ಈ ಕರ್ಮವೀರ,ತರಂಗದಂತಹಾ ಪತ್ರಿಕೆ ಗಳಲ್ಲಿ ಅವಿಭಕ್ತ ಕುಟುಂಬಗಳ ಬಗ್ಗೆ ಆಗಾಗ ಕೆಲವು ಲೇಖನಗಳು ಪ್ರಕಟ ಆಗುತ್ತಿರುತ್ತವೆ. ಕೆಲವರು ಅದು ನಶಿಸುತ್ತಿರುವ ಬಗ್ಗೆ ಗೋಳಾಡುತ್ತಾರೆ. ಹೀಗೆ ಅವರು ಗೋಳಾಡುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಏಕೆಂದರೆ ಒಗ್ಗಟ್ಟು, ಏಕತೆ, ಅವಿಭಾಜಿತ ಇತ್ಯಾದಿ ಪದಗಳೊಂದಿಗೆ ನಮ್ಮದು ಅವಿನಾಭಾವ ಸಂಭಂದ. ಸ್ವತಂತ್ರ ಪೂರ್ವದಿಂದಲೂ. ಈ ಪದಗಳನ್ನು ಎಲ್ಲಿ ಎತ್ತಿದರೂ ಎದ್ದು ನಿಂತು ಜೈಕಾರ ಹಾಕುತ್ತಾರೆ. ಅಷ್ಟು ಭಾವನಾತ್ಮಕ ಸಂಭಂದ. ಒಂದು ಕೋಣೆಯನ್ನು ಭಾಗ ಮಾಡಬೇಕೆಂದರೂ ನಮಗೆ ಎದೆಯುರಿ!.ಅಂತಹುದರಲ್ಲಿ ಸಂಸಾರವನ್ನು ಭಾಗ ಮಾಡುವುದೆಂದರೆ?. ಹಿಂದೆ ರಾಜ್ಯವನ್ನು ಭಾಗ ಮಾಡಬೇಕಲ್ಲಾ ಎಂಬ ಕಾರಣಕ್ಕೆ ಅಣ್ಣ,ತಮ್ಮಂದಿರನ್ನು,ಅಪ್ಪ,ಮಕ್ಕಳನ್ನ ಕೊಂದು ರಾಜ್ಯವಾಳಿದವರು ಆಗಿ ಹೋದ ಪುಣ್ಯ ಭೂಮಿಯಿದು!. ಏನೇನೂ ತಾಂತ್ರಿಕ ಕಾರಣಗಳಿಂದ ನಾವು ಈಗ ಅವಿಭಕ್ತ ಕುಟುಂಬ ಪದ್ದತಿಗೆ ತಿಲಾಂಜಲಿ ಇಡುತಿದ್ದೇವೆ.ಇದು ವಿಕಾಸದ ಒಂದು ಹಂತವೂ ಹೌದು. ಆದರೂ ಈ ಪದ್ದತಿಯ ಬಗ್ಗೆ ನಮ್ಮಲ್ಲಿ ಒಂದು ರೀತಿಯ ಹ್ಯಾಂಗೋವರ್ ಇದೆ. ಈ ಬಗ್ಗೆ ಒಂದು ಚಿಂತನೆ ಇಲ್ಲಿದೆ. ನಿಜವಾಗಿಯೂ ಅವಿಭಕ್ತ ಕುಟುಂಬಗಳು ಅಷ್ಟು ಒಳ್ಳೆಯದೇ ಎಂಬ ಅನುಮಾನ ನಿಮಗೆ ಸಹ ಬಂದಿರಬಹುದು .
ನನಗೆ ಈ ಅಪ್ರಸ್ತುತ ವಿಷಯದ ಬಗ್ಗೆ ಆಲೋಚನೆ ಬಂದದ್ದು ನಮ್ಮ ಕಚೇರಿಯ ಪರಿಸ್ತಿತಿಯ ಒಂದು ಅವಲೋಕನದಿಂದ. ನಮ್ಮದು ದೊಡ್ಡ ಕೋಣೆಯಲ್ಲೇ ಎರಡು ವಿಭಾಗಗಳಿವೆ. ನಮ್ಮ ವಿಭಾಗದಲ್ಲಿ ಕೆಲಸ ಹೆಚ್ಚು. ಪಕ್ಕದ ವಿಭಾಗದಲ್ಲಿ ಕೆಲಸ ಕಡಿಮೆ. ಅಲ್ಲಿರುವವರೋ ,ಹುಟ್ಟಾ ಲೋಫರ್ ಗಳು.ಸೋಮಾರಿಗಳು. ಈ ವಿಭಾಗಕ್ಕೆಲಾ ಮುಖ್ಯಸ್ಥ ಎನ್ನಿಸಿಕೊಂಡವರಿಗೆ ಎಲ್ಲಾ ಶಾಖೆಗಳಿಗೆ ಕೆಲಸವನ್ನು ಸಮಾನವಾಗಿ ಹಂಚುವ,ಮಾಡಿಸುವ ಬುದ್ದಿಯಾಗಲಿ, ಕ್ರಿಯಾಶೀಲತೆಯಾಗಲಿ ಇಲ್ಲ. ಜಾಣಕಿವುಡು,ಜಾಣಕುರುಡು ಇವರ ಜಾಣತನದ ಕುರುಹು! . ಆ ಶಾಖೆಯವರ ಅನಗತ್ಯ ಕಿರುಕುಳ ಸಹಿಸಲಸಾಧ್ಯ. ಆ ಹೆಂಗಸರ ಮತ್ತು ತಾವು ಗಂಡಸರೆಂದು ಕೆಲವೊಮ್ಮೆ ಮರೆತುಬಿಡುವ ಕೆಲವು ಗಂಡಸರ ಕಾಡುಹರಟೆಯಂತೂ ಅವ್ಯಾಹತವಾಗಿ ನಡೆದಿರುತ್ತದೆ. ಇನ್ನು ರಾಮನವಮಿ,ಆಯುಧಪೂಜೆ ಮುಂತಾದವನ್ನು ನಡೆಸುವುದರಲ್ಲಿ ಇವರು ಸದಾ ಮುಂದು(ಮಾಡಬೇಕಾದ ಕೆಲಸಕ್ಕೆ ಹಿಂದು) ಇತ್ಯಾದಿ. ಇದೇ ರೀತಿಯ ಸನ್ನಿವೇಶವನ್ನು ಕುಟುಂಬದಲ್ಲಿ ಅಳವಡಿಸಿ ನೋಡಿ.
ಅವಿಭಜಿತ ಕುಟುಂಬಗಳಲ್ಲಿ ಕೆಲಸಗಳ ಹಂಚಿಕೆ ಸಮರ್ಪಕವಾಗಿರುವುದಿಲ್ಲ. ಯಾರು ಸದೃಡರಾಗಿರುತ್ತಾರೋ ಅವರ ಹೆಗಲಿಗೇ ಎಲ್ಲಾ ಕೆಲಸ ಬೀಳುತ್ತದೆ.ಮೈಗಳ್ಳರಿಗಂತೂ ಇದು ಸ್ವರ್ಗ. ಗುಂಪಿನಲ್ಲಿ ಗೋವಿಂದ. ಇಲ್ಲಿ ಹೆಚ್ಚಿನವರು “ಕೆಲಸಕ್ಕೆ ಕರೀಬೇಡಿ,ಊಟಕ್ಕೆ ಮಾತ್ರ ಮರಿಬೇಡಿ” ಪಾಲಿಸಿ(policy) ಹೊಂದಿರುವವರು. ಇಂತಹವರು ಜವಾಬ್ದಾರಿಯಿಂದ ತಪ್ಪಿಸಿ ಕೊಳ್ಳುತ್ತಾ ಅವರಿವರಿಗೆ ಕಿರಿಕ್ ಮಾಡುತ್ತಾ ಓಡಾಡುತ್ತಿರುತ್ತಾರೆ.ಅವಿಭಕ್ತ ಕುಟುಂಬಗಳಲ್ಲಿ ಮದುವೆಯಾದರೂ ಜವಾಬ್ದಾರಿ ಹೋರಬೇಕಿಲ್ಲ.ಇಲ್ಲಿಗೆ ಮದುವೆಯಾಗಿ ಬರುವವರು (ಹೆಣ್ಣು ಮಕ್ಕಳ ಬಗ್ಗೆ ಹೇಳಬೇಕಿಲ್ಲ,ಏಕೆಂದರೆ ಅವರು ಗಂಡನ ಮನೆಗೆ ಹೊರಟು ಹೋಗುತ್ತಾರಲ್ಲ). ನಾಚಿಗೆ,ಮಾನ,ಮರ್ಯಾದೆ ಬಿಟ್ಟರೆ ಮಾತ್ರ ಮಿಂಚಲು ಸಾಧ್ಯ. ಕೆಲವರು ದೊಡ್ಡ ಗಂಟಲಲ್ಲಿ ಅರಚುವುದು, ರಚ್ಚೆ ಹಿಡಿಯುವದು, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸುವುದು ಇತ್ಯಾದಿ ಕಲೆಗಳನ್ನು ಕರಗತಮಾಡಿಕೊ೦ಡು ಅವನ್ನು ಸಮಯೋಚಿತವಾಗಿ ಉಪಯೋಗಿಸಿಕೊಂಡು ಆರಾಮವಾಗಿರುತ್ತಾರೆ. ಈ ಹಿನ್ನೆಲೆಯಿಂದ ಬಂದಿರುವ ಕೆಲವು ಹೆಂಗಸರು ಕಚೇರಿಗಳಲ್ಲಿ ಬಂದಾಗ ಸಹಾ ಇದೇ ದುರ್ವಿದ್ಯೆಗಳನ್ನು ಚೆನ್ನಾಗಿ ಬಳಸಿ ಕೆಲಸ ಕದಿಯುತ್ತಾರೆ.ಮೇಲಾಧಿಕಾರಿ ಅಯೋಗ್ಯನಾದರಂತೂ ಇವರೇ de facto ಅಧಿಕಾರಿಯಾಗಿಬಿಡುತ್ತಾರೆ. ಮೋನಿಕಾ ಲೇವಿನ್ಸ್ ಕೀ ಸಹಾ ಹಿಂದಿನ ಜನ್ಮದಲ್ಲಿ ಅವಿಭಕ್ತ ಕುಟುಂಬದ ಹಿನ್ನೆಲೆ ಹೊಂದಿದ್ದಿರಬೇಕೆಂದು ನನ್ನ ಗುಮಾಮಿ!.ಇಂತಹವರಿಗೇ ಕೊನೆಗೆ ಕುಟುಂಬದ ಪಾರುಪತ್ಯ ಸಿಗುವ ಸಾಧ್ಯತೆ ಹೆಚ್ಚು. ರಾಜಕೀಯದಲ್ಲೂ ಅಷ್ಟೇ ತಾನೇ. ಪಕ್ಷದಲ್ಲಿ ಅತೀ ಹೆಚ್ಚು ನಾಲಾಯಕ್ ಆದವನೇ ತಾನೇ ಒಳ್ಳೇ ಪದವಿ ಗಿಟ್ಟಿಸುವುದು!.
ನಾಚಿಗೆ ಸ್ವಬಾವದವರು,ಧ್ವನಿ ಎತ್ತರಿಸಲು ಅಳುಕುವವರು ಈ ಅವಿಭಕ್ತ ಕುಟುಂಬಕ್ಕೆ ಪ್ರವೇಶಿಸಿದರಂತೂ ಅವರ ಜೀವನ ನರಕವೇ ಸರಿ. ಗಂಡನ ಪ್ರೀತಿ ಸಂಪಾದಿಸಿದರೂ ಅದರಿಂದ ಅವರಿಗೆ ಯಾವುದೇ ರೀತಿಯ ರಕ್ಷಣೆ ಸಿಗುವುದಿಲ್ಲ. ಇನ್ನು ಈ ಕುಟುಂಬಗಳಲ್ಲಿ ಸ್ವಲ್ಪ ಮುಗ್ದರಾದವರು,ದಡ್ಡರು ಇದ್ದರೆ ಮುಗಿದುಹೋಯಿತು. ಅವನಿಂದಲೇ ಎಲ್ಲಾ ಕೆಲಸಗಳನ್ನು ಮಾಡಿಸುತ್ತಾರೆ. ಬಾಲ್ಯದಿಂದಲೂ “ನೀನು ದಡ್ಡ,ನಿನಗೇನೂ ತಿಳಿಯುವುದಿಲ್ಲ,ಇತ್ಯಾದಿ ಗಳನ್ನು ನಿರಂತರವಾಗಿ ಹೇಳಿ ಹೇಳಿ ಅವನು ನಿಜವಾಗಿಯೂ ದಡ್ಡನಾಗುವಂತೆ ಮಾಡುತ್ತಾರೆ. ನಮ್ಮಲ್ಲಿ ಹಲವು ಆಸ್ತಿವಂತ ಕುಟುಂಬಗಳಲ್ಲಿ, ಸಿರಿವಂತರ ಮನೆಯಲ್ಲಿ ಇಂತಹ “ದಡ್ಡ ತಮ್ಮ”ಇರುವುದು ನೀವು ನೋಡೇ ಇರುತ್ತೀರಿ. ಇದರ ಹಿಂದಿನ ರಹಸ್ಯವೇನು ಗೊತ್ತೇ?. ಇದು ಆಸ್ತಿ ಹೊಡೆಯಲು ಮಾಡುವ ಪ್ಲಾನ್!.
ಈ ಅವಿಭಕ್ತ ಕುಟುಂಬಗಳ ಸುತ್ತಾ ಹೆಣೆದಿರುವ ಹಲವು ಚಲನಚಿತ್ರಗಳೂ ಬಂದು ಹೋಗಿವೆ. ಅದರಲ್ಲಂತೂ ಚಿತ್ರದುದ್ದಕ್ಕೂ ಕಣ್ಣೀರ ಕೋಡಿಯೇ!. ಮೋಸ ,ವಂಚನೆ,ದ್ರೋಹ ಇತ್ಯಾದಿಗಳೆ ಚಿತ್ರದ ತುಂಬಾ. ಸಜ್ಜನನಾದ ಯಜಮಾನ ಅನುಭವಿಸುವ ಕಷ್ಟ ಒಂದೆರಡಲ್ಲ!. ಕೊನೆಗೆ ಎಲ್ಲಾ ತಪ್ಪನ್ನೂ ಯಾವನೋ ವಿಲನ್ ಮೇಲೆ ಹೊರಿಸಿ ಎಲ್ಲರೂ ಒಂದಾಗುವುದೇ ಚಿತ್ರದ ತಿರುಳಾಗಿರುತ್ತದೆ. ಇದರಲ್ಲೂ ಸಹಾ ಚಿತ್ರದ ಅಂತ್ಯ ಬಹಳ ನಾಟಕೀಯವಾಗಿರುತ್ತವೆ. ಚಿತ್ರದುದ್ದಕ್ಕೂ ಎಳೆದಾಡಿ,ಬಡಿದಾಡಿ ಕೊನೆಗೆ ತ್ಯಾಗ ಮಾಡಿ ಒಂದಾಗುತ್ತಾರೆ. “ತ್ಯಾಗ” ಎಂದರೆ ಕಳೆದುಕೊಳ್ಳುವುದು ಎಂದರ್ಥ. ಅಂದಮೇಲೆ ಒಂದಾಗುವುದರಿಂದ ಈ ಜನ ಗಳಿಸುವುದಾದರೂ ಏನನ್ನು? . ಪ್ರೇಕ್ಷಕನನ್ನು ಚಿತ್ರದುದ್ದಕ್ಕೂ ಹಿಡಿದಿಡುವ ಕಥೆಯ ಅಂತ್ಯ ಎಷ್ಟು ಅತಾರ್ಕಿಕವಾಗಿರುತ್ತದೆ!.ಆದರೆ ಅದನ್ನೇ ಒಂದು “ನೀತಿ” ಎಂಬಂತೆ ತೋರಿಸಿ ಜನರಿಗೆ ತಪ್ಪು ಸಂದೇಶ ನೀಡಲಾಗುತ್ತದೆ. ಈಗ ಹೇಳಿ, ಇಂತಹಾ ವ್ಯವಸ್ಥೆಗಳಿಂದ ನಾವು ಕಳಕೊಳ್ಳುವುದೇನು? ಹಾಗೂ ಪಡಕೊಳ್ಳುವುದೇನು?. ಇವನ್ನು ನಾವು ವೈಭವೀಕರಿಸುವುದು ಯಾವ ಪುರುಷಾರ್ಥಕ್ಕಾಗಿ?.
ನಾನು ಯಾವಾಗಲೂ ನೆಗೆಟಿವ್ ಆಗೇ ಬರೆಯುತ್ತೇನೆಂದು ಕೆಲವರ ಆರೋಪವಗಿರುವುದರಿಂದ ಒಂದಿಷ್ಟು ಪಾಸಿಟಿವ್ ವಿಷಯ ಹೇಳುತ್ತೇನೆ. ಮೊನ್ನೆ ನಾನು ಒಂದು ವೆಬ್ ಸೈಟ್ ನಲ್ಲಿ ಒಂದು ಲೇಖನ ನೋಡಿದೆ. ಅದರ ಶೀರ್ಷಿಕೆ “Create more space through partitions” ಎಂದು. “ವಿಭಜಕಗಳನ್ನು ಅಳವಡಿಸುವ ಮೂಲಕ ಹೆಚ್ಚು ಜಾಗ ಸೃಷ್ಟಿಸಿ”. ನಿಜ. ಇದನ್ನು ಅವರು ಬರೆದಿದ್ದು ಕೋಣೆಗಳಿಗೆ ಸಂಬಂಧಪಟ್ಟಂತೆ. ಆದರೆ ನಾನು ಮೇಲ್ಕಂಡ ಸಾಲುಗಳಲ್ಲಿ ಇದನ್ನು ಅವಿಭಕ್ತ ಕುಟುಂಬಗಳ ಹಿನ್ನೆಲೆಯಲ್ಲಿ ಅಳವಡಿಸಿ ನೋಡಿದ್ದೇನೆ. ಅಲ್ಲಿಗೂ ಇದು ಸೂಟ್ ಆಗುತ್ತದೆ. ಹಿಂದೆ ಆ ಸನ್ನಿವೇಶದಲ್ಲಿ ಅದು ಬಹಳ effective ಇತ್ತು ಅಂತ ಕೆಲವರು ವಾದಿಸಬಹುದು. ಒಬ್ಬ ವ್ಯಕ್ತಿ ಒಳ್ಳೇ ಮಾದರಿ ಯೋಧನಾಗಿದ್ದ ಅನ್ನೋ ಕಾರಣಕ್ಕೆ ಅವನು ಸತ್ತ ನಂತರ ಕೂಡ ಹೆಣ ಇಟ್ಟುಕೊಂಡು ನಾವು ಅದರ ಪಕ್ಕ ಹೆಣದ ಅನುಕರಣೆ ಮಾಡುತ್ತಾ ಮಲಗುತ್ತೇವೆಯೇ?.
ಸಧ್ಯಕ್ಕೆ ಸಾಕಿಷ್ಟು .............
No comments:
Post a Comment