ನಮನ್ನೆಲ್ಲರನ್ನೂ ಉದ್ದರಿಸಲು ಶತಮಾನಗಳ ಹಿಂದೆ ಅವತರಿಸಿದ ಮಹಾ ಪುರುಷರಿಗೆ, ಪ್ರವಾದಿಗಳಿಗೆ,ಸಾಧು ಸಂತರಿಗೆಲ್ಲರಿಗೂ ಅಂತರ್ದೃಷ್ಟಿ ಇತ್ತೆಂದೂ, ಮುಂದಿನದನ್ನು ನೋಡುವ ದೃಷ್ಠಿ ಕೂಡ ಇತ್ತೆಂದು ಹೇಳಲಾಗಿದೆ.
ಅವರ್ಯಾರಿಗೂ ಇರದ ದೃಷ್ಠಿ ನಮಗಿದೆ.ಅದು ನಮ್ಮ ಹಿಂದಿನದನ್ನು ನೋಡುವ ದೃಷ್ಠಿ.
ನಿಜ. ನಮ್ಮ ಬೂತಕಾಲವನ್ನು ನಾವು ನೋಡಿದ್ದೇವೆ,ಇತಿಹಾಸ ಓದುವ ಮೂಲಕ.
ನಮ್ಮ ಹಿಂದಿನ ಆ ಮಹಾಮಹಿಮರು ಕಂಡ ಕಾಣ್ಕೆಗಳು ನಿಜವಲ್ಲ ಎಂಬ ಸತ್ಯವನ್ನು ನಾವು ನೋಡಿದ್ದೇವೆ.
ಆದರೆ ಕೆಲವು ತಾಂತ್ರಿಕ ಕಾರಣಗಳಿಂದ ನಾವು ನೋಡಿದ್ದನ್ನು ನಂಬಲು ನಿರಾಕರಿಸುತ್ತೇವೆ!. ನೋಡಿದರೂ ನೋಡದಂತೆ ನಟಿಸುತ್ತೇವೆ. ನಮಗೆ ಕೆಲವು ದೊಡ್ಡವರೆನ್ನಿಸಿಕೊಂಡಿರುವವರು ಹೇಳುತ್ತಾರೆ. ಕೆಟ್ಟದ್ದನ್ನು ನೋಡಬೇಡ.ಹಿಂಸೆಯ ದೃಶ್ಯಗಳನ್ನು ನೋಡಬೇಡ, ಕಾಮಕೇಳಿಯ ದೃಶ್ಯಗಳನ್ನು ನೋಡಬೇಡ ಎಂದು ಹೇಳುತ್ತಲೇ ಬಂದಿದ್ದಾರೆ. ನೋವು ಸಹಾ ನಮ್ಮ ಸುತ್ತಲಿನ ಸಾವು ನೋವುಗಳನ್ನು, ರೋಗರುಜಿನಗಳನ್ನು ನೋಡಿದರೂ ,ನೋಡದಂತೆ ನಡೆಯುತ್ತಾ, ಸ್ವರ್ಗಾರೋಹಣಕ್ಕೆ ಹೊರಟ ಪಾಂಡವರಂತೆ ,ನಾವು ಮಾತ್ರ ಸ್ವರ್ಗ ಸೇರುತ್ತೇವೆಂಬ ಆಶಾವಾದದ ಪಥದಲ್ಲಿ ಹೆಜ್ಜೆ ಹಾಕುತ್ತೇವೆ. ಯಾರೋ ಒಬ್ಬ ಓಹಿಲೇಶ್ವರ,ಯಾರೋ ಒಬ್ಬ ವಿನೋಬಾ,ಯಾರೋ ಒಬ್ಬ ಗಾಂಧಿಯನ್ನು ತೋರಿಸಿ ಸಮಾಜ ಹೇಗೆ ಎಲ್ಲಾ ಸಂಕಷ್ಟಗಳಿಗೆ ಉತ್ತರ ಹೊಂದಿದೆ ಎಂಬ ನೆಪ ಹೇಳುತ್ತೇವೆ. ಇದು ಜೀವನ ಪ್ರೀತಿಯೇ?. ನಾವು ಯಾವುದನ್ನು ಕೆಟ್ಟದ್ದು ಎಂದು ಬಾಯ್ಮಾತಿನಲ್ಲಿ ಸಾರುತ್ತೆವೂ ಅವೇ ಎರಡು ಸಾವಿರ ವರ್ಷಗಳಿಂದ ಜನ ಜೀವನದ ಮೇಲೆ ಸವಾರಿ ಮಾಡುತ್ತಾ ಬಂದಿದೆ!.
ಇಂದಿನ ವೇದಾಂತಿಗಳು,ಪ್ರಗತಿಪರರು,ಪುರೋಗಾಮಿಗಳು ಎಲ್ಲರೂ ಅವರವರ ಸಿದ್ದಾಂತಗಳೊಂದಿಗೆ ಆಶಾವಾದವನ್ನು ಬೆರೆಸುತ್ತಾ ತರ್ಕಗಳ ಆಧಾರದ ಮೇಲೆ ವಾದ ಮಂಡಿಸುತ್ತಾರೆ,ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕಿನಂತೆ....
ಯಾವ ಕಾಲಗಟ್ಟದಲ್ಲಿಯೂ ವಾಸ್ತವ ಜೀವನಕ್ಕೆ ಸಲ್ಲದ ಸಾಧು,ಸಂತ ಸುಧಾರಕರ ಪ್ರಸ್ತುತತೆಯನ್ನು ಸಾರುವ ಯಶಸ್ವಿ ಪ್ರಯತ್ನ ಮಾಡುತ್ತಲೇ ಹೋಗುತ್ತಾರೆ.
ಈ ಪ್ರಪಂಚದಲ್ಲಿ ಪ್ರಪಂಚಕ್ಕೆ ಎಷ್ಟು ಮಂದಿ ತಮ್ಮನ್ನು ತಾವೇ ಕೊಂದುಕೊಳ್ಳುತ್ತಾರೆ?,ಪ್ರಪಂಚದಲ್ಲಿ ಹೋಗಲಿ,ಈ ಪುಣ್ಯಭೂಮಿ ಭಾರತದ ಹೃದಯಭಾಗ ಬೆಂಗಳೂರಿನ ಅಂಕಿ ಅಂಶಗಳನ್ನೇ ತೆಗೆದುಕೊಳ್ಳಿ.ಈ ಸಾಯುವ ಮಂದಿಗೆ ಯಾವುದೇ ದನಿಯಿಲ್ಲ.ಯಾಕೆಂದರೆ ಮಾತಾಡುವ ಬಲ ಇರುವವರಿಗೆ ಮೌನವಾಗಿರುವವರ ದೌರ್ಬಲ್ಯ ಅತಾರ್ಕಿಕವಾಗಿರುತ್ತದೆ.ಸಾಯುವವರನ್ನು ಬದುಕಿಸುತ್ತೇವೆ ಎಂದು ಹೇಳಿಕೊಳ್ಳುವ ಕೌನ್ಸೆಲಿಂಗ್ ಸೆಂಟರ್ ಗಳಿವೆ.ಆದರೆ ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ?. ಇದೊಂದು ರೀತಿಯ ಸಾಂಕೇತಿಕ ಪ್ರಯತ್ನ. ‘ನಾನು ಸರಿ,ನೀನು ತಪ್ಪು’ ಎಂದು ಸಾಯುವವನ ಮನ ಒಲಿಸುವುದು ಇವುಗಳ ಗುರಿಯಂತೆ! ನಿಜವಾಗಿ ಸಾಯಲು ಹೊರಡುವವ ಇವರಿಗೆ ಫೋನ್ ಮಾಡುತ್ತಾನೆಯೇ?.
ನಮಲ್ಲಿ ಹೆಣ ವನ್ನು ಕಿತ್ತು ತಿನ್ನುವುದು ಅನ್ನುತ್ತಾರಲ್ಲಾ,ಆ ರೀತಿ ಆತ್ಮಹತ್ಯೆ ಮಾಡಿಕೊಳ್ಳುವವರನ್ನೇ ಕಚ್ಚಾ ವಸ್ತುವನ್ನಾಗಿ ಉಪಯೋಗಿಸುವ ಒಂದು ಉದ್ಯಮವಿದು!. ಇರಲಿ, ಆದರೆ ಹೀಗೆ ಸಾಯುವ ಜನಗಳ್ಯಾರೂ ತಮ್ಮ ಭಾವನೆಗಳನ್ನು ವ್ಯಕ್ತ ಪಡಿಸುವುದಿಲ್ಲ.ಅವರ ಚಿಂತನೆಗಳನ್ನು ದಾಖಲಿಸುತಿಲ್ಲ. ಆದುದರಿಂದ ಇಂತಹವರ ಅಭಿಪ್ರಾಯಗಳು ನಮ್ಮ ಸಾಂಸ್ಕೃತಿಕ ಜಗತ್ತಿನಲ್ಲಾಗಲಿ ,ಸಾಹಿತ್ಯರಂಗದಲ್ಲಾಗಲಿ ಯಾವುದು ಅಲೆ ಎಬ್ಬಿಸುವುದಿಲ್ಲ.ಪರಿಣಾಮ ಇಂದಿನ ಸಾಹಿತ್ಯ ಎಂಬುದು ಕೆಲವೇ ಕೆಲವು ಪಟ್ಟಬದ್ರ ವಿಚಾರಧಾರೆಯ ಪ್ರಚಾರಕ್ಕೆ ಸೀಮಿತಗೊಂಡು ನಿಂತ ನೀರಾಗಿದೆ.
ಬುದ್ಧ,ಸಾಕ್ರೆಟಿಸ್ ರಿಗೆ ವಿಷ ಹಾಕಲಾಯಿತು.ಕ್ರಿಸ್ತ ನೋವ್ಉಣ್ಣುತ್ತಾ ಶಿಲುಬೆಗೆ ನೇತಾಡಬೇಕಾಯಿತು.ಬಸವಣ್ಣ ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಇನ್ನುಳಿದ ಶರಣರು ಕಾಲಗರ್ಭದಲ್ಲಿ ಕರಗಿಹೋದರು. ಗಾಂಧಿಯ ತ್ಯಾಗ ಬಲಿದಾನಗಳ ಸಮಾಧಿಯ ಮೇಲೆ ನೆಹರು ಕುಟುಂಬದ ಕಳೆಗಳು ಹುಲುಸಾಗಿ ಬೆಳೆದವು. ಲೆನಿನ್ ತತ್ವಗಳ ಆಧಾರದ ಮೇಲೆ ಕಟ್ಟಿದ ಸೋವಿಯತ್ ರಾಷ್ಟ್ರವನ್ನು ರಕ್ತ ಪಿಪಾಸು ಸ್ಟಾಲಿನ್ ಹೈಜಾಕ್ ಮಾಡಿದ. ಸಮಾಜವಾದದ ಮಂತ್ರ ಜಪಿಸುತ್ತಲೇ ಮುಸೋಲಿನಿ,ಸ್ಟಾಲಿನ್,ಮಾವೋ,ಪೋಲ್ ಪಾಟ್,ಗುಜ್ಮಾನ್ ಮುಂತಾದವರು ಭೂಖಂಡವನ್ನು ರಕ್ತದಿಂದ ತೊಳೆದರು. ನಾವು ಎಲ್ಲಾ ಧರ್ಮಗಳು ಒಳ್ಳೆಯದೇ ಎಂಬ ಬೂಟಾಟಿಕೆಯ ಮಾತಾಡುತ್ತೇವೆ. ಈ ಧರ್ಮಗಳ ಏಕಾಧಿಪತ್ಯ ಉಚ್ಚ್ರಾಯಸ್ತಿತಿಯಲ್ಲಿದ್ದಾಗ ಇತರ ಧರ್ಮೀಯರೊಂದಿಗೆ ಎಷ್ಟು ಕ್ರೂರವಾಗಿ ವರ್ತಿಸಿತು. ಶಾಂತಿ,ಅಹಿಂಸೆಯ ಪ್ರತಿಪಾದಕ ಎಂದು ಕರೆದು ಕೊಳ್ಳುವ ಭಾರತವು ಕುರ್ದಿಶ್ ಹಳ್ಳಿಗಳ ಮೇಲೆ ಆಸಿಡ್ ಬಾಂಬ್ ಹಾಕಿಸಿ ಹಲವರನ್ನು ಕೊಂದ ಸದ್ದಾಂ ಹುಸ್ಸೈನ್ ನ ಸೇನಾ ಆಡಳಿತವನ್ನು ವಿಶ್ವಸಂಸ್ಥೆಯಲ್ಲಿ ಹಲವಾರು ಬಾರಿ ಬೆಂಬಲಿಸಿತು!.
ಇಂದಿನ ನಾಗರಿಕ(ಎಂದು ಹೇಳಿಕೊಳ್ಳುವ) ಸಮಾಜದಲ್ಲಿಯೂ ಸಹಾ ನಾವು ಹಿಂದೆಂದೋ ಯಾವುದೊ ಯುದ್ದದಲ್ಲಿ ಗೆದ್ದ ಕಾರಣಕ್ಕೆ ವಿಜಯೋತ್ಸವ ಆಚರಿಸಿಕೊಳ್ಳುತ್ತೇವೆ. ನಮ್ಮ ಆನಂದೊತ್ಸವದಲ್ಲಿ ಹಲವು ಕೋಳಿಗಳು,ಕುರಿಗಳು,ದನಗಳೂ ಮತ್ತು ರೇಷ್ಮೆ ಹುಳಗಳು ವದ್ದಾಡಿ ಸಾಯುತ್ತವೆ.ಅವುಗಳ ಆಕ್ರಂದನ ಕೂಡ ಕೇಳದ ನಾವು ಸಾಂಕೇತಿಕವಾಗಿ ಮಹಾವೀರ,ಗಾಂಧೀ ಮುಂತಾದವರ ಗುಣಗಾನ ಮಾಡಿ ಅವರ ತತ್ವವನ್ನು ಶಾಲೆಗಳಲ್ಲಿ ಬೋದಿಸುತ್ತೇವೆ. ನಿಯಮಗಳನ್ನು,ಪರಂಪರೆಯನ್ನು,ಕಾನೂನನ್ನು ಪಾಲಿಸುವಂತೆ ಹೇಳಿಕೊಡುತ್ತೇವೆ. ಅವರು ಸಮಾಜದ ಒಳ್ಳೆಯ ಪ್ರಜೆಯಾಗ ಬೇಕೆಂದು ಬಯಸುತ್ತೇವೆ.ಆದರೆ ತಲೆತಲಾಂತರದಿಂದ ಬಂದಿರುವ ಒಂದು ಕ್ರಮವನ್ನು ಗಮನಿಸಿ. ಈ ಆದರ್ಶ ಸಮಾಜದ ಅತಿ ದೊಡ್ಡ ಪಲಾನುಭವಿಗಳೆಂದರೆ ಈ ನಿಯಮಗಳಿಂದ ವಿನಾಯಿತಿ ಪಡೆದ ಜನ!. ಅದೇ ರಾಜರು,ಮಂತ್ರಿಗಳು ಇತ್ಯಾದಿ.ಅದೇ ಈ ಸಾಮಾಜಿಕ ವ್ಯವಸ್ತೆಯ ಉದ್ದೇಶ ಸಹಾ. ವರ್ಗ ಪದ್ಧತಿ,ವರ್ಣಾಶ್ರಮ ಇತ್ಯಾದಿ ಎಲ್ಲಾ ಪರಿಸ್ತಿತಿಗೂ ಒಗ್ಗಿಕೊಂಡು ರೂಪಬದಲಾಯಿಸಿಕೊಂಡು ಉಳಿದುಕೊಳ್ಳುತ್ತವೆ.ಉದಾಹರಣೆಗೆ ಬ್ರಾಹ್ಮಣ ಸಮಾಜದ ತಾರತಮ್ಯ ಇತ್ಯಾದಿಗಳನ್ನು ಖಂಡಿಸುತ್ತಾ ಹಲವು ಬುದ್ದಿವಂತರು ಒಳ್ಳೊಳ್ಳೆ ಪದವಿ ಪಟ್ಟಗಳನ್ನು ಸಂಪಾದಿಸಿದರು.ತನ್ಮೂಲಕ ಹೊಸ ವರ್ಗದ ಮೇಲ್ಪದರ ಸೇರಿಕೊಂಡರು.ಆದರೆ ಪ್ರಗತಿಪರರು ಯಾವುದೊ ಹಳೆ ಸಿಲಬಸ್ಸಿನ(syllabus)ಪಟ್ಯ ಓದುತ್ತಾ ಇನ್ನೂ ಜಾತಿಪದ್ದತಿಯನ್ನು ಖಂಡಿಸುವಲ್ಲೇ ಇದ್ದಾರೆ. ಆದರೆ ಮೌನವಾಗಿ ಒಂದು ಹೊಸ ವರ್ಗ ಸೃಷ್ಟಿಯಾಗಿ ನಿಂತಿದೆ. ಅದು ಹಳೆಯ ಅನಿಷ್ಟ ಪದ್ದತಿಯಿಂದ ತನ್ನ ಶಕ್ತಿ ಪಡೆದಿದೆ ಎನ್ನುವುದು ಸುಳ್ಳಲ್ಲವಾದರೂ ಈಗ ಅದನ್ನು ಬಿಟ್ಟರೂ ಸ್ವತಂತ್ರವಾಗಿ ನಿಲ್ಲುವ ಶಕ್ತಿಯನ್ನ ಅದು ಹೊಂದಿದೆ. ಅನ್ಯಾಯಕ್ಕೆ ವಿರುದ್ದ ಹೊರಡಲು ಹೊರಟವರೆಲ್ಲ ಅನ್ಯಾಯದ ಬಾಗವಾಗಿ ರೂಪಾಂತರ ಗೊಳ್ಳುವುದನ್ನು ನಾವು ನೋಡಿದ್ದೇವೆ. ಇದಕ್ಕೆ ಸಂಭಂದಿಸಿದಂತೆ ಬರೆಯಲಾಗಿರುವ ಒಂದು ಕಥೆ ಬಹಳ ಮನೋಜ್ಞ ವಾಗಿದೆ . ದುಡ್ಡು ಕಾಸು,ಪದವಿ ಎಲ್ಲಾ ಸಿಕ್ಕಮೇಲೆ ತಣ್ಣಗಾದ ಕವಿಗಳ,ಕ್ರಾಂತಿಕಾರರ ದೃಷ್ಟಾಂತಗಳು ನಮ್ಮ ಕಣ್ಣ ಮುಂದಿದೆ.( ಈ ಲಿಂಕ್ ನೋಡಿ http://navyanta.blogspot.com/2010/12/tale-of-stairs.html
ಇಂತಹ ಸಮಾಜದಲ್ಲಿ ಜೀವನ ಪ್ರೀತಿಯ,ಆಶಾವಾದದ ಮಾತುಗಳನ್ನಾಡುವುದು ಆತ್ಮವಂಚನೆ ಎನಿಸುತ್ತದೆ.
No comments:
Post a Comment