇ ಇದ್ದಾರೆ. ಇವುಗಳನ್ನು ತಡೆಯುತ್ತೆವೆಂದು ಸರ್ಕಾರಗಳು,ಸಂಘ ಸಂಸ್ಥೆಗಳು ಮಾಡುತ್ತಿರುವ ಬೂಟಾಟಿಕೆಯ ಪ್ರಯತ್ನಗಳು ಯಶಸ್ವಿಯಾಗಿರುವುದು ಅವರು ನೀಡುವ ಖೊಟ್ಟಿ ಅಂಕಿ ಅಂಶಗಳಲ್ಲಿ ಮಾತ್ರ!. ವಿಶ್ವದ ಜನಸಂಖ್ಯೆಯ ಶೇಕಡಾ ಎಂಬತ್ತು ಭಾಗ ಬಡಜನರಿಂದ ಕೂಡಿದೆ.'ಯುನಿಸೆಫ್' ಅಂಕಿ ಅಂಶದ ಪ್ರಕಾರ ಈ ಭೂಮಿಯ ಮೇಲೆ ಪ್ರತಿದಿನ 22,000 ಹಸುಳೆಗಳು ಹಸಿವಿನಿಂದ ಮರಣಹೊಂದುತ್ತವೆ.ಇಂತಹ ಸಾವುಗಳು ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚು.ನಾವುಗಳು ಚಿಕ್ಕ ಮಕ್ಕಳನ್ನು ಸಾವು ಮುಟ್ಟುವುದಿಲ್ಲ,ದೇವರು ಕಾಪಾಡುತ್ತಾನೆ ಎಂದೆಲ್ಲ ಬುರುಡೆ ಬಿಡುತ್ತಾ ಜನಗಳಲ್ಲಿ ಮೂಡನಂಬಿಕೆ ಬಿತ್ತುತೇವೆ!,ಹೆಚ್ಚು ಹೆಚ್ಚು ಮಕ್ಕಳು ಹೆರಲು ಪ್ರೇರೆಪಿಸುತ್ತೇವೆ.(ಎಲ್ಲಾ ಧರ್ಮಕ್ಕೆ ಸೇರಿದ )ಖದೀಮ ಧರ್ಮಗುರುಗಳು ಸಾಮೂಹಿಕ ವಿವಾಹಗಳನ್ನು ಮಾಡಿಸುತ್ತಾರೆ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳ ಮಕ್ಕಳುಗಳಲ್ಲಿ ಸುಮಾರು ಶೇಕಡಾ 27-28% ರಷ್ಟು ಮಂದಿಗೆ ಸರಿಯಾದ ಆಹಾರ ಇಲ್ಲ. ಈ ಸಂಖ್ಯೆ ದಕ್ಷಿಣ ಏಶಿಯ ಮತ್ತು ಆಫ್ರಿಕಾದ ರಾಷ್ಟ್ರಗಲ್ಲಿ ಹೆಚ್ಚು. ಅಂಗೈ ಹುಣ್ಣಿಗೆ ಕನ್ನಡಿ ಬೇಕೇ?
ಜನರು ಹೇಗೆ ನರಳುತಿದ್ದಾರೆ,ಕಷ್ಟಪಡುತಿದ್ದಾರೆ ಎಂಬುದನ್ನು ನಾವು ಕಣ್ಣು ಬಿಟ್ಟು ಸುತ್ತ ಮುತ್ತ ನೋಡಿದರೆ ತಿಳಿಯುತ್ತದೆ. ಈ ಚಳಿ ಶೀತಗಾಳಿಯಲ್ಲಿ ಎಷ್ಟುಜನಕ್ಕೆ ಬಟ್ಟೆಯಿಲ್ಲ,ಚರ್ಮ ಒಡೆಯುತ್ತದೆ,ಅದಕ್ಕೆ ಶೂರ್ಶುಷೆಯಿಲ್ಲ. ಚಳಿ ತಡೆಯಲು ಆಗದೆ ಅವನೇನಾದರೂ ಒಂದಿಷ್ಟು ಹೆಂಡ ಕುಡಿದನೋ ,ನಮ್ಮ ಧರ್ಮಗುರುಗಳಿಗೆ,ಸಾಮಾಜಿಕ ಕಳಕಳಿಯ ನಾಟಕವಾಡುವ ಸಜ್ಜನರಿಗೆ ಹೊಟ್ಟೆಯೆಲ್ಲಾ ಉರಿ ಆರಂಭವಾಗುತ್ತದೆ ಮನುಕುಲಕ್ಕೆ ಇಷ್ಟು ಸಮಸ್ಯೆಗಳು ಸಾಲದು ಎಂಬಂತೆ ಸಂಕ್ರಾಮಿಕ ರೋಗಗಳು ತಮ್ಮ ಕಬಂಧ ಬಾಹುಗಳನ್ನು ಚಾಚಿ ಜನರನ್ನು ಬಲಿತೆಗೆದುಕೊಳ್ಳುತ್ತಿದೆ.ಪ್ರಸ್ತುತ, ಅಂದಾಜು ನಾಲ್ಕು ಕೋಟಿ ಜನ AIDS ನಿಂದ ಬಲಳುತಿದ್ದಾರೆ.2004 ರಲ್ಲಿ 30 ಲಕ್ಷ ಜನರು AIDS ನಿಂದ ಸತ್ತೆ ಹೋಗಿದ್ದಾರೆ. ನಂತರದ ವರ್ಷಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಆದರೆ ಎಡ್ಸ್ ನಿರ್ಮೂಲನೆಗೆಂದು ಬಂದ ವಿದೇಶಿ ಹಣವನ್ನು ತೃತೀಯ ರಾಷ್ಟ್ರಗಳ ಅಧಿಕಾರಶಾಹಿಗಳು ನುಂಗಿ ನೀರುಕುಡಿದಿರುವುದರಿಂದ ನಮ್ಮಲ್ಲಿ AIDS ಸಂಬಂದಿ ಸಾವುಗಳು ಕಡಿಮೆಯಾಗಿವೆ ಎಂದು ಖೊಟ್ಟಿ ಅಂಕಿ-ಅಂಶಗಳನ್ನು ನೀಡುವುದರಲ್ಲಿ ಸಂದೇಹವಿಲ್ಲ.ಇನ್ನು ವಾರ್ಷಿಕ ಹತ್ತು ಲಕ್ಷ ಜನ ಮಲೇರಿಯಾದಿಂದ ಸಾಯುತ್ತಾರೆ.ಇದರಲ್ಲಿ ಶೇಕಡಾ 80% ರಷ್ಟು ಜನ ಆಫ್ರಿಕನ್ನರು. 64 ಕೋಟಿ ಜನಕ್ಕೆ ಸೂರು ಇಲ್ಲ.40 ಕೋಟಿ ಜನ ಶುದ್ದನೀರಿಗಾಗಿ ಪರದಾಡುತಿದ್ದಾರೆ.2003 ರಲ್ಲಿ ಹದಿನಾರು ಲಕ್ಷ ಮಕ್ಕಳು ಐದು ವರ್ಷ ವಯಸ್ಸು ತುಂಬುವ ಮೊದಲೇ ಸತ್ತುಹೋಗಿವೆ. ಇದೇ ವರ್ಷ 14 ಲಕ್ಷ ಜನರು ಕುಡಿಯಲು ಶುದ್ದ ನೀರು ಸಿಗದೇ ಕಲುಷಿತ ನೀರನ್ನು ಸೇವಿಸಿ ಅದರಿಂದ ಬಂದ ಖಾಯಿಲೆಗಳಿಂದ ಅಸುನೀಗಿದ್ದಾರೆ...ಹೀಗೆ ಬರೆಯುತ್ತಾ ಹೋದರೆ ಪೇಜ್ ಗಟ್ಟಲೆ ಬರೆಯಬಹುದು. ಒಟ್ಟಾರೆ ಈಗಾಗಲೇ ಜನರು ಭೂಮಿಯಲ್ಲಿ ಸಮಸ್ಯೆಗಳಿಂದ 'ಸಫರ್' ಆಗುತಿದ್ದಾರೆ ಎಂದಾಯಿತು. ಅಂದಮೇಲೆ ಥಾಮಸ್ ಫ್ರೈಡ್ಮ್ಯಾನ್ ತನ್ನ ಪುಸ್ತಕದಲ್ಲಿ ವರ್ಣಿಸಿರುವ ಮಾಲಿನ್ಯ ಸಂಭಂದಿ ಅಪಾಯಗಳಿಗೆ ಗುರಿಯಾಗುವವರು ಎಷ್ಟು ಜನ?, ಈ ಭೂಮಿಯ ಶೇಕಡಾ 20 % ಜನ!. ಇಷ್ಟು ಜನಕ್ಕಾಗಿ ಎಲ್ಲರೂ ೧೦೦% ಜನರೂ ಪರಿಸರ ಸ್ನೇಹಿ ಇಂಧನಗಳ ಉತ್ಪಾಧನೆಗೆ ಅಹೋರಾತ್ರಿ ಶ್ರಮಿಸಬೇಕೆ?,


ಅಷ್ಟಕ್ಕೂ ಈ ಪರಿಸರ ಸ್ನೇಹಿ ಇಂಧನ ಗಳೆಂದರೆ ಏನು ?

ಈ ಭೂಮಿಯ ಬಡ ಜನರ ರಕ್ತ ,ಬೆವರು ಹಾಗು ಕಣ್ಣೀರು?,

ಇಂದು ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಆದರೆ ಬೆಲೆಯಲ್ಲಿ,ಉಪಯೋಗದಲ್ಲಿ ಅದಕ್ಕೆ ಸಮಾನವಾದ ವಸ್ತುವನ್ನು ಉತ್ಪಾದಿಸಲು ಕ್ರಮ ಕೈಗೊಂಡಿಲ್ಲ. ಇಂದಿನ ಮಾಸ್ ಮಾರ್ಕೆಟಿಂಗ್ ಆರ್ಥಿಕತೆಯ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿದರೆ ವಸ್ತುವಿನ ಕ್ರಯ ಹೆಚ್ಚುತ್ತದೆ.ಉದಾಹರಣೆಗೆ" ಫ್ಯಾಬ್ ಇಂಡಿಯಾ" (Fab India) ಸಂಸ್ಥೆಯಲ್ಲಿ ಶಾಪಿಂಗ್ ಮಾಡಿ ನೋಡಿ. ಅದು ಸಾಂಪ್ರದಾಯಿಕ ,ಪರಿಸರ ಸ್ನೇಹಿ ವಸ್ತುಗಳ ವಿಕ್ರಯಕ್ಕೆಂದೇ ಮೀಸಲಿಟ್ಟ ಮಳಿಗೆ. ಅಲ್ಲಿನ ವಸ್ತುಗಳ ಬೆಲೆ ನೋಡಿದರೆ ತಲೆ ಸುತ್ತುಬರುತ್ತೆ. ಯಾಕೆಂದರೆ ಅದೇ ಪದಾರ್ಥ ಹೊರಗೆ ಕಡಿಮೆ ಬೆಲೆಗೆ ಸಿಗುತ್ತೆ.

ಇನ್ನು, ನಮ್ಮ ಇಂಧನ ಮಂತ್ರಿ ಬಲ್ಬುಗಳನ್ನು ಬ್ಯಾನ್ ಮಾಡಿ ಬರೀ ಸಿ.ಎಫ್.ಎಲ್ ಟ್ಯೂಬ್ ಗಳ ಬಳಕೆ ಕಡ್ಡಾಯ ಮಾಡುತ್ತಾಳಂತೆ. ನಿಮ್ಮ ಮನೆ ಬಲ್ಬ್ ಹೋದರೆ ಸಾಯಂಕಾಲ ಮನೆಗೆ ಹೋಗುವಾಗ ಹತ್ತು ರೊಪಾಯಿ ಕೊಟ್ಟು ಒಂದು ಬಲ್ಬ್ ತಗೊಂಡು ಮನೆಗೆ ಹೋಗಬಹುದು.ಆದರೆ ನೀವು ಸಿ.ಎಫ್.ಎಲ್ ಟ್ಯೂಬ್ ಬೇಕೆಂದರೆ 150 -300 ರೂಪಾಯಿ ಕಕ್ಕಬೇಕು.ಹೇಗಿದೆ ಬಡವರನ್ನು ಉದ್ಧಾರ ಮಾಡಲೆಂದೇ ಇರುವ ಸರ್ಕಾರದ ಸ್ಕೀಮ್!, ಗುಜರಾತಿನ ಯಾವ ವರ್ತಕನನ್ನು ಉದ್ಧಾರ ಮಾಡುವ ಹುನ್ನಾರ?. ಇಂತಹುದೇ ಬೇರೆ ಬೇರೆ ಐಡಿಯಾಗಳು ಸರ್ಕಾರದ ತಲೆಯಲ್ಲಿದೆ. ನಾಳೆ ನಮ್ಮ ಸರ್ಕಾರ ಥಾಮಸ್ ಫ್ರೈಡ್ಮ್ಯಾನ್ ನನ್ನು ಪರಿಸರ ಸಲಹೆಗಾರನನ್ನಗಿ ನೇಮಿಸಿಕೊಂಡರೂ ಅಚ್ಚರಿಯಿಲ್ಲ. ಏಕೆಂದರೆ ಇದು ಭೂಮಿಯನ್ನು ,ಮನುಕುಲವನ್ನು ಕಾಪಾಡುವ ಪ್ರಶ್ನೆಯಲ್ಲವೇ... ಹಾಗಾಗಿ ಇಂತಹ ಒಳ್ಳೆ ಉದ್ದೇಶಗಳಿಗೆ ನಮ್ಮ ಜನರ ರಕ್ತ ,ಕಣ್ಣೀರು,ಬೆವರನ್ನು ನೀಡಲು ನಮ್ಮ ನಾಯಕರು ಸದಾ ಸಿದ್ದ. ಹಿಂದೆ ಸಹಾ 'ನಾಜಿ' ಗಳಿಂದ ಮನುಕುಲಕ್ಕೆ ಆಗಬಹುದಾದ ಅಪಾಯಗಳಿಂದ ಜಗತ್ತನ್ನು ರಕ್ಷಿಸಲು ನಮ್ಮ ಸೈನಿಕರನ್ನು ಸಹಾ ಬಳಸಿಕೊಳ್ಳಲಿ ಎಂದು ನಮ್ಮ ಯಾರೋ ಮಹಾನಾಯಕರು ಬ್ರಿಟಿಶ್ ಸರ್ಕಾರಕ್ಕೆ ಹೇಳಿದ್ದರು!

(ಮುಂದುವರೆಯುತ್ತದೆ)

No comments: